ವರಮಹಾಲಕ್ಷ್ಮಿ ಹಬ್ಬದಂದು ಯಾವ ಬಣ್ಣದ ಸೀರೆ ಪೂಜೆಗೆ ಶ್ರೇಷ್ಠ?; ಇಲ್ಲಿದೆ ಸಂಪೂರ್ಣ ಮಾಹಿತಿ..Varalakshmi Vrata

Varalakshmi Vrata Dress Code
Varalakshmi Vrata Dress Code
Published on

ಪ್ರಮುಖ ಮುಖ್ಯಾಂಶಗಳು

  • ವರಮಹಾಲಕ್ಷ್ಮಿ ಪೂಜೆಗೆ ಹಸಿರು, ಕೆಂಪು, ಹಳದಿ, ಮರೂನ್ ಬಣ್ಣದ ಸೀರೆಗಳು ಅತ್ಯಂತ ಮಂಗಳಕರ.
  • ಸಾಂಪ್ರದಾಯಿಕ ಪೂಜೆಗಳಲ್ಲಿ ಚಿನ್ನದ ಜರಿ ಬಾರ್ಡರ್ ಇರುವ ರೇಷ್ಮೆ ಸೀರೆ ಧರಿಸುವುದು ವಾಡಿಕೆ.
  • ಸೀರೆಯೊಂದಿಗೆ ಆಭರಣ ಹಾಗೂ ಹೂಗಳನ್ನು ಆಯ್ಕೆ ಮಾಡುವುದರಲ್ಲಿಯೂ ವಿಶೇಷತೆ ಇರಲಿ.

Varalakshmi Vrata Dress Code:

ಮುಂದಿನ ವಾರವೇ ವರಮಹಾಲಕ್ಷ್ಮಿ ಹಬ್ಬ ಇರುವುದರಿಂದ ಈಗಾಗಲೇ ಮಹಿಳೆಯರು ಸೀರೆ ಕೊಂಡುಕೊಳ್ಳಲು ಸಾಕಷ್ಟು ತಯಾರಿ ನಡೆಸುತ್ತಿರುತ್ತಾರೆ. ಚಂದದ ಸೀರೆ, ದೇವಿಯನ್ನು ಕೂರಿಸಲು ಬೇಕಾಗುವ ಸಾಮಾಗ್ರಿಗಳು, ಬಳೆ, ಹೂ, ಕಲಶ, ಬಾಳೆ ದಿಂಡು, ಉತ್ತಮವಾದ ಡಿಸೈನ್​ವುಳ್ಳ ಬ್ಯಾಕ್​ಗ್ರೌಂಡ್​ಗಳನ್ನು ಆನ್​ಲೈನ್​​​ನಲ್ಲಿ ಹುಡುಕಾಟ ನಡೆಸಿ ಖರೀದಿ ಮಾಡುತ್ತಿದ್ದಾರೆ. ಇದೇ ಹೊತ್ತಲ್ಲಿ ಹಬ್ಬ ಆಚರಿಸುವ ಮಹಿಳೆಯರು ತಿಳಿದುಕೊಳ್ಳಲೇಬೇಕಾದ ವಿಚಾರವೊಂದಿದೆ.

ಹೌದು, ಈ ಹಬ್ಬದ ದಿನ ಪೂಜೆ ಇಡಲಾಗುವ ಸೀರೆ, ಆಭರಣ ಹಾಗೂ ಹೂವುಗಳ ಆಯ್ಕೆಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಲಕ್ಷ್ಮಿ ದೇವಿಯ ಪೂಜೆಯಲ್ಲಿ ಕೆಲವು ಬಣ್ಣಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅದರಂತೆ ಹಸಿರು, ಕೆಂಪು, ಹಳದಿ, ಚಿನ್ನ, ಮರೂನ್ ಮತ್ತು ಗುಲಾಬಿ ಬಣ್ಣದ ಸೀರೆಗಳು ಪೂಜೆಯ ಸಂದರ್ಭದಲ್ಲಿ ಇಡಲಾಗುತ್ತದೆ. ಯಾವ ಬಣ್ಣದ ಸೀರೆ ಏನನ್ನು ಹೇಳುತ್ತದೆ ಎಂಬುದರ ಮಾಹಿತಿ ಇಲ್ಲಿದೆ

