

ಕಲ್ಲಿಗೆ ಒಂದು ಕಲೆ ಚೈತನ್ಯವಿದ್ದರೆ, ನೀರಿನಲ್ಲಿ ಎರಡು ಕಲೆಯಷ್ಟು ಚೈತನ್ಯವಿದೆ. ಅಗ್ನಿಯಲ್ಲಿ ಮೂರು ಕಲೆಯಷ್ಟು ಜೀವವಿದ್ದರೆ, ವಾಯುವಿನಲ್ಲಿ ನಾಲ್ಕು ಕಲೆಯಷ್ಟು ಜೀವವಿದೆ. ಆಕಾಶಕ್ಕೆ ಐದು ಕಲೆಯಾದರೆ, ಅಚರವಾದ ವೃಕ್ಷಗಳಲ್ಲಿ ಆರು ಕಲೆಯಿದೆ. ಪ್ರಾಣಿಗಳಲ್ಲಿ ಏಳು ಕಲೆ ಹಾಗೂ ಮನುಷ್ಯರಲ್ಲಿ ಎಂಟು ಕಲೆಯಿದೆ. ಆದ್ದರಿಂದಲೇ ಮನುಷ್ಯರನ್ನು 'ಅಷ್ಟವಸು' ಎನ್ನುತ್ತಾರೆ. ಅಂದರೆ ಮನುಷ್ಯರಲ್ಲಿ ಎಂಟು ರೀತಿಯ ಪ್ರಾಣ ಅಥವಾ ಜೀವಕೋಶಗಳಿವೆ.
ಮನುಷ್ಯರಿಗಿಂತಲೂ ಒಂದು ದರ್ಜೆ ಹೆಚ್ಚಿನವರು ಪಿತೃಗಳು. ಇವರು ಮನುಷ್ಯ ಶರೀರದಿಂದ ಹೊರಗಿರುವವರು ಮತ್ತು ಇವರು ಎಲ್ಲಿಗಾದರೂ ತಲುಪಬಲ್ಲರು. ಆದ್ದರಿಂದ ಪಿತೃ ಪೂಜೆಯನ್ನು ಭಾರತ, ಚೀನಾ, ಜಪಾನ್, ಬ್ರೆಜಿಲ್, ಕೊಲಂಬಿಯಾ, ಅರ್ಜೆಂಟಿನಾ ಮುಂತಾದ ಎಲ್ಲಾ ಪುರಾತನ ಸಂಸ್ಕೃತಿಯುಳ್ಳ ದೇಶಗಳಲ್ಲಿ ಮಾಡುತ್ತಾರೆ. ಸಿಂಗಾಪುರದಲ್ಲಿ ಪಿತೃಗಳ ದಿನವನ್ನು ಆಚರಿಸುತ್ತಾರೆ. ಅಲ್ಲಿ ಪಿತೃಗಳಿಗೆ ಏನೇನು ಇಷ್ಟವೋ ಅದನ್ನೆಲ್ಲಾ ಕಾಗದದಲ್ಲಿ ಮಾಡಿ ಸುಡುತ್ತಾರೆ. ಸಿಂಗಾಪುರ ಎಷ್ಟು ಸುಂದರವಾದ ನಗರ! ಆದರೆ ಆ ದಿನದಂದು ಮಾತ್ರ ಆ ದೇಶವೆಲ್ಲಾ ಹೊಗೆಯಿಂದ ತುಂಬಿರುತ್ತದೆ. ಕಾಗದದ ಕಾರನ್ನು ಸುಟ್ಟರೆ ಅದು ಪಿತೃಗಳಿಗೆ ತಲುಪುತ್ತದೆ ಮತ್ತು ಅಂತಹದ್ದೇ ಕಾರು ತಮಗೂ ಸಿಗಲಿ ಎಂದು ಅವರು ಹರಸುತ್ತಾರೆ ಎಂಬುದು ಅಲ್ಲಿನವರ ನಂಬಿಕೆ.
