ಎಚ್ಚರಗೊಳ್ಳುವ ಕೈಗಳು: ದಿನದ ಮೊದಲ ಯೋಗ

Yoga of the Day
Yoga of the Day
Published on

ಬಹುಸಾರಿ ನಾವು ಮಾತ್ರ ಎದ್ದಿರುತ್ತೇವೆ, ದೇಹ ಇನ್ನೂ ಮಲಗಿರುತ್ತದೆ. ನರಗಳು ನಿದ್ರಾವಸ್ಥೆಯಲ್ಲೇ ಇರುತ್ತವೆ, ಉಸಿರಾಟ ನಿಧಾನವಾಗಿರುತ್ತದೆ, ಮನಸ್ಸು ಅರ್ಧಜಾಗೃತ ಸ್ಥಿತಿಯಲ್ಲಿ ತೇಲುತ್ತಿರುತ್ತದೆ. ಇಂತಹ ಸ್ಥಿತಿಯಲ್ಲಿ ದಿನ ಆರಂಭವಾದರೆ, ಆ ದಿನವೂ ಅದೇ ಅಸಮತೋಲನದೊಂದಿಗೆ ಸಾಗುವುದು ಸಹಜ. ಯೋಗ ಹೇಳುತ್ತದೆ- ದಿನದ ಆರಂಭವೇ ದಿನದ ದಿಕ್ಕನ್ನು ನಿರ್ಧರಿಸುತ್ತದೆ. ನಾವು ದಿನವನ್ನು ಹೇಗೆ ಆರಂಭಿಸುತ್ತೇವೋ, ಆ ದಿನದ ಶಕ್ತಿ, ಲಯ ಮತ್ತು ಫಲಿತಾಂಶವೂ ಹಾಗೆಯೇ ರೂಪುಗೊಳ್ಳುತ್ತದೆ. ಆ ಆರಂಭದ ಮೊದಲ ಹೆಜ್ಜೆ ದೊಡ್ಡ ಆಸನವಲ್ಲ, ಕಠಿಣ ಸಾಧನೆಯೂ ಅಲ್ಲ. ಅದು ತುಂಬಾ ಸರಳ, ಆದರೆ ಅತ್ಯಂತ ಆಳವಾದ ಒಂದು ಕ್ರಿಯೆ; ಅದೇ ಹಸ್ತಮರ್ಧನ.

