ಕನಸು ನನಸು

Dream
Dream
Published on
ಪ್ರತಿಯೊಬ್ಬ ಮಾನವನ ಜೀವನದಲ್ಲಿಯೂ ಕನಸುಗಳು ಹುಟ್ಟುತ್ತವೆ. ಒಂದು ನಿಟ್ಟಿನಲ್ಲಿ ನೋಡಿದರೆ, ಕನಸಿಲ್ಲದ ಜೀವನ ಬರಡು ಭೂಮಿಯಂತೆ. ಕನಸುಗಳು ಜೀವನಕ್ಕೆ ಗುರಿ ನೀಡುತ್ತವೆ, ಉತ್ಸಾಹ ತುಂಬುತ್ತವೆ, ಮುಂದುವರಿಯುವ ಶಕ್ತಿ ನೀಡುತ್ತವೆ. ಆದರೆ ಕನಸು ಕಾಣುವುದೇ ಸಾಕಾಗುವುದಿಲ್ಲ; ಅದನ್ನು ನಿಜಗೊಳಿಸಲು ಶಕ್ತಿ, ಸಹನೆ ಮತ್ತು ಧೈರ್ಯ ಅಗತ್ಯ.
ಇಲ್ಲಿ ಕನಸು ಎಂದರೆ ಕೇವಲ ಕಲ್ಪನೆ ಅಲ್ಲ, ಏನಾದರೂ ಸಾಧಿಸಬೇಕು ಎಂಬ ಉತ್ಕಟ ಹಂಬಲ. ಕನಸನ್ನು ಸಾಕಾರಗೊಳಿಸಲು ಮೊದಲು ಸ್ಪಷ್ಟ ಗುರಿ ಇರಬೇಕು. ನಮ್ಮ ಗುರಿಯೇನು? ಅದರ ಸ್ವರೂಪವೇನು? ಅದರಲ್ಲಿರುವ ಅಡೆತಡೆಗಳು ಮತ್ತು ಅವಕಾಶಗಳು ಯಾವುವು? ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಇದ್ದಾಗ ಮಾತ್ರ ನಮ್ಮ ಕನಸುಗಳಿಗೆ ದಿಕ್ಕು ಸಿಗುತ್ತದೆ. ಗುರಿಯ ಸ್ಪಷ್ಟತೆ ಇಲ್ಲದೆ ಪ್ರಯತ್ನವು ಫಲವತ್ತಾಗುವುದಿಲ್ಲ. ಸಾಧನೆಯ ಪಥ ಯಾವಾಗಲೂ ಸುಲಭವಾಗಿರುವುದಿಲ್ಲ. ಯಶಸ್ಸಿನ ದಾರಿಯಲ್ಲಿ ಅನೇಕ ಅಡೆತಡೆಗಳು, ನಿರಾಸೆಗಳು, ವೈಫಲ್ಯಗಳು ಎದುರಾಗುತ್ತವೆ. ಆದರೆ ಅವುಗಳನ್ನು ಹಿಂಜರಿಕೆಯ ಕಾರಣವನ್ನಾಗಿ ಕಾಣಬಾರದು. ವಿಫಲತೆ ಎಂದರೆ ಸೋಲು ಅಲ್ಲ; ಅದು ಮತ್ತೊಮ್ಮೆ ಉತ್ತಮವಾಗಿ ಪ್ರಯತ್ನಿಸಲು ಸಿಗುವ ಅವಕಾಶ. ಹೋರಾಟವನ್ನು ಆನಂದಿಸುವ ಮನೋಭಾವ ಹೊಂದಿದವನೇ ನಿಜವಾದ ಸಾಧಕ. ಕಷ್ಟಗಳು ಬಂದಾಗ ಕುಗ್ಗದೆ ನಗುತ ನಿಲ್ಲುವವನಿಗೇ ಅಂತಿಮ ಜಯ ಸಿಗುತ್ತದೆ.
ಜೀವನದಲ್ಲಿ ಶಕ್ತಿ ಅತ್ಯವಶ್ಯ. ಆದರೆ ನಾವೇ ನಮ್ಮೊಳಗಿನ ಶಕ್ತಿಯನ್ನು ಅರಿಯದೆ ದುರ್ಬಲರೆಂದು ತಪ್ಪಾಗಿ ಆಲೋಚಿಸುತ್ತಿದ್ದೇವೆ. ಸ್ವಾಮಿ ವಿವೇಕಾನಂದರು ಹೇಳಿದಂತೆ, ದುರ್ಬಲತೆಯೇ ಲೋಕದ ಎಲ್ಲಾ ದುಃಖಗಳ ಮೂಲ. ನಮ್ಮೊಳಗೆ ಅನಂತ ಶಕ್ತಿ ಇದೆ, ಆದರೆ ನಾವು ಅದನ್ನು ಅರಿಯದೆ ನಾನು ದುರ್ಬಲ ಎಂದು ಅಳುತ್ತೇವೆ. ಕಣ್ಣು ಮುಚ್ಚಿಕೊಂಡು ಇಲ್ಲಿ ಕತ್ತಲೆಯಿದೆ ಎಂದು ಹೇಳುವಂತೆಯೇ ಇದು. ಕಣ್ಣು ತೆರೆಯಬೇಕು ಅಂದರೆ, ಆತ್ಮಶಕ್ತಿಯನ್ನು ಅರಿತು, ಅದನ್ನು ಕ್ರಿಯೆಯಲ್ಲಿ ಪರಿವರ್ತಿಸಬೇಕು. ಕನಸನ್ನು ಸಾಧನೆಗೊಳಿಸಲು ಸಹನೆ ಮತ್ತು ನಿರಂತರ ಪ್ರಯತ್ನ ಅಗತ್ಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net