ಮಾಂಸ ತಿಂದು ದೇವಸ್ಥಾನಕ್ಕೆ ಏಕೆ ಹೋಗಬಾರದು ಗೊತ್ತಾ? ಅನೇಕರಿಗೆ ತಿಳಿದಿಲ್ಲದ ಅಸಲಿ ಸಂಗತಿ ಇಲ್ಲಿದೆ...Temple

ಮಾಂಸ ತಿಂದು ದೇವಸ್ಥಾನಕ್ಕೆ ಏಕೆ ಹೋಗಬಾರದು ಗೊತ್ತಾ? ಅನೇಕರಿಗೆ ತಿಳಿದಿಲ್ಲದ ಅಸಲಿ ಸಂಗತಿ ಇಲ್ಲಿದೆ...Temple
ಮಾಂಸ ತಿಂದು ದೇವಸ್ಥಾನಕ್ಕೆ ಏಕೆ ಹೋಗಬಾರದು ಗೊತ್ತಾ? ಅನೇಕರಿಗೆ ತಿಳಿದಿಲ್ಲದ ಅಸಲಿ ಸಂಗತಿ ಇಲ್ಲಿದೆ...Temple
Published on

ಪ್ರಮುಖ ಮುಖ್ಯಾಂಶಗಳು

  • ದೇವಸ್ಥಾನಕ್ಕೆ ಹೋಗುವ ಮುನ್ನ ಮಾಂಸಾಹಾರ ಸೇವಿಸಬಾರದು ಎನ್ನುವುದರ ಹಿಂದಿನ ಅಸಲಿ ಕಾರಣವೇನು?
  • ಹಿರಿಯರು ಹಾಕಿಕೊಟ್ಟ ನಿಯಮದ ಹಿಂದಿದೆ ಬಲವಾದ ಕಾರಣ!
  • ದೇವಸ್ಥಾನದ ಪ್ರಾಣಶಕ್ತಿ ಗ್ರಹಿಸಲು ಸಸ್ಯಾಹಾರವೇ ಬೆಸ್ಟ್!
  • ದೇವರ ದರ್ಶನಕ್ಕೆ ಬಾಹ್ಯ ಶುದ್ಧತೆ ಮಾತ್ರ ಸಾಲದು ಮಾಂಸ ತ್ಯಜಿಸಿ ಸಾತ್ವಿಕತೆಯಿಂದ ಹೋದರಷ್ಟೇ ಪುಣ್ಯ
Temple : ದೇವಸ್ಥಾನಕ್ಕೆ ಹೋಗುವಾಗ ಮಾಂಸ ಸೇವಿಸಿ ಹೋಗಬಾರದು ಅಂತ ನಮ್ಮ ಹಿರಿಯರು ಹೇಳುವುದನ್ನು ನೀವು ಕೇಳಿರುತ್ತೀರಿ. ಆದರೆ, ಏಕೆ ಹೋಗಬಾರದು? ಅನ್ನೋ ಪ್ರಶ್ನೆಗೆ ಬಹುತೇಕ ಮಂದಿಗೆ ನಿಖರವಾದ ಉತ್ತರವೇ ತಿಳಿದಿಲ್ಲ. ಶಾಸ್ತ್ರಗಳ ಪ್ರಕಾರ, ದೇವರ ದರ್ಶನಕ್ಕೆ ತೆರಳುವಾಗ ಕೇವಲ ಬಾಹ್ಯವಾಗಿ ಸ್ನಾನ ಮಾಡಿ ಶಾರೀರಿಕ ಶುದ್ಧತೆ ಕಾಯ್ದುಕೊಂಡರೆ ಸಾಲದು, ನಮ್ಮ ಮನಸ್ಸು ಕೂಡ ಅಷ್ಟೇ ಪವಿತ್ರ ಮತ್ತು ಸ್ವಚ್ಛವಾಗಿರಬೇಕು. ವಾಸ್ತವವಾಗಿ, ನಾವು ಸೇವಿಸುವ ಆಹಾರಕ್ಕೂ ಮತ್ತು ನಮ್ಮ ಆಲೋಚನೆಗಳು ಹಾಗೂ ಮನಸ್ಥಿತಿಗೂ ಅತ್ಯಂತ ನಿಕಟವಾದ ಸಂಬಂಧವಿದೆ ಎಂಬುದನ್ನು ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಸಂಶೋಧನೆಗಳು ಸಹ ಒಪ್ಪಿಕೊಳ್ಳುತ್ತವೆ.