ಎಚ್ಚರಗೊಳ್ಳುವ ಕ್ಷಣದ ಮೊದಲ ಯೋಗ: ನಿದ್ರೆಯಿಂದ ಎಚ್ಚರಗೊಂಡ ತಕ್ಷಣ ಹಾಸಿಗೆಯಲ್ಲೇ ಕುಳಿತ ಸ್ಥಿತಿಯಲ್ಲಿ ಎರಡು ಕೈಗಳನ್ನು ನಿಧಾನವಾಗಿ ಆದರೆ ದೃಢವಾಗಿ ಉಜ್ಜುವುದು ನೋಡಲು ಅತಿ ಸಣ್ಣ ಕ್ರಿಯೆಯಂತೆ ಕಾಣಬಹುದು. ಆದರೆ ಯೋಗದ ದೃಷ್ಟಿಯಲ್ಲಿ ಇದು ದೇಹವನ್ನು ಎಚ್ಚರಿಸುವ ಮೊದಲ ಕರೆ. ನಮ್ಮ ಪೂರ್ವಜರು ಇದನ್ನು ಕೇವಲ ಅಭ್ಯಾಸ ಎಂದು ಕರೆಯಲಿಲ್ಲ; ಅವರು ಇದನ್ನು ದೇಹದ ನಿಯಮವಾಗಿ ಅರಿತಿದ್ದರು. ಯೋಗವಿಜ್ಞಾನವು ಒಂದು ಪ್ರಶ್ನೆ ಕೇಳುತ್ತದೆ: ದೇಹವನ್ನು ಎಚ್ಚರಿಸಬೇಕಾದರೆ ಎಲ್ಲಿಂದ ಆರಂಭಿಸಬೇಕು? ಉತ್ತರ ಸ್ಪಷ್ಟ. ಕೈಗಳಿಂದ. ಕೈಗಳಲ್ಲಿ ಅನೇಕ ನರಾಂತ್ಯಗಳು ಅಡಗಿವೆ. ದೇಹದ ಪ್ರಮುಖ ಪ್ರತಿಬಿಂಬ ಬಿಂದುಗಳು ಇಲ್ಲಿವೆ ಮತ್ತು ಮಿದುಳಿನೊಂದಿಗೆ ನೇರ ಸಂಪರ್ಕ ಹೊಂದಿರುವ ಸಂವೇದನಾತ್ಮಕ ದ್ವಾರಗಳಿವು. ಕೈಗಳನ್ನು ಉಜ್ಜಿದಾಗ ನರಗಳು ತಕ್ಷಣ ಸಕ್ರಿಯಗೊಳ್ಳುತ್ತವೆ, ರಕ್ತಸಂಚಾರ ವೇಗಗೊಳ್ಳುತ್ತದೆ, ದೇಹದ ತಾಪಮಾನ ಸಮತೋಲನಗೊಳ್ಳುತ್ತದೆ ಮತ್ತು ಮಿದುಳಿಗೆ ಸ್ಪಷ್ಟ ಸಂದೇಶ ತಲುಪುತ್ತದೆ: ಇಗೋ, ದೇಹ ಎಚ್ಚರಗೊಳ್ಳುತ್ತಿದೆ. ಅಂದರೆ, ದೇಹವನ್ನು ಎಬ್ಬಿಸುವ ಮೊದಲ ಸ್ವಿಚ್ ಕೈಗಳಲ್ಲೇ ಇದೆ.

ವಾತಕ್ಕೆ ದಿಕ್ಕು ನೀಡುವ ಕ್ರಿಯೆ: ಆಯುರ್ವೇದ ಹೇಳುತ್ತದೆ, ಬೆಳಿಗ್ಗೆ ವಾತ ಪ್ರಧಾನ ಕಾಲ. ವಾತ ಎಂದರೆ ಚಲನೆ, ಸ್ಪಂದನೆ, ಚೈತನ್ಯ. ಆದರೆ ದಿಕ್ಕಿಲ್ಲದ ವಾತವು ಅಲೆಮಾರಿಯಾಗಿ ದೇಹವನ್ನು ಅಸ್ಥಿರಗೊಳಿಸುತ್ತದೆ. ಅದಕ್ಕೇ ಹಸ್ತಮರ್ಧನವು ವಾತಕ್ಕೆ ದಿಕ್ಕು ನೀಡುತ್ತದೆ, ಚಲನೆಯನ್ನು ಸಮತೋಲನಗೊಳಿಸುತ್ತದೆ ಮತ್ತು ದೇಹವನ್ನು ದಿನದ ಚಟುವಟಿಕೆಗೆ ಸಿದ್ಧಪಡಿಸುತ್ತದೆ. ಈ ಕಾರಣಕ್ಕಾಗಿಯೇ ನೆಲಕ್ಕೆ ಇಳಿಯುವ ಮೊದಲು, ಹಾಸಿಗೆಯಲ್ಲೇ ಈ ಕ್ರಿಯೆಯನ್ನು ಮಾಡಬೇಕು ಎಂದು ಆಯುರ್ವೇದ ಸೂಚಿಸುತ್ತದೆ.

ಸಂಸ್ಕಾರದಿಂದ ಚೈತನ್ಯದವರೆಗೆ: ನಮ್ಮ ಸಂಸ್ಕೃತಿಯು ದೇಹದ ಕ್ರಿಯೆಗೆ ಮನಸ್ಸಿನ ಜಾಗೃತಿಯನ್ನೂ ಸೇರಿಸಿದೆ. ಅದಕ್ಕೇ ಕೈಗಳನ್ನು ಉಜ್ಜುವಾಗ ಮಂತ್ರಜಪವನ್ನು ಜೋಡಿಸಲಾಗಿದೆ.

