

ದೇವರು ಮನುಷ್ಯರೂಪದಲ್ಲಿ ಪ್ರಕಟನಾಗುವುದು.. ಮನುಷ್ಯ ತನ್ನ ಸದ್ಗುಣಗಳಿಂದ ದೇವರೇ ಆಗುವುದು... ಇದು ರಾಮಾಯಣದ ಕಥೆ!
ಕಥೆ ಹೇಳುವುದು ಒಂದು ಕಲೆ. ಹೇಳುವವನ ಕಲ್ಪನಾಶಕ್ತಿ ಚೆನ್ನಾಗಿದ್ದಷ್ಟೂ ಕಥೆ ಕೇಳುವುದಕ್ಕೆ ಹೆಚ್ಚು ರಸವತ್ತಾಗಿರುತ್ತದೆ. ರಸ್ತೆಯಲ್ಲಿ ನಡೆದ ಅಪಘಾತವೊಂದಕ್ಕೆ ನಾಲ್ಕು ಜನ ಪ್ರತ್ಯಕ್ಷದರ್ಶಿಗಳಿದ್ದರೆ, ನಾಲ್ಕೂ ಜನ ತಾವು ನೋಡಿದ ಅಪಘಾತವನ್ನು ಇನ್ನೊಬ್ಬರಿಗೆ ಹೇಳುವ ರೀತಿ ಭಿನ್ನವಾಗಿರುತ್ತದೆ. ಅಲ್ಲಿ ಅಪಘಾತ ಒಂದೇ, ಘಟನೆ ಒಂದೇ. ಆದರೆ, ಹೇಳುವ ರೀತಿ ಬೇರೆಬೇರೆ. ರಾಮಾಯಣ ನಡೆದಿದ್ದು ಒಂದೇ ಬಾರಿ. ಅದನ್ನು ವಾಲ್ಮೀಕಿ ಮಹರ್ಷಿಗಳು ಗ್ರಂಥ ರೂಪದಲ್ಲಿ ದಾಖಲಿಸಿದ್ದು ಒಂದೇ ಬಾರಿ. ಆದರೆ, ಕಾಲದಿಂದ ಕಾಲಕ್ಕೆ, ಜನರಿಂದ ಜನರಿಗೆ, ಬಾಯಿಂದ ಬಾಯಿಗೆ, ಕೃತಿಯಿಂದ ಕೃತಿಗೆ ರಾಮಾಯಣ ಹೊಸ ಅರ್ಥ, ಹೊಸ ಪ್ರಸಂಗ, ಹೊಸ ವ್ಯಾಖ್ಯಾನ, ಹೊಸ ಹೊಳಹು, ಹೊಸ ಕಾಣ್ಕೆಗಳನ್ನು ಮೈಗೂಡಿಸಿಕೊಂಡಿತು.
ಅಯೋಧ್ಯಾನಂದನ ರಾಮ ಲೋಕೋತ್ತರ ವೀರನಾಗಿ ಜಗತ್ತಿನ ಎದುರು ಮೊದಲ ಬಾರಿ ಪರಿಚಯಗೊಂಡಿದ್ದು ಮಿಥಿಲೆಯಲ್ಲಿ ಶಿವ ಧನುಸ್ಸು ಭಂಗಗೊಳಿಸುವ ಮೂಲಕ. ಸೀತಾ ಕಲ್ಯಾಣ ರಾಮಾಯಣದ ಬಹುಮುಖ್ಯ ಘಟ್ಟ. ವಿಶ್ವಾಮಿತ್ರರ ಮಾರ್ಗದರ್ಶನದಲ್ಲಿ ತರುಣ ರಾಮ ಜೀವನದಲ್ಲಿ ಪಾಲ್ಗೊಂಡ ಮೊಟ್ಟ ಮೊದಲ ಯುದ್ಧದಲ್ಲೇ ತಾಟಕಿ, ಸುಬಾಹುವಂಥ ರಾಕ್ಷಸರನ್ನು ಕೊಲ್ಲುತ್ತಾನೆ. ಮಿಥಿಲೆಗೆ ತೆರಳುವ ಮಾರ್ಗಮಧ್ಯದಲ್ಲಿ ಶಾಪಗ್ರಸ್ತ ಶಿಲಾ ತಪಸ್ವಿನಿ ಅಹಲ್ಯೆಗೆ ಮುಕ್ತಿ ಕರುಣಿಸಿರುತ್ತಾನೆ. ಅಯೋಧ್ಯೆಯವನಂತೆ! ದಶರಥನ ಮಗನಂತೆ! ಮಹಾಪರಾಕ್ರಮಿಯಂತೆ... ಮುಂತಾಗಿ ರಾಮನ ಜನಪ್ರಿಯತೆ ಜನರ ಬಾಯಿಂದ ಬಾಯಿಗೆ ಹಬ್ಬುತ್ತಿರುತ್ತದೆ. ಅಂಥ ಶ್ರೀರಾಮನನ್ನು ಜಗತ್ತು ಮೊದಲ ಬಾರಿ ಪ್ರತ್ಯಕ್ಷವಾಗಿ ಕಂಡಿದ್ದು ಸೀತಾ ಸ್ವಯಂವರದಲ್ಲಿ.
