ದುರಿತ ಪರಿಹಾರಕ ನಾರಸಿಂಹ

Narasimha
Narasimha
Published on
| ಮೇಧಾ ಪ್ರಹ್ಲಾದಾಚಾರ್ಯ ಜೋಶಿ
ಭಾಗವತಾದಿ ಪುರಾಣಗಳಲ್ಲಿ ಭಗವಂತನ ನಾನಾವತಾರಗಳ ವರ್ಣನೆಗಳಿವೆ. ರಾಮಕೃಷ್ಣಾದಿ ಅವತಾರಗಳ ಗುಣವರ್ಣನೆ ಒಂದು ರೀತಿಯಾದರೆ, ಭಯಂಕರ ರೌದ್ರರೂಪಿ ನರಸಿಂಹಾವತಾರದ ವರ್ಣನೆಯು ಭಕ್ತರ ದುರಿತಗಳನ್ನು ಪರಿಹರಿಸುತ್ತದೆ ಎಂಬುದು ಇದರ ಪುರಾಣಗಳ ಫಲಶ್ರುತಿ. ಪುರಾಣಗಳಲ್ಲಿ
ಬಗೆಬಗೆಯಾಗಿ ವರ್ಣಿತವಾದ ನರಸಿಂಹ ದೇವರ ಮಹಿಮೆಯನ್ನು ನಮ್ಮ ಹರಿದಾಸರು ತಮ್ಮ ಅತ್ಯದ್ಭುತವಾದ ಪದಪುಂಜಗಳಲ್ಲಿ ಹೆಣೆದಿದ್ದಾರೆ. ನರಸಿಂಹ ದೇವರ ಕುರಿತಾದ ಅನೇಕ ಪದ್ಯಗಳು ರಚನೆಯಾಗಿವೆ. ಅದರಲ್ಲೂ ಸುಳಾದಿಗಳು ಬಲು ವಿಶೇಷ. ಸುಳಾದಿ ದಾಸರೆಂದೇ ಪ್ರಸಿದ್ಧರಾದ ವಿಜಯದಾಸರಿಂದ ರಚಿತವಾದ ನರಸಿಂಹ ಸುಳಾದಿಯು ಪ್ರಸಿದ್ಧವಾದದ್ದು. ಅದರಲ್ಲೂ ವಿಶೇಷವಾಗಿ ದುಷ್ಟರ ಬಾಧೆ, ನಾನಾ ರೀತಿಯ ವಿಘ್ನಗಳ, ದುರಿತಗಳ ಪರಿಹಾರಕ್ಕಾಗಿ ‘ವೀರಸಿಂಹನೇ ನಾರಸಿಂಹನೇ’ ಎಂಬ ಸುಳಾದಿಯ ಪಠಣೆ ಸಿದ್ಧಿಪ್ರದವಾಗಿದೆ.
ಹಿನ್ನೆಲೆ: ಹಿರಣ್ಯಕಶಿಪು ಘೊರ ತಪಸ್ಸನ್ನು ಮಾಡಿ ಬ್ರಹ್ಮದೇವನಿಂದ ವಿಚಿತ್ರ ವರವನ್ನು ಪಡೆದ. ಬ್ರಹ್ಮನಿಂದ ಸೃಷ್ಟಿಯಾದ ಮನುಷ್ಯ, ಮೃಗ, ಪಕ್ಷಿ ಇನ್ನಿತರ ಯಾವ ಜೀವರಿಂದಾಗಲಿ, ಅಸ್ತ್ರ, ಆಯುಧಗಳಿಂದಾಗಲಿ, ಹಗಲು-ರಾತ್ರಿಗಳಲ್ಲಿ, ಮನೆಯಿಂದ ಒಳ-ಹೊರಗೆ ಎಲ್ಲಿಯೂ ಯಾರಿಂದಲೂ ತನಗೆ ಮೃತ್ಯು ಬರಬಾರದೆಂಬ ವರ ಪಡೆದ. ಜಗತ್ತಿಗೆ ಕಂಟಕನಾಗಿ ಬೆಳೆದ. ಆದರೆ ಸಾಧಿ್ವ ಶಿರೋಮಣಿಯಾದ ಆತನ ಪತ್ನಿ ಕಯಾಧುವಿನಲ್ಲಿ ಪರಮಸಾತ್ವಿಕ ವಿಷ್ಣುಭಕ್ತನ ಅವತಾರವಾಯಿತು. ಅವರೇ ಭಕ್ತ ಪ್ರಹ್ಲಾದರು. ಪ್ರಹ್ಲಾದನ ವಿಷ್ಣುಭಕ್ತಿಯೇ ತಂದೆ ಹಿರಣ್ಯಕಶಿಪುವಿನ ದ್ವೇಷಕ್ಕೆ ಕಾರಣವಾಯಿತು. ಮಗನನ್ನು ನಾನಾ ರೀತಿಯಲ್ಲಿ ಕೊಲ್ಲಲು ತಂದೆ ಪ್ರಯತ್ನಿಸಿದ. ಆದರೆ ಯಾವಾಗ ಹಿರಣ್ಯಕಶಿಪು ಭಗವಂತನ ಅಸ್ತಿತ್ವದ ಬಗ್ಗೆ ಪ್ರಶ್ನಿಸಿ ವಿಷ್ಣುದ್ವೇಷವನ್ನು ಕಾರಿದನೋ ಆಗ ಅವನ ವರಕ್ಕೆ ತಕ್ಕಂತೆಯೇ ನರ-ಮೃಗನಾಗಿ ಕಂಬದಿಂದ ಹೊರಬಂದ ಸ್ವಾಮಿ ಶ್ರೀಲಕ್ಷಿ ್ಮ ನರಸಿಂಹ.
