

ಪರಮಾತ್ಮದರ್ಶನವ; ಬೇಕದಕೆ ತಪಸು||
ಪರಿಪೂರ್ಣ ಜೀವನಾನುಭವತಾಪದಿ ಮತಿಯು|
ಪರಿಪಕ್ವವಾಗಲದು-ಮಂಕುತಿಮ್ಮ||810||
ಬರಿ ಭಕ್ತಿ, ಬರಿ ಕರ್ಮ, ಬರಿ ತರ್ಕಗಳಿಂದ ಪರಮಾತ್ಮ ದರ್ಶನವಾಗುವುದಿಲ್ಲ. ಅದಕ್ಕೆ ತಪಸ್ಸು ಬೇಕು, ಪರಿಪೂರ್ಣವಾದ ಜೀವನಾನುಭವ ತಾಪದಿಂದ ಬುದ್ಧಿಯು ಪರಿಪಕ್ವತೆಯನ್ನು ಪಡೆಯಬೇಕು ಎನ್ನುತ್ತದೆ ಈ ಕಗ್ಗ.
ಲೋಕ ಸಂಸಾರಕ್ಕೆ ಬಂದಿರುವ ಜೀವದ ಮೂಲ ಉದ್ದೇಶವೇನು? ಎನ್ನುವುದು ಬಹುಮುಖ್ಯ ಪ್ರಶ್ನೆ. ಲೌಕಿಕವಾದ ಸಂಪತ್ತು-ಸಮೃದ್ಧಿಯನ್ನು ಪಡೆಯುವುದು, ಸುಖ-ಭೋಗಗಳಲ್ಲಿ ಮೈಮರೆಯುವುದು, ನೋವಿನಲ್ಲಿ ಕುಗ್ಗಿ, ನಲಿವಿನಲ್ಲಿ ಹಿಗ್ಗಿ ಹೇಗೇಗೋ ಬಾಳುವುದು. ಇಷ್ಟೇ ಏನು? ಎಂದರೆ ಖಂಡಿತಾ ಅಲ್ಲ. ಪರಮಾತ್ಮನನ್ನು ಕಾಣುವುದೇ ಜೀವದ ಜೀವಿತೋದ್ದೇಶ. ಅದಕ್ಕಾಗಿ ಮಾಡುವ ಪ್ರಯತ್ನದಲ್ಲಿಯೇ ಆತ್ಮೋನ್ನತಿ. ತನ್ಮೂಲಕ ಸಂಸಾರವೆಂಬ ಬಂಧನದಿಂದ ಮುಕ್ತಿ. ವಿವೇಚನೆ ಮತ್ತು ಸಂವಹನ ಶಕ್ತಿಯನ್ನು ಹೊಂದಿರುವ ಮನುಜನಿಗೆ ಪರಮಾತ್ಮನ ಬಗೆಗೆ ತಿಳಿದುಕೊಳ್ಳುವುದಕ್ಕೆ ಬಹಳಷ್ಟು ಅವಕಾಶಗಳಿವೆ. ಆದರೂ ಅನಂತ ಸ್ವರೂಪಿಯಾದ ಭಗವಂತನನ್ನು ಪೂರ್ತಿಯಾಗಿ ತಿಳಿದುಕೊಳ್ಳುವುದಕ್ಕೆ, ದರ್ಶಿಸುವುದಕ್ಕೆ ಪಾಮರರಿಗೆ ಸಾಧ್ಯವುಂಟೆ? ಬೊಗಸೆಯಲ್ಲಿ ಹಿಡಿಯುವಷ್ಟೇ ನೀರು, ಮತಿಯ ಮಿತಿಗೆ ಒಳಪಡುವಷ್ಟೇ ಅರಿವು. ದೇವರರಿವು, ದೇವರಿರವು ತಿಳಿಯಲು ದೇವನೊಲುಮೆಯು ಬೇಕು. ಅದಲ್ಲದೆ ಢಾಂಬಿಕ ಭಕ್ತಿ, ವಿವಿಧ ಕರ್ಮಾನುಷ್ಠಾನ ಮತ್ತು ಪ್ರಚಂಡ ಚರ್ಚೆ, ತರ್ಕಗಳಿಂದ ಪರಮಾತ್ಮನ ದರ್ಶನವಾಗಲು ಸಾಧ್ಯವಿಲ್ಲ.