ನಮ್ಮಲ್ಲಿ ಶ್ರಾದ್ಧ ಮಾಡಿ ಕಾಗೆಗಳಿಗೆ ಅಥವಾ ಪಶು-ಪಕ್ಷಿಗಳಿಗೆ ಆಹಾರ ನೀಡಿದರೆ, ಪಿತೃಗಳು ಆ ರೂಪದಲ್ಲಿ ಬಂದು ಸ್ವೀಕರಿಸುತ್ತಾರೆ ಎಂಬ ನಂಬಿಕೆಯಿದೆ. ಇದು ಭೂತ ಯಜ್ಞ ಅಂದರೆ ಪ್ರಾಣಿಗಳಿಗೆ ಆಹಾರ ಕೊಡುವುದು. ಇವೆಲ್ಲವೂ ಭಾವಪ್ರಧಾನವಾದವುಗಳು. ತಂದೆ-ತಾಯಿಯರ ಹೆಸರಿನಲ್ಲಿ ಬಡ ಮಕ್ಕಳಿಗೆ ಸಹಾಯ ಮಾಡಿದರೆ ಅಥವಾ ವೃದ್ಧರ ಸೇವೆ ಮಾಡಿದರೆ ಅದರಿಂದ ಖಂಡಿತ ಫಲ ಸಿಗುತ್ತದೆ.
ಪಿತೃಗಳಿಗಿಂತಲೂ ಉನ್ನತ ಸ್ಥಾನದಲ್ಲಿರುವವರು ಕಿನ್ನರ, ಗಂಧರ್ವ, ಯಕ್ಷ ಮತ್ತು ದೇವತೆಗಳು. ದೇವತೆಗಳಿಗಿಂತಲೂ ಉನ್ನತ ಸ್ಥಾನ ಸಿದ್ಧರದ್ದು ಅಂದರೆ ಸದ್ಗುರುವಿನ ಸ್ಥಾನ. ಮುಕ್ತರಾದವರ ಸ್ಥಾನ ದೇವತೆಗಳಿಗಿಂತಲೂ ಶ್ರೇಷ್ಠವಾದುದು. ಆದ್ದರಿಂದಲೇ ಎಲ್ಲಾ ಪೂಜೆಗಳನ್ನು ಪ್ರಾರಂಭಿಸುವ ಮೊದಲು ‘ಶ್ರೀ ಗುರುಭ್ಯೋ ನಮಃ’ ಎಂದು ಪ್ರಾರ್ಥಿಸುವುದು.
ಸೂಕ್ಷ್ಮಾತಿಸೂಕ್ಷ್ಮ ಜಗತ್ತಿನಲ್ಲೂ ವೈವಿಧ್ಯವಿದೆ. ಇವೆಲ್ಲವೂ ಒಂದೇ ಚೈತನ್ಯದಿಂದ ಮಾಡಲ್ಪಟ್ಟಿದೆ ಎಂದು ಆತ್ಮಜ್ಞಾನಿಗೆ ತಿಳಿದಿರುತ್ತದೆ. ಈ ಜಗತ್ತಿನಲ್ಲಿ ಅಪಾರ ಜೀವರಾಶಿಗಳಿವೆ; ಬ್ಯಾಕ್ಟೀರಿಯಾಗಳಲ್ಲಿ ಕೆಟ್ಟ ಮತ್ತು ಉಪಯುಕ್ತ ಬ್ಯಾಕ್ಟೀರಿಯಾಗಳು, ಸೊಳ್ಳೆ, ಜಿರಳೆ, ಕಪ್ಪೆ, ಮೀನು, ಚಿಟ್ಟೆ, ಜೀರುದುಂಬಿ ಹೀಗೆ ಅನೇಕ. ಎಷ್ಟೋ ಜೀವಿಗಳು ಆಕಾಶದಲ್ಲಿ ಜನಿಸುತ್ತವೆ! ಒಂದು ಡಬ್ಬಿಯೊಳಗೆ ಅಕ್ಕಿಯನ್ನು ಹಾಕಿ ಮುಚ್ಚಿಟ್ಟರೂ ಅದರೊಳಗೆ ಹುಳುಗಳು ಬಂದುಬಿಡುತ್ತವೆ. ಅವು ಎಲ್ಲಿಂದ ಹುಟ್ಟಿದವು?