‘ನಿನ್ನ ಆ ದೇವರು ಎಲ್ಲಿದ್ದಾನೆ?’ ಎಂದು ಹಿರಣ್ಯಕಶಿಪು ಕೇಳಿದಾಗ ‘ನನ್ನ ಸ್ವಾಮಿ ಎಲ್ಲ ಜೀವಜಡಗಳಲ್ಲಿದ್ದಾನೆ’ ಎಂಬ ತತ್ವವನ್ನು ಪ್ರಹ್ಲಾದ ತಿಳಿಸಿದ. ತನ್ನ ಭಕ್ತನ ಮಾತನ್ನು ಸತ್ಯಮಾಡುವುದಕ್ಕಾಗಿ ಹಿರಣ್ಯಕಶಿಪುವಿನ ತುಂಬಿದ ಸಭೆಯಲ್ಲಿ ಕಂಬದಿಂದ ಭಗವಂತ ಸಿಂಹದ ಮುಖ, ಮನುಷ್ಯ ದೇಹ ಉಳ್ಳವನಾಗಿ ಉಗ್ರ ನರಸಿಂಹ ರೂಪದಿಂದ ಬಂದ. ನರಸಿಂಹ ದೇವರು ಆರ್ಭಟಿಸುತ್ತ ತನ್ನ ಸವೋತ್ತಮತ್ವವನ್ನು ಜಗತ್ತಿಗೆ ತೋರಿಸುತ್ತ ಬಂದು ಹೊಸ್ತಿಲಲ್ಲಿ ಕುಳಿತು, ರಾಕ್ಷಸ ಹಿರಣ್ಯಕಶಿಪುವನ್ನು ಕೆಳಗೆ ಕೆಡವಿ, ಅವನ ಕೂದಲುಗಳನ್ನು ಜಗ್ಗಿ ಎಳೆದು ತನ್ನ ತೊಡೆಯ ಮೇಲೆ ಅವನನ್ನು ಹಾಕಿಕೊಂಡು, ಹಗಲು-ರಾತ್ರಿಗಳಲ್ಲದ ಸಾಯಂ ಸಮಯಕ್ಕೆ ಪಶ್ಚಿಮಸಮುದ್ರದ ತೀರದಲ್ಲಿ ಮುಳುಗುತ್ತಿರುವ ಸೂರ್ಯನನ್ನು ನೋಡುತ್ತ, ತನ್ನ ಚೂಪಾದ ಉಗುರುಗಳಿಂದಲೇ ಅವನ ಹೊಟ್ಟೆಯನ್ನು ಸೀಳಿ ಕರುಳನ್ನು ತೆಗೆದು ತನ್ನ ಕಂಠದಲ್ಲಿ ಧರಿಸಿ ಬಹೂಗ್ರರೂಪವನ್ನು ತೋರಿದ. ಇಂತಹ ನರಸಿಂಹ ದೇವರ ಮೂರನೇ ಕಣ್ಣಿನಿಂದ ಹೊರಟ ಉರಿಯು ಸಮಸ್ತ ಬ್ರಹ್ಮಾಂಡವನ್ನೇ ಸುಟ್ಟು ಹಾಕುವುದೆಂಬ ಗಾಬರಿಯಿಂದ ಎಲ್ಲ ದೇವತೆಗಳು ತಾಯಿ ಮಹಾಲಕ್ಷಿ ್ಮ ಯನ್ನು ಪ್ರಾರ್ಥಿಸಿದರು. ಮಹಾಲಕ್ಷಿ ್ಮು ಆಜ್ಞೆಯಂತೆ ಪ್ರಹ್ಲಾದನು ‘ಬ್ರಹ್ಮಾದಯಃ ಸುರಗಣಾ ಮುನಯೋಥಸಿದ್ಧಾಃ’ ಎಂದು ನರಸಿಂಹ ದೇವರ ಸ್ತೋತ್ರ ಮಾಡಲು ಪ್ರಾರಂಭಿಸಿದ. ಪ್ರಹ್ಲಾದನ ಪ್ರಾರ್ಥನೆಗೆ ನರಸಿಂಹ ಪರಮಶಾಂತನಾಗಿ ಪ್ರಹ್ಲಾದನನ್ನು ಅನುಗ್ರಹಿಸಿದ. ಶ್ರೀಲಕ್ಷಿ ್ಮನರಸಿಂಹನ ಈ ರೂಪವನ್ನು ಕಂಡು ದೇವತೆಗಳೆಲ್ಲ ಪುಷ್ಪವೃಷ್ಟಿಯನ್ನು ಮಾಡಿದರು.
(ಲೇಖಕರು ಹವ್ಯಾಸಿ ಬರಹಗಾರರು)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net