ಭಗವಂತನ ದಿವ್ಯ ಚರಿತೆಯನ್ನು ಅರಿತವನು ದೇವರೆಂದರೆ ಸಿಂಧು, ಅವನೆದುರು ತಾನು ಬಿಂದುವೊಳಗಿನ ಬಿಂದು ಎಂದು ಅರ್ಥೈಸಿಕೊಳ್ಳುತ್ತಾನೆ. ಹಾಗಾಗಿ ವಿನಮ್ರತೆ ಅವನ ಸಹಜ ಸ್ವಭಾವವಾಗಿರುತ್ತದೆ. ತರ್ಕ-ಕುತರ್ಕಗಳಿಗೆ, ಸಲ್ಲದ ವಾದಗಳಿಗೆ ಹೊರಡುವುದಿಲ್ಲ. ಯಾವ ಮತ-ಸಿದ್ಧಾಂತಗಳಿಗೂ ಒಳಪಡದ ಅನಂತ ಗುಣಾನ್ವಿತನಾದ ದೇವರನ್ನು ಮಾತಿನಲ್ಲಿ ವಿವರಿಸಲು ಸಾಧ್ಯವಿಲ್ಲ. ಮತಿಗೆ ಮತ್ತು ಮಾತಿಗೆ ನಿಲುಕದವನು ಪರಮಾತ್ಮ. ಓದು, ಅಧ್ಯಯನಾದಿಗಳಿಂದ ವ್ಯಕ್ತಿಯು ದೇವರ ಮಹಿಮೆಯನ್ನು ತಿಳಿಯಬಹುದು, ತನ್ನನ್ನು ತಾನು ವಿಸ್ತರಿಸಿಕೊಳ್ಳಬಹುದು. ಆದರೆ ಪರಮಾತ್ಮನ ದರ್ಶನವನ್ನು ಪಡೆಯಲು, ಅವನ ಸ್ವರೂಪವನ್ನು ಪೂರ್ತಿಯಾಗಿ ಮನನ ಮಾಡಿಕೊಳ್ಳಲು ಸಾಧ್ಯವಿಲ್ಲ.
ಭಾವವಿಲ್ಲದ ಬಕುತಿಗೆ ದೇವನೊಲಿಯಲಾರ. ದೇವರ ಶಕ್ತಿಯ ಬಗೆಗೆ ಕಿಂಚಿತ್ ಅರಿವು ಇದ್ದರೂ ಮನಸ್ಸು ಮುಗ್ಧವಾಗಿ ದೇವರನ್ನು ಪ್ರೀತಿಸುತ್ತದೆ. ಧ್ರುವ, ಶಬರಿ, ಅಂಬರೀಷರೇ ಮೊದಲಾದವರದ್ದು ಮುಗ್ಧವಾದ ಮತ್ತು ನಿಷ್ಕಾಮವಾದ ಭಕ್ತಿ. ಹೀಗಲ್ಲದೆ ಭಕ್ತಿಯನ್ನು ನಟಿಸಿದರೆ ಲೋಕದ ಜನರು ನಂಬಿ ಮರುಳಾಗಬಹುದೇ ಹೊರತು ಸರ್ವೋತ್ತಮನು ಒಲಿಯಲಾರ.
ವಿವಿಧ ಕರ್ಮಾನುಷ್ಠಾನ, ವ್ರತಾಚರಣೆ, ಪೂಜೆ-ಪುನಸ್ಕಾರಗಳನ್ನು ಮಾಡಿದರೆ ದೇವರೊಲಿಯಬಹುದೆ? ಇವೆಲ್ಲವೂ ವ್ಯಕ್ತಿಯನ್ನು ಉದ್ಧರಿಸಲು, ಸಮಾಜ ಮುಖಿಯಾಗಿ ಬೆಳೆಯಲು ಅತ್ಯಗತ್ಯ. ಆದರೆ ಇಷ್ಟರಿಂದಲೇ ದೇವರು ಒಲಿಯುತ್ತಾನೆ ಎನ್ನುವುದಕ್ಕಿಲ್ಲ. ಪೂಜೆ, ಜಪ-ತಪಾದಿಗಳು ಆತ್ಮಶುದ್ಧಿಯನ್ನು ಪಡೆಯುವುದಕ್ಕಿರುವ ಮಾರ್ಗ. ನಾನು ಮಾಡಿದೆ, ಅನುಷ್ಠಾನ ನಿರತನಿದ್ದೇನೆ ಎಂಬ ಹಮ್ಮು ಕೂಡಾ ತಡೆಗೋಡೆ ಆಗಬಹುದು. ನೈತಿಕವಾಗಿದ್ದೇನೆ ಎನ್ನುವುದೂ ಒಂದು ಅಹಂಕಾರ ತಾನೆ? ಇದೂ ಜೀವೋತ್ಕರ್ಷಕ್ಕೆ ಮಾರಕವಾಗುತ್ತದೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯವೆಂಬ ಆರುಬಗೆಯ ಹಗೆಗಳಲ್ಲಿ ಯಾವುದಾದರೂ ಒಂದು ಒಳಗಿದ್ದರೂ ಇನ್ನುಳಿದವು ಜೊತೆಗೂಡುತ್ತವೆ. ವ್ಯಕ್ತಿತ್ವದ ಪತನಕ್ಕೆ ಕಾರಣವಾಗುತ್ತವೆ. ಇದರಿಂದಾಗಿ ದೇವರು ದೂರವೇ ಉಳಿದುಬಿಡುತ್ತಾನೆ.
