ಯೇಸು ಬಲಿದಾನದ ಸ್ಮರಣೆ

Memorial of Jesus sacrifice
Memorial of Jesus sacrifice
Published on
ವಿಶ್ವದಾದ್ಯಂತ ಕ್ರೖಸ್ತ ಬಾಂಧವರು ಪ್ರಭು ಯೇಸು ಕ್ರಿಸ್ತರ ಆತ್ಮಾರ್ಪಣೆಯ ದಿನವಾದ ‘ಶುಭ ಶುಕ್ರವಾರ’ವನ್ನು ಅತ್ಯಂತ ಭಕ್ತಿಭಾವದಿಂದ ಆಚರಿಸುತ್ತಿದ್ದಾರೆ. ಇದು ಕೇವಲ ಶೋಕದ ದಿನವಲ್ಲ, ಬದಲಾಗಿ ಮಾನವಕುಲದ ಪಾಪ ವಿಮೋಚನೆಗಾಗಿ ಯೇಸು ತನ್ನ ಪ್ರಾಣವನ್ನೇ ಅರ್ಪಿಸಿದ ಪರಮ ಪವಿತ್ರ ದಿನ. ಬೈಬಲ್ ಸಂದೇಶದಂತೆ, ಯೇಸು ಕ್ರಿಸ್ತರು ಶಿಲುಬೆಯ ಮೇಲಿನ ಕಠಿಣ ಯಾತನೆಯ ನಡುವೆಯೂ ‘ದೇವರೆ, ಇವರನ್ನು ಕ್ಷಮಿಸು; ತಾವು ಏನು ಮಾಡುತ್ತಿದ್ದೇವೆಂಬುದು ಇವರಿಗೆ ತಿಳಿಯದು’ ಎಂದು ಪ್ರಾರ್ಥಿಸುವ ಮೂಲಕ ಕ್ಷಮಾಗುಣದ ಮಹೋನ್ನತ ಮಾದರಿಯನ್ನು ಜಗತ್ತಿಗೆ ಸಾರಿದರು.
ಈ ದಿನವು ಪ್ರಮುಖವಾಗಿ ಮೂರು ಮೌಲ್ಯಗಳನ್ನು ಬೋಧಿಸುತ್ತದೆ- ದ್ವೇಷದ ಬದಲು ಪ್ರೀತಿ, ಪ್ರತೀಕಾರದ ಬದಲು ಕ್ಷಮೆ, ಸ್ವಾರ್ಥದ ಬದಲು ತ್ಯಾಗ. ಗುಡ್ ಫ್ರೖೆಡೇ ಅಂಗವಾಗಿ ವಿವಿಧ ಚರ್ಚ್​ಗಳಲ್ಲಿ ವಿಶೇಷ ಪ್ರಾರ್ಥನೆ ಹಾಗೂ ‘ಶಿಲುಬೆಯ ಹಾದಿ’ (ವೇ ಆಫ್ ದ ಕ್ರಾಸ್) ಕಾರ್ಯಕ್ರಮಗಳು ಜರುಗಲಿವೆ. ಯೇಸುವನ್ನು ಬಂಧಿಸಿದ ಕ್ಷಣದಿಂದ ಹಿಡಿದು, ಕಲ್ವಾರಿ ಪರ್ವತದಲ್ಲಿ ಶಿಲುಬೆಗೆ ಏರಿಸುವವರೆಗಿನ ಘಟನೆಗಳನ್ನು ಭಕ್ತರು ಸ್ಮರಿಸಲಿದ್ದಾರೆ.
ಗುಡ್ ಫ್ರೖೆಡೇ ಸರ್ಕಾರಿ ರಜೆಯಾದ ಕಾರಣ ಅದು ಒಂದು ಹಬ್ಬವಿರಬಹುದು ಎಂದು ಇಂದಿಗೂ ಹ್ಯಾಪಿ ಗುಡ್ ಫ್ರೖೆಡೇ ಎಂದು ಹಲವು ಶುಭಾಶಯಗಳು ಇಂದಿಗೂ ಬರುತ್ತವೆ. ಇದು ಹಬ್ಬದ ದಿನವಲ್ಲ. ಬದಲಿಗೆ ಕ್ರೖೆಸ್ತ ಧರ್ಮದ ಪವಿತ್ರ ದಿನ. ಈ ದಿನ ಯೇಸು ಮಾನವ ಕುಲದ ಪಾಪಗಳಿಗಾಗಿ ತನ್ನ ಜೀವವನ್ನು ಅರ್ಪಿಸಿದ ದಿನ. ವಿಶ್ವದಾದ್ಯಂತ ಕ್ರೖಸ್ತರು ಈ ದಿನವನ್ನು ಪ್ರಾರ್ಥನೆ ಮತ್ತು ಉಪವಾಸದ ಮೂಲಕ ಆಚರಿಸುತ್ತಾರೆ.
