

ವಿದ್ಯಾರ್ಥಿಗಳಿಗೆ ಆಲಸ್ಯವೇ ಶತ್ರು. ಏಕಾಗ್ರತೆಯಿಲ್ಲದಿದ್ದರೆ ಮರೆವು. ಇದನ್ನು ಮೀರಿ ನಿಲ್ಲುವ ಪ್ರಯತ್ನ ಮಾಡಬೇಕು. ಒಂದೇ ಪ್ರಯತ್ನದಲ್ಲಿ ಯಶಸ್ಸು ಸಿಗುವ ಸಂಭವ ಕಡಿಮೆ. ಮರಳಿ ಯತ್ನವ ಮಾಡುವುದೇ ದಾರಿ. ಆರೋಗ್ಯದಲ್ಲಿ ಏರಿಳಿತ ಸಂಭವವಿರುತ್ತದೆ. ಮಾನಸಿಕ ಚಂಚಲತೆ ಈ ರಾಶಿಯವರಿಗೆ ತುಸು ಹೆಚ್ಚು ಬಾಧಿಸುತ್ತದೆ. ವೃತ್ತಿಜೀವನದಲ್ಲಿ ಸಂಕಷ್ಟಗಳು ಎದುರಾಗಬಹುದು. ವ್ಯವಹಾರಸ್ಥರಿಗೆ ನಷ್ಟದ ಅಪಾಯ ಹೆಚ್ಚಿರುತ್ತದೆ, ಹುಷಾರು. ಪ್ರಯಾಣ ಸಾಧ್ಯತೆ, ಶತ್ರುಬಾಧೆಗಳ ಆತಂಕ. ಒಟ್ಟಾರೆ ಸುಖದುಃಖಗಳು ಸಮಸಮವಾಗಿರುತ್ತವೆ. ಕುಟುಂಬದಲ್ಲಿ ಕ್ಲೇಶ, ವ್ಯಾಧಿ ಮತ್ತು ಚೋರಭಯವಿರುತ್ತದೆ ಗಮನವಿರಲಿ. ಹಿರಿಯರೊಡನೆ ವಿರಸ ಸಂಭವ. ಗೃಹ, ವಾಹನದ ಬಗ್ಗೆ ಖರ್ಚು ಹೆಚ್ಚಾಗಲಿದೆ. ಮೇಲಧಿಕಾರಿಗಳ ಕಿರುಕುಳ. ಮುಂಬಡ್ತಿಯ ಸ್ಥಗಿತ. ಅನೇಕ ವಿಧದ ಖರ್ಚುಗಳು ಬರಲಿವೆ.
ಪರಿಹಾರ: ಇಷ್ಟದೇವತಾ ಆರಾಧನೆ
ವೃಷಭ: ರಾಶ್ಯಾಧಿಪತಿ: ಶುಕ್ರ
ವಿದ್ಯಾರ್ಥಿಗಳಿಗೆ ತುಸು ಕಷ್ಟ ಜಾಸ್ತಿ. ಆರೋಗ್ಯದ ಕಡೆ ಗಮನವಿರಲಿ. ಈ ರಾಶಿಯವರಿಗೆ ವ್ಯಾಕುಲತೆ, ಖಿನ್ನತೆಯ, ಮನೋಚಂಚಲತೆ ಹೆಚ್ಚಿಸುವ ಸಂದರ್ಭಗಳು ಹೆಚ್ಚು ಎದುರಾಗುತ್ತವೆ. ಅದನ್ನು ಮೀರಿ ನಿಲ್ಲುವ ಗಟ್ಟಿತನವಿರಲಿ. ವೃತ್ತಿ ಮತ್ತು ವ್ಯವಹಾರಗಳಲ್ಲಿ ನಷ್ಟವಾಗುವ ಸಂಭವವಿರುತ್ತದೆ. ಹಾಗಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರಿಕೆಯಿಂದ ಮುಂದಡಿಯಿಡಿ. ಪ್ರಯಾಣ ಮಾಡುವಾಗ ಮುನ್ನೆಚ್ಚರಿಕೆಯಿಂದಿರಿ. ವಾಹನ ಚಲಾಯಿಸುವಾಗ ಅತಿ ವೇಗ ಬೇಡ. ತುಂಬಾ ಸಾಹಸದ ನಿರ್ಧಾರಗಳು ದುಡುಕುತನವೂ ಆಗಬಹುದು. ಒಡಹುಟ್ಟಿದವರೊಂದಿಗೆ ವಿರಸ ಬೇಡ. ಗೃಹಸಂಬಂಧಿ ತೊಂದರೆಗಳು ಬರಬಹುದು. ಹಿತಶತ್ರುಗಳು ನಿಮಗೆ ಸಿಗಬೇಕಾದ ನೆರವು ತಪ್ಪಿಸಬಹುದು, ಅವರ ಬಗ್ಗೆ ಎಚ್ಚರಿಕೆಯಿಂದಿರಿ.
