ಮನಸ್ಸೇ ಕರ್ಮಗಳ ಮೂಲ ಒಳ್ಳೆಯದನ್ನೇ ಮಾಡುತ್ತಿರೋಣ

karma
karma
Published on
ಕರ್ಮವು ಬಹಳ ವ್ಯಾಪಕವಾದದ್ದು. ಕರ್ಮ ಎಂದರೆ ಮನಸ್ಸಿನಲ್ಲಿ ರುವ ಅಚ್ಚುಗಳು. ಅವುಗಳಿಂದ ಕಾರ್ಯಗಳು ನಡೆಯುತ್ತವೆ. ಆ ಕಾರ್ಯಗಳು ಕರ್ಮವನ್ನುಂಟು ಮಾಡುತ್ತವೆ. ಪ್ರವೃತ್ತಿಗಳೂ ಕರ್ಮವೇ. ನೀವು, ಎದುರಿಸುವ ಸನ್ನಿವೇಶಗಳು, ನೀವು ಅವುಗಳನ್ನು ಆಕರ್ಷಿಸುವ ಕಾರಣದಿಂದಾಗಿ ನಿಮ್ಮ ಬಳಿಗೆ ಬಂದಿವೆ. ಅಂತಹ ಅಚ್ಚು, ಸಂಸ್ಕಾರ ನಿಮ್ಮ ಮನದಲ್ಲಿದೆ. ಅದು ಕರ್ಮ. ಆ ಸಂಸ್ಕಾರವು ಕಾರ್ಯರೂಪಕ್ಕೆ ಬಂದು, ಅದು ಉಂಟು ಮಾಡುವ ಸನ್ನಿವೇಶ, ಕಾರ್ಯವೂ ಕರ್ಮವೇ. ಆದ್ದರಿಂದ, ನಿಮ್ಮ ಪರಿಸ್ಥಿತಿ, ಸನ್ನಿವೇಶ ಕರ್ಮ. ನಿಮ್ಮ ಕಾರ್ಯವು ಕರ್ಮ. ಆ ಕರ್ಮದ ಅಚ್ಚು, ಸಂಸ್ಕಾರವೂ ಕರ್ಮ. ಆ ಪರಿಸ್ಥಿತಿ ಅಥವಾ ಸನ್ನಿವೇಶದ ಕಾರಣವು ಗತದ ಅಚ್ಚು ಅಥವಾ ಸಂಸ್ಕಾರ. ಈಗ ಮಾಡುವ ಕಾರ್ಯವು ಗತದ ಸಂಸ್ಕಾರದಿಂದಾಗಿ. ಈಗ ಮಾಡುವ ಕಾರ್ಯವು ಇನ್ನೂ ಹೆಚ್ಚು ಸಂಸ್ಕಾರಗಳ ನ್ನುಂಟು ಮಾಡುತ್ತದೆ. ಅದುವೂ ಕರ್ಮ. ಎಷ್ಟು ಕ್ಲಿಷ್ಟವಲ್ಲವೆ?!
ಒಂದು ವೇಳೆ ನೀವು ಪ್ರತಿದಿನವೂ ಕಾಫಿಯನ್ನು ಕುಡಿಯುತ್ತಿದ್ದು, ಒಂದು ದಿನ ಕಾಫಿ ಕುಡಿಯದಿದ್ದರೆ ತಲೆನೋವು ಬರುತ್ತದೆ. ಇದು ಕಾಫಿ ಕರ್ಮ! ಕಾಫಿ ಕರ್ಮದಿಂದ ಹೊರಬರಲು ನೀವು ಕಾಫಿಯನ್ನು ಕುಡಿದು ತಲೆನೋವಿನಿಂದ ಹೊರಬರಬೇಕು. ಇದರಿಂದ ಕಾಫಿ ಕರ್ಮವು ಮುಂದುವರಿಯುತ್ತಾ ಹೋಗುತ್ತದೆ ಅಥವಾ ಇಲ್ಲ! ಈವತ್ತು ನಾನು ಕಾಫಿ ಕುಡಿಯುವುದಿಲ್ಲ. ತಲೆ ನೋವು ಬಂದರೆ ಬರಲಿ! ಎಂದೂ ಹೇಳಬಹುದು. ಎರಡು ದಿವಸಗಳು ಇದರಿಂದ ತಲೆನೋಯ್ದರೂ, ಮೂರನೆಯ ದಿನ ನಿಮಗೆ ತಲೆನೋವು ಬರುವುದಿಲ್ಲ. ಇದು ಕಾಫಿ ಕರ್ಮದಿಂದ ದಾಟಿ ಹೊರಬರುವುದು. ಇದೊಂದು ಸಣ್ಣ ಉದಾಹರಣೆ. ಇದನ್ನು ಅನವಶ್ಯಕವಾಗಿ ವಿಸ್ತರಿಸುವುದು ಬೇಡ. ಉದಾಹರಣೆಗಳ ಅನವಶ್ಯಕ ವಿಸ್ತರಣೆಯನ್ನು ಮಾಡಬಾರದು. ಇಲ್ಲವಾದರೆ ಅದು ಉದಾಹರಣೆಯೇ ಅಲ್ಲ.
