ಮುಗ್ಧ ಮನಸ್ಸಿಗೆ ಉತ್ಸಾಹ ತುಂಬಲು ಬೇಕು ಪ್ರೋತ್ಸಾಹ

enthusiasm
enthusiasm
Published on

‘ಇವತ್ತೇ ಕೊನೆ. ಇಂದೆಂದೂ ಅಲ್ಲಿಗೆ ಹೋಗಲಾರೆ. ಬೇರೆ ಎಲ್ಲಾದರೂ ಸೇರಿಸಿ, ಆದರೆ ಆ ಸ್ಥಳಕ್ಕೆ ಮಾತ್ರ ನಾನು ಹೋಗುವುದಿಲ್ಲ. ನನ್ನ ಮನಸ್ಸಿಗೆ ಘಾಸಿ ಮಾಡಿದ ಆ ಸ್ಥಳವೆಂದರೆ ನನಗೆ ಮೈಯೆಲ್ಲಾ ಉರಿ. ಅದೇನೋ ಆಕ್ರೋಶ, ಕೋಪ ಬರುತ್ತದೆ. ದಯವಿಟ್ಟು ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ. ಈ ವಿಷಯದಲ್ಲಿ ಬಲವಂತ ಮಾಡಬೇಡಿ. ಇದು ನನ್ನ ಮನಸ್ಸಿಗೆ ವಿರುದ್ಧವಾದ ನಡೆ. ಅಲ್ಲಿ ನನಗಾದ ಅವಮಾನ, ಅಸಮಾಧಾನ ನನ್ನ ಜೀವ ಹಿಂಡುತ್ತಿದೆ. ಪ್ಲೀಸ್ ಬಿಟ್ಟುಬಿಡಿ...’

ಇವು 6ನೇ ತರಗತಿಯ ಹುಡುಗನೊಬ್ಬ ಆಡಿದ ಮಾತುಗಳು. ಈ ಹುಡುಗನ ಮಾತಲ್ಲಿ ಇಷ್ಟೊಂದು ಆಕ್ರೋಶ, ನಿರಾಕರಣೆ ಮತ್ತು ಹತಾಶೆಯ ಮಾತುಗಳು ಬರಲು ಕಾರಣವಾದರೂ ಏನು ಎಂಬುದು ಎಲ್ಲರ ಮನಸ್ಸಿನಲ್ಲಿ ಉದ್ಭವಿಸುವ ಪ್ರಶ್ನೆ. ನನಗೂ ಈ ಪ್ರಶ್ನೆ ಎದುರಾಗಿದ್ದು ನಿಜ. ಸಹಜವಾಗಿಯೇ ಎಲ್ಲರಿಗೂ ಉದ್ಭವಿಸಬೇಕಾದ ಪ್ರಶ್ನೆಯೇ ಇದು. ಇದರ ಉತ್ತರ ಬೆನ್ನತ್ತಿ ಹೊರಟಾಗ ಬೆಳಕಿಗೆ ಬಂದ ಸಂಗತಿ ಸಾಮಾನ್ಯ ಎನಿಸಿದರೂ ನಿರ್ಲಕ್ಷಿಸುವಂಥದ್ದಲ್ಲ. ಇದು ಮೇಲ್ನೋಟಕ್ಕೆ ಸಣ್ಣ ವಿಷಯ ಎನಿಸಬಹುದು, ಆದರೆ ಮಕ್ಕಳ ಭವಿಷ್ಯದ ದೃಷ್ಟಿಕೋನದಿಂದ ನೋಡಿದಾಗ ಇದು ಮಹತ್ತರವಾದದ್ದೇ. ಹಾಗಿದ್ದರೆ ಏನಿದರ ಹಿನ್ನೆಲೆ?

