ಅದೊಂದು ಕಾಲವಿತ್ತು. ಮೊಬೈಲ್ ಒತ್ತಟ್ಟಿಗಿರಲಿ, ಸ್ಥಿರ ದೂರವಾಣಿಯೇ ಇರಲಿಲ್ಲ. ಹಾಗಿದ್ದರೆ ಆಗ ಜಗತ್ತು ಇರಲಿಲ್ಲವೇ? ಎಲ್ಲ ಕೆಲಸಗಳು ನಡೆಯುತ್ತಿರಲಿಲ್ಲವೇ? ಎಲ್ಲವೂ ಇತ್ತು. ಎಲ್ಲವೂ ಈಗಿನಷ್ಟೇ ಸುಲಭವಾಗಿ ನಡೆಯುತ್ತಿತ್ತು. ಫೋನ್, ಮೊಬೈಲ್ ಇಲ್ಲದೇ ಇದ್ದಾಗಲೇ ಮಾನವೀಯ ಸಂಬಂಧಗಳು ಹೆಚ್ಚು ಹತ್ತಿರವಾಗಿದ್ದವು. ಪ್ರಕೃತಿ ಜತೆ ಒಡನಾಟವಿತ್ತು. ಕಾಡು ಮೇಡು ಸುತ್ತುವ ಪರಿಪಾಠವಿತ್ತು. ಈಗ ಅದೆಲ್ಲವನ್ನೂ ಮೊಬೈಲ್ನಲ್ಲೇ ನೋಡುವಂತಾಗಿದೆ. ಪತ್ರ ಬರೆಯುವ ಸೃಜನಶೀಲತೆ ಎಲ್ಲವೂ ಇತ್ತು. ವಿಷಯದ ಅರಿವಿನ ಕೊರತೆ ಆದಾಗ ಗುರುಗಳ ಇಲ್ಲವೇ ತಿಳಿದವರ ಬಳಿ ಹೋಗಿ ಕೇಳಿ ತಿಳಿಯುವ ಸಂಪ್ರದಾಯವಿತ್ತು. ಆದರೆ ಈಗ ಹಾಗಲ್ಲ. ಏನೇ ಬೇಕಿದ್ದರೂ ಗೂಗಲ್, ಈಗಂತೂ ಎಐ. ಇದರಿಂದ ಮನುಷ್ಯನ ಯೋಚನಾ ಶಕ್ತಿಯೇ ಕುಂದುತ್ತಿದೆ. ಸಂಶೋಧನೆ, ಓದು ಎಲ್ಲದರ ಮೇಲೂ ಪರಿಣಾಮ ಬೀರುತ್ತಿದೆ. ತಂತ್ರಜ್ಞಾನ ಬೇಕು. ಆದರೆ ಅದು ನಮ್ಮ ಬೌದ್ಧಿಕಮಟ್ಟವನ್ನು ಕಸಿಯಬಾರದು, ಮಾನವ ಪ್ರಯತ್ನವೂ ಇರಲೇಬೇಕು.