ಹಾಗೆಂದು ಜೀವನವನ್ನು ನಶ್ವರವೆಂದು ತಿರಸ್ಕರಿಸುವುದಲ್ಲ. ಆತ್ಮೋದ್ದಾರವನ್ನು ಹೊಂದುವುದಕ್ಕೆ ಬದುಕೆಂಬ ಹೊಲದೊಳಗೆ ಚೆನ್ನಾಗಿ ದುಡಿಯಬೇಕು. ಏಳು-ಬೀಳುಗಳನ್ನು ದಾಟಬೇಕು, ತಪ್ಪು-ಒಪ್ಪುಗಳನ್ನು ಅರಿಯಬೇಕು. ಪ್ರತಿಯೊಂದು ಅನುಭವವೂ ಬದುಕಿಗೆ ಪಾಠವಾಗಬೇಕು. ಬಾಳಿನ ಕಷ್ಟ-ನಷ್ಟಗಳು, ಬಂಧುತ್ವದಿಂದ ಒದಗುವ ಶೋಕ-ಚಿಂತೆಗಳು ವ್ಯಕ್ತಿಯನ್ನು ಹದವಾಗಿಸುತ್ತವೆ. ಮೋಹ-ಮಮತೆಯನ್ನು ಕಡಿದುಕೊಂಡು ದೇವನತ್ತ ಚಿತ್ತವಿಡಲು ಪರಿಪಕ್ವಗೊಳಿಸುತ್ತದೆ. ಲೋಕ ಜೀವನದಲ್ಲಿ ಎದುರಾಗುವ ಸೋಲು, ನಿರಾಶೆಗಳಿಂದ ವ್ಯಕ್ತಿಯು ಹತಾಶನಾಗುವುದು ಸಹಜ. ಆದರೆ ಇವೆಲ್ಲವೂ ದೇವಚಿತ್ತವೆಂಬ ಎಚ್ಚರವಿದ್ದರೆ ಕೆಡುಕಿನಲ್ಲೂ ಒಳಿತನ್ನು ಕಾಣಲು ಮತ್ತು ಆಪದ್ಬಾಂಧವನಾಗಿ ಒದಗುವ ದೇವರ ಕರುಣೆಯನ್ನು ಅನುಭವಿಸಲು ಸಾಧ್ಯವಿದೆ. ಜೀವನಾನುಭವದ ತಾಪದಿಂದ ವ್ಯಕ್ತಿಯು ಕೆರಳುವುದಲ್ಲ; ಮಾಗಬೇಕು. ಭಗವಂತನೆಡೆಗೆ ತುಡಿಯುವ, ಕಾಣಲು ಹಂಬಲಿಸುವ ಮಗುತನವು ಸಹಜ ಸ್ವಭಾವವಾಗಬೇಕು, ಆಗ ಮಾತ್ರ ಆತ್ಮೋತ್ಕರ್ಷ, ಮತ್ತದರಿಂದಲೇ ಪರಮಾತ್ಮನ ದರ್ಶನ.
(ಕವಿತಾ, ಅಡೂರು, ಪುತ್ತೂರು. ಲೇಖಕರು ಉಪನ್ಯಾಸಕರು, ಕವಯಿತ್ರಿ)