ಉದಾಹರಣೆಗೆ, ಅತಿಯಾದ ಖಾರ ಹಾಗೂ ಮಸಾಲೆ ಪದಾರ್ಥಗಳನ್ನು ತಿಂದರೆ ಕೋಪ ಹೆಚ್ಚಾಗುತ್ತದೆ ಮತ್ತು ಪೊಂಗಲ್ ಅಥವಾ ಮೊಸರನ್ನದಂತಹ ಸಾತ್ವಿಕ ಆಹಾರ ಸೇವಿಸಿದರೆ ತಕ್ಷಣ ನಿದ್ರೆ ಆವರಿಸುತ್ತದೆ. ಅದೇ ರೀತಿ, ಮಾಂಸಾಹಾರವನ್ನು ಸೇವಿಸಿದಾಗ ಅದು ನಮ್ಮ ದೇಹದಲ್ಲಿ ಒಂದು ರೀತಿಯ ಆಲಸ್ಯ ಮತ್ತು ಮಂದತ್ವವನ್ನು ಉಂಟುಮಾಡುತ್ತದೆ. ಅಷ್ಟೇ ಅಲ್ಲದೆ, ಮಾಂಸಾಹಾರವು ಜೀರ್ಣಾಂಗವ್ಯೂಹದಲ್ಲಿ ಅಷ್ಟು ಬೇಗ ಜೀರ್ಣವಾಗುವುದಿಲ್ಲ, ಇದು ದೇವಸ್ಥಾನದ ಧನಾತ್ಮಕ ಶಕ್ತಿಯನ್ನು ಗ್ರಹಿಸಲು ಮತ್ತು ಏಕಾಗ್ರತೆಯಿಂದ ಪ್ರಾರ್ಥನೆ ಸಲ್ಲಿಸಲು ಅಡ್ಡಿಪಡಿಸುತ್ತದೆ ಎಂಬ ಕಾರಣಕ್ಕಾಗಿಯೇ ಗುಡಿಗೆ ಹೋಗುವ ಮುನ್ನ ಮಾಂಸ ತಿನ್ನುವುದನ್ನು ನಿಷೇಧಿಸಲಾಗಿದೆ.
ನಾವು ದೇವಸ್ಥಾನಕ್ಕೆ ಹೋದಾಗ ನಮ್ಮ ಮನಸ್ಸು ಮಂದವಾಗಿದ್ದರೆ, ಅಲ್ಲಿನ ಗರ್ಭಗುಡಿಯ ಆವರಣದಲ್ಲಿರುವ ಸೂಕ್ಷ್ಮ ದೈವಿಕ ಶಕ್ತಿ ಹಾಗೂ ಪಾಸಿಟಿವ್​ ತರಂಗಗಳನ್ನು ಗ್ರಹಿಸುವ ಸಾಮರ್ಥ್ಯವನ್ನು ನಾವು ಕಳೆದುಕೊಳ್ಳುತ್ತೇವೆ. ಮಾಂಸಾಹಾರ ಸೇವನೆಯು ನಮ್ಮೊಳಗಿನ ಈ ಆಧ್ಯಾತ್ಮಿಕ ಗ್ರಹಿಕೆಯನ್ನು ಕುಂಠಿತಗೊಳಿಸಿ, ಮನಸ್ಸನ್ನು ಏಕಾಗ್ರತೆಯಲ್ಲಿಡಲು ಕಷ್ಟವಾಗಿಸುತ್ತದೆ. ಅದೂ ಅಲ್ಲದೆ, ನಮ್ಮ ದೈನಂದಿನ ಬದುಕಿನಲ್ಲಿ ಅರಿವಿಲ್ಲದೇ ಮಾಡಿದ ಸಣ್ಣಪುಟ್ಟ ತಪ್ಪುಗಳನ್ನು ತೊಳೆದುಕೊಂಡು ಮನಃಶಾಂತಿ ಪಡೆಯಲು ನಾವು ದೇವರ ಸನ್ನಿಧಿಗೆ ಬರುತ್ತೇವೆ, ಅಂತಹ ಪವಿತ್ರ ಜಾಗಕ್ಕೆ ಪ್ರಾಣಿ ಹಿಂಸೆಯಿಂದ ತಯಾರಾದ ಮಾಂಸಾಹಾರವನ್ನು ಸೇವಿಸಿ ಬರುವುದು ನಮ್ಮ ಪಾಪದ ಹೊರೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂಬ ನಂಬಿಕೆಯೂ ಇದೆ ಎಂದು ಹಿರಿಯರು ಹೇಳುತ್ತಾರೆ.