ಪರಿಹಾರ: 12 ಗುರುವಾರ ಗುರುಗ್ರಹಪೂಜೆ
ಮಿಥುನ: ರಾಶ್ಯಾಧಿಪತಿ: ಬುಧ
ವಿದ್ಯಾರ್ಥಿಗಳಿಗೆ ಶುಭ ಫಲಗಳು ಹೆಚ್ಚಿವೆ. ಪ್ರೀತಿಪಾತ್ರರಾದವರು ಸಹಾಯಹಸ್ತ ನೀಡುವರು. ವಿದ್ಯಾರ್ಥಿಗಳಿಗೆ ಈ ವರ್ಷ ಪ್ರತಿಸ್ಪರ್ಧಿಗಳು ಹೆಚ್ಚು ಎದುರಾಗುತ್ತಾರೆ. ಆರೋಗ್ಯ ಉತ್ತಮವಾಗಿದ್ದರೂ, ಅನಾರೋಗ್ಯದ ನಾಟಕ ಮಾಡುವ ಪ್ರವೃತ್ತಿ ಹೆಚ್ಚಬಹುದು. ಕೀಳರಿಮೆ ಹೆಚ್ಚಿನ ಅವಕಾಶಗಳನ್ನು ತಪ್ಪಿಸಬಹುದು. ಅದರಿಂದ ಹೊರಬರುವ ಪ್ರಯತ್ನ ಮಾಡಬೇಕು. ಪರ ನಿಂದನೆಗೆ ಎದೆಗುಂದಬೇಡಿ. ವೃತ್ತಿ ಮತ್ತು ವ್ಯವಹಾರಗಳ ಬದಲಾವಣೆಯ ಕಾಲ ಬರಬಹುದು. ಸುಖದುಃಖ ಮಿಶ್ರಫಲ. ಪ್ರವಾಸಕ್ಕಾಗಿ ಧನವ್ಯಯದ ವಿಚಾರದಲ್ಲಿ ಲಕ್ಷ್ಯವಿರಲಿ. ನೆರೆಹೊರೆಯವರೊಂದಿಗೆ ಜಗಳ. ಪದೇ ಪದೆ ಮಾಡತಕ್ಕ ಖರ್ಚುವೆಚ್ಚಗಳು ಹೆಚ್ಚಬಹುದು. ಎಚ್ಚರವಿರಲಿ.
ಪರಿಹಾರ:ವಿದ್ಯೆಗಾಗಿ ಶಿವಾರಾಧನೆ, ವ್ಯವಹಾರಕ್ಕಾಗಿ ವಿಷ್ಣು ಆರಾಧನೆ
ಕಟಕ: ರಾಶ್ಯಾಧಿಪತಿ: ಚಂದ್ರ
ವಿದ್ಯಾರ್ಥಿಗಳಿಗೆ ಪ್ರಗತಿಪರ ಕಾಲ. ವಿದ್ಯಾಭಿವೃದ್ಧಿಯಾಗುತ್ತದೆ. ಸಮಯ ಪಾಲನೆಯ ಕಡೆ ಗಮನವಿರಲಿ. ಅಹಂಭಾವದಿಂದ ತೊಂದರೆ ಎದುರಿಸಬೇಕಾದೀತು. ಆರೋಗ್ಯದ ಕಡೆ ಹೆಚ್ಚಿನ ಗಮನವಿರಲಿ. ಕಲಹ ಪ್ರವೃತ್ತಿಯಿಂದ ದೂರವಿರಿ. ವೃತ್ತಿಜೀವನದಲ್ಲಿ, ವ್ಯವಹಾರಗಳಲ್ಲಿ ಸುಖದುಃಖ ಸರಿ ಪ್ರಮಾಣದಲ್ಲಿರುತ್ತದೆ. ಸಮಯೋಚಿತ ವ್ಯವಹಾರ ಉತ್ತಮ. ದುಷ್ಟರ ಸಹವಾಸ ಬೇಡ. ಮಾನಸಿಕ ಕ್ಷೋಭೆ ಎದುರಾಗಬಹುದು. ಪ್ರವಾಸ, ಪ್ರಯಾಣದ ಸಂದರ್ಭಗಳಲ್ಲಿ ಜಾಗರೂಕತೆ ಇರಲಿ. ಮುಂಗೋಪದಿಂದ ಆಪ್ತರೂ ದೂರವಾಗಬಹುದು. ಸಮಾಧಾನಚಿತ್ತವಿರಲಿ.
ಪರಿಹಾರ:ಇಷ್ಟದೇವತಾ ಆರಾಧನೆ.
ಸಿಂಹ: ರಾಶ್ಯಾಧಿಪತಿ: ರವಿ
ವಿದ್ಯಾರ್ಥಿಗಳಿಗೆ ಉತ್ತಮಕಾಲ. ವಿದ್ಯಾರ್ಥಿ ಜೀವನ ಸುಖಮಯವಾಗಿರುತ್ತದೆ. ಜ್ಞಾನಾರ್ಜನೆಗೆ ಉತ್ತಮ ವ್