ದಲ್ಲಿ ಆನಂದದಿಂದ ಬದುಕಲು ಸಹಾಯ ಮಾಡುತ್ತದೆ. ಲೌಕಿಕರಿಗೂ, ಆಧ್ಯಾತ್ಮ ಪಿಪಾಸುಗಳಿಗೂ, ಸಮಾಜಕ್ಕೂ ಸಹ ಇದರ ಪ್ರಯೋಜನ ಉಂಟು. ಜೀವನದಲ್ಲಿ ಯಾರಾದರೂ ದುಃಖಿತನು ಕಂಡು ಬಂದರೆ ಅದಕ್ಕೆ ಮೂಲ ಕಾರಣ ಆತನ ಮನಸ್ಸೇ ಆಗಿರುತ್ತದೆ. ‘ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ’ ಎಂದು ನಮ್ಮ ಪೂರ್ವಜರು ಬಹಳ ಹಿಂದೆಯೆ ಹೇಳಿದ್ದಾರೆ. ನಾವು ದೇಹಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತೇವೆ. ಬುದ್ಧಿಯನ್ನು ಲೌಕಿಕ ಜ್ಞಾನದಲ್ಲಿ ಪರಿಣತಿ ಪಡೆಯುವಂತೆ ತಯಾರುಮಾಡುತ್ತೇವೆ. ನಮ್ಮ ಕಣ್ಣಿನ ಮುಂದೆ ಈ ಎರಡು ರೀತಿಯ ಜನರೇ ಹೆಚ್ಚಾಗಿ ಕಾಣುತ್ತಾರೆ. ದೇಹ ಹಾಗೂ ಬುದ್ಧಿಯ ನಡುವೆ ಇರುವ ಮನಸ್ಸನ್ನು ಹೆಚ್ಚಾಗಿ ಗುರುತಿಸುವುದೇ ಇಲ್ಲ. ನಮ್ಮ ಆಂತರಿಕ ಭಾವನೆಗಳು, ಸಂತಸೋತ್ಸಾಹಗಳು, ನೋವು ನಲಿವುಗಳು ಇವುಗಳ ಆಧಾರವೇ ಮನಸ್ಸು. ನಮ್ಮ ದುಃಖಕ್ಕೆ ಕಾರಣವೇನೆಂದು, ನಮಗೆ ಗೊತ್ತಿಲ್ಲ.