ಚಾತುರ್ಮಾಸ್ಯದಿಂದ ಅಧ್ಯಾತ್ಮ, ಆರೋಗ್ಯ ಲಾಭ

Chaturmasya
Chaturmasya
Published on

ಜಗದೀಶ ಶರ್ಮಾ ಸಂಪ

(ಲೇಖಕರು ವಿದ್ವಾಂಸರು)
ಮಠಾಧಿಪತಿಗಳು ಚಾತುರ್ಮಾಸ್ಯ ಮಾಡುವುದನ್ನು ಕಂಡಾಗ ಇದು ಅವರ ಆಚರಣೆ ಎಂದೇ ಜಗತ್ತು ಭಾವಿಸಿದೆ. ವಾಸ್ತವವಾಗಿ ಇದು ಎಲ್ಲರ ಆಚರಣೆ. ಚಾತುರ್ಮಾಸ್ಯ ಲೌಕಿಕ ಮತ್ತು ಅಲೌಕಿಕ ಎರಡೂ ಫಲಗಳಿರುವ ತಪಸ್ಸು.
ತಪಸ್ಸು ಭಾರತೀಯ ಬದುಕಿನ ಅವಿಭಾಜ್ಯ ಅಂಗ. "ಯಜ್ಞೋ ದಾನಂ ತಪಶ್ಚೈವ ಪಾವನಾನಿ ಮನೀಷಿಣಾಂ" - ಯಜ್ಞ, ದಾನ ಹಾಗೂ ತಪಸ್ಸುಗಳು ಪಾವನಗೊಳಿಸುತ್ತವೆ ಎನ್ನುವುದು ಗೀತಾಚಾರ್ಯ ಶ್ರೀಕೃಷ್ಣನ ಮಾತು. ಇಲ್ಲಿ ತಪಸ್ಸು ಎಂದಾಗ ನಮ್ಮ ಮನಸ್ಸಿನಲ್ಲಿ ಒಂದು ಚಿತ್ರ ಮೂಡುತ್ತದೆ: ದಟ್ಟ ಅರಣ್ಯ. ಅಲ್ಲೊಂದು ವಿಶಾಲವಾದ ವೃಕ್ಷ. ಅದರ ಕೆಳಗೆ ಒಬ್ಬ ಕುಳಿತಿದ್ದಾನೆ. ಗಡ್ಡ ನೆಲ ತಾಗುವಂತೆ ಬೆಳೆದಿದೆ. ತಲೆಯ ಕೂದಲನ್ನು ಜಟೆ ಕಟ್ಟಿದ್ದಾನೆ. ಚರ್ಮ ಒಣಗಿದೆ. ಬಾಯಲ್ಲಿ ಏನೋ ಗುನುಗುತ್ತಿದ್ದಾನೆ.
ದೇವತೆಗಳು, ರಾಕ್ಷಸರು, ಋಷಿಗಳು, ರಾಜರು ಇವರೆಲ್ಲ ಇಂಥ ತಪಸ್ಸು ಮಾಡಿದ ಅಸಂಖ್ಯ ಕಥೆ ಕೇಳಿದ್ದೇವೆ. ದೇವರು ಬಂದು ವಿಧವಿಧದ ವರ ಕೊಟ್ಟಿದ್ದೂ ನಮಗೆ ಗೊತ್ತಿದೆ. ಇದೇ ತಪಸ್ಸು ಎಂದಾದರೆ ಇದು ನಮ್ಮಿಂದ ತುಂಬಾ ದೂರದಲ್ಲಿದೆ. ನಮ್ಮಿಂದ ಇದು ಅಸಾಧ್ಯ ಎನ್ನುವುದು ಒಂದು ಕಡೆಯಾದರೆ, ಇಂಥ ಕಷ್ಟದ ಸಾಧನೆ ನಮಗೆ ಬೇಡ ಎನ್ನುವ ಭಾವವೂ ನಮಗಿದೆ. ಆದರೆ ಇದೇ ತಪಸ್ಸಲ್ಲ. ಇದೂ ಒಂದು ವಿಧದ ತಪಸ್ಸು. ಹಾಗಿದ್ದರೆ ತಪಸ್ಸು ಎಂದರೆ ಏನು? ಅದರ ಸ್ವರೂಪ ಏನು?