ಕೆಂಪು ಬಣ್ಣ ಹೇಳೋದೇನನ್ನು

ಕೆಂಪು ಬಣ್ಣ ಸ್ತ್ರೀ ಶಕ್ತಿ, ಭಕ್ತಿ ಹಾಗೂ ಮಂಗಳಕರ ಸಂಕೇತ ಎಂದು ಹೇಳಲಾಗುತ್ತದೆ. ಜರಿ ಹೊಂದಿರುವ ಕೆಂಪು ರೇಷ್ಮೆ ಸೀರೆ ವರಮಹಾಲಕ್ಷ್ಮಿ ಪೂಜೆಯಂತಹ ಶುಭ ಸಂದರ್ಭದಲ್ಲಿ ಸಾಂಪ್ರದಾಯಿಕ ಹಾಗೂ ಆಕರ್ಷಕ ನೋಟವನ್ನು ಬೀರುವಂತೆ ಮಾಡುತ್ತದೆ.

ಸಂಪತ್ತಿನ ಸಂಕೇತ ಈ ಹಳದಿ ಅಥವಾ ಚಿನ್ನದ ಬಣ್ಣದ ಸೀರೆ

ಹಳದಿ ಅಥವಾ ಚಿನ್ನದ ಬಣ್ಣದ ಸೀರೆಯನ್ನು ಹೆಚ್ಚಾಗಿ ಶುಭ ಸಮಾರಂಭಗಳಲ್ಲಿ ಬಳಕೆ ಮಾಡಲಾಗುತ್ತದೆ. ಇದು ಸಕರಾತ್ಮಕತೆ, ಸಮೃದ್ಧಿ ಹಾಗೂ ಚೈತನ್ಯದ ಸಂಕೇತವಾಗಿದೆ. ಈ ಕಾರಣದಿಂದಲೇ ಪೂಜಾ ಸಮಯದಲ್ಲಿ, ಹಳದಿ ಶಾಸ್ತ್ರ ಮಾಡುವಾಗ ಇದೇ ಬಣ್ಣದ ಸೀರೆಯನ್ನು ಉಡಲಾಗುತ್ತದೆ.

ಸಂಪತ್ತು, ಅಭಿವೃದ್ಧಿ ಸೂಚಿಸುತ್ತದೆ ಈ ಹಸಿರು ಸೀರೆ

ಹಸಿರು ಬಣ್ಣವನ್ನು ಸಂಪತ್ತು, ಅಭಿವೃದ್ಧಿ, ಫಲವತ್ತತೆ ಮತ್ತು ಸಮೃದ್ಧಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ವರಮಹಾಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ಅನೇಕ ಮಹಿಳೆಯರು ಹಸಿರು ಬಣ್ಣದ ಸೀರೆಯನ್ನು ಆಯ್ಕೆ ಮಾಡುತ್ತಾರೆ. ಹಸಿರು ರೇಷ್ಮೆ ಸೀರೆಗೆ ಚಿನ್ನದ ಜರಿ ಬಾರ್ಡರ್ ಇದ್ದರೆ ಸಾಂಪ್ರದಾಯಿಕ ನೋಟ ಮತ್ತಷ್ಟು ಹೆಚ್ಚುತ್ತದೆ.

ಮರೂನ್ ಸೀರೆ

ವರಮಹಾಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ಮರೂನ್​ ಬಣ್ಣದ ಸೀರೆಗೆ ಹೆಚ್ಚು ಮಹತ್ವವಿದೆ. ಚಿನ್ನದ ಜರಿ ಅಥವಾ ಲೇಸ್ ಬಾರ್ಡರ್ ಹೊಂದಿರುವ ಮರೂನ್ ರೇಷ್ಮೆ ಸೀರೆ ಸಾಂಪ್ರದಾಯಿಕ ಹಾಗೂ ರಾಜಮನೆತನದಂತಹ ನೋಟ ನೀಡುತ್ತದೆ. ಚಿನ್ನದ ಆಭರಣಗಳು ಮತ್ತು ದೇವಾಲಯದ ವಿನ್ಯಾಸದ ಆಭರಣಗಳೊಂದಿಗೆ ಇದು ಮತ್ತಷ್ಟು ಸುಂದರವಾಗಿ ಕಾಣುತ್ತದೆ.

