ದ್ವಾದಶ ರಾಶಿ ಗೋಚಾರ ಫಲ: 2026ರಲ್ಲಿ ಈ ರಾಶಿಯವರಿಗಂತು ದೊಡ್ಡ ಮಟ್ಟದ ಯಶಸ್ಸು

ದ್ವಾದಶ ರಾಶಿಗಳ ಫಲಾನುಫಲ
ದ್ವಾದಶ ರಾಶಿಗಳ ಫಲಾನುಫಲ
Published on
ಗೋಚಾರ ಫಲ ವಿಮರ್ಶಿಸುವಾಗ ಯುಗಾದಿಯಿಂದ ಪ್ರಾರಂಭವಾಗುವ ನೂತನ ಸಂವತ್ಸರದಿಂದ ಮುಂದಿನ ಯುಗಾದಿಯವರೆಗೆ ಸಂಭವಿಸುವ ಗ್ರಹಣಗಳು, ರವಿ, ಕುಜ, ಬುಧ, ಶುಕ್ರ ಗ್ರಹಗಳ ಚಲನೆಯು, ಗುರು, ಶನಿ, ರಾಹು, ಕೇತು ಗ್ರಹಗಳ ಚಲನೆಗಿಂತ ಶೀಘ್ರಗತಿಯಲ್ಲಿರುವುದರಿಂದ ಅವುಗಳ ಶುಭಾಶುಭಫಲಗಳು ತಾತ್ಕಾಲಿಕ ಫಲಗಳಾಗಿರುತ್ತವೆ. ಆದ್ದರಿಂದ ಗೋಚಾರ ಫಲಗಳನ್ನು ವಿಮರ್ಶಿಸುವಾಗ ನಿಧಾನವಾಗಿ ಚಲಿಸುವ ಗ್ರಹಗಳಾದ ಗುರು-ಶನಿ-ರಾಹು-ಕೇತುಗಳ ಫಲಗಳನ್ನು ವಿಮರ್ಶಿಸಲು ಹೆಚ್ಚು ಗಮನ ನೀಡಲಾಗಿದೆ. 
ಶನೇಶ್ಚರನು ವರ್ಷಾದಿಯಿಂದ ವರ್ಷಾಂತ್ಯದವರೆಗೆ ಮೀನ ರಾಶಿಯಲ್ಲಿ ಸಂಚರಿಸುತ್ತಾನೆ. ಗುರು ಗ್ರಹವು ಅತಿಚಾರಿಯಾಗಿ ಮಿಥುನ-ಕಟಕ-ಸಿಂಹ ಮತ್ತೆ ಕಟಕ ರಾಶಿಯಲ್ಲಿ ಸಂಚರಿಸುತ್ತಾನೆ. 2026ರ ಡಿ. 5ರಿಂದ ರಾಹು ಕುಂಭ ರಾಶಿಯಿಂದ ಕೇತು ಸಿಂಹ ರಾಶಿಯಿಂದ ಮಕರ ಮತ್ತು ಕಟಕ ರಾಶಿಯಲ್ಲಿ ಪ್ರವೇಶಿಸಿ ಮುಂದಿನ ಸಂವತ್ಸರದವರೆಗೆ ಸಂಚರಿಸುತ್ತಾರೆ. 

ಮೇಷ 

ಗುರುವಿನ ಸಂಚಾರ ಈ ಸಂವತ್ಸರದಲ್ಲಿ ನಿಮಗೆ ದೊಡ್ಡ ರಕ್ಷಾ ಕವಚದಂತೆ ಇರಲಿದೆ. ಯುಗಾದಿಯ ಪ್ರಾರಂಭದಲ್ಲಿ ನಿಮ್ಮ ಸ್ವಂತ ಪ್ರಯತ್ನಗಳಿಗೆ, ಮಾತಿನ ಚಾತುರ್ಯಕ್ಕೆ, ಕೌಶಲಗಳಿಗೆ ಜಯ ಸಿಗಲಿದೆ. ಹತ್ತಿರದ ಪ್ರಯಾಣಗಳಿರುತ್ತವೆ. 2026ರ ಜೂನ್‌ನಿಂದ ಅಕ್ಟೋಬರ್ ಅಂತ್ಯದವರೆಗೆ ನಿಮಗೆ ಸುವರ್ಣಕಾಲ, ಗೃಹದಲ್ಲಿ ಸಂತೋಷ, ಮಾತೃವಿನಿಂದ ಹಾಗೂ ಹಿರಿಯರಿಂದ ಬೆಂಬಲ, ಆಸ್ತಿ ಮತ್ತು ವಾಹನಗಳನ್ನು ಕಾಣುವಿರಿ. ಅಕ್ಟೋಬರ್ ನಂತರ ಮಕ್ಕಳಿಂದ ಶುಭ, ಬುದ್ಧಿವಂತಿಕೆ, ಉನ್ನತ ಶಿಕ್ಷಣ, ದೈವಾನುಗ್ರಹ ಉಂಟಾಗುವುದು. ಶನೇಶ್ವರನು ಸಂವತ್ಸರ ಪೂರ್ತಿ ಮೀನರಾಶಿಯಲ್ಲಿ ಅಂದರೆ ದ್ವಾದಶರಾಶಿಯ ಸಂಚಾರ ಸಾಡೇ ಸಾತಿಯ ಮೊದಲ ಹಂತ ಪ್ರಾರಂಭವಾಗಿದ್ದು, ಈ ಸಂಚಾರವು ಶಿಸ್ತು, ತಾಳ್ಮೆ, ವಿನಯ ಮತ್ತು ಆರ್ಥಿಕವಾಗಿ ಜಾಗರೂಕತೆಯಿಂದ ಮುನ್ನಡೆಯಬೇಕು. ಇದು ಖರ್ಚುಗಳನ್ನು ಹೆಚ್ಚಿಸುವುದು, ನಿದ್ರಾಹೀನತೆಯನ್ನು ತರಬಹುದು.
ಹಳೆಯ ಶತ್ರುಗಳನ್ನು ಅಥವಾ ಹಳೆಯ ಕರ್ಮಗಳನ್ನು ಹೊರತರಬಹುದು. ಒಂಟಿತನ ಅಥವಾ ವಿದೇಶಿ ಸಂಪರ್ಕ, ಆಧ್ಯಾತ್ಮಿಕ ಏಳಿಗೆಗೆ, ದಾನ-ಧರ್ಮ ಮಾಡಲು ಹಾಗೂ ಸರಳ ಜೀವನ ನಡೆಸಲು ಇದು ಅತ್ಯಂತ ಶುಭ ಸಮಯ. ರಾಹು ಡಿಸೆಂಬರ್‌ವರೆಗೆ ಲಾಭದಲ್ಲಿ ಸಂಚರಿಸುತ್ತಿದ್ದು ದೊಡ್ಡ ಮಟ್ಟದ ಯಶಸ್ಸು, ಅನಿರೀಕ್ಷಿತ ಲಾಭ ಸಾಧ್ಯ. ನಿಮ್ಮ ಸಂಪರ್ಕಗಳನ್ನು ಹೆಚ್ಚಿಸಲು ಸಹಕಾರಿ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಈಡೇರುತ್ತವೆ. ಕೇತು ಪಂಚಮದಲ್ಲಿ ಸಂಚಾರ. ಕೆಲವೊಮ್ಮೆ ಮಕ್ಕಳು, ಪ್ರೀತಿ ಅಥವಾ ವಿದ್ಯಾಭ್ಯಾಸದಿಂದ ದೂರವಾಗುತ್ತಿರುವ ಭಾವನೆಯನ್ನು ಉಂಟು ಮಾಡಬಹುದು. ಡಿಸೆಂಬರ್ ನಂತರ ನಿಮ್ಮ ವೃತ್ತಿ ಜೀವನ, ಕೀರ್ತಿ ಮತ್ತು ಜವಾಬ್ದಾರಿಗಳ ಮೇಲೆ ಹಠಾತ್ ಮತ್ತು ತೀವ್ರವಾಗಿ ಗಮನ ಹರಿಸುವಂತೆ ಮಾಡುತ್ತದೆ. 