ಹಾಗಾದರೆ, ರಾಮ-ಸೀತಾ ಕಲ್ಯಾಣಕ್ಕೆ ಕಾರಣವಾದ, ಕಾರಣೀಭೂತವಾದ ಶಿವ ಧನುಸ್ಸು ಹೇಗಿತ್ತು? ಅದರ ವಿಶೇಷತೆಗಳೇನಿತ್ತು? ಇದರ ಬಗ್ಗೆ ರಾಮಾಯಣದಲ್ಲಿ ವಾಲ್ಮೀಕಿ ಯಾವ ರೀತಿ ಬಣ್ಣಿಸಿದ್ದಾರೆ ಎಂಬ ಕುತೂಹಲವಿರುವುದು ಸಹಜ. ಮೊನ್ನೆ ಬಿಡುಗಡೆಗೊಂಡಿರುವ "ರಾಮಾಯಣ' ಚಿತ್ರದಲ್ಲಿ ಶಿವ ಧನುಸ್ಸನ್ನು ಆಳೆತ್ತರದ ಸಾಧಾರಣ ಧನುಸ್ಸಿನಂತೆ ತೋರಿಸಲಾಗಿದೆ. ಪ್ರಾಮುಖ್ಯತೆಯಿಂದ ಮಹತ್ ಆಗಿದ್ದರೂ, ಗಾತ್ರದಲ್ಲಿ, ಸ್ವರೂಪದಲ್ಲಿ ಅದರ ವಿಶೇಷತೆಯನ್ನು ಚಿತ್ರದಲ್ಲಿ ಕಡೆಗಣಿಸಿದಂತಿದೆ. ಆದರೆ, ನೋಡುಗನ ಕಣ್ಣಳತೆಗೆ ಹಾಗೂ ವೀರಾಧಿವೀರರ ತೋಳ್ಬಲಕ್ಕೆ ಶಿವ ಧನುಸ್ಸು ಯಾವ ರೀತಿ ಸವಾಲಾಗಿತ್ತು? ಬೃಹತ್ ಆಗಿತ್ತು? ಮಹತ್ ಆಗಿತ್ತು ಎಂಬ ವರ್ಣನೆ ವಾಲ್ಮೀಕಿ ರಾಮಾಯಣದಲ್ಲಿದೆ.
ಬಾಲಕಾಂಡದಲ್ಲಿ ಶಿವ ಧನುಸ್ಸಿನ ಭವ್ಯತೆಯನ್ನು ವಾಲ್ಮೀಕಿ ಮಹರ್ಷಿಗಳು ಸುದೀರ್ಘವಾಗಿ ವರ್ಣಿಸಿದ್ದಾರೆ. ತ್ರ್ಯಂಬಕ, ಪಿನಾಕ ಮೊದಲಾದ ಹೆಸರಿನಿಂದ ಕರೆಯಲ್ಪಡುವ ಶಿವ ಧನುಸ್ಸು ಸ್ವತಃ ಶಿವನೇ ಬಳಕೆ ಮಾಡಿದ ಧನುಸ್ಸಾಗಿತ್ತು. ದಕ್ಷ ಪ್ರಜಾಪತಿಯ ಯಜ್ಞ ಧ್ವಂಸ ಮಾಡುವ ಸಂದರ್ಭದಲ್ಲಿ ಶಿವ ಈ ಧನುಸ್ಸು ಬಳಸಿ ತನ್ನನ್ನು ತಡೆಯಲು ಬಂದ ದೇವತೆಗಳನ್ನು ಹಿಮ್ಮೆಟ್ಟಿಸಿರುತ್ತಾನೆ. ದೇವಶಿಲ್ಪಿ ವಿಶ್ವಕರ್ಮ ನಿರ್ಮಿಸಿದ್ದ ಈ ಬಿಲ್ಲನ್ನು ಮುಂದೆ ದೇವತೆಗಳು ಜನಕ ಮಹಾರಾಜನ ಪೂರ್ವಿಕನಾದ ದೇವರಾತನಿಗೆ ಕೊಟ್ಟು ಸಂರಕ್ಷಿಸುವಂತೆ ಸೂಚಿಸಿರುತ್ತಾರೆ.