ರೇಷ್ಮೆ ಸೀರೆಗೆ ವಿಶೇಷ ಆದ್ಯತೆ

ವರಮಹಾಲಕ್ಷ್ಮಿ ವ್ರತದಂತಹ ಸಾಂಪ್ರದಾಯಿಕ ಪೂಜಾ ಸಂದರ್ಭಗಳಲ್ಲಿ ರೇಷ್ಮೆ ಸೀರೆ ಧರಿಸುವುದು ಹಲವೆಡೆ ವಾಡಿಕೆಯಾಗಿದೆ. ಹಸಿರು, ಕೆಂಪು, ಮರೂನ್, ಹಳದಿ ಮತ್ತು ಚಿನ್ನದ ಬಣ್ಣಗಳ ಜರಿ ಬಾರ್ಡರ್ ಇರುವ ರೇಷ್ಮೆ ಸೀರೆಗಳು ಪೂಜೆಯ ಸಂದರ್ಭಕ್ಕೆ ವಿಶೇಷವಾಗಿ ಹೊಂದಿಕೆಯಾಗುತ್ತವೆ.

ಮೃದುತ್ವದ ಸಂಕೇತ ಈ ಗುಲಾಬಿ ಬಣ್ಣ

ಹಬ್ಬ ಹಾಗೂ ಶುಭ ಕಾರ್ಯಕ್ರಮಗಳಂದು ಧರಿಸುವ ಗುಲಾಬಿ ಬಣ್ಣದ ಸೀರೆಗಳು ಸೌಂದರ್ಯ, ಮೃದುತ್ವ ಮತ್ತು ಸಂಭ್ರಮದ ಸೂಚನೆಯಾಗಿದೆ. ವರಮಹಾಲಕ್ಷ್ಮಿ ಪೂಜೆಗೆ ಗುಲಾಬಿ ಬಣ್ಣವನ್ನೂ ಅನೇಕರು ಆಯ್ಕೆ ಮಾಡುತ್ತಾರೆ. ವಿಶೇಷವಾಗಿ ರಾಣಿ ಪಿಂಕ್‌ನಂತಹ ಗಾಢ ಗುಲಾಬಿ ಛಾಯೆಗಳು ರೇಷ್ಮೆ ಸೀರೆಗಳಿಗೆ ಹಬ್ಬದ ಮೆರುಗು ನೀಡುತ್ತವೆ.

ಆಭರಣ ಮತ್ತು ಹೂವುಗಳಿರಲಿ

ಸಾಂಪ್ರದಾಯಿಕವಾಗಿ ಸೀರೆಯನ್ನುಡುತ್ತೇವೆ ಎಂದರೆ ಅದಕ್ಕೆ ತಕ್ಕಂತೆ ಹೂವು ಹಾಗೂ ಚಿನ್ನದ ಆಭರಣ, ಲಕ್ಷ್ಮಿ ಹಾರ, ಬಳೆಗಳು ಹಾಗೂ ಜುಮುಕಿ ಅಗತ್ಯ. ಹೀಗಾಗಿ, ಜಡೆಗೆ ಮಲ್ಲಿಗೆ ಹೂವುಗಳನ್ನು ಮುಡಿಸುವುದರಿಂದ ವರಮಹಾಲಕ್ಷ್ಮಿ ಪೂಜೆಯ ಸಾಂಪ್ರದಾಯಿಕ ಸೌಂದರ್ಯ ಮತ್ತಷ್ಟು ಹೆಚ್ಚುತ್ತದೆ, (ಏಜೆನ್ಸೀಸ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net