ವೃಷಭ 

ಈ ರಾಶಿಯವರಿಗೆ ನೂತನ ಸಂವತ್ಸರ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ವೃತ್ತಿ ಜೀವನದಲ್ಲಿ ಪ್ರಗತಿ ಕಾಣುವಿರಿ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹಿಂದಿನ ವರ್ಷಗಳಲ್ಲಿ ಮಾಡಿರುವ ಪ್ರಯತ್ನಗಳಿಗೆ ಫಲ ಸಿಗುತ್ತದೆ. ಉನ್ನತ ಸ್ಥಾನವನ್ನು ಪಡೆಯುವಿರಿ. ಆರೋಗ್ಯ ಉತ್ತಮ. ಯಾವುದೇ ದೊಡ್ಡ ಆರೋಗ್ಯ ಸಮಸ್ಯೆ ಇರುವುದಿಲ್ಲ. ಆದಾಗ್ಯೂ ಒತ್ತಡ, ಆಯಾಸದಿಂದ ದೂರವಿರಬೇಕು. ಈ ಸಂವತ್ಸರವನ್ನು ಉತ್ತಮವಾಗಿ ಬಳಸಿಕೊಳ್ಳಲು ನೀವು ಶ್ರಮಿಸಬೇಕು, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಗುರುವು ಕಟಕ-ಸಿಂಹ ರಾಶಿಗಳಲ್ಲಿ ಸಂಚರಿಸುವಾಗ ಕೆಲಸ ಕಾರ‌್ಯಗಳಲ್ಲಿ ಅಡಚಣೆ, ಮನಸ್ಸಿಗೆ ಚಿಂತೆ, ವ್ಯಾಪಾರದಲ್ಲಿ ಅಲ್ಪಲಾಭ, ವೃಥಾ ತಿರುಗಾಟ, ವಿರೋಧಿಗಳಿಂದ ತೊಂದರೆ, ಕುಟುಂಬದಲ್ಲಿ ಅಹಿತಕರ ವಾತಾವರಣ ಕಾಣಬರುತ್ತವೆ.
ಕೇತು 4ನೇ ರಾಶಿಯಾದ ಸಿಂಹರಾಶಿಯಲ್ಲಿ ಸಂಚರಿಸುವಾಗ ನೀವು ಹೊರಗಡೆ ರಾಜರಂತೆ ಮೆರೆದರೂ, ಗೃಹದಲ್ಲಿ ಅಥವಾ ಮನಸ್ಸಿನೊಳಗೆ ನೆಮ್ಮದಿ ಇಲ್ಲದಂತೆ ಭಾಸವಾಗಬಹುದು. ಕೆಲಸದ ಒತ್ತಡದಿಂದ ಮನೆಯವರನ್ನು ತಾಯಿಯನ್ನು ಅಥವಾ ನಿಮ್ಮ ಸ್ವಂತ ಸುಖವನ್ನು ಕಡೆಗಣಿಸುವ ಸಾಧ್ಯತೆ ಇದೆ. ನೂತನ ಸಂವತ್ಸರದ ಆರಂಭದಲ್ಲಿ ಗುರು ಧನ ಸ್ಥಾನದಲ್ಲಿದ್ದು ಧನಲಾಭ ನೀಡುತ್ತಾನೆ. ಜೂ. 2ರಿಂದ ಅ. 30ರವರೆಗೆ, ಗುರು ಕರ್ಕಾಟಕ ರಾಶಿಯಲ್ಲಿ ಉಚ್ಚನಾಗುತ್ತಾನೆ. ಈ ಸಂಚಾರ ಕಾಲದಲ್ಲಿ ನಿಮ್ಮ ಧೈರ್ಯ, ಪರಾಕ್ರಮ, ಸಂವಹನ ಶಕ್ತಿ ಹೆಚ್ಚುತ್ತದೆ. ನಂತರ ಗುರು 4ನೇ ಮನೆಯಾದ ಸಿಂಹ ರಾಶಿಗೆ ಪ್ರವೇಶಿಸಿ ಕೇತುವನ್ನು ಸಂಧಿಸಿದಾಗ, ಮನೆಯಲ್ಲಿ ಧಾರ್ಮಿಕ ಕಾರ್ಯಗಳಿಗೆ ಒತ್ತು ನೀಡುತ್ತಾನೆ. 

ಮಿಥುನ 

ದೇವ ಗುರುವಿನ ಸಂಚಾರ ಪ್ರಸ್ತುತ ಸಂವತ್ಸರದಲ್ಲಿ ನಿಮ್ಮ ಜನ್ಮ ರಾಶಿಯಲ್ಲಿ ಜೂ. 1ರವರೆಗೆ ಇದೆ. ಬುದ್ಧಿವಂತಿಕೆ, ಆತ್ಮವಿಶ್ವಾಸ ಮತ್ತು ಭವಿಷ್ಯದ ಯೋಜನೆಗಳನ್ನು ರೂಪಿಸಲು ಸಹಾಯ ಸಿಗುತ್ತದೆ.  ಯಾವುದೇ ಪರಿಸ್ಥಿತಿಗೆ ಹೊಂದಿಕೊಳ್ಳುವಂತಹ ಹಾಗೂ ಕೂಡಲೇ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಪರಿಪಕ್ವವಾಗಿರುವ ನೀವು, ಜೂನ್‌ವರೆಗೆ ಗುರುವು ಮಿಥುನ ಮತ್ತು ಸಿಂಹ ರಾಶಿಯಲ್ಲಿ ಸಂಚರಿಸುವಾಗ ಸರ್ಕಾರಿ ಸಂಬಂಧಿ ಕೆಲಸ ಕಾರ್ಯಗಳಲ್ಲಿ ಅಡಚಣೆ, ಬಂಧು-ಮಿತ್ರರಲ್ಲಿ ವಿರೋಧ, ವ್ಯಾಪಾರದಲ್ಲಿ ನಷ್ಟ, ಸ್ತ್ರೀ ಸಂಬಂಧಿ ವ್ಯವಹಾರಗಳಿಂದ ಮನಸ್ಸಿಗೆ ಚಿಂತೆ, ಕೈಗೊಂಡ ಕಾರ್ಯಗಳಲ್ಲಿ ಅಲ್ಪಫಲ ಮೊದಲಾದ ಅಶುಭ ಫಲಗಳು ಕಂಡುಬರುವುದು. ಗುರುವು ಕಟಕ ರಾಶಿಯಲ್ಲಿ ಸಂಚರಿಸುವಾಗ ಶುಭದಾಯಕವಾಗಿದ್ದು, ಆರೋಗ್ಯದಲ್ಲಿ ಸುಧಾರಣೆ, ವ್ಯಾಪಾರ ವ್ಯವಹಾರಗಳಲ್ಲಿ ಧನಲಾಭ, ಕೀರ್ತಿವೃದ್ಧಿ, ಶುಭ ಕಾರ್ಯ ಯತ್ನ ಸಫಲ, ವಸ್ತ್ರಾಭರಣ ಪ್ರಾಪ್ತಿ, ಬಂಧು-ಮಿತ್ರರ ಸಹಾಯ ಮೊದಲಾದ ಶುಭಫಲಗಳು ದೊರೆಯುವುವು. 
ಜೂನ್‌ನಿಂದ ಅಕ್ಟೋಬರ್‌ವರೆಗೆ ಗುರು ದ್ವಿತೀಯದಲ್ಲಿ ಉಚ್ಚನಾಗಿ ಪ್ರಬಲವಾದ ಧನಯೋಗವನ್ನು ನೀಡುತ್ತಾನೆ. ಇದು ನಿಮಗೆ ಸಿರಿವಂತಿಕೆ, ಉಳಿತಾಯ ಮತ್ತು ಕೌಟುಂಬಿಕ ಸುಖವನ್ನು ನೀಡುತ್ತದೆ. ನಿಮ್ಮ ಪ್ರಾಮಾಣಿಕ ಶ್ರಮಕ್ಕೆ ಸಾಮಾಜಿಕ ಮನ್ನಣೆ ಮತ್ತು ಆರ್ಥಿಕ ಭದ್ರತೆ ಸಿಗಲಿದೆ. ಕರ್ಮ ಸ್ಥಾನದ ಶನೇಶ್ಚರ ನಿಮ್ಮ ದಶಮದ ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ವೃತ್ತಿ ಜೀವನದಲ್ಲಿ ಅತೀವ ಒತ್ತಡ, ಅಪಾರ ಜವಾಬ್ದಾರಿ ಮತ್ತು ನಿಮ್ಮ ವೃತ್ತಿ-ವ್ಯಾಪಾರಗಳ ಮೇಲೆ ಎಲ್ಲರ ದೃಷ್ಟಿ ಬೀಳುವ ಸಮಯ. ಆದರೆ ಶನೇಶ್ಚರನ ಸಂಚಾರ ನಿಮ್ಮನ್ನು ಸಾರ್ವಜನಿಕ ವಲಯದಲ್ಲಿ ಎತ್ತಿ ಹಿಡಿಯುತ್ತದೆ. ಜವಾಬ್ದಾರಿಗಳನ್ನು ಹೆಚ್ಚಿಸುತ್ತದೆ, ತಾಳ್ಮೆಯನ್ನು ಪರೀಕ್ಷಿಸುತ್ತದೆ. ಇದು ಶಕ್ತಿ ಶಾಲಿಯಾದ ಧರ್ಮ-ಕರ್ಮಾಧಿಪತಿ ಯೋಗವನ್ನು ಸೃಷ್ಟಿಸುತ್ತದೆ. ಕಾಯಕವೇ ಕೈಲಾಸ ಎಂದುಕೊಂಡು, ಅಹಂಕಾರ ಬಿಟ್ಟು ದುಡಿಯುವಿರಿ. ಅ. 31ರಿಂದ ಗುರು ಸಿಂಹರಾಶಿಗೆ ಪ್ರವೇಶಿಸಿದಾಗ ನೀವು ಹೊಸ ಸಾಹಸಗಳಿಗೆ ಕೈ ಹಾಕಲು, ಬರವಣಿಗೆ ಮತ್ತು ಹತ್ತಿರದ ಪ್ರಯಾಣಗಳಿಗೆ ಅನುಕೂಲ ಮಾಡಿಕೊಡುತ್ತದೆ. ರಾಹು-ಕೇತುಗಳ ಗೋಚಾರದಿಂದ ವಿದೇಶ ಪ್ರಯಾಣ, ಉನ್ನತ ಶಿಕ್ಷಣ, ಆಧ್ಯಾತ್ಮದ ಕಡೆಗೆ ಒಲವು ಹೆಚ್ಚಾಗುತ್ತದೆ. ಸೋಮಾರಿತನ, ಉದಾಸೀನ ಮನೋಭಾವದಿಂದ ದೂರವಿರಿ. 