ಸೀತಾ ಸ್ವಯಂವರದ ಸಂದರ್ಭದಲ್ಲಿ ಜನಕರಾಜ ಶಿವಧನುಸ್ಸನ್ನು ಸ್ವಯಂವರ ಮಂಟಪಕ್ಕೆ ತರುವಂತೆ ಆಜ್ಞಾಪಿಸುತ್ತಾನೆ. ಬಾಲಕಾಂಡದ 67ನೇ ಸರ್ಗದಲ್ಲಿ ಶಿವಧನುಸ್ಸಿನ ಬ್ರಹ್ಮಾಂಡ ಸ್ವರೂಪದ ವಿವರಣೆ ಇದೆ.
ಮಂಜೂಷಾಮಷ್ಟಚಕ್ರಾಂ ತಾಂ ಸಮೂಹುಸ್ತೇ ಕಥಂಚನ |
ಇತಿಹಾಸೋಕ್ತಂ ಸರ್ವಂ ತತ್ ಸ ದದರ್ಶ ಮಹಾಯಶಾಃ ||
ಎಂಟು ಗಾಲಿಗಳನ್ನು ಹೊಂದಿದ್ದ ಬೃಹತ್ ಗಾತ್ರದ ಕಬ್ಬಿಣದ ಪೆಟ್ಟಿಗೆಯಲ್ಲಿ ಇರಿಸಲಾಗಿದ್ದ ಶಿವ ಧನುಸ್ಸನ್ನು ಸೇವಕರು ಕಡುಪ್ರಯಾಸದಿಂದ ಸಭಾಂಗಣಕ್ಕೆ ತರುತ್ತಾರೆ.
ನೃಣಾಂ ಶತಾನಿ ಪಂಚಾಶದ್ ವ್ಯಾಯತಾನಾಂ ಮಹಾತ್ಮನಾಮ್ |
ಮಂಜೂಷಮಷ್ಟಚಕ್ರಾಂ ತಾಂ ಸಮೂಹುಸ್ತೇ ಕಥಂಚನ ||
ಶಿವಧನುಸ್ಸು ಇರಿಸಲಾಗಿದ್ದ ಆ ಎಂಟು ಚಕ್ರಗಳ ಪೆಟ್ಟಿಗೆಯನ್ನು ಒಬ್ಬಿಬ್ಬರಲ್ಲ, ದೃಢಕಾಯರೂ, ಮಹಾ ಬಲಶಾಲಿಗಳೂ ಆದ ಐದು ಸಾವಿರ ಮಂದಿ ಕಷ್ಟಪಟ್ಟು ತಳ್ಳಿಕೊಂಡು ರಾಜಸಭೆಗೆ ತಂದರು.
ಇದಂ ಧನುರ್ವರಂ ರಾಜನ್ ಪೂಜಿತಂ ಜನಕೈರಪಿ |
ಅಶಕ್ಯಂ ದೇವಗಂಧರ್ವೈಃ ಮಾನುಷೈಶ್ಚ ವಿಶೇಷತಃ ||
ನ ಶರಸ್ಯ ಧನುರ್ಜ್ಯಾಯಾ ಆರೋಪಣಮಪಿ ಸ್ಫುಟಮ್ |
ನಮನಂ ಪೂರಯಿತ್ವಾ ವಾ ದೇವದೈತ್ಯರ್ಷಿಭಿಸ್ತಥಾ ||
ಜನಕ ವಂಶದ ರಾಜರುಗಳಿಂದ ತಲೆಮಾರುಗಳಿಂದ ಪೂಜಿಸಲ್ಪಡುತ್ತಿರುವ ಈ ಶ್ರೇಷ್ಠವಾದ ಧನುಸ್ಸನ್ನು ಬಗ್ಗಿಸುವುದಿರಲಿ, ಎತ್ತುವುದಕ್ಕೂ ಅನೇಕಾನೇಕ ದೇವತೆಗಳು, ಗಂಧರ್ವರು, ರಾಕ್ಷಸರು, ಮಹರ್ಷಿಗಳಿಂದಲೂ ಸಾಧ್ಯವಾಗಿಲ್ಲ. ಹಾಗಿರುವಾಗ ಸಾಮಾನ್ಯ ಮನುಷ್ಯರು ಈ ಧನುಸ್ಸು ಎತ್ತುವ ಬಗ್ಗೆ ಕನಸು ಕಾಣುವುದೂ ಅಸಂಭವ. ಇದುವರೆಗೆ ಬಿಲ್ಲನ್ನು ಎತ್ತಿದ, ಹೆದೆ ಏರಿಸಿದ, ಬಗ್ಗಿಸಿದ ವೀರಾಧಿವೀರ ಯಾರೊಬ್ಬರೂ ಇಲ್ಲ ಎಂದು ಜನಕ ಮಹಾರಾಜ ಸ್ವಯಂವರ ವೇದಿಕೆಯಲ್ಲಿ ರಾಜರ್ಷಿ ವಿಶ್ವಾಮಿತ್ರರಿಗೆ ಶಿವ ಧನುಸ್ಸಿನ ಮಹತ್ವವನ್ನು ಹೇಳುತ್ತಾನೆ.
