ಜೀವ ಜಗತ್ತು ದೇವರಲ್ಲ, ಅವೆಲ್ಲದರೊಳಗೆ ಆತ ಆವರಿಸಿದ್ದಾನೆ!

ಜೀವ ಜಗತ್ತು ದೇವರಲ್ಲ, ಅವೆಲ್ಲದರೊಳಗೆ ಆತ ಆವರಿಸಿದ್ದಾನೆ!
ಜೀವ ಜಗತ್ತು ದೇವರಲ್ಲ, ಅವೆಲ್ಲದರೊಳಗೆ ಆತ ಆವರಿಸಿದ್ದಾನೆ!
Published on
ಸುಂದರತೆಯೆನುವುದೇಂ? ಜನಕೆ ಮೈಮರೆಯಿಪಾ|
ನಂದದೊಳಮರುಮವೇಂ? ವಿಶ್ವಚೇತನದಾ||
ಸ್ಪಂದನವೆ ಸೌಂದರ್ಯಮದುವೆ ಜೀವನ ಮೂಲ|
ಬಂಧುರತೆ ಬೊಮ್ಮನದು-ಮಂಕುತಿಮ್ಮ||446||
ಸುಂದರತೆ ಎನ್ನುವುದೇನು? ಜನರನ್ನು ಮೈಮರೆಯುವಂತೆ ಮಾಡುವ ಆನಂದದ ಮರ್ಮವಾದರೂ ಏನು? ಅದು ವಿಶ್ವಚೇತನದ ಸ್ಪಂದನ. ಇದುವೆ ಸೌಂದರ್ಯವಾಗಿ ಕಾಣುತ್ತಿದೆ. ಇದುವೆ ಜೀವನದ ಮೂಲ. ಸೌಂದರ್ಯವು ಭಗವಂತನದು ಎನ್ನುತ್ತದೆ ಈ ಕಗ್ಗ.
ಸುಂದರತೆ ಎಂದರೇನು ಎನ್ನುವ ಪ್ರಶ್ನೆಗೆ ವಿಭಿನ್ನವಾದ ಉತ್ತರವನ್ನು ಪಡೆಯುತ್ತೇವೆ. ಒಬ್ಬರಿಗೆ ಅಸಹ್ಯವೆನ್ನಿಸಿದ್ದು, ಇನ್ನೊಬ್ಬರಿಗೆ ಮನೋಹರವಾಗಿರುತ್ತದೆ, ಹಲವರು ಸುಂದರವೆಂದು ಕೊಂಡಾಡಿದುದು ಕೆಲವರಿಗೆ ಸಾಮಾನ್ಯವೆನ್ನಿಸುವುದಿದೆ. ವ್ಯಕ್ತಿಯ ವಯಸ್ಸು, ಮನೋಸ್ಥಿತಿ ಮತ್ತು ಅನುಭವದ ಆಧಾರದಲ್ಲಿ ಸೌಂದರ್ಯದ ಆಸ್ವಾದನೆ, ಅನುಭೂತಿ. ಹಾಗಾಗಿಯೇ ಚೆಲುವಿರುವುದು ವಸ್ತುವಿನಲ್ಲಿ ಅಲ್ಲ ಕಾಣುವ ಮನಸ್ಸಿನಲ್ಲಿ ಎನ್ನುವ ವಾದವಿದೆ. ಹಾಗಾದರೆ ನಿಜವಾಗಿಯೂ ಸುಂದರತೆ ಎಂದರೇನು? ಯಾವುದು ವ್ಯಕ್ತಿಯ ಮನಸ್ಸನ್ನು ಆರ್ದ್ರವಾಗಿಸುತ್ತದೋ ಅದು ಸುಂದರವಾದುದು.