ಕಟಕ  

ಗುರು 12ರಲ್ಲಿ ವ್ಯಯಗುರು. ಆರೋಗ್ಯ, ವಿದೇಶ ಪ್ರಯಾಣ ಅಥವಾ ಶುಭ ಕಾರ್ಯಗಳಿಗೆ ಖರ್ಚು ಹೆಚ್ಚಾಗಬಹುದು. ಮಿಥುನ-ಕಟಕ ರಾಶಿಗಳಲ್ಲಿ ಗುರು ಸಂಚರಿಸುವಾಗ ಮಧ್ಯಮ ಫಲ ನಿರೀಕ್ಷಿಸಬಹುದು. ಸ್ಥಳ ಬದಲಾವಣೆ, ಮನಸ್ಸಿಗೆ ಚಿಂತೆ, ಮಿತ್ರರಿಂದ ವಂಚನೆ, ಕೃಷಿಯಲ್ಲಿ ಅಲ್ಪ ಫಲ, ಜನ್ಮದಲ್ಲಿ ಉಚ್ಚಗುರು. ಆತ್ಮವಿಶ್ವಾಸ ಹೆಚ್ಚುತ್ತದೆ. ಸಮಾಜ ಗುರುತಿಸುತ್ತದೆ. ಹೊಸ ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ. ಜೂನ್‌ನಿಂದ ಅಕ್ಟೋಬರ್‌ವರೆಗೆ ಗುರುವಿನ ಚಲನೆಯಿಂದ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಹೊಸ ಪಾಲುದಾರಿಕೆ, ಒಡಂಬಡಿಕೆ ಮಾಡಿಕೊಳ್ಳಲು ಸಂವತ್ಸರದ ಮಧ್ಯಭಾಗ ಉತ್ತಮ ಹಣಕಾಸಿನ ಪರಿಸ್ಥಿತಿ, ಸಾಕಷ್ಟು ಬದಲಾವಣೆ ಕಾಣಬಹುದು. ಕಟಕರಾಶಿಯಲ್ಲಿ ಗುರು ಪ್ರವೇಶ. ವಿವಾಹ ಅರ್ಹತೆಯುಳ್ಳವರಿಗೆ ವಿವಾಹ ಯೋಗ, ದಂಪತಿಗಳಿಗೆ ಸಂತಾನ ಭಾಗ್ಯ ಮತ್ತು ವಕ್ಕಳಿಂದ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. 
ಸಂಬಂಧಗಳನ್ನು ಸರಿ ಪಡಿಸಿಕೊಳ್ಳಲು ಇದು ಸುವರ್ಣಾವಕಾಶ. ಡಿಸೆಂಬರ್ ಅಂತ್ಯದವರೆಗೆ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು. ಅಷ್ಟಮದಲ್ಲಿ ರಾಹುವಿನಿಂದ ಆತಂಕ. ನಿದ್ರಾಹೀನತೆ ಅಥವಾ ಮಾನಸಿಕ ಒತ್ತಡದಿಂದ ಬಳಲುವ ಸಾಧ್ಯತೆ, ಸಣ್ಣ ಸಮಸ್ಯೆಗಳನ್ನೂ ನಿರ್ಲಕ್ಷಿಸಬೇಡಿ. ಆದರೆ ಭಯಪಡುವ ಅಗತ್ಯವಿಲ್ಲ. ಉಚ್ಚ ಗುರು ನಿಮ್ಮ ರಾಶಿ ಪ್ರವೇಶದಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ರಕ್ಷಾ ಕವಚದಂತೆ ಕೆಲಸ ಮಾಡುತ್ತಾನೆ. ಮನಸ್ಸು ಶಾಂತವಾಗುತ್ತದೆ, ಚಿಕಿತ್ಸೆಗಳು ಫಲ ನೀಡುತ್ತವೆ. ಶನೇಶ್ಚರನು ಭಾಗ್ಯಸ್ಥಾನದಲ್ಲಿ ಸಂಚರಿಸುತ್ತಿದ್ದು ವೃತ್ತಿ ಜೀವನದಲ್ಲಿ ಸ್ಥಿರ ಬೆಳವಣಿಗೆ ಕಾಣಬಹುದು. ಸ್ವಯಂ ಉದ್ಯೋಗಿಗಳು ತಮ್ಮ ಕೆಲಸದ ವಿಧಾನ ಸರಿಪಡಿಸಿಕೊಳ್ಳಲು ಇದು ಸಕಾಲ. ನಿಮ್ಮ ವ್ಯಾಪಾರಿಕ ಪ್ರವೃತ್ತಿಯಲ್ಲಿ ಬುನಾದಿಗೆ ಶುಭ ಕಾಲ. 
ಜೂನ್-ಅಕ್ಟೋಬರ್ ನಡುವೆ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತದೆ. ವ್ಯಾಪಾರಸ್ಥರಿಗೆ ಮಿಶ್ರಫಲಗಳನ್ನು ನೀಡುತ್ತದೆ ಮತ್ತು ಎಚ್ಚರಿಕೆ ಅಗತ್ಯ. ಅಷ್ಟಮದ ರಾಹು ಸ್ಥಿತ ಇರುವುದರಿಂದ ವ್ಯಾಪಾರಿಗಳು ಸಾಲ, ತೆರಿಗೆ, ಗುಪ್ತ ಶತ್ರುಗಳು ಮತ್ತು ಪಾಲುದಾರರ ನಂಬಿಕೆಯ ವಿಷಯದಲ್ಲಿ ಜಾಗರೂಕರಾಗಿರಬೇಕು. ದ್ವಿತೀಯದಲ್ಲಿ ಕೇತು ಸಂಚಾರ. ಹಣದ ಬಗ್ಗೆ ಅನಾಸಕ್ತಿ ಅಥವಾ ಎಷ್ಟೇ ದುಡಿದರೂ ಸಾಲುತ್ತಿಲ್ಲ ಎಂಬ ಭಾವನೆ ಬರಬಹುದು. 