ಈ ಸಂದರ್ಭದಲ್ಲಿ ಗುರು ವಿಶ್ವಾಮಿತ್ರರ ಅಪ್ಪಣೆ ಪಡೆದ ರಾಮ ವಿನೀತ ಭಾವದಿಂದ ಶಿವ ಧನುಸ್ಸಿಗೆ ನಮಸ್ಕರಿಸಿ ಲೀಲಾಜಾಲವಾಗಿ ಅದನ್ನು ಎತ್ತುತ್ತಾನೆ.
ಲೀಲಯಾ ಸ ಧನುರ್ಮಧ್ಯೇ ಜಗ್ರಾಹ ವಚನಾನ್ಮುನೇಃ |
ಪಶ್ಯತಾಂ ನೃಸಹಸ್ರಾಣಾಂ ಬಹೂನಾಂ ರುನಂದನಃ ||
ಸ್ವಯಂವರಕ್ಕೆ ಆಗಮಿಸಿದ್ದ ಸಾವಿರಾರು ರಾಜರು, ಪ್ರಜೆಗಳು ಆಶ್ಚರ್ಯಚಕಿತರಾಗಿ ನೋಡುತ್ತಿರುವಂತೆಯೇ ರಾಮನು ಲೀಲಾಜಾಲವಾಗಿ ಧನುಸ್ಸಿನ ಮಧ್ಯಭಾಗವನ್ನು ಹಿಡಿದು ಮೇಲಕ್ಕೆತ್ತುತ್ತಾನೆ. ಸುಲಭವಾಗಿ ಹೆದೆ ಏರಿಸುತ್ತಾನೆ.
ಆರೋಪಯಿತ್ವಾ ಧನುಷಿ ಜ್ಯಾಂ ಚಕರ್ಷ ಸ ವೀರ್ಯವಾನ್ |
ತದ್ಬಭಂಜ ಧನುರ್ಮಧ್ಯೇ ನರಶ್ರೇಷ್ಠೋ ಮಹಾಯಶಾಃ ||
ವೀರಾಗ್ರೇಸರನಾದ ರಾಮನು ಶಿವಧನುಸ್ಸನ್ನು ಮಧ್ಯಭಾಗದಿಂದ ಎತ್ತಿ ಹಿಡಿದು, ಒಂದು ತುದಿಯಿಂದ ಇನ್ನೊಂದು ತುದಿಗೆ ಹಗ್ಗವನ್ನು ಎಳೆದು ಕಟ್ಟಿ ತನ್ನ ಕಿವಿಯವರೆಗೂ ಬಿಲ್ಲಿನ ಹಗ್ಗವನ್ನು ಎಳೆದಾಗ ಆ ಮಹಾ ಧನುಸ್ಸು ನಿರ್ಘಾತ ಸಮಾನ ಘೋರ ಶಬ್ದ ಮಾಡುತ್ತ ಮಧ್ಯ ಭಾಗದಲ್ಲಿ ಸೀಳಿ ಎರಡು ತುಂಡಾಯಿತು.