ಮನುಷ್ಯರಿಗಿಂತಲೂ ಕೆಳ ಹಂತದಲ್ಲಿರುವವರೆಂದರೆ ಭೂತ, ಪ್ರೇತ ಮತ್ತು ಪಿಶಾಚ ಯೋನಿಗಳು. ಒಮ್ಮೆ ಚೀನಾದ ರಾಜಕುಮಾರನಿಗೆ ಜ್ಞಾನಿಗಳಲ್ಲಿ ಅಂತಹ ವಿಶೇಷವೇನಿದೆ ಎಂದು ತಿಳಿಯುವ ಕುತೂಹಲವಾಯಿತು. ಅವನು ಒಬ್ಬ ಸಿದ್ಧರ ಬಳಿ ಹೋಗಿ, "ಮೂರು-ನಾಲ್ಕು ದಿನ ನಿಮ್ಮೊಡನಿರಲು ಅವಕಾಶ ಕೊಡಿ" ಎಂದು ಕೇಳಿದನು. ಸಿದ್ಧರು ಒಪ್ಪಿದರು. ರಾಜಕುಮಾರ ಅವರೊಡನಿದ್ದು ಗಮನಿಸಿದಾಗ ಸಿದ್ಧರು ಮಾಡುವ ಎಲ್ಲ ಕಾರ್ಯಗಳೂ ಸಾಮಾನ್ಯವಾಗಿದ್ದವು. ಅವರು ಎಲ್ಲರಂತೆ ಊಟ ಮಾಡುತ್ತಿದ್ದರು, ಮಲಗುತ್ತಿದ್ದರು. ಅವರಲ್ಲಿ ಏನಾದರೂ ವಿಶೇಷ ಪ್ರಕಾಶ ಕಾಣಬಹುದೇ ಎಂದು ರಾಜಕುಮಾರ ಕಾಯುತ್ತಿದ್ದ, ಆದರೆ ಅಂತಹದ್ದೇನೂ ಆಗಲಿಲ್ಲ. ಎಲ್ಲರೂ ಮಾಡುವಂತೆಯೇ ಇವರೂ ಮಾಡುತ್ತಾರಲ್ಲ, ಇವರಲ್ಲೇನು ವಿಶೇಷ ಎಂದು ರಾಜಕುಮಾರ ದಿಗ್ಭ್ರಮೆಗೊಂಡ.
ಯೋಗಿಗಳೆಂದರೆ ಹೀಗಿರುತ್ತಾರೆ ಎಂಬ ಕಲ್ಪನೆ ಅವನಲ್ಲಿತ್ತು. ಆದರೆ ಈ ಸಿದ್ಧರು ತಮ್ಮ ಪಾತ್ರೆಯನ್ನು ಎಲ್ಲೋ ಇಟ್ಟು ಹುಡುಕುತ್ತಿದ್ದರು. ಆದರೂ ಅವನ ಹೃದಯಕ್ಕೆ ಇವರಲ್ಲಿ ಏನೋ ವಿಶೇಷವಿದೆ ಎಂದು ಅನಿಸುತ್ತಿತ್ತು.
ಹಾಗಾಗಿ ಅವರನ್ನು ಬಿಟ್ಟು ಹೋಗಲು ಅವನಿಗೆ ಮನಸ್ಸಾಗಲಿಲ್ಲ. ಅವನಲ್ಲಿ ಸಂಶಯಗಳು ಉಕ್ಕಿ ಬಂದವು. ಅವನ ಸಂಶಯವನ್ನು ಮತ್ತಷ್ಟು ಹೆಚ್ಚಿಸುವಂತೆ ಸಿದ್ಧರು ವರ್ತಿಸುತ್ತಿದ್ದರು. ಕೊನೆಗೆ ತಾಳಲಾರದೆ ಅವನು ಸಿದ್ಧರ ಪಾದಗಳ ಬಳಿ ಕುಳಿತು ಸಂಶಯ ನಿವಾರಿಸಿಕೊಳ್ಳಲು ಪ್ರಯತ್ನಿಸಿದಾಗ ಅವನ ತಲೆಯೆಲ್ಲ ಖಾಲಿಯಾದಂತಾಯಿತು.
ಆಗ ಸಿದ್ಧರು, "ಹೃದಯವನ್ನು ಹೃದಯವು ಮಾತ್ರ ಅರಿತುಕೊಳ್ಳಲು ಸಾಧ್ಯ. ಕಿವಿಗಳಿಗೆ ಅದು ಕೇಳಿಸುವುದಿಲ್ಲ, ಕಣ್ಣುಗಳಿಗೆ ಕಾಣಿಸುವುದಿಲ್ಲ. ಸತ್ಯವನ್ನು ಧ್ಯಾನದಲ್ಲಿ ಮಾತ್ರ ತಿಳಿಯಲು ಸಾಧ್ಯ" ಎಂದರು. ಎಲ್ಲಾ ಜೀವಿಗಳಲ್ಲಿ ಕೇವಲ ಜ್ಞಾನಿಗಳು ಮಾತ್ರ ತಮ್ಮ ಇಚ್ಛೆ-ಅನಿಚ್ಛೆಗಳನ್ನು ತ್ಯಜಿಸಲು ಸಮರ್ಥರು. ಎಲ್ಲವೂ ಅವರದ್ದೇ ಅಂದ ಮೇಲೆ ಅಲ್ಲಿ ಇಚ್ಛೆ-ಅನಿಚ್ಛೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. (ಪ್ರತಿಕ್ರಿಯಿಸಿ: instagram@gurudev.kannada)