ಸಿಂಹ

ಗುರು ಮಿಥುನ ರಾಶಿಯಲ್ಲಿ ಸಂಚರಿಸುವಾಗ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ, ಯತ್ನ ಕಾರ್ಯಾನುಕೂಲ, ಆರ್ಥಿಕ ಲಾಭಗಳು, ಉತ್ತಮ ಸ್ನೇಹಿತರು, ದೀರ್ಘಕಾಲದ ಆಸೆ-ಆಕಾಂಕ್ಷೆಗಳ ಈಡೇರಿಕೆ, ಭಾವನಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾದ ಸಮಯ. ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ ಪ್ರಾಪ್ತಿ. ಅಷ್ಟಮದಲ್ಲಿ ಶನೇಶ್ಚರನ ಸಂಚಾರ ವರ್ಷಪೂರ್ತಿ ಇರುತ್ತದೆ. ಈ ಸಮಯದಲ್ಲಿ ಆರೋಗ್ಯ ಅತ್ಯಂತ ಪ್ರಮುಖ. ದೀರ್ಘಕಾಲದ ಅಥವಾ ಹಳೆಯ ಆರೋಗ್ಯ ಸಮಸ್ಯೆಗಳನ್ನು ಹೊರಗೆ ತರಬಹುದು. ಕೆಲವೊಮ್ಮೆ ಅಸ್ಪಷ್ಟವಾದ ಅಥವಾ ಪತ್ತೆ ಹಚ್ಚಲು ಕಷ್ಟವಾಗುವ ಲಕ್ಷಣಗಳು, ಆಯಾಸ, ಕಡಿಮೆ ಚೈತನ್ಯ. ಸಣ್ಣ ಕಾಯಿಲೆ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. 
ಕುಟುಂಬ ಮತ್ತು ಸಂಬಂಧಗಳ ವಿಷಯದಲ್ಲಿ ಹೆಚ್ಚಿನ ತಾಳ್ಮೆ ಅಗತ್ಯ. ಜೀವನ ಸಂಗಾತಿ, ಪಾಲುದಾರಿಕೆಗಳು ಮತ್ತು ಸಾರ್ವಜನಿಕ ವ್ಯವಹಾರಗಳ ವಿಷಯದಲ್ಲಿ ಸಮಸ್ಯೆಗಳನ್ನು ಹೆಚ್ಚಿಸಬಹುದು. ತಪ್ಪು ತಿಳಿವಳಿಕೆಗಳು, ನಿರೀಕ್ಷೆಗಳು ಮತ್ತು ಸಂವಹನ ಕೊರತೆ ಆಗಾಗ ಉಂಟಾಗುವ ಸಾಧ್ಯತೆಗಳಿವೆ. ಗುರು ಮತ್ತು ರಾಹು ರಾಶಿಗಳ ಬದಲಾವಣೆಯಿಂದ ನಿಮ್ಮ ಭಾವನಾತ್ಮಕ ಸಮತೋಲನವನ್ನು ಮತ್ತು ಮಾತಿನಲ್ಲಿ ಮೃದುತ್ವವನ್ನು ನಿಧಾನವಾಗಿ ಸುಧಾರಿಸುತ್ತದೆ. ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ಮತ್ತು ಆರೋಗ್ಯಕರ ಮಿತಿಗಳನ್ನು ಹಾಕಿಕೊಳ್ಳಲು ಹೆಚ್ಚಿನ ಬೆಂಬಲ ಸಿಗುವ ಕಾಲ. ಉದ್ಯೋಗಿಗಳಿಗೆ ನಿಮ್ಮದನ್ನು ಉಳಿಸಿಕೊಳ್ಳುವ ಮತ್ತು ದೀರ್ಘಕಾಲೀನ ಬೆಳವಣಿಗೆಗೆ ಸಿದ್ಧವಾಗುವ ವರ್ಷ. 
ನಾಯಕತ್ವ, ಹಠಾತ್ ಬದಲಾವಣೆಗಳು ಸಂಭವಿಸಬಹುದು. ಹೊಂದಿಕೊಳ್ಳುವುದು, ಅಹಂಕಾರದ ಘಟನೆಗಳಿಂದ ದೂರವಿರುವುದು ಮತ್ತು ನಿಮ್ಮ ಕೆಲಸದ ಬಗ್ಗೆ ಸರಿಯಾದ ದಾಖಲೆಗಳನ್ನು ಸಂರಕ್ಷಿಸುವುದರಿಂದ ಈ ಸಮಯವನ್ನು ಸುರಕ್ಷಿತವಾಗಿ ದಾಟಲು ಸಹಾಯವಾಗಬಹುದು. ಸೇವೆಗಳನ್ನು ಸುಧಾರಿಸುವುದು, ಖರ್ಚುಗಳನ್ನು ಕಡಿಮೆ ಮಾಡುವುದು ಮುಖ್ಯ. ಭಯ ಅಥವಾ ಅಹಂಕಾರದಿಂದ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಅಷ್ಟಮ ಶನಿಯ ಸಂಚಾರ ಕಾಲದಲ್ಲಿ ಗುಪ್ತ ದೋಷಗಳನ್ನು, ಹಳೆಯ ಸಾಲಗಳು, ತೆರಿಗೆ ಸಮಸ್ಯೆಗಳು ಕಾನೂನು ವಿಷಯಗಳು ಅಥವಾ ವ್ಯಾಪಾರದ ಆಂತರಿಕ ಸಮಸ್ಯೆಗಳನ್ನು ಹೊರಗೆ ತರಬಹುದು. 