ತಸ್ಯ ಶಬ್ದೋ ಮಹಾನಾಸೀನ್ನಿರ್ಘಾತಸಮಗೌರವಃ |
ಭೂಮಿಕಂಪಶ್ಚ ಸುಮಹಾನ್ ಪರ್ವತಸ್ಯೇವ ದೀರ್ಯತಃ ||
ಶಿವ ಧನುಸ್ಸು ಮುರಿದಾಗ ಸಿಡಿಲು ಅಪ್ಪಳಿಸಿದಂತೆ ಭಯಂಕರ ಶಬ್ದವಾಯಿತು. ದೊಡ್ಡ ಪರ್ವತವೊಂದು ಸೀಳಿದಾಗ ಆಗುವಂತೆ ಇಡೀ ಭೂಮಿಯೇ ಕಂಪಿಸಿತು. ಆ ಸಂದರ್ಭದಲ್ಲಿ ವಿಶ್ವಾಮಿತ್ರ, ಜನಕ ಮತ್ತು ರಾಮ-ಲಕ್ಷ್ಮಣರನ್ನು ಹೊರತುಪಡಿಸಿ ಸಭೆಯಲ್ಲಿದ್ದವರೆಲ್ಲರೂ ಮೂರ್ಛೆ ಹೋದರು. ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರದಲ್ಲಿ ರಾಮನು ಶಿವಧನುಸ್ಸನ್ನು ಮುರಿದ ಚಿತ್ರಣ ವಾಲ್ಮೀಕಿ ರಾಮಾಯಣದ ಶಿವ ಧನುಸ್ಸಿನ ಮಹತ್-ವೈಭವದ ಎದುರು ಸಪ್ಪೆ ಎನಿಸಿತು.
ಸಾಧ್ವಿಮಣಿ ಊರ್ಮಿಳಾ | ಪತಿಯು ಲಕುಮಣ ದೇವ ||
ತ್ಯಾಗಿ ಯೋಗಿ ರಾಮರಾಗಿ | ನಿಮ್ಮ ನಾಡು ಸುಂದರ ||
ಎರಡು ದೇಹ, ಒಂದೇ ಪ್ರಾಣ ಎಂಬ ಪರಿಕಲ್ಪನೆ ಪ್ರಚಲಿತಗೊಂಡಿದ್ದೇ ರಾಮ-ಲಕ್ಷ್ಮಣರ ನಿಕಟತೆಯಿಂದ ಎನ್ನಬಹುದು. ರಾಮಾಯಣದಲ್ಲಿ ರಾಮನಷ್ಟೇ ಮಹತ್ವ ಲಕ್ಷ್ಮಣನಿಗೂ ಇದೆ. ಲಕ್ಷ್ಮಣನಿಲ್ಲದ ರಾಮ, ಲಕ್ಷ್ಮಣನಿಲ್ಲದ ರಾಮಾಯಣ ಅಪೂರ್ಣ. ಆ ರೀತಿ ನೆರಳಿನಂತೆ, ಉಸಿರಿನಂತೆ, ಪ್ರಾಣದಂತೆ ರಾಮನನ್ನು ಜೀವನದುದ್ದಕ್ಕೂ ಅನುಸರಿಸಿದವನು ಲಕ್ಷ್ಮಣ.
ರಾಮಾಯಣ ಚಿತ್ರದಲ್ಲಿ ರಾಮ-ರಾವಣರ ವೈಭವೀಕರಣದಲ್ಲಿ ಲಕ್ಷ್ಮಣನ ಪಾತ್ರಕ್ಕೆ ಪೂರ್ಣ ನ್ಯಾಯ ಸಿಕ್ಕಿಲ್ಲ ಎಂಬ ಭಾವನೆ ಮೂಡುತ್ತದೆ. ಶಿವ ಧನುಸ್ಸು ಮುರಿದ ಬಳಿಕ ರಾಮ-ಸೀತೆ ಸಂಭಾಷಣೆಯ ದೃಶ್ಯವೊಂದಿದೆ. "ನಾನೊಬ್ಬನೇ ವಿವಾಹ ಆಗಲಾರೆ. ನನ್ನ ತಮ್ಮಂದಿರ ವಿವಾಹ ನಿಶ್ಚಯಗೊಂಡ ಬಳಿಕವೇ ಒಟ್ಟಿಗೆ ನಮ್ಮೆಲ್ಲರ ಮದುವೆ' ಎಂದು ರಾಮ ಸೀತೆಗೆ ಹೇಳುತ್ತಾನೆ. ಆಗ, "ಅಲ್ಲಿ ನೋಡಿ' ಎಂದು ಸೀತೆ ಕೈತೋರುತ್ತಾಳೆ. ದೂರದಲ್ಲಿ ಲಕ್ಷ್ಮಣ ಊರ್ಮಿಳೆ ಜತೆ ಮಾತನಾಡುತ್ತಿರುವ ದೃಶ್ಯ ಕಾಣುತ್ತದೆ. ಇದು