ನಮ್ಮ ಮನಸ್ಸು, ನಮ್ಮ ಇಂದ್ರಿಯಗಳು, ನಮ್ಮ ದೇಹ ಇವುಗಳನ್ನು ಸಂಯಮಗೊಳಿಸುವುದು ತಪಸ್ಸು. ಈ ಸಂಯಮಕ್ಕೆ ಹಲವು ವಿಧಾನಗಳು. ಅದರಲ್ಲಿ ಒಂದು ಚಾತುರ್ಮಾಸ್ಯ ಎನ್ನುವ ವ್ರತ.
ಚಾತುರ್ಮಾಸ್ಯ ಸಂನ್ಯಾಸಿಗಳ ಆಚರಣೆ ಎಂದಾಗಿಬಿಟ್ಟಿದೆ. ಮಠಾಧಿಪತಿಗಳು ಚಾತುರ್ಮಾಸ್ಯ ಮಾಡುವುದನ್ನು ಕಂಡಾಗ ಇದು ಅವರ ಆಚರಣೆ ಎಂದೇ ಜಗತ್ತು ಭಾವಿಸಿದೆ. ವಾಸ್ತವವಾಗಿ ಇದು ಎಲ್ಲರ ಆಚರಣೆ.
ನಾವೂ ಆಚರಿಸಬೇಕು ಎಂದಾದಾಗ ಯಾಕೆ ಹೇಗೆ ಎನ್ನುವ ಜಿಜ್ಞಾಸೆ ಎದುರಾಗುತ್ತದೆ. ಮೊದಲೇ ಹೇಳಿದಂತೆ ಇದೊಂದು ತಪಸ್ಸು. ತಪಸ್ಸಿನಲ್ಲಿ ಸಂಯಮ ಪ್ರಧಾನ. ಸಂಯಮಕ್ಕೆ ನಿಯಮಗಳು ಆವಶ್ಯಕ. ಜೊತೆಗೆ ತ್ಯಾಗವೂ ಇರಬೇಕು. ಹಾಗಾಗಿ ಚಾತುರ್ಮಾಸ್ಯವೆಂದರೆ ಬಿಡುವ ಮತ್ತು ಜೋಡಿಸಿಕೊಳ್ಳುವ ಆಚರಣೆ. ಹಾಗಾಗಿಯೇ ಇದನ್ನು ವ್ರತ ಎಂದಿರುವುದು ಕೂಡ. ವ್ರತವೆಂದರೆ ನಿಯಮಬದ್ಧತೆ ಎಂದೇ ಹೇಳಬೇಕು.
ಇದು ನಾಲ್ಕು ತಿಂಗಳ ಕಾಲ ಆಚರಿಸುವ ವ್ರತ ಅಥವಾ ತಪಸ್ಸು. ಕಾಲಾನಂತರದಲ್ಲಿ ನಾಲ್ಕು ಪಕ್ಷವಾದರೂ ಆಗಬಹುದು ಎನ್ನುವ ನಿಯಮದ ಸಡಿಲತೆಯನ್ನೂ ಶಾಸ್ತ್ರ ಕೊಟ್ಟಿದೆ. ನಾಲ್ಕು ಮಾಸ ಅಥವಾ ನಾಲ್ಕು ಪಕ್ಷಗಳ ಕಾಲ ನಿಯಮಬದ್ಧವಾಗಿ ಇರಬೇಕು.
ನಿರ್ದಿಷ್ಟ ಆಹಾರದ ತ್ಯಾಗ ಚಾತುರ್ಮಾಸ್ಯದ ಪ್ರಮುಖ ಅಂಶ. ಎಂದರೆ ಒಂದೊಂದು ಪಕ್ಷ ಅಥವಾ ಮಾಸಗಳಲ್ಲಿ ಒಂದೊಂದು ವಸ್ತುಗಳ ಸೇವನೆ ಮಾಡಬಾರದು. ಕ್ಷೀರವ್ರತ, ಶಾಕವ್ರತ ಹೀಗೆ. ಆ ಸಮಯವಷ್ಟೂ ಹಾಲು ಸೇವಿಸುವಂತಿಲ್ಲ. ಇನ್ನಷ್ಟು ಸಮಯ ತರಕಾರಿ ಬಳಸುವಂತಿಲ್ಲ. ಹೀಗೆಲ್ಲ ಯಾಕೆ ಮಾಡಬೇಕು ಎಂದರೆ ಇವಕ್ಕೆಲ್ಲ ಬೇರೆ ಬೇರೆಯ ಲಾಭಗಳಿವೆ. ಒಂದೊಂದು ತರಹದ ನಿಯಮ ಪಾಲನೆಗೆ ಒಂದೊಂದು ತರಹದ ಫಲಗಳಿವೆ.