ಕನ್ಯಾ

ಸಂವತ್ಸರದ ಆರಂಭದಲ್ಲಿ ಜೂ. 1ರವರೆಗೆ ಗುರು ದಶಮದಲ್ಲಿ ಸಂಚರಿಸುತ್ತಾನೆ. ಇದು ವೃತ್ತಿ ಜೀವನಕ್ಕೆ ಶುಭ. ಹೊಸ ಜವಾಬ್ದಾರಿಗಳು, ಬಡ್ತಿಗಳು, ಉದ್ಯೋಗ ಬದಲಾವಣೆ ಮತ್ತು ಮನ್ನಣೆ ಸಾಧ್ಯ. ನಾಯಕತ್ವದ ಪಾತ್ರ, ಸೇವಾ ಮನೋಭಾವ ಬಳಸಲು ಸೂಕ್ತ ಸಮಯ. ಜೂ. 1ರಿಂದ ಗುರು ಕಟಕರಾಶಿಯಲ್ಲಿ ಸಂಚಾರ. ಇದು ಉಚ್ಚ ಗುರು. ಅದ್ಭುತವಾದ ಧನಯೋಗ ಮತ್ತು ಲಾಭಯೋಗವನ್ನು ಅನುಭವಿಸುವಿರಿ. ಹಿರಿಯರಿಂದ ಬಲವಾದ ಬೆಂಬಲ, ಆರ್ಥಿಕ ಬೆಳವಣಿಗೆ. ಸರಿಯಾದ ಮಾರ್ಗದರ್ಶನ ಪಡೆಯಲು ಸೂಕ್ತ ಸಮಯ. ವ್ಯಯ ಭಾವದ ಕೇತು ಸ್ಥಿತ ಆಧ್ಯಾತ್ಮಿಕ ಬೆಳವಣಿಗೆ, ಆಂತರಿಕ ವೈರಾಗ್ಯ, ವಿದೇಶ ಪ್ರಯಾಣ ಅಥವಾ ಏಕಾಂತ ಅನುಭವಗಳನ್ನು ಸೂಚಿಸುತ್ತದೆ, ಗುರು ಸಿಂಹ ಪ್ರವೇಶ ಕೇತುವಿನೊಂದಿಗೆ ಸೇರಿ ಆಧ್ಯಾತ್ಮಿಕತೆ, ಧ್ಯಾನ, ಆಸಕ್ತಿಯನ್ನು ಹೆಚ್ಚಿಸುತ್ತದೆ. ಶನೇಶ್ಚರನ ಸಪ್ತಮ ಸಂಚಾರ ಕಾಲದಲ್ಲಿ ವಿವಾಹ, ದೀರ್ಘಕಾಲೀನ ಸಂಬಂಧಗಳು ಮತ್ತು ಪಾಲುದಾರಿಕೆಗಳಲ್ಲಿ ಕಠಿಣವಾಗಿ ಶ್ರಮಿಸಬೇಕಾಗುತ್ತದೆ. ಒತ್ತಡ, ಜವಾಬ್ದಾರಿ ಹಾಗೂ ಕೆಲವೊಮ್ಮೆ ಒಂಟಿತನ. ಆದರೆ ಇದು ಸಂಬಂಧಗಳಲ್ಲಿ ಮಾನಸಿಕವಾಗಿ ಬೆಳೆಯಲು ಹೆಚ್ಚು ಸಮತೋಲಿತವಾಗಿ ಮತ್ತು ವಾಸ್ತವಿಕವಾಗಿರಲು ಪ್ರೇರೇಪಿಸುತ್ತದೆ. ರಾಹು ಷಷ್ಠದಲ್ಲಿ ಸಂಚಾರ ಮಾಡುವಾಗ ಸ್ಪರ್ಧೆಗಳಲ್ಲಿ ಗೆಲ್ಲಲು ಸುವರ್ಣಾವಕಾಶ. ರಾಜಕೀಯ ಒತ್ತಡ ತಡೆಯಬಲ್ಲಿರಿ, ಧೈರ್ಯವಾಗಿ ಮುನ್ನಡೆಯಲು ದಾರಿ ತೋರುವುದು. ಜೂ. 2ರಿಂದ ಅ. 30ರವರೆಗೆ ಗುರು ಲಾಭದಲ್ಲಿ ಸಂಚಾರ ಮಾಡುವುದರಿಂದ ಈ ಸಮಯದಲ್ಲಿ ವ್ಯಾಪಾರ-ವಹಿವಾಟು ವಿಸ್ತರಣೆಗೆ ಉತ್ತಮ ಸಮಯ. ಈ ಸಮಯದಲ್ಲಿ ಹೊಸ ಶಾಖೆಗಳನ್ನು ತೆರೆಯುವುದು, ಹೊಸ ಉತ್ಪನ್ನಗಳು ಅಥವಾ ಸೇವೆಗಳನ್ನು ಬಿಡುಗಡೆ ಮಾಡುವುದು ಮತ್ತು ದೊಡ್ಡ ಒಪ್ಪಂದಗಳನ್ನು ಚರ್ಚಿಸುವುದು ಮುಂತಾದ ಕೆಲಸಗಳು ಉತ್ತಮ ಫಲಿತಾಂಶ ನೀಡಬಲ್ಲವು. 

ತುಲಾ 

ಸಂವತ್ಸರದ ಆರಂಭದಲ್ಲಿ ಗುರು ಭಾಗ್ಯದಲ್ಲಿ ಜೂನ್ ತಿಂಗಳವರೆಗೆ ಸಂಚರಿಸುತ್ತಾನೆ. ಇದು ಅದೃಷ್ಟವನ್ನೂ, ಧರ್ಮಗುರುಗಳು ಮತ್ತು ಹಿರಿಯರಿಂದ ಆಶೀರ್ವಾದವನ್ನೂ ತರಲಿದೆ. ಉನ್ನತ ಶಿಕ್ಷಣ, ದೂರದ ಪ್ರಯಾಣಗಳು, ಪ್ರಭಾವಿ ವ್ಯಕ್ತಿಗಳೊಂದಿಗೆ ಪರಿಚಯ ಮತ್ತು ಗುರುಗಳಿಂದ ಸರಿಯಾದ ಮಾರ್ಗದರ್ಶನದಂತಹ ವಿಷಯಗಳಲ್ಲಿ ನಿಮಗೆ ಬಲವಾಗಿ ಬೆಂಬಲ ಸಿಗಲಿದೆ. ಜೂ. 2ರಿಂದ ಅ. 30ರವರೆಗೆ ಗುರು ಕಟಕ ರಾಶಿಯ ಸಂಚಾರ ಕಾಲದಲ್ಲಿ ನಿಮಗೆ ಗೌರವಯುತವಾದ ಜವಾಬ್ದಾರಿಗಳು, ಉನ್ನತ ಬಡ್ತಿಗಳು, ಹುದ್ದೆಗಳು, ಜನರ ಮುಂದೆ ನಿಲ್ಲುವಂತಹ ವಿಜಯಗಳನ್ನು ನೀಡುವ ಅವಕಾಶ ಕಲ್ಪಿಸುತ್ತದೆ. ಗುರು ಸಿಂಹ ರಾಶಿಗೆ ಪ್ರವೇಶವಾದಾಗ ನೀವು ಪಟ್ಟ ಶ್ರಮ ಮತ್ತು ತೆಗೆದುಕೊಂಡ ಜವಾಬ್ದಾರಿಗಳಿಗೆ ಅನುಗುಣವಾಗಿ ಲಾಭಗಳು, ವಸೂಲಿಗಳು ಮತ್ತು ಫಲಿತಾಂಶಗಳನ್ನು ಪಡೆಯುವ ಹಂತವಾಗಿ ಈ ಸಂಚಾರ ಕಾಲದಲ್ಲಿ ಗುರು ಕಾರ್ಯ ನಿರ್ವಹಿಸುತ್ತಾನೆ. 
ನಿಮ್ಮ ಮನಸ್ಸಿನಲ್ಲಿ ಬಹುಕಾಲದಿಂದ ಇರುವ ಕೆಲವು ಆಸೆಗಳು, ಒಳ್ಳೆಯ ಹುದ್ದೆ, ಸಂಬಳ ಮತ್ತು ಒಳ್ಳೆಯ ಸಂಸ್ಥೆ, ಸ್ಥಿರವಾದ ಆದಾಯಗಳು ಲಭಿಸುತ್ತವೆ. ಈ ಸಂವತ್ಸರದಲ್ಲಿ ಶನೇಶ್ಚರನು ಷಷ್ಠದಲ್ಲಿ ಸಂಚರಿಸುತ್ತಿದ್ದು, ನಿಮಗೆ ಶತ್ರುಗಳು, ಸ್ಪರ್ಧಿಗಳು ಮತ್ತು ವಿಮರ್ಶಕರನ್ನು ಧೈರ್ಯವಾಗಿ ಎದುರಿಸುವ ಶಕ್ತಿಯನ್ನು ನೀಡುತ್ತಾನೆ. ಪಂಚಮದಲ್ಲಿ ರಾಹು ಲಾಭದಲ್ಲಿ ಕೇತುವಿನ ಸಂಚಾರ ಮಕ್ಕಳು, ಪ್ರೀತಿ ಅಥವಾ ಸೃಜನಶೀಲತೆಯ ಬಗ್ಗೆ ಆತಂಕ ಮತ್ತು ಅಶಾಂತಿಯನ್ನು ಸೃಷ್ಟಿಸಬಹುದು. ಅನುಭವವಿಲ್ಲದ ವಿವಿಧ ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳಬೇಕೆಂಬ ಆಸೆ ಹುಟ್ಟಿಸುವ ಸಾಧ್ಯತೆಗಳಿವೆ. ಲಾಭದಲ್ಲಿ ಕೇತು ಸಂಚಾರ ಕೆಲವು ಸ್ನೇಹಿತರು ಮತ್ತು ಗುಂಪುಗಳಿಂದ ಮನಸ್ಸಿಗೆ ದೂರವಿರಬೇಕು ಎಂದು ಅನ್ನಿಸುವಂತೆ ಮಾಡಬಹುದು. 