ಲಕ್ಷ್ಮಣನ ಸ್ವಭಾವ ಅಲ್ಲವೇ ಅಲ್ಲ. ರಾಮಾಯಣದಲ್ಲಿ ರಾಮ ಪಿತೃವಾಕ್ಯ ಪರಿಪಾಲಕನಾದರೆ, ಲಕ್ಷ್ಮಣ ರಾಮನ ಆಜ್ಞಾಧಾರಕ. ರಾಮ ಹೇಳಿದ ಯಾವ ಮಾತನ್ನೂ ಮೀರಿದವನಲ್ಲ. ರಾಮನನ್ನು ಅನುಸರಿಸುವುದು ಬಿಟ್ಟು ಬೇರೆ ಅನ್ಯ ಯೋಜನೆ, ಯೋಚನೆ, ಸ್ವಂತ, ಸ್ವಾರ್ಥದ ಚಿಂತನೆ ಇಲ್ಲದೆ ರಾಮನಿಗೆ ಮುಡಿಪಾಗಿ ಬದುಕಿದವನು ಲಕ್ಷ್ಮಣ. ರಾಮ-ಸೀತೆ ವಿವಾಹದಲ್ಲಿ ಲಕ್ಷ್ಮಣ, ಭರತ, ಶತ್ರುಘ್ನರ ಮದುವೆಯೂ ನಡೆಯಿತೇ ಹೊರತು, ಅದು ಅವರ ಆಯ್ಕೆಯೂ ಆಗಿರಲಿಲ್ಲ, ಇಚ್ಛೆಯೂ ಆಗಿರಲಿಲ್ಲ. ಲಕ್ಷ್ಮಣನೆಂದರೆ ತ್ಯಾಗಜೀವಿ. ಸಂಯಮ, ನೇಮ, ನಿಷ್ಠೆಗಳ ಪ್ರತಿರೂಪ. ಆತ ಮಹಾ ಪರಾಕ್ರಮಿ, ಜ್ಞಾನಿ. ಸಂಸಾರದೊಳಗಿದ್ದೂ ತಪಸ್ವಿಯಂತೆ ಬದುಕಿದವನು. ಲಕ್ಷ್ಮಣನಿಗೆ ಮುಂಗೋಪವಿತ್ತು. ಆದರೆ, ಅವಿವೇಕವಿರಲಿಲ್ಲ. ಅನ್ಯಾಯವನ್ನು ಪ್ರತಿಭಟಿಸುವ ಸಾತ್ವಿಕ ಆಕ್ರೋಶವಿತ್ತು. ಆದರೆ, ಲಕ್ಷ್ಮಣನ ಕೋಪ ತಣಿಸಲು ರಾಮನ ಒಂದೇ ಮಾತು ಸಾಕಿತ್ತು. ಕೈಕೇಯಿ ವಿರುದ್ಧ, ಭರತನ ವಿರುದ್ಧ ಲಕ್ಷ್ಮಣನ ಆಕ್ರೋಶ ಆ ಕ್ಷಣಕ್ಕೆ ಮಾತ್ರ. ರಾಮ ಸಮಾಧಾನ ಪಡಿಸಿದ ಮೇಲೆ ಲಕ್ಷ್ಮಣ ರಾಮನಷ್ಟೇ ಶಾಂತಚಿತ್ತ.
ವಾಲ್ಮೀಕಿ ರಾಮಾಯಣದಲ್ಲಿ ಲಕ್ಷ್ಮಣನ ಸ್ವಭಾವವನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಸೊಗಸಾಗಿ ಕಟ್ಟಿಕೊಡಲಾಗಿದೆ.
ಲಕ್ಷ್ಮಣೋ ಲಕ್ಷ್ಮೀಸಂಪನ್ನೋ ಬಹಿಃಪ್ರಾಣ ಇವಾಪರಃ |
ನ ಚ ತೇನ ವಿನಾ ನಿದ್ರಾಂ ಲಭತೇ ಪುರುಷೋತ್ತಮಃ ||
ಸಕಲ ಶುಭ ಲಕ್ಷಣಗಳಿಂದ ಕೂಡಿದ ಲಕ್ಷ್ಮಣನು ಶ್ರೀರಾಮನಿಗೆ ಶರೀರದಿಂದ ಹೊರಗಿರುವ ಮತ್ತೊಂದು ಪ್ರಾಣದಂತಿದ್ದನು. ಲಕ್ಷ್ಮಣನು ಸನಿಹದಲ್ಲಿರದಿದ್ದರೆ, ಮರ್ಯಾದಾ ಪುರುಷೋತ್ತಮ ರಾಮನಿಗೆ ನಿದ್ರೆಯೂ ಹತ್ತಿರ ಸುಳಿಯುತ್ತಿರಲಿಲ್ಲ ಎಂದು ಬಾಲಕಾಂಡದ 18ನೇ ಸರ್ಗದಲ್ಲಿ ವಾಲ್ಮೀಕಿಗಳು ಬಣ್ಣಿಸುತ್ತಾರೆ.
ನ ಚಾಹಂ ತ್ವನ್ಮುಖಾತ್ ಕಾಂಕ್ಷೇ ಸ್ವರ್ಗಮಪ್ಯಮರಾವತಿಮ್ |
ನ ಚೈವ ಭಗವನ್ ಲಕ್ಷ್ಮೀಂ ನ ಚ ಲೋಕಂ ಮಹಾತ್ಮನಾಮ್ |
ರಾಮನು ಹದಿನಾಲ್ಕು ವರ್ಷ ಕಾಡಿಗೆ ತೆರಳುವೆನೆಂದಾಗ ಲಕ್ಷ್ಮಣ ತಾನೂ ಬರುವುದಾಗಿ ಹಟ ಹಿಡಿಯುತ್ತಾನೆ. ನೀನು ಜತೆಯಲ್ಲಿ ಇರದೇ ಹೋದರೆ, ದೇವತೆಗಳ ಸ್ವರ್ಗ ಅಮರಾವತಿಯಾಗಲೀ, ಐಶ್ವರ್ಯವಾಗಲೀ, ಮಹಾತ್ಮರ ಲೋಕವಾಗಲೀ ಯಾವುದೂ ನನಗೆ ಬೇಡ. ನಿನ್ನ ದರ್ಶನ, ಚರಣ ಸೇವೆ ಹೊರತಾಗಿ ನನಗೇ ಬೇರೆ ಯಾವ ಅಪೇಕ್ಷೆಯೂ ಇಲ್ಲ ಎಂದು ಲಕ್ಷ್ಮಣ ಹೇಳುತ್ತಾನೆ.
ರಾವಣನಿಂದ ಅಪಹೃತಳಾದ ಸೀತಾಮಾತೆಯನ್ನು ಹುಡುಕಿಕೊಂಡು ರಾಮ ಲಕ್ಷ್ಮಣರು ಕಿಷ್ಕಿಂಧೆಗೆ ಬರುತ್ತಾರೆ. ಆಗ, ಸೀತೆಯು ಪುಷ್ಪಕವಿಮಾನದಿಂದ ಗಂಟುಕಟ್ಟಿ ಬಿಸುಟಿದ್ದ ಒಡವೆಗಳನ್ನು ವಾನರರು ರಾಮನಿಗೆ ತೋರಿಸುತ್ತಾರೆ. ರಾಮನಿಗೆ ಸೀತಾವಿಯೋಗದ ಶೋಕದಿಂದ ಕಣ್ಣು ಮಂಜಾಗುತ್ತದೆ. ಒಡವೆಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಈ ಒಡವೆಗಳು ಸೀತೆಯದ್ದೇ ನೋಡು ಎಂದು ಲಕ್ಷ್ಮಣನಿಗೆ ಹೇಳುತ್ತಾನೆ.
ನಾಹಂ ಜಾನಾಮಿ ಕೇಯೂರೇ ನಾಹಂ ಜಾನಾಮಿ ಕುಂಡಲೇ |
ನೂಪುರೇ ತ್ವಭಿಜಾನಾಮಿ ನಿತ್ಯಂ ಪಾದಾಭಿವಂದನಾತ್ ||
"ಅಣ್ಣಾ, ಸೀತಾಮಾತೆಯ ತೋಳಬಂಧಿಯನ್ನಾಗಲೀ (ಕೇಯೂರ), ಕಿವಿಯ ಓಲೆಗಳನ್ನಾಗಲೀ (ಕುಂಡಲ) ನಾನು ಗುರುತಿಸಲಾರೆ. ಏಕೆಂದರೆ ನಾನು ನೋಡಿಲ್ಲ. ಆದರೆ, ದಿನವೂ ಆಕೆಯ ಪಾದಗಳಿಗೆ ನಮಸ್ಕರಿಸುತ್ತಿದ್ದ ಕಾರಣ ಕಾಲಿನ ಗೆಜ್ಜೆಗಳನ್ನು (ನೂಪುರ) ಮಾತ್ರ ಖಂಡಿತವಾಗಿ ಗುರುತಿಸಬಲ್ಲೆ' ಎಂದು ಲಕ್ಷ್ಮಣ ನೂಪುರ ಸೀತಾಮಾತೆಯದೇ ಎಂದು ಗುರುತಿಸುತ್ತಾನೆ.
ದೇಶೇ ದೇಶೇ ಕಳತ್ರಾಣಿ ದೇಶೇ ದೇಶೇ ಚ ಬಾಂಧವಾಃ |
ತಂ ತು ದೇಶಂ ನ ಪಶ್ಯಾಮಿ ಯತ್ರ ಭ್ರಾತಾ ಸಹೋದರಃ ||
"ಜಗತ್ತಿನಲ್ಲಿ ಹುಡುಕಿದರೆ ಯಾವುದೇ ದೇಶದಲ್ಲಾದರೂ ಅನುರೂಪಳಾದ ಪತ್ನಿ ಸಿಗಬಹುದು, ಇತರ ಬಂಧುಗಳು ಸಿಗಬಹುದು. ಆದರೆ ಲಕ್ಷ್ಮಣನಂತಹ ಸಹೋದರ ಎಲ್ಲೂ ಸಿಗಲಾರ' ಎಂದು ಲಂಕಾ ಯುದ್ಧದಲ್ಲಿ ಲಕ್ಷ್ಮಣನು ಮೂರ್ಛೆ ಹೋದ ಸಂದರ್ಭದಲ್ಲಿ ಶ್ರೀರಾಮನು ಶೋಕಿಸುತ್ತಾನೆ.
ಚಲನಚಿತ್ರವೆನ್ನುವುದು ಹೊಸದೊಂದು ಲೋಕವನ್ನು ಸೃಷ್ಟಿ ಮಾಡುವ ಹಾಗೂ ಮರುಸೃಷ್ಟಿ ಮಾಡುವ ಸೃಜನಶೀಲ ಮಾಧ್ಯಮ. ಸಹಸ್ರಾರು ವರ್ಷಗಳ ಹಿಂದಿನ ರಾಮಾಯಣವನ್ನು, ಆಗಿನ ಕಾಲಘಟ್ಟವನ್ನು, ಅಯೋಧ್ಯೆಯನ್ನು, ಲಂಕೆಯನ್ನು, ರಾಮ-ರಾವಣರನ್ನು, ಲಕ್ಷ್ಮಣ-ವಿಭೀಷಣರನ್ನು, ಮಾયાಜಿಂಕೆ ಮಾರೀಚನಿಂದ ಹಿಡಿದು ಮಂಥರೆಯವರೆಗೆ ಪ್ರತಿಯೊಂದು ಪಾತ್ರ-ಸನ್ನಿವೇಶವನ್ನು ಮರುಸೃಷ್ಟಿ ಮಾಡುವುದು ಬಹುದೊಡ್ಡ ಸವಾಲು. ಹೀಗಿರುವಾಗ ಕಥನಕಾರರು ಸೃಜನಾತ್ಮಕ ಸ್ವಾತಂತ್ರ್ಯವನ್ನು ತೆಗೆದುಕೊಂಡು ಸ್ವಲ್ಪ ಆಚೀಚೆ ಮಾಡುವುದು ತಪ್ಪೇನಲ್ಲ. ಆದರೆ, ಮೂಲ ರಾಮಾಯಣಕ್ಕೆ, ರಾಮಾವತಾರದ ಉದ್ದೇಶಕ್ಕೆ ಧಕ್ಕೆ ಬಾರದಿದ್ದರೆ ಆಯಿತು. ನಟ ಯಶ್- ನಮಿತ್ ಮಲ್ಹೋತ್ರ ನಿರ್ಮಾಣದ "ರಾಮಾಯಣ' ಚಿತ್ರ ಅಂಥ ಒಂದು ಪ್ರಯತ್ನ. ಆದರೂ, ಅಲ್ಲಿ ಚಿತ್ರಣಗೊಂಡಿರುವ ಲಕ್ಷ್ಮಣನ ಪಾತ್ರ ನೋಡುವಾಗ ವಾಲ್ಮೀಕಿ ರಾಮಾಯಣದ ಲಕ್ಷ್ಮಣ ಈ ಲಕ್ಷ್ಮಣ ಅಲ್ಲವೆನಿಸಿತು.