ಬಹಿರಿಂದ್ರಿಯಗಳ ಮೂಲಕ ಜಗತ್ತನ್ನು ತಿಳಿಯುವ ವ್ಯಕ್ತಿಯ ಮನಸ್ಸನ್ನು ಯಾವುದು ಆಕರ್ಷಿಸಿ ಮೋಹಗೊಳಿಸುತ್ತದೋ, ದುಃಖ-ದುಮ್ಮಾನಗಳನ್ನು ಕ್ಷಣಕಾಲವಾದರೂ ಮರೆಯುವಂತೆ ಮಾಡಿ ಆನಂದದ ಅನುಭೂತಿಯನ್ನುಂಟು ಮಾಡುತ್ತದೋ ಅದು ಸುಂದರತೆ. ವ್ಯಕ್ತಿಯಿಂದ ವ್ಯಕ್ತಿಗೆ ಇದು ವಿಭಿನ್ನವಾಗಿರುತ್ತದೆ.
ವರ್ಣರಂಜಿತವಾಗಿ ಅರಳಿದ ಹೂವು, ತಂಪಾಗಿ ಬೀಸಿ ಬರುವ ತಂಪೆಲರು, ಮುದಗೊಳಿಸುವ ಹೂವಿನ ಕಂಪು, ಹಕ್ಕಿಗಳ ಕಲರವದ ಇಂಪು ಇವೆಲ್ಲವೂ ಒಂದರೆಕ್ಷಣ ಹೃದಯವನ್ನು ಸೂರೆಗೊಳ್ಳುತ್ತವೆ. ಶುದ್ಧ ಒರಟನೆದೆಯಲ್ಲೂ ಪುಟ್ಟ ಮಗುವಿನ ಮುಗ್ಧ ನಗು ನಸುನಗುವನ್ನು ಮೂಡಿಸಬಲ್ಲುದು. ಸಹಜವಾದ ಮತ್ತು ಸರಳವಾದ ಪ್ರಾಕೃತಿಕ ವಸ್ತುವಿಶೇಷಗಳು ಎಲ್ಲರಲ್ಲೂ ಸಂಚಲನೆಯನ್ನು ಉಂಟು ಮಾಡುವುದು ಸತ್ಯ. ಕೆಲವೊಮ್ಮೆ ಈ ಸುಂದರತೆಯು ಮನುಜ ಮನಸ್ಸನ್ನು ಸೆಳೆಯುವುದಷ್ಟೇ ಅಲ್ಲದೆ ಆತನಲ್ಲಿ ಮೋಹವನ್ನು ಉಂಟು ಮಾಡುವುದುಂಟು. ಮೋಹಿಸಿದುದನ್ನು ತನ್ನದಾಗಿಸಿಕೊಳ್ಳುವುದಕ್ಕೆ ಯತ್ನಿಸುತ್ತಾನೆ. ಈ ಹಂತದಲ್ಲಿ ಕಾಮ, ಕ್ರೋಧ, ಲೋಭ,
ಮೋಹ, ಮದ, ಮತ್ಸರಗಳೆಂಬ ಅರಿಷಡ್ವೈರಿಗಳಿಗೆ ಒಳಗಾಗು ತ್ತಾನೆ. ಎಷ್ಟೋ ಸಲ ಬದುಕನ್ನೇ ಇದು ಬದಲಾಯಿಸಿ ಬಿಡುವುದಿದೆ. ಬುದ್ಧಿಗೆ ಮಂಕು ಕವಿದಂತಾಗಿ ಸಾಧನೆಯ ಹಾದಿ ಕಠಿಣವಾಗುತ್ತದೆ. ಇದರಿಂದ ಪಾರಾಗಲು ವಿವೇಕಿಯಾದ ಮನುಜನು ಚಿಂತನೆಗೆ ತೊಡಗಬೇಕು.
