_1778690496651.webp?w=480&auto=format%2Ccompress&fit=max)
_1778690496651.webp?w=480&auto=format%2Ccompress&fit=max)
ಪ್ರವೃತ್ತಿ ಮಾರ್ಗದಿಂದ ನಮ್ಮ ಮನಸ್ಸನ್ನು ಶುದ್ಧ ಮಾಡಿಕೊಂಡು, ನಿವೃತ್ತಿ ಮಾರ್ಗವನ್ನು ಪ್ರವೇಶಿಸಬೇಕು. ಆಗ ಗುರುವಿನ ಉಪದೇಶದ ಮುಖಾಂತರ ನಮಗೆ ಜ್ಞಾನೋದಯವಾಗುತ್ತದೆ. ಇದು ಶಾಸ್ತ್ರಗಳು ನಮಗೆ ತೋರಿಸಿರುವ ದಾರಿ. ಆದ್ದರಿಂದ ಮನಸ್ಸನ್ನು ಶುದ್ಧಗೊಳಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು.
ವೇದಾಂತದ ಪ್ರಶ್ನೋತ್ತರದಲ್ಲಿ ಜನರು ಸಾಮಾನ್ಯವಾಗಿ ‘ಕ್ರೋಧವನ್ನು ನಿಗ್ರಹಿಸುವುದು ಹೇಗೆ? ಮಕ್ಕಳೊಡನೆ ಹೇಗೆ ವರ್ತಿಸಬೇಕು?’ ಎಂದೆಲ್ಲ ಕೇಳುತ್ತಾರೆ. ಜೀವನದಲ್ಲಿ ಆಸಕ್ತಿ ಕಳೆದುಕೊಂಡವರಂತೂ ‘ಇದೆಲ್ಲವೂ ಪ್ರಾರಬ್ಧವೇ? ಕ್ರೋಧವೂ ಸಹ ಪ್ರಾರಬ್ಧದ ಫಲವೇ ಆಗಿದೆ, ಆದ್ದರಿಂದಲೇ ನಾನು ಅದನ್ನು ನಿಗ್ರಹಿಸಲು ಸಾಧ್ಯವಾಗುತ್ತಿಲ್ಲ’ ಎಂದೆಲ್ಲ ಮಾತನಾಡುತ್ತಾರೆ. ಇವೆಲ್ಲವನ್ನೂ ನೋಡಿದರೆ ನಮಗೆ ಆ ವ್ಯಕ್ತಿಯ ಮನಃಸ್ಥಿತಿ ಖಚಿತವಾಗಿ ಗೊತ್ತಾಗುತ್ತದೆ.
ತುಂಬಾ ಸಾಧಕರು ಕ್ರೋಧವನ್ನು ಬಿಡಬೇಕೆಂದು ಬಯಸುತ್ತಾರೆ, ಆದರೆ ಅದರ ಮಾರ್ಗ ಅಗೋಚರವಾಗಿರುತ್ತದೆ. ಕ್ರೋಧವನ್ನು ಗೆಲ್ಲಲು ಮಾಡಬೇಕಾದ ಮೊದಲ ಪ್ರಯತ್ನವೆಂದರೆ ಕ್ರೋಧಕ್ಕೆ ಮೂಲ ಕಾರಣವನ್ನು ಹುಡುಕುವುದು.
ಅನೇಕರು ತಣ್ಣೀರಿನ ಸ್ನಾನ ಮಾಡಿದರೆ ಕ್ರೋಧ ಕಡಿಮೆಯಾಗುತ್ತದೆಯೆಂದು ಪ್ರಯತ್ನಿಸುತ್ತಾರೆ. ಇನ್ನು ಕೆಲವರು ಉಪವಾಸ ಮಾಡುತ್ತಾರೆ. ಆದರೆ ಉಪವಾಸ ಮಾಡುವ ವ್ಯಕ್ತಿಗೆ ಕ್ರೋಧ ಕಡಿಮೆಯಾಗುವುದಕ್ಕಿಂತ ಹೆಚ್ಚಾಗುತ್ತದೆ. ಕೆಲವರಂತೂ ಕ್ರೋಧ ತಾನಾಗಿಯೇ ಕಡಿಮೆಯಾಗುತ್ತದೆ ಎಂದು ಸುಮ್ಮನಿರುತ್ತಾರೆ. ಆದರೆ ಕೆಲಕಾಲ ತಣ್ಣಗಾದ ಹಾಗೆ ಕಂಡರೂ, ಮರುಕ್ಷಣವೇ ಕ್ರೋಧ ನಮ್ಮನ್ನು ಆವರಿಸಿಬಿಡುತ್ತದೆ. ಇದರಿಂದ ಬಿಡುಗಡೆ ಹೊಂದಲು ನಾವು ಅದರ ಸರಿಯಾದ ಕಾರಣವನ್ನು ಹುಡುಕಬೇಕು.