‘ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ|ಕರಮೂಲೇಶು ಗೋವಿಂದಃ ಪ್ರಭಾತೇ ಕರದರ್ಶನಮ್|’

ಶಕ್ತಿ ಕೈಗಳಲ್ಲಿದೆ, ಜ್ಞಾನ ಕ್ರಿಯೆಯಲ್ಲಿದೆ, ಮತ್ತು ಕರ್ಮದ ಮೂಲಕವೇ ಚೈತನ್ಯ ವ್ಯಕ್ತವಾಗುತ್ತದೆ. ಅಂದರೆ, ನೀನು ಮಾಡುವ ಪ್ರತಿಯೊಂದು ಕೆಲಸವೂ ಜಾಗೃತಿಯಿಂದ ನಡೆದರೆ ಅದೇ ಯೋಗ ಎಂದು ಈ ಶ್ಲೋಕ ನೆನಪಿಸುತ್ತದೆ.

ದಿನದ ಮೊದಲ ಧ್ಯಾನ: ಮಂತ್ರೋಚ್ಚಾರಣೆಯು ಉಸಿರಾಟಕ್ಕೆ ಲಯ ನೀಡುತ್ತದೆ, ನರಗಳಿಗೆ ಶಾಂತಿ ನೀಡುತ್ತದೆ, ಮನಸ್ಸಿಗೆ ಧನಾತ್ಮಕ ದಿಕ್ಕು ನೀಡುತ್ತದೆ. ಹಸ್ತಮರ್ಧನ ಮತ್ತು ಶ್ಲೋಕ ಜಪ ಒಂದಾಗಿ ಸೇರಿದಾಗ ದೇಹ, ಮನ ಮತ್ತು ಉಸಿರಿನ ತ್ರಿವೇಣಿ ಸಂಗಮ ಸಂಭವಿಸುತ್ತದೆ. ಇದೇ ದಿನದ ಮೊದಲ ಧ್ಯಾನ. ಇದು ಮೂಢನಂಬಿಕೆ ಅಲ್ಲ, ಕೇವಲ ಸಂಪ್ರದಾಯವೂ ಅಲ್ಲ. ಇದು ನರಜಾಗೃತಿ, ವಾತ ಸಮತೋಲನ ಮತ್ತು ದಿನದ ಲಯಕ್ಕೆ ಪ್ರವೇಶ.

ಸಣ್ಣ ಜಾಗೃತಿಯಿಂದ ದೊಡ್ಡ ಬದಲಾವಣೆ: ಯೋಗವು ಸ್ಪಷ್ಟವಾಗಿ ಹೇಳುತ್ತದೆ- ದಿನವನ್ನು ಹೇಗೆ ಆರಂಭಿಸುತ್ತೇವೋ, ಜೀವನದ ಗುಣಮಟ್ಟವೂ ಹಾಗೆಯೇ ರೂಪುಗೊಳ್ಳುತ್ತದೆ. ದೊಡ್ಡ ಬದಲಾವಣೆಗಳು ದೊಡ್ಡ ಕ್ರಿಯೆಗಳಿಂದ ಆರಂಭವಾಗುವುದಿಲ್ಲ; ಅವು ಹುಟ್ಟಿಕೊಳ್ಳುವುದು ಹಾಸಿಗೆಯಲ್ಲೇ ಕೈಗಳನ್ನು ಉಜ್ಜುವಂತಹ ಸಣ್ಣ ಆದರೆ ಜಾಗೃತ ಕ್ಷಣದಿಂದ. ಆದ್ದರಿಂದ ಎಚ್ಚರಗೊಳ್ಳುವ ಕೈಗಳು ಜಾಗೃತ ಜೀವನದ ಮೊದಲ ಹೆಜ್ಜೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net