ಉದಾಹರಣೆಗೆ ಅಷ್ಟೂ ದಿನಗಳಲ್ಲಿ ದಿನಕ್ಕೆ ಒಮ್ಮೆ ಮಾತ್ರ ಆಹಾರ ಸೇವಿಸುವುದು. ಹೀಗೆ ಮಾಡಿದರೆ ಐಶ್ವರ್ಯ ಪ್ರಾಪ್ತಿ ಎನ್ನುತ್ತಾರೆ. ಒಂದು ನಕ್ಷತ್ರಕ್ಕೆ ಒಂದು ಆಹಾರ ಎನ್ನುವ ನಿಯಮ ಹಾಕಿಕೊಳ್ಳಬಹುದು. ಹೀಗೆ ಮಾಡಿದರೆ ಸಂಪತ್ತು, ಸೌಂದರ್ಯ ಹಾಗೂ ಸದ್ಬುದ್ಧಿ ಸಿಗುತ್ತದಂತೆ. ಒಂದು ದಿನ ಆಹಾರ ಸೇವನೆ; ಮಾರನೆಯ ದಿನ ಉಪವಾಸ. ಹೀಗೆಯೂ ಮಾಡಬಹುದು. ಇದರಿಂದ ವೈಕುಂಠ ಸಿಗುತ್ತದೆಯಂತೆ. ಆರು ದಿನಗಳಿಗೆ ಒಮ್ಮೆ ಆಹಾರ ಸೇವನೆಯ ಕ್ರಮವೂ ಇದೆ. ಹಾಗೆ ಮಾಡಿದರೆ ಮಹಾಯಾಗಗಳನ್ನು ಮಾಡಿದ ಫಲವಂತೆ. ಅಷ್ಟೂ ದಿನ ಯಾರಿಂದಲೂ ಏನನ್ನೂ ಪಡೆಯಲಾರೆ ಎಂದು ನಿಯಮ ಮಾಡಿಕೊಳ್ಳಬಹುದು. ಹೀಗೆ ಮಾಡಿದಾಗ ಹತ್ತಿರದ ಬಂಧುಗಳು ದೂರಾಗುವುದಿಲ್ಲವಂತೆ. ಇನ್ನು ಮಾಸವ್ರತಗಳು. ಇವೆಲ್ಲ ಪಾಪ ಪರಿಹಾರಕ್ಕಾಗಿ.
ಶ್ರಾವಣ ಮಾಸದಲ್ಲಿ ಶಾಕವ್ರತ; ತರಕಾರಿಯ ಬಳಕೆ ನಿಷೇಧ. ಭಾದ್ರಪದ ಮಾಸದಲ್ಲಿ ದಧಿ ವ್ರತ; ಮೊಸರು ಬಳಸಬಾರದು. ಆಶ್ವಯುಜ ಮಾಸದಲ್ಲಿ ಕ್ಷೀರವ್ರತ; ಹಾಲಿಗೆ ನಿಷೇಧ. ಕಾರ್ತಿಕ ಮಾಸದಲ್ಲಿ ಧಾನ್ಯವ್ರತ; ಧಾನ್ಯಗಳನ್ನು ಬಳಸುವಂತಿಲ್ಲ. ಕಾರ್ತಿಕ ಮಾಸದಲ್ಲಿ ಆಮಿಷವ್ರತವೂ ಇದೆ; ಎಂದರೆ ಮಾಂಸ ತಿನ್ನುವಂತಿಲ್ಲ. ಹೀಗೆ ಮಾಡಿದಾಗ ಇಡಿಯ ವರ್ಷದ ಪಾಪ ಪರಿಹಾರ ಎನ್ನುತ್ತವೆ ಶಾಸ್ತ್ರಗಳು.