ಕೇವಲ ದೇವಸ್ಥಾನ ಮಾತ್ರವಲ್ಲದೆ, ಮನೆಯಲ್ಲಾದರೂ ಅಷ್ಟೇ, ಮಾಂಸಾಹಾರ ಸೇವಿಸಿದ ದಿನದಂದು ದೇವರ ಕೋಣೆಯನ್ನು ಪ್ರವೇಶಿಸಬಾರದು ಅಥವಾ ದೀಪ ಹಚ್ಚಬಾರದು ಎಂದು ಹಿರಿಯರು ನಿಯಮಗಳನ್ನು ಮಾಡಿರುತ್ತಾರೆ. ಸಾತ್ವಿಕವಾದ ಸಸ್ಯಾಹಾರವನ್ನು ಸೇವಿಸಿ ದೇವಸ್ಥಾನಕ್ಕೆ ಹೋಗುವವರ ದೇಹ ಮತ್ತು ಮನಸ್ಸು ಅತ್ಯಂತ ಪ್ರಫುಲ್ಲವಾಗಿರುವುದರಿಂದ, ಅವರು ದೇವಸ್ಥಾನದ ಆವರಣದಲ್ಲಿ ತುಂಬಿರುವ ಶುದ್ಧ 'ಪ್ರಾಣಶಕ್ತಿ'ಯನ್ನು ಅತ್ಯಂತ ಸುಲಭವಾಗಿ ತಮ್ಮೊಳಗೆ ಹೀರಿಕೊಳ್ಳಲು ಸಾಧ್ಯವಾಗುತ್ತದೆ.
ಇದಕ್ಕೆ ತದ್ವಿರುದ್ಧವಾಗಿ, ಮಾಂಸಾಹಾರ ಸೇವಿಸಿದಾಗ ಉಂಟಾಗುವ ದೈಹಿಕ ಜಡತ್ವ ಮತ್ತು ತಾಮಸ ಗುಣಗಳ ಕಾರಣದಿಂದಾಗಿ, ವ್ಯಕ್ತಿಯು ದೇವಸ್ಥಾನದ ಆ ಪವಿತ್ರ ಪ್ರಾಣಶಕ್ತಿಯನ್ನು ಸಂಪೂರ್ಣವಾಗಿ ಗ್ರಹಿಸಲು ವಿಫಲನಾಗುತ್ತಾನೆ. ಇದೇ ಪ್ರಮುಖ ಕಾರಣಕ್ಕಾಗಿ, ಅಪಾರ ದೈವಿಕ ಶಕ್ತಿಯ ಕೇಂದ್ರವಾಗಿರುವ ದೇವಸ್ಥಾನಗಳಿಗೆ ಭೇಟಿ ನೀಡುವಾಗ ಮಾಂಸದ ಊಟವನ್ನು ಸಂಪೂರ್ಣವಾಗಿ ತ್ಯಜಿಸಿ, ಹಗುರವಾದ ಸಸ್ಯಾಹಾರವನ್ನು ಸೇವಿಸಿ ಹೋಗಬೇಕು ಎಂದು ಆಧ್ಯಾತ್ಮಿಕವಾಗಿ ಹೇಳಲಾಗುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್​ ನೆಟ್​ ಸೈಟ್ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net