ಮಕ್ಕಳಿಗೀಗ ರಜೆ ಸಮಯ. ವಾರ್ಷಿಕ ಪರೀಕ್ಷೆ ಮುಗಿದು ಫಲಿತಾಂಶವೂ ಬಂದಾಗಿದೆ. ಮನೆಯಲ್ಲಿದ್ದರೆ ಬರೀ ಮೊಬೈಲ್, ಟಿವಿ ನೋಡುತ್ತಾ ಕಾಲಹರಣ ಮಾಡುತ್ತಾರೆ ಎಂದು ಪಾಲಕರು, ಅದರಲ್ಲೂ ವಿಶೇಷವಾಗಿ ಉದ್ಯೋಗಸ್ಥ ಪಾಲಕರು ತಮ್ಮ ಮಕ್ಕಳನ್ನು ಬೇಸಿಗೆ ಶಿಬಿರಗಳಿಗೆ ಕಳಿಸುವುದು ಈಗಿನ ಟ್ರೆಂಡ್. ಇದು ಒಳ್ಳೆಯದು ಕೂಡ. ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಇಂದಿನ ಮಕ್ಕಳು ಮೊಬೈಲ್ ನಿರ್ವಹಣೆಯಲ್ಲಿ ಎತ್ತಿದ ಕೈ. ಆದರೆ ಇದುವೇ ಒಂದು ಗೀಳಾಗಬಾರದು. ಅದಕ್ಕೆ ಅವರಲ್ಲಿನ ಸುಪ್ತ ಪ್ರತಿಭೆಗಳು ಹೊರಬರಬೇಕು. ಅದಕ್ಕೆ ಸೃಜನಶೀಲತೆಯ ಸ್ಪರ್ಶ ನೀಡಿದಾಗ ಪ್ರತಿಭೆಗಳು ಹೊರಹೊಮ್ಮುತ್ತವೆ. ಅದರಿಂದ ಸಮಾಜಕ್ಕೆ ಅನುಕೂಲವಾಗುತ್ತದೆ. ಆದರೆ ನಾನೀಗ ಹೇಳಲು ಹೊರಟಿರುವ ಪ್ರಕರಣದಲ್ಲಿ ಪ್ರಜ್ವಲಿಸಬೇಕಿದ್ದ ಪ್ರತಿಭೆಯೊಂದು ಕಮರುವ ಹಂತಕ್ಕೆ ಬಂದಾಗ, ಸಕಾಲಕ್ಕೆ ನನ್ನ ಗಮನಕ್ಕೆ ವಿಷಯ ಬಂದು ಆ ಮಗು ಪುಟಿದೇಳುವಂತಾಗಿದ್ದು ಅಚ್ಚರಿಯೇ ಸರಿ.

ಈ ಹುಡುಗನೂ ಎಲ್ಲರಂತೆ ಬೇಸಿಗೆ ಶಿಬಿರ ಸೇರಿದ್ದ. ದಿನವೂ ಬೆಳಗ್ಗೆಯಿಂದ ಸಂಜೆವರೆಗೆ ನಾನಾ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದ. ಶಿಬಿರದ ಆಯೋಜಕರು ಹೇಳಿದ ಎಲ್ಲಾ ಚಟುವಟಿಕೆಗಳನ್ನು ಮಾಡುತ್ತಿದ್ದ. ಅದರ ಭಾಗವಾಗಿ ಅವರು ಒಮ್ಮೆ ‘ಮಕ್ಕಳ ಸಂತೆ’ ಆಯೋಜಿಸಿದರು. ಎಲ್ಲರೂ ತಮಗೆ ಅನುಕೂಲವಿರುವ ಹಣ್ಣು, ತರಕಾರಿ ಅಥವಾ ಐಚ್ಛಿಕ ವಸ್ತುಗಳನ್ನು ತಂದು ಕಟ್ಟೆಯ ಮೇಲೆ ಮಾರಲು ಇಡಬೇಕು. ಇದರಿಂದ ಸಂತೆ ಹಾಗೂ ವ್ಯಾಪಾರದ ಪರಿಕಲ್ಪನೆ ಮೂಡುತ್ತದೆ ಎಂದು ತಿಳಿಸಿದರು. ಇದಕ್ಕೆ ಈ ಹುಡುಗನೂ ಒಪ್ಪಿ ‘ಚುರುಮುರಿ’ (ಕಡ್ಲೆಪುರಿ) ಮಾರಲು ನಿರ್ಣಯಿಸಿ, ಒಂದು ಚೀಲದಲ್ಲಿ ಚುರುಮುರಿ ತಂದು ಇಟ್ಟ.