ಕರ್ಮವು ದೊಡ್ಡ ರಹಸ್ಯ. ಆದ್ದರಿಂದಲೇ ಕೃಷ್ಣನು, ‘ಗಹನಾಕರ್ಮಣೋಗತಿಃ’ ಎಂದದ್ದು. ಕರ್ಮದ ರೀತಿಯನ್ನು ಗ್ರಹಿಸಲು ಸಾಧ್ಯವೇ ಇಲ್ಲ. ಕೇವಲ ನಿಮ್ಮ ಕರ್ಮ ಮಾತ್ರವಲ್ಲ. ಆನುವಂಶಿಕೆಗಳಿಂದ ಬಂದಂತಹ ನಿಮ್ಮ ಕರ್ಮವು - ನಿಮ್ಮ ಕುಟುಂಬದ ಕರ್ಮ. ನಿಮಗೆ ಮಧುಮೇಹವಿದ್ದರೆ ಅದು ಕೇವಲ ನಿಮ್ಮ ಕರ್ಮವಲ್ಲ. ಅದು ನಿಮ್ಮ ಕುಟುಂಬದ ಕರ್ಮ. ಒಂದು ಸ್ಥಳದಲ್ಲಿ ಜನಿಸಿದರೆ ಅದು ಕ್ಷೇತ್ರಕರ್ಮ. ಜನಿಸುವ ನಿರ್ದಿಷ್ಟವಾದ ಸಮಯವೂ ಸಹ ಕರ್ಮವೇ. ಒಂದು ನಿರ್ದಿಷ್ಟವಾದ ಸ್ಥಳದಲ್ಲಿ, ಒಂದು ನಿರ್ದಿಷ್ಟವಾದ ಸಮಾಜದಲ್ಲಿ ಜನಿಸುವುದೆಲ್ಲವೂ ಕರ್ಮ. ಯುದ್ಧ ಪೀಡಿತ ಯೂಕ್ರೇನ್​ನಲ್ಲಿ ಹುಟ್ಟುತ್ತಾರೆ. ಅಲ್ಲಿ ಸಾಮೂಹಿಕ ಕರ್ಮವಿದೆ. ಕಾಂಗೊ, ಇಥಿಯೋಪಿಯಾದಲ್ಲಿ ಸಾಮೂಹಿಕ ಕರ್ಮವಿದೆ.
ನಿಮ್ಮ ತಲೆ ತಿರುಗಲು ಆರಂಭಿಸುತ್ತದೆ. ಅದು ಅತೀ ಅತೀ ಸೂಕ್ಷ್ಮವಾದದ್ದು! ನವಿರಾದದ್ದು, ಆದ್ದರಿಂದ, ಅದರ ಬಗ್ಗೆ ಚಿಂತಿಸದಿರುವುದೇ ಉತ್ತಮ! ಅವೆಲ್ಲವನ್ನೂ ಬಿಟ್ಟು ಮುಂದುವರಿಯುವುದೇ ಒಳ್ಳೆಯದು. ಏನು ಮಾಡಿದರೆ ಯಾವ ರೀತಿಯ ಕರ್ಮ ಬರುತ್ತದೆ, ಯಾವ ರೀತಿಯ ಜನ್ಮ ಬರುತ್ತದೆ - ಎಂಬುದರ ಬಗ್ಗೆ ನಮ್ಮ ಪೂರ್ವಜರೆಲ್ಲರೂ ಆಳವಾದ ಅಧ್ಯಯನವನ್ನು ಮಾಡಿದ್ದಾರೆ. ಜೈನ ಪದ್ಧತಿಯಲ್ಲಿ ಇದರ ಬಗ್ಗೆ ಗಂಭೀರವಾದ ಅಧ್ಯಯನವನ್ನು ಮಾಡಲಾಗಿದೆ. 