ವೃಶ್ಚಿಕ 

ಗುರು ಗ್ರಹವು ಜೂನ್ 1ರವರೆಗೆ ಅಷ್ಟಮ ಸ್ಥಾನ ಅಂದರೆ ಕಷ್ಟಸ್ಥಾನದಲ್ಲಿ ಸಂಚರಿಸುತ್ತಾನೆ. ಅಷ್ಟಮ ಗುರು ಎಂಬುದು ಬಹಳ ಕ್ಲಿಷ್ಟಕರವಾದ ಮತ್ತು ಆಳವಾದ ಬದಲಾವಣೆಗಳನ್ನು ತರುವ ಹಂತವಾಗಿದೆ. ಇದು ಕೇವಲ ಹಣದ ತಡೆ ಅಥವಾ ಸಾಲ ಹೆಚ್ಚಾಗುವುದು ಮಾತ್ರವಲ್ಲ, ಜೀವನದ ಮೇಲಿನ ನಿಮ್ಮ ದೃಷ್ಟಿಕೋನವನ್ನೇ ಬಲವಾಗಿ ಪರಿವರ್ತಿಸುವ ಶುಭ ಸಮಯ. ಅನಿರೀಕ್ಷಿತ ಖರ್ಚುಗಳು, ಗುಪ್ತ ಶತ್ರುಗಳು, ವೈದ್ಯಕೀಯ ಚಿಕಿತ್ಸೆಗಳಿಗೆ ಸಂಬಂಧಿಸಿದ ಖರ್ಚುಗಳು, ಇನ್ಶೂರೆನ್ಸ್ ಮತ್ತು ಕೋರ್ಟ್ ಕಛೇರಿ ವಿಷಯಗಳನ್ನು ಮುನ್ನೆಲೆಗೆ ತರುತ್ತಾನೆ. ಶನೇಶ್ಚರನು ನಿಮ್ಮ ರಾಶಿಯಿಂದ ಪಂಚಮಸ್ಥಾನದಲ್ಲಿ ಚಲಿಸುತ್ತಿದ್ದಾನೆ. ಬುದ್ಧಿ, ವಿದ್ಯೆ, ಸಂತಾನ, ಮನೋನಿಗ್ರಹ ಮತ್ತು ಪ್ರತಿಭೆಯ ಸ್ಥಾನ. ಶನೇಶ್ಚರನ ಸಂಚಾರ ಕಾಲದಲ್ಲಿ ನೀವು ಸುಲಭವಾಗಿ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವುದಿಲ್ಲ. ತುಂಬ ಆಲೋಚಿಸಿ ಲೆಕ್ಕಾಚಾರ ಹಾಕಿ, ಜವಾಬ್ದಾರಿಯಿಂದ ಹೆಜ್ಜೆ ಹಾಕುತ್ತೀರಿ. 
ಚತುರ್ಥದಲ್ಲಿ ರಾಹು, ದಶಮದಲ್ಲಿ ಕೇತು ಡಿಸೆಂಬರ್‌ವರೆಗೆ ಮುಂದುವರಿಯುತ್ತಾರೆ. ಗೃಹ, ತಾಯಿ, ವಾಹನ, ಆಸ್ತಿ, ಮನಃಶಾಂತಿಯ ಬಗ್ಗೆ ಚಿಂತಿಸುವಿರಿ. ಕೇತು ಉದ್ಯೋಗ, ಗೌರವ, ಕೀರ್ತಿ ಮತ್ತು ಸಾಮಾಜಿಕ ಸ್ಥಾನವನ್ನು ಸೂಚಿಸುತ್ತದೆ. ಗೃಹದಲ್ಲಿ ಆಗಾಗ ಸಣ್ಣಪುಟ್ಟ ಮನಸ್ತಾಪಗಳು, ಮನೆ ಬದಲಾವಣೆಗೆ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಬೇಕಾದ ಸಂದರ್ಭಗಳು ಬರುತ್ತವೆ. ಮನಸ್ಸು ಯಾವಾಗಲೂ ಮೌನ ಹುಡುಕಾಟದಲ್ಲಿರುತ್ತದೆ. 

ಧನಸ್ಸು 

ಈ ಸಂವತ್ಸರದ ಮೊದಲಾರ್ಧದಲ್ಲಿ ಸಪ್ತಮದಲ್ಲಿ ಗುರು ಚಲನೆಯಲ್ಲಿ ಇರುವುದರಿಂದ ಅಧಿಕಾರಿಗಳು, ಸಹೋದ್ಯೋಗಿಗಳು ಮತ್ತು ಪಾಲುದಾರರೊಂದಿಗೆ ನಿಮ್ಮ ಸಂಬಂಧಗಳು ಸಾಮಾನ್ಯವಾಗಿ ಸಹಕಾರಪೂರ್ಣವಾಗಿ ಮತ್ತು ಅನುಕೂಲಕರವಾಗಿರುತ್ತವೆ. ಹೊಸ ಉದ್ಯೋಗದ ಒಪ್ಪಂದಗಳು, ಯೋಜನೆಗಳು ಮತ್ತು ಪಾಲುದಾರಿಕೆಗಳು ಈ ಹಂತದಲ್ಲಿ ಪ್ರಾರಂಭಿಸಿದ ಅವು ನಿಮ್ಮನ್ನು ದೀರ್ಘಕಾಲೀನ ಲಾಭದ ಕಡೆಗೆ ನಡೆಸುವ ಸಾಧ್ಯತೆಗಳಿವೆ. ಕುಟುಂಬ ಜೀವನದ ವಿಷಯದಲ್ಲಿ ಅರ್ಧಾಷ್ಟಮ ಶನೇಶ್ಚರನ ಪ್ರಭಾವ. ಕೌಟುಂಬಿಕ ಜೀವನದಲ್ಲಿ ಜಾಗೃತರಾಗಿರಬೇಕು. ಮನೆಯ ವಾತಾವರಣ ಕೆಲವು ಬಾರಿ ಕಷ್ಟವಾಗಿ, ಗಂಭೀರ ಎನ್ನಿಸಬಹುದು. 
ಆಗಾಗ ಚಿಂತೆಗಳು, ಜವಾಬ್ದಾರಿಗಳ ಬಗ್ಗೆ ಚರ್ಚೆಗಳು ಮತ್ತು ಗೃಹ ವಾತಾವರಣದಲ್ಲಿ ಹಗುರವಾದ ಆನಂದಕ್ಕಿಂತ ಜವಾಬ್ದಾರಿಯ ಭಾರ ಹೆಚ್ಚಾಗಿ ಕಾಣಿಸಬಹುದು. ತಾಯಿ ಅಥವಾ ಹಿರಿಯ ಕುಟುಂಬ ಸದಸ್ಯರ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಹೆಚ್ಚುವರಿ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಬಹುದು. ಆದರೆ ನೀವು ಅವೇಶಕ್ಕೆ ಒಳಗಾಗದೆ ಶಾಂತವಾಗಿ ಮತ್ತು ನ್ಯಾಯಯುತ ಮಾರ್ಗಗಳಲ್ಲಿ ವ್ಯವಹರಿಸಿದರೆ ಕೊನೆಗೆ ಈ ಒತ್ತಡದ ಪರಿಸ್ಥಿತಿಗಳೂ ನಿಮಗೆ ಅನುಕೂಲಕರವಾಗಿ ಪರಿಣಮಿಸಬಹುದು. ಭಾಗ್ಯ ಭಾವದಲ್ಲಿ ಕೇತು ಸಂಚಾರದಿಂದ ತಂದೆ, ಗುರುಗಳು ಅಥವಾ ಜೀವನದಲ್ಲಿ ಮಾರ್ಗದರ್ಶನ ನೀಡುವ ಹಿರಿಯರೊಂದಿಗೆ ಭಾವನಾತ್ಮಕ ದೂರ ಅಥವಾ ತಾತ್ವಿಕ ಭಿನ್ನಾಭಿಪ್ರಾಯಗಳು ಬರಬಹುದು. 