ವ್ಯವಸ್ಥಿತವಾದ ಮತ್ತು ಮೋಹಕವಾದ ಪ್ರಕೃತಿಯನ್ನು ಸಂಯೋಜಿಸಿದವರು ಯಾರು? ಮತ್ತೆಮತ್ತೆ ಹೊಸತನವನ್ನು ಹೊಂದುವ ಬಹುಚಿತ್ರ ಜಗತ್ತನ್ನು ಕೃತಕವಾಗಿಯೂ ಕೂಡ ಮನುಷ್ಯನು ನಿರ್ವಿುಸಲಾರ. ಮನುಜನಳವಿಗೆ ನಿಲುಕದ ಈ ವಿಶೇಷತೆಯು ವಿಶ್ವಾತ್ಮ ಚೈತನ್ಯದ ಸ್ಪಂದನ. ಜಗದಗಲ
ಹರಡಿರುವ ವಿಸ್ಮಯಾನಂದ, ಸೌಂದರ್ಯಾದ್ಭುತಗಳು ದೇವರ ಇರುವಿಕೆಗೆ ಸಾಕ್ಷಿ. ಎಷ್ಟೇ ಸುಂದರವಾಗಿದ್ದರೂ ನಾಶವನ್ನು ಹೊಂದುವ ಈ ಜೀವ ಜಗತ್ತು ಖಂಡಿತವಾಗಿಯೂ ದೇವರಲ್ಲ, ಆದರೆ ಅವೆಲ್ಲದರೊಳಗೆ ದೇವರು ಆವರಿಸಿದ್ದಾನೆ. ಸುಂದರವಾಗಿ ಕಂಗೊಳಿಸುವ ಬೇಲಿ ಹೂವಿನಿಂದ ತೊಡಗಿ, ಖಗಮಿಗಗಳ ಸಹಜ ಚೆಲುವು, ಸಹೃದಯರ ಸದ್ಭಾವನೆಗಳೂ ಕೂಡ ಭಗವಂತನ ಸ್ಪಂದನವೇ ಸರಿ. ದೇವರಿರುವುದರಿಂದಲೇ ಆ ಮನಮೋಹಕ ಚೆಲುವು ಪ್ರಕಟವಾಗುತ್ತದೆ.
ಇದುವೇ ಜೀವನದ ಮೂಲ. ಈ ಅರಿವು ಮತ್ತು ಅದರಿಂದ ಉಂಟಾಗುವ ಎಚ್ಚರವೇ ಜೀವನವನ್ನು ಸಾರ್ಥಕವಾಗಿಸುತ್ತದೆ. ಮನುಷ್ಯನು ಭಾವ-ಬುದ್ಧಿಗಳಿಂದ ಬಹಳಷ್ಟು ಸಾಧನೆಯನ್ನು ಮಾಡಿರಬಹುದು, ಹೊಸಹೊಸ ಆವಿಷ್ಕಾರಗಳಿಗೆ ಕಾರಣ ನಾಗಿರಬಹುದು. ಆದರೆ ಈ ಮೇಧಾಶಕ್ತಿಗೆ ಕಾರಣ ದೇವ ಸಂಕಲ್ಪ. ಬೆರಗು ಹುಟ್ಟಿಸುವ ಪ್ರತಿ ಸಂದರ್ಭಗಳಲ್ಲೂ ದೇವಕಾರುಣ್ಯವಿದೆ ಎನ್ನುವುದನ್ನು ಮರೆಯಬಾರದು. ಪ್ರಪಂಚದಲ್ಲಿರುವ ಸರಳವಾದ, ಸಹಜವಾದ ಮತ್ತು ಅಗಾಧವಾದ ಸೌಂದರ್ಯಕ್ಕೆ, ಅದು ನೀಡುವ ಆನಂದಕ್ಕೆ ಭಗವಂತನೆ ಕಾರಣ. ಸುಂದರವಾದುದೆಲ್ಲವೂ ದೇವರ ಪ್ರತೀಕ. ಇದನ್ನು ಅರಿತರೆ ಜೀವನವು ಪಾವನ.
(ಲೇಖಕರು ಉಪನ್ಯಾಸಕರು, ಕವಯಿತ್ರಿ)
(ಪ್ರತಿಕ್ರಿಯಿಸಿ: vvsudina@gmail.com, kaviadoor@gmail.com)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net