ಚಾತುರ್ಮಾಸ್ಯದ ಮುಖ್ಯ ಉದ್ದೇಶ ಅಧ್ಯಾತ್ಮದ ಸಾಧನೆ. ಪ್ರತಿ ವ್ಯಕ್ತಿಯೂ ಇದನ್ನು ಮಾಡಬೇಕು ಎನ್ನುವುದು ನಮ್ಮ ಪೂರ್ವಜರ ಅಪೇಕ್ಷೆ. ಅವರ ಪ್ರಕಾರ ಪ್ರತಿಜೀವಿಯೂ ಭಗವಂತನಿಂದ ಬಂದಿದೆ, ಮತ್ತೆ ಅಲ್ಲಿಗೇ ಸೇರಬೇಕಾಗಿದೆ. ಅದಕ್ಕೆ ಮನೋ ನಿಯಂತ್ರಣ, ಇಂದ್ರಿಯ ಸಂಯಮ ಇವೆಲ್ಲ ಬೇಕು. ಹಾಗಾಗಲು ಈ ನಿಯಮಗಳು ಬೇಕು.
ಅಧ್ಯಾತ್ಮ ಸಾಧನೆಗೆ ಕಾಲದ ಸಹಕಾರ ಅತಿಮುಖ್ಯ. ಕಾಲಕ್ಕೆ ಅದರದ್ದೇ ಆದ ಪ್ರಭಾವವಿದೆ. ಕಾಲ ನಮ್ಮ ಮೇಲೆ ವಿಭಿನ್ನ ಪರಿಣಾಮ ಬೀರುತ್ತದೆ. ಕಾಲದ ಧರ್ಮವನ್ನು ಅನುಸರಿಸಿ ಕಾರ್ಯ ಮಾಡಿದಾಗ ಅದು ಫಲಕಾರಿ; ಮಳೆಗಾಲದಲ್ಲಿ ಬೆಳೆ ಬೆಳೆದಂತೆ. ಆ ಕಾಲದ ಪ್ರಕೃತಿ ಮಂಡಲದ ಬದಲಾವಣೆ ಬೆಳೆ ಬೆಳೆಯಲು ಪೂರಕ. ಹಾಗೆಯೇ ಅಧ್ಯಾತ್ಮ ಸಾಧನೆಗೆ ಪೂರಕವಾದ ಕಾಲಗಳಿವೆ. ದಿನದಲ್ಲಿ ಎಂದು ತೆಗೆದುಕೊಂಡರೆ ಸಂಧ್ಯಾ ಕಾಲಗಳು. ರಾತ್ರಿ ಕಳೆದು ಹಗಲು ಆರಂಭವಾಗುವ ಹಾಗೂ ಹಗಲು ಕಳೆದು ರಾತ್ರಿ ಆರಂಭವಾಗುವ ಸಮಯ ಸಂಧ್ಯಾ ಕಾಲ. ಈ ಹೊತ್ತಿನಲ್ಲಿ ಧ್ಯಾನ ಸಾಧನೆ ಮಾಡಿದರೆ ಪ್ರಶಸ್ತ, ಎಂದರೆ ಪರಿಣಾಮ ಹೆಚ್ಚು. ಹಾಗೆಯೇ ವರ್ಷದಲ್ಲಿಯೂ ಕೆಲವು ಸಮಯಗಳಿವೆ; ಅದರಲ್ಲಿ ಈ ಚಾತುರ್ಮಾಸ್ಯ ಪ್ರಮುಖ. ಈ ಕಾಲದಲ್ಲಿ ಮನಸ್ಸನ್ನು ಸಂಯಮಗೊಳಿಸುವುದು ಬೇರೆ ಕಾಲಕ್ಕಿಂತ ಸುಲಭ. ಹಾಗಾಗಿ ಈ ಎಲ್ಲ ನಿಯಮಗಳು. ಹೆಚ್ಚು ಹೆಚ್ಚು ಏಕಾಂತದಲ್ಲಿ ಇದ್ದು ಧ್ಯಾನ ಮಾಡುವ ಕಾಲ ಇದು.
ಹೀಗೆ ಚಾತುರ್ಮಾಸ್ಯ ಲೌಕಿಕ ಮತ್ತು ಅಲೌಕಿಕ ಎರಡೂ ಫಲಗಳಿರುವ ತಪಸ್ಸು. ಎಲ್ಲರೂ ಮಾಡುವ ವ್ರತ ಕೂಡಾ. ಇದರಲ್ಲಿ ಅಧ್ಯಾತ್ಮವೂ ಇದೆ, ಆರೋಗ್ಯವೂ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net