ಮಕರ 

ಈ ರಾಶಿಯವರಿಗೆ ಶನೇಶ್ಚರನು ಉಪಚಯ ಸ್ಥಾನವಾದ ಮೀನರಾಶಿಯಲ್ಲಿ ವರ್ಷ ಪೂರ್ತಿ ಸಂಚರಿಸುತ್ತಾನೆ. ಇದರಿಂದ ನೀವು ರಾಜಯೋಗದಂತಹ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮಲ್ಲಿ ಪರಾಕ್ರಮ, ಸ್ವಂತ ಪ್ರಯತ್ನಗಳಲ್ಲಿ ವಿಜಯದ ಸಾಧನೆ, ಶತ್ರುಗಳ ಮೇಲಿನ ಜಯ, ನೀವು ನಿಮ್ಮ ಪ್ರತಿಸ್ಪರ್ಧಿಗಳನ್ನು ತಾಳ್ಮೆ ಮತ್ತು ಛಲದಿಂದ ಮೀರಿಸುತ್ತೀರಿ. ನಿಜವಾದ ಚಾಲನಾ ಶಕ್ತಿ ಪ್ರಾರಂಭವಾಗುತ್ತದೆ. ನಿಮ್ಮ ಕಷ್ಟಕ್ಕೆ ನೇರವಾಗಿ ಪ್ರತಿಫಲ ದೊರೆಯಲಾರಂಭಿಸುತ್ತದೆ. ಧೈರ್ಯ ಮತ್ತು ಸಂವಹನ ಅಗತ್ಯವಿರುವ ಯಾವುದೇ ಪಾತ್ರಕ್ಕೆ ಇದು ಅದ್ಭುತ ಸಂಚಾರ. ಶನೇಶ್ಚರನು ಕ್ರಮಬದ್ಧವಾದ ಅಧ್ಯಯನ, ಬಲವಾದ ಏಕಾಗ್ರತೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಗಳಿಸುವ ಶಕ್ತಿಯನ್ನು ಹೆಚ್ಚಿಸುತ್ತಾನೆ. 
ಗುರು ಜೂನ್ 1ರವರೆಗೆ ಷಷ್ಠದಲ್ಲಿ ಸಂಚರಿಸುತ್ತಾನೆ. ಇದು ಸ್ಪರ್ಧಿಗಳ ಮೇಲೆ ಜಯ ಗಳಿಸಲು ಮತ್ತು ಸಾಲ ಪಡೆಯಲು ಒಳ್ಳೆಯ ಸಮಯ. ಆದರೆ ನೀವು ಅಜಾಗರೂಕರಾಗಿದ್ದರೆ ಸಾಲಗಳು ಮತ್ತು ಕಾಯಿಲೆಗಳನ್ನು ಕೂಡ ಹೆಚ್ಚಿಸಬಹುದು. ಸ್ಪರ್ಧೆಗಳು, ಪ್ರವೇಶ ಪರೀಕ್ಷೆಗಳು ಮತ್ತು ಆಯ್ಕೆಗಳಲ್ಲಿ ಹಾಜರಾಗುವ ವಿದ್ಯಾರ್ಥಿಗಳಿಗೆ ಮಾನಸಿಕ ಬಲ, ಅವಕಾಶಗಳು ಮತ್ತು ಅವಶ್ಯಕವಾದ ಅದೃಷ್ಟವನ್ನು ನೀಡುತ್ತಾನೆ. ಕುಟುಂಬದ ರಾಶಿಯಲ್ಲಿ ರಾಹುವಿನ ಸಂಚಾರ ಕಾಲದಲ್ಲಿ ಕುಟುಂಬದಲ್ಲಿ ಗೊಂದಲ, ವಾದಗಳು ಮತ್ತು ಅಪಾರ್ಥಗಳು ಹೆಚ್ಚಾಗುವ ಸಾಧ್ಯತೆ. 
ನಿಮ್ಮ ಮಾತು ಕೆಲವೊಮ್ಮೆ ಕಠಿಣವಾಗಿ, ವ್ಯಂಗ್ಯವಾಗಿ ಅಥವಾ ಅವಶ್ಯಕವಾಗಿ ಕಠಿಣವಾಗಿ ಕೇಳಿಸಬಹುದು. ಅಷ್ಟಮದಲ್ಲಿ ಕೇತು ಸಂಚಾರ- ಇದು ಹಠಾತ್ ಆರ್ಥಿಕ ನಷ್ಟಗಳಿಗೆ, ವಿಶೇಷವಾಗಿ ಜಂಟಿ ಆಸ್ತಿಗಳು, ತೆರಿಗೆಗಳು ವಾರಸತ್ವದ ವಿವಾದಗಳು ಅಥವಾ ಗುಪ್ತ ಸಮಸ್ಯೆಗಳಿಂದ ತೊಂದರೆಯಾಗಬಹುದು, ಜೂಜಾಡಬೇಡಿ ಅಥವಾ ಕುರುಡು ಆರ್ಥಿಕ ನಿರ್ಣಯಗಳನ್ನು ತೆಗೆದುಕೊಳ್ಳಬೇಡಿ. 