36 ಆಗಮಗಳಿವೆ. ಅವುಗಳಲ್ಲಿ ಕರ್ಮದ ಬಗ್ಗೆ ಆಳವಾಗಿ ಪ್ರವೇಶಿಸಿದ್ದಲ್ಲದೆ, ವಿವಿಧ ತರಕಾರಿಗಳು ಮನಸ್ಸಿನ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಬಗ್ಗೆಯೂ ಅಧ್ಯಯನ ಮಾಡಿದ್ದಾರೆ. ಬಹುಶಃ ಆ ಅಧ್ಯಯನದ ಫಲವಾಗಿಯೇ ಮಣ್ಣಿನ ಕೆಳಗೆ ಬೆಳೆಯುವ ತರಕಾರಿಗಳನ್ನು, ಮೂಲಂಗಿಯನ್ನು, ಈರುಳ್ಳಿಯನ್ನು ಜೈನರು ತಿನ್ನುವುದಿಲ್ಲ. ಶೈವಾಗಮದಲ್ಲಿ, ಪಂಚರಾತ್ರ ಆಗಮದಲ್ಲಿ ವಿವಿಧ ಕರ್ಮಗಳ ಬಗ್ಗೆ ಸಂಶೋಧನೆ ನಡೆಸಿದ್ದಾರೆ.
ನಾವು ಕರ್ಮದೊಳಗೆ ಇಷ್ಟೊಂದು ಆಳವಾಗಿ ಹೊಕ್ಕುವುದು ಬೇಕಿಲ್ಲ. ಇಷ್ಟನ್ನು ಮಾತ್ರ ಅರ್ಥಮಾಡಿಕೊಂಡರೆ ಸಾಕು - ಕರ್ಮವು ವಿಶಾಲವಾದದ್ದು. ನಾವು ಒಳ್ಳೆಯದನ್ನು ಮಾಡುತ್ತಾ ಹೋಗಬೇಕು. ನಮ್ಮ ಮನಸ್ಸನ್ನು ಗಮನಿಸುತ್ತಾ ಹೋಗಬೇಕು. ಏಕೆಂದರೆ ಮನಸ್ಸೇ ಎಲ್ಲಾ ಕರ್ಮಗಳ ಮೂಲ. ಮನಸ್ಸನ್ನು ಶುದ್ಧವಾಗಿ, ಸ್ವಚ್ಛವಾಗಿ ಇಟ್ಟು
ಕೊಳ್ಳಬೇಕು. ನಿಮ್ಮಿಂದ ಎಷ್ಟು ಒಳ್ಳೆಯದನ್ನು ಮಾಡಲು ಸಾಧ್ಯವೋ ಅಷ್ಟು ಮಾಡಬೇಕು ಮತ್ತು ದೈವಕ್ಕೆ ಎಲ್ಲವನ್ನೂ ಶರಣು ಮಾಡಬೇಕು. ಇದರ ಮೇಲೆ ನೀವು ನಿಯಂತ್ರಣವನ್ನು ಹೊಂದಲು ಸಾಧ್ಯವಿಲ್ಲ. ಕೆಲವು ಬಾಕಿಗಳನ್ನು ಹಿಂದಿನ ಜನ್ಮದಲ್ಲಿ ಉಳಿಸಿಕೊಂಡಿರುತ್ತೀರಿ. ಅದು ಈ ಜನ್ಮದಲ್ಲಿ ನಿಮ್ಮ ಬಳಿಗೆ ಬರುತ್ತದೆ. ಏನೋ ಒಂದನ್ನು ಮಾಡಲು ನೀವು ಬಯಸುವುದಿಲ್ಲ. ಆದರೂ ಏನನ್ನೋ ಕೊಟ್ಟು ತೆಗೆದುಕೊಳ್ಳಬೇಕಾದ್ದರಿಂದ ಕೆಲವು ಸಂಬಂಧಗಳು ಉಂಟಾಗುತ್ತವೆ. ಎಲ್ಲವೂ ಬಹಳ ಕ್ಲಿಷ್ಟವಾದದ್ದು.
(ಲೇಖಕರು ಆಧ್ಯಾತ್ಮಿಕ ಚಿಂತಕರು, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರು)
(ಪ್ರತಿಕ್ರಿಯಿಸಿ: instagram@gurudev.kannada )
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net