ಗುಡ್ ಫ್ರೖಡೇ ದಿನ ಯೇಸುವನ್ನು ಶಿಲುಬೆಗೆ ಏರಿಸಲಾಯಿತು. ಬೈಬಲ್ ಪ್ರಕಾರ ಯೇಸು ತನ್ನ ನೋವು, ಕಷ್ಟವನ್ನು ಸಹಿಸಿಕೊಂಡು ಮಾನವಕುಲಕ್ಕೆ ಕ್ಷಮೆ ಮತ್ತು ಪ್ರೀತಿಯೆಂಬ ಸಂದೇಶ ನೀಡಿದರು. ಅವರ ಜೀವದ ತ್ಯಾಗ ಮಾನವರ ಪಾಪಗಳ ಪರಿಹಾರಕ್ಕಾಗಿ ಆಗಿದೆ ಎಂದು ಕ್ರೖೆಸ್ತರು ನಂಬುತ್ತಾರೆ. ಈ ದಿವಸ ಚರ್ಚ್​ಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆಯುತ್ತವೆ. ಹಲವಾರು ಕಡೆ ಶಿಲುಬೆಯ ಹಾದಿಯನ್ನು ಪುನರಾವರ್ತಿಸುತ್ತಾರೆ. ಯೇಸುವಿನ ತಲೆಗೆ ಮುಳ್ಳಿನ ಕಿರೀಟವಿಟ್ಟು ಶಿಲುಬೆಯನ್ನು ಹೆಗಲ ಮೇಲೆ ನೀಡಿ ಅದನ್ನು ಹೊತ್ತುಕೊಂಡು ಕಲ್ವಾರಿ ಪರ್ವತವನ್ನು (ಗೊಲ್ಗೊಥಾ) ಏರುತ್ತಾರೆ. ಮೂರು ಮುಳ್ಳುಗಳನ್ನು ಜಡಿಯುತ್ತಾರೆ. ಆಮೇಲೆ ಅವರು ಸತ್ತಿದ್ದಾರೆ ಎಂಬುದನ್ನು ಪರೀಕ್ಷಿಸಿ ಶಿಲುಬೆಯಿಂದ ಇಳಿಸಿ ಗುಹೆಯಲ್ಲಿ ದೇಹವನ್ನು ಇಡುತ್ತಾರೆ. ಇದಕ್ಕೆ ಶಿಲುಬೆಯ ಹಾದಿ ಎನ್ನುವರು.
ಧಾರ್ವಿುಕವಾಗಿ ಮಹತ್ವ ಪಡೆದ ಈ ಶುಭ ಶುಕ್ರವಾರ ಕೇವಲ ದುಃಖದ ದಿನವಲ್ಲ. ಇದು ಸಮಸ್ತ ಮಾನವ ಜೀವನಕ್ಕೆ ಹೊಸ ಭರವಸೆ, ಹೊಸ ವಿಶ್ವಾಸ, ಹೊಸ ಆಯಾಮವನ್ನು ನೀಡುವ ದಿನ. ಯೇಸುವಿನ ತ್ಯಾಗ ನಮಗೆ ಒಳ್ಳೆಯ ಜೀವನ ನಡೆಸಲು ಪ್ರೇರಣೆ. ಇಂದು ಯೇಸುವಿನ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವ ದಿನ. ಕ್ಷಮೆ, ಪ್ರೀತಿ ಮತ್ತು ತ್ಯಾಗದ ಮಹತ್ವ ಸಾರುವ ದಿನ.
ಎಲ್ಲ ಚರ್ಚ್​ಗಳಲ್ಲಿ ಇಂದು ವಿಶೇಷ ಪ್ರಾರ್ಥನೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಗುರುಗಳು ಮಾರ್ಗದರ್ಶನ ಮಾಡುತ್ತಾರೆ. ಯೇಸು ಜೀವಂತವಾಗಿರುವಾಗ ತನ್ನ ಸಾವು ಮತ್ತು ಮೂರನೇ ದಿನ ಪುನರುತ್ಥಾನದ ಬಗ್ಗೆ ಶಿಷ್ಯರಿಗೆ ದೃಷ್ಟಾಂತಗಳ ಮೂಲಕ ತಿಳಿಸಿದ್ದರು. ಈಸ್ಟರ್ ದಿವಸ ಅವರು ಮರಣ ಗೆದ್ದು ಎದ್ದು ಬಂದು ಶಿಷ್ಯರಿಗೆ ದರ್ಶನ ನೀಡುವರು.
(ಲೇಖಕರು ಶಿಕ್ಷಕರು, ಸಂತೆಕಟ್ಟೆ)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net