ಶಿಬಿರದಲ್ಲಿನ ಸಂತೆ ನೋಡಲು ಬಂದ ಎಲ್ಲರೂ ತಮಗೆ ತಿಳಿದವರ ಬಳಿ ಹೋಗಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು. ಆದರೆ ಅದೇಕೋ ಏನೋ, ಈ ಹುಡುಗನ ಹತ್ತಿರ ಯಾರೊಬ್ಬರೂ ಚುರುಮುರಿ ಖರೀದಿಸಲಿಲ್ಲ. ಪಕ್ಕದ ಹುಡುಗನ ಹಣ್ಣುಗಳನ್ನು ಖರೀದಿಸಿದರು. ಇದರಿಂದ ಈ ಹುಡುಗ ತುಂಬಾ ನೊಂದುಕೊಂಡ. ಆತನಿಗೆ ಗೊತ್ತಿಲ್ಲದೆಯೇ ಕಣ್ಣುಗಳಲ್ಲಿ ನೀರು ಜಿನುಗಿತು. ಕೂಡಲೇ ಅಲ್ಲಿಂದ ಕಾಲ್ಕಿತ್ತ ಹುಡುಗ ಸೀದಾ ಮನೆಗೆ ಓಡೋಡಿ ಬಂದು ಕಣ್ಣೀರು ಸುರಿಸಿದ. ಸಂಜೆ ಮನೆಗೆ ಬಂದ ಪಾಲಕರು, ‘ಯಾಕೆ ಇವತ್ತು ಶಿಬಿರ ಬೇಗ ಮುಗಿಯಿತಾ?’ ಎಂದಾಗ, ತಂದೆ-ತಾಯಿಯನ್ನು ಅಪ್ಪಿಕೊಂಡು ‘ದಯವಿಟ್ಟು ನನಗೆ ಶಿಬಿರ ಬೇಡ. ನನಗೆ ಅಲ್ಲಿ ಆದ ಅವಮಾನ ಭಾರಿ ಆಘಾತ ನೀಡಿದೆ’ ಎಂದ. ಇದರಿಂದ ದಿಗಿಲುಗೊಂಡ ಪಾಲಕರು, ‘ದುಡ್ಡು ಕಟ್ಟಿದ್ದೇವೆ ಮಗು ಹಾಗೆನ್ನಬೇಡ, ಯಾಕೆ ಏನಾಯಿತು?’ ಎಂದು ಕೇಳಿ ತಿಳಿದು, ಆತ ಖಿನ್ನತೆಗೆ ಒಳಗಾಗುವ ಮುನ್ನವೇ ನನ್ನ ಬಳಿ ಕರೆದುಕೊಂಡು ಬಂದರು.

ಆ ಹುಡುಗ ಪೇಂಟಿಂಗ್‌ನಲ್ಲಿ ಎಕ್ಸ್‌ಪರ್ಟ್ ಇರುವ ವಿಷಯ ತಿಳಿಯಿತು. ‘ನೀನು ನಾಳೆ ಶಿಬಿರಕ್ಕೆ ನಿನ್ನ ಪೇಂಟಿಂಗ್ ತೆಗೆದುಕೊಂಡು ಹೋಗು. ನಾನು ಅಲ್ಲಿಗೆ ಬಂದು ಎಲ್ಲರ ಸಮಕ್ಷಮವೇ ಖರೀದಿಸುವೆ’ ಎಂದು ಹೇಳಿ ಆತನನ್ನು ಶಿಬಿರಕ್ಕೆ ಸಜ್ಜುಗೊಳಿಸಿದೆ. ಅದರಂತೆ ಮರುದಿನ ಹೋಗಿ ಎಲ್ಲರೆದುರು ಆತನ ಪೇಂಟಿಂಗ್ ಖರೀದಿಸಿ, ಅದನ್ನು ಎಲ್ಲರೂ ಮೆಚ್ಚುವಂತೆ ತೋರಿಸಿದೆ. ಆಗ ಆ ಹುಡುಗನಿಗಾದ ಸಂತಸಕ್ಕೆ ಲೆಕ್ಕವೇ ಇರಲಿಲ್ಲ.

ಇದರಿಂದ ನಾವು ನೀವೆಲ್ಲರೂ ತಪ್ಪದೇ ಅರಿಯಬೇಕಾದ ವಿಷಯವೆಂದರೆ, ಮಕ್ಕಳ ಮನಸ್ಸು ಮುಗ್ಧ ಮತ್ತು ಕೋಮಲವಾಗಿರುತ್ತದೆ. ಎಳೆ ವಯಸ್ಸಿನಲ್ಲಿ ಅದಕ್ಕೆ ಘಾಸಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮತ್ತು ಕರ್ತವ್ಯ ನಮ್ಮದು. ಅವರಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಮ್ಮಿಂದಾಗಬೇಕು. ಮೆಚ್ಚುಗೆಯ ಮಾತುಗಳನ್ನಾಡುವ ಮೂಲಕ ಅವರನ್ನು ಹುರಿದುಂಬಿಸಬೇಕು. ಅಂದಾಗ ಮಾತ್ರ ಇಂತಹ ಸನ್ನಿವೇಶಗಳು ಸೃಷ್ಟಿಯಾಗವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net