ಕುಂಭ 

ನೂತನ ಸಂವತ್ಸರದಲ್ಲಿ ಅ.31ರವರೆಗೆ ಗುರು ಗ್ರಹವು ಪಂಚಮ ಸ್ಥಾನದಲ್ಲಿ ಸಂಚರಿಸುತ್ತಾ ಈ ವರ್ಷ ಸ್ವಲ್ಪ ಮೃದುವಾಗಿ ಆರಂಭವಾಗುತ್ತದೆ. ಇದು ಸೃಜನಶೀಲತೆ ಅಥವಾ ಮಕ್ಕಳ ಮೂಲಕ ಆದಾಯವನ್ನು ತರಬಹುದು. ಅಕ್ಟೋಬರ್ ನಂತರ ಗುರು ಬದಲಾವಣೆಯಿಂದ ನಿಮ್ಮ ಲಾಭ ಸ್ಥಾನದ ಮೇಲೆ ದೃಷ್ಟಿ ಬೀರುತ್ತಾನೆ. ಆ ಮೂಲಕ ನಿಧಾನವಾಗಿ ಆದಾಯವನ್ನು ಸ್ಥೀರಗೊಳಿಸಲು ಆರಂಭಿಸುತ್ತಾನೆ. ಗುರು-ಕೇತು ಯೋಗ ಸಂಬಂಧದಲ್ಲಿ ಆಧ್ಯಾತ್ಮಿಕ ಚೇತರಿಕೆಯಿಂದ ಉತ್ತಮ ಕಾರ್ಯ ನಿರ್ವಹಣೆ ಮೊದಲು ಕರ್ಮ ಸತ್ಯಗಳು ಹೊರಬಂದರೂ, ಬುದ್ಧಿವಂತ ಸಲಹೆ, ಮಾರ್ಗದರ್ಶನ ಇದು ಒಳ್ಳೆಯ ಸುವರ್ಣಾವಕಾಶ. 
ಕುಂಭರಾಶಿಯವರಿಗೆ ಸಾಡೇಸಾತಿಯ ಕೊನೆಯ ಹಂತ. ನಿಮ್ಮ ಆರೋಗ್ಯ, ಹಣಕಾಸು ಸಂಬಂಧಗಳ ಮೇಲೆ ಅಪಾರ ಒತ್ತಡವನ್ನು ಹೇರುತ್ತದೆ. ಶಿಸ್ತು ಪಾಲಿಸಲು ಮತ್ತು ಆಧ್ಯಾತ್ಮಿಕ ಶರಣಾಗತಿಗೆ ಸುಂಬಂಧಿಸಿದ ವರ್ಷ. ತಾಳ್ಮೆ ಮತ್ತು ಸಹನೆ ಅಗತ್ಯ. ಹಣಕಾಸು ಮತ್ತು ಕುಟುಂಬದ ಬಗ್ಗೆ ಎಚ್ಚರವಹಿಸಿ. ಶನೇಶ್ಚರನ ಚಲನೆಯಿಂದ ಹಣಕಾಸು ಪಾವತಿಗಳು ತಡವಾಗಬಹುದು, ಆದಾಯ ನಿಧಾನವಾಗಿ ಅಥವಾ ತಡೆ ಹಿಡಿಯಲ್ಪಟ್ಟಂತೆ ಅನಿಸಬಹುದು. ಕುಟುಂಬ, ಆರೋಗ್ಯ ಅಥವಾ ಬಾಧ್ಯತೆಗಳಿಗೆ ತಪ್ಪಿಸಲಾಗದ ಖರ್ಚುಗಳು ಹೆಚ್ಚಾಗಬಹುದು. ಅದೇ ಸಮಯದಲ್ಲಿ ಶನೇಶ್ಚರನು ನಿಮಗೆ ಉಳಿತಾಯ, ಬಜೆಟ್ ಮತ್ತು ದೀರ್ಘಕಾಲೀನ ಯೋಜನೆಯಲ್ಲಿ ಶಿಸ್ತು ಕಲಿಯುವಂತೆ ಮಾರ್ಗದರ್ಶನ ಮಾಡುತ್ತಾನೆ. 
ಡಿಸೆಂಬರ್ ವರೆಗೆ ಜನ್ಮರಾಹು ನಿಮ್ಮನ್ನು ತಪ್ಪಾಗಿ ಅರ್ಥೈಸಿಕೊಂಡಂತೆ, ಅಶಾಂತಿಯಿಂದ ಮತ್ತು ಸ್ವಯಂ ಕೇಂದ್ರಿತವಾಗಿ ಇರುವಂತೆ ಮಾಡುತ್ತಾರೆ. ಇತರರು ವಿಚಿತ್ರವಾಗಿ ಅಥವಾ ಊಹಿಸಲಾಗದ ರೀತಿಯಲ್ಲಿ ಭಾವಿಸುವಂತೆ ನೀವು ವರ್ತಿಸುವ ಸಾಧ್ಯತೆ ಇದೆ. ಸಪ್ತಮದಲ್ಲಿ ಕೇತು ವಿವಾಹ ಮತ್ತು ಪಾಲುದಾರಿಕೆಗಳನ್ನು ಬಾಧಿಸುತ್ತಾನೆ. ಮಾನಸಿಕ ದೂರ, ಸಂಪರ್ಕಗಳಲ್ಲಿ ಕಡಿತ ಅಥವಾ ಕೆಲವು ಸಂದರ್ಭಗಳಲ್ಲಿ ಬೇರೆಯಾಗುವ ಆಲೋಚನೆಗಳನ್ನು ಕೂಡ ಉಂಟುಮಾಡಬಹುದು. ಕೇತು ನೇರವಾಗಿ ಪಾಲುದಾರಿಕೆಗಳನ್ನು ಹಾನಿಗೊಳಿಸಬಹುದು. 

ಮೀನ 

ಗುರು ಜೂನ್ 1ರವರೆಗೆ ಚತುರ್ಥದಲ್ಲಿ ಸಂಚರಿಸುವಾಗ ಗೃಹಶಾಂತಿ, ಮಾನಸಿಕ ಬೆಂಬಲ, ಹೊರಗಿನ ಬಿರುಗಾಳಿಗಳಿಂದ ಸುರಕ್ಷಿತವಾದ ಆಶ್ರಯ ನೀಡುತ್ತದೆ. ಜೂನ್ 2ರಿಂದ ಅಕ್ಟೋಬರ್ 30ರವರೆಗೆ ಗುರು ನಿಮ್ಮ ಪೂರ್ವ ಪುಣ್ಯ ಸ್ಥಾನದ ಸಂಚಾರ ಕಾಲದಲ್ಲಿ ರಾಜಯೋಗ ದೈವ ವರ. ನಿಮ್ಮ ಬುದ್ಧಿ ಚುರುಕಾಗುತ್ತದೆ. ನಿಮ್ಮ ಅಂತಃಪ್ರಜ್ಞೆ ತುಂಬ ಶಕ್ತಿಯುತವಾಗುತ್ತದೆ. ಇದು ಸಂತಾನ ಪ್ರಾಪ್ತಿಗೆ, ವಿದ್ಯೆಯಲ್ಲಿ ಯಶಸ್ಸಿಗೆ, ಆಧ್ಯಾತ್ಮಿಕ ಜ್ಞಾನಕ್ಕೆ ಅತ್ಯುತ್ತಮ ಸಂಚಾರ, ಸಾಡೇಸಾತಿಯನ್ನು ತಡೆದುಕೊಳ್ಳಲು ನಿಮಗೆ ಶಕ್ತಿಯನ್ನು ನೀಡುತ್ತಾನೆ. ಅ.31ರಿಂದ ಗುರು ಷಷ್ಠದಲ್ಲಿ ಸಂಚರಿಸಿ ಕೇತುವಿನೊಂದಿಗೆ ಸೇರುತ್ತಾನೆ. ಇದು ಹೆಚ್ಚು ಸವಾಲಿನ ಸಂಚಾರ. ನಿಮ್ಮ ಏಳೂವರೆ ವರ್ಷಗಳ ಸಾಡೇಸಾತಿಯ ಗರಿಷ್ಠ ಹಂತದಲ್ಲಿದ್ದೀರಿ. ಜನ್ಮ ಶನಿ ಪ್ರಭಾವದಲ್ಲಿದ್ದೀರಿ. ಇದು ನಿಮ್ಮ ದೈಹಿಕ ಆರೋಗ್ಯ, ಮಾನಸಿಕ ನೆಮ್ಮದಿಯ ಮೇಲೆ ಅಪಾರ ಒತ್ತಡವನ್ನು ಹೇರುತ್ತದೆ. 
12ರಲ್ಲಿ ರಾಹು ವಿಶೇಷವಾಗಿ ವಿದೇಶಿ ಭೂಮಿಗಳು, ದೊಡ್ಡ-ದೊಡ್ಡ ವಿದೇಶಿ ಕಂಪನಿಗಳು, ಆಸ್ಪತ್ರೆಗಳು, ಸಂಶೋಧನ ಪ್ರಯೋಗಾಲಯಗಳು ಅಥವಾ ಏಕಾಂತ ವಾತಾವರಣದಲ್ಲಿ ಕಾರ್ಯ ನಿರ್ವಹಿಸುವವರಿಗೆ ಅನುಕೂಲಕರ. ರಾಹು ಗ್ರಹವು ಅಧಿಕ ಖರ್ಚುಗಳು, ನಿದ್ರಾಹೀನತೆ, ಗುಪ್ತ ಶತ್ರುಗಳು, ಆಸ್ಪತ್ರೆಗೆ ಸೇರುವ ಅಪಾಯ, ಶನಿ ಮತ್ತು ರಾಹು ನಿಮ್ಮನ್ನು ಕಟ್ಟಿ ಹಾಕಿದಂತೆ, ಒಂಟಿಯಾಗಿರುವಂತೆ ಮಾಡುತ್ತದೆ. ಸಿಂಹದಲ್ಲಿನ ಕೇತು ಇದು ಎದುರಾಳಿಗಳನ್ನು ಸೋಲಿಸಲು, ಭಾರಿ ಕೆಲಸದ ಹೊರೆಯನ್ನು ನಿಭಾಯಿಸಲು, ಕಾನೂನು ಅಥವಾ ಆಡಳಿತದಲ್ಲಿನ ಸಮಸ್ಯೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಲು ಸಹಾಯ ಮಾಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net