

ಗಜೇಂದ್ರ ಬಾಬು
(ಲೇಖಕರು ಜ್ಯೋತಿಷರು ಮತ್ತು ವಾಸ್ತುತಜ್ಞರು)
ಅಶ್ವಯುಜ ಮಾಸ ಶುಕ್ಲ ಸಪ್ತಮಿ ಏಳನೇ ರಾತ್ರಿ ಕಾಲರಾತ್ರಿ ದಿನ. ಶಿವನಲ್ಲಿರುವ ಅಪಾರ ಶಕ್ತಿಯನ್ನು ದಶರೂಪದಲ್ಲಿ ಪ್ರಕಟಿಸುವ ಶಕ್ತಿಗಳಲ್ಲಿ ಶ್ರೀ ಕಾಳಿ ಮೊದಲನೆಯವಳು. ಮಾನವ-ಪ್ರಾಣಿ ಶರೀರದಲ್ಲಿ ಎಲ್ಲ ಅಂಗಗಳನ್ನು ರಕ್ಷಿಸುವವಳು. ಅಂಗಾಳ ಪರಮೇಶ್ವರಿ. ದುರ್ಗೆಯ ಅವತಾರ. ಹಿಮಾಲಯದಲ್ಲಿ ತಪೋನಿಷ್ಠರಾಗಿದ್ದ ಮಾತಂಗ ಮುನಿಯನ್ನು ಎಲ್ಲ ದೇವತೆಗಳು ಒಮ್ಮೆ ಸಂದರ್ಶಿಸಿ ಅವರ ಸಮ್ಮುಖದಲ್ಲಿ ಮಹಾಮಾತೆಯನ್ನು ಸ್ತುತಿಸಿದರು.
ಇದನ್ನು ಮನ್ನಿಸಿ ಮತಂಗಕುಮಾರಿಯ ರೂಪದಲ್ಲಿ ಕಪ್ಪು ಬಣ್ಣದವಳಾಗಿ ಪ್ರತ್ಯಕ್ಷವಾದ್ದರಿಂದ ಕಾಳಿ ಎಂಬ ನಾಮಧೇಯವನ್ನು ಪಡೆದಳು. ಶುಂಭ-ವಿಶುಂಭರೆಂಬ ಅವಳಿ ಬಲಾಢ್ಯ ರಾಕ್ಷಸರು ಪ್ರಬಲವಾದ ವರಪ್ರಭಾವದಿಂದ ಅತ್ಯಂತ ಶಕ್ತಿವಂತರೂ, ಹಿಂಸಕರೂ, ಕ್ರೂರಿಗಳೂ ಆಗಿ ದೇವಲೋಕದಲ್ಲಿ ಹಾಹಾಕಾರವನ್ನುಂಟು ಮಾಡಿದರು. ಭಯಗೊಂಡು ತತ್ತರಿಸಿದ ದೇವತೆಗಳೆಲ್ಲರೂ ದುರ್ಗೆಯನ್ನು ದೇವಿಸೂಕ್ತದಿಂದ ನಾನಾ ರೀತಿ ಪ್ರಾರ್ಥಿಸಿದರು. ಮನ ಕರಗಿದ ಗೌರಿಯ ಶರೀರದಿಂದ ಕೌಶಿಕಿಯು ಪ್ರಕಟವಾದಳು. ಇದರಿಂದ ಗೌರಿಯ ಬಣ್ಣ ಕಪ್ಪಾಯಿತು. ಹೀಗೆ ಜಗನ್ಮಾತೆಯು ಚಿನ್ನದ ಬಣ್ಣದಿಂದ ಕಪ್ಪು ಬಣ್ಣಕ್ಕೆ ಪರಿವರ್ತಿತಳಾಗಿ ನೀಲ ವರ್ಣದವಳೆಂಬ ಹೆಸರನ್ನು ಪಡೆದು ರಾಕ್ಷಸರ ದಮನಕ್ಕೆ ಹೊರಟಳು. ಅಂಧಕಾರ ನಾಶಿನಿ, ಕಪ್ಪು ಎಲ್ಲ ಬಣ್ಣಗಳನ್ನು ನುಂಗುವವಳು, ಕಾಲನನ್ನೇ ನುಂಗುವವಳು, ಚದುರಿದ ಕೂದಲು, ತ್ರಿನೇತ್ರ- ಕೆಂಪು ಕಣ್ಣು, ಮೇಲಿನ ಬಲಗೈಯಲ್ಲಿ ದೊಡ್ಡ ಕತ್ತಿ- ರಕ್ತಬಿಜನನ್ನು ಕತ್ತರಿಸಲು, ಮೇಲಿನ ಎಡಗೈಯಲ್ಲಿ ವಜ್ರ- ರಕ್ತಬಿಜನನ್ನು ಚುಚ್ಚಲು, ಅಭಯ ಮುದ್ರೆ- ಭಕ್ತರಿಗೆ ಭಯ ಬೇಡ ಎನ್ನಲು, ವರದ ಮುದ್ರೆ- ಕೇಳಿದ ವರವನ್ನು ನೀಡುವ ಸಂಕೇತ.
ಕಾಳಿ-ಕಾಲರಾತ್ರಿ ಯುದ್ಧಕ್ಕೆ ಹೊರಟಳು. ರಕ್ತಬಿಜ ಎಂಬ ರಾಕ್ಷಸ ಬಂದ. ಅವನ ವಿಶೇಷ ವರವೇನೆಂದರೆ ಒಂದು ಹನಿ ರಕ್ತ ನೆಲಕ್ಕೆ ಬಿದ್ದರೆ ಅದರಿಂದ ಇನ್ನೊಬ್ಬ ರಕ್ತಬಿಜನ ಜನನ. ಅವನ ರಕ್ತದಿಂದ ಸಾವಿರಾರು ರಕ್ತಬಿಜ ರಾಕ್ಷಸರು! ದೇವತೆಗಳು ಹೆದರಿದರು. ಆಗ ಕಾಲರಾತ್ರಿಯಾದ ಕಾಳಿಯು ಬಾಯಿ ತೆರೆದು ತನ್ನ ನಾಲಿಗೆಯಿಂದ ರಕ್ತಬಿಜನ ರಕ್ತವನ್ನು ನೆಲಕ್ಕೆ ಬೀಳದಂತೆ ಕುಡಿದು ರಾಕ್ಷಸನನ್ನು ಕೊಂದಳು. ರಕ್ತವನ್ನು ಕುಡಿಯುವ ರೂಪವೇ ಕಾಲರಾತ್ರಿ. ಶುಂಭ-ನಿಶುಂಭರನ್ನು ಸಂಹರಿಸಿದ ದುರ್ಗೆಯೇ ಕಾಳಿ.
ಕಾಲರಾತ್ರಿ ನೋಡಲು ಭಯಾನಕ. ಆದರೆ ಫಲದಲ್ಲಿ ಶುಭಂಕರಿ. ಭಯಾನಕ ರೂಪದಲ್ಲಿ ಶುಭ ಕೊಡುವವಳು. ಮರಣ ಭಯ ನಾಶಿನಿ. ಕಾಲರಾತ್ರಿ ಶನೇಶ್ಚರನಿಗೆ ಅಧಿದೇವತಾ. ಆಯು-ಆರೋಗ್ಯ, ಭಯ, ಶತ್ರು, ದಾರಿದ್ರ್ಯ, ವೃತ್ತಿ, ಕರ್ಮ, ನ್ಯಾಯ, ಶನಿದೋಷ, ಸಾಡೇಸಾತ್, ಅಷ್ಟಮ ಶನಿ, ಅರ್ಧಾಷ್ಟಮ ಶನಿ, ಎಲ್ಲ ಶನೇಶ್ಚರನ ದೋಷ ಪರಿಹರಿಸುವವಳು. ಸಹಸ್ರಾರ ಚಕ್ರ- ತಲೆಯ ಮೇಲಿನ ಚಕ್ರದ ಅಧಿದೇವತೆಯಾಗಿ ಮೋಕ್ಷ, ಭಯ ನಾಶ. ಆಯು-ಕುಂಡಲಿನಿ ಜಾಗೃತಿ. ಏಳನೇ ಹಂತ- ಕಾಲನನ್ನೇ ನಾಶ ಮಾಡಿ ಮೋಕ್ಷ ಕೊಡುವವಳು. ಗ್ರಹ: ಶನೇಶ್ಚರ, ಬಣ್ಣ: ಹಸಿರು, ದಾನ: ಎಳ್ಳು, ಬೆಲ್ಲ, ನೈವೇದ್ಯ: ಗೂಡಾನ್ನ, ಸಂಗೀತ: ಬೈರವಿ ರಾಗ, ಮಂತ್ರ: ಓಂ ಹ್ರೀಂ ಕಾಲರಾತ್ರ್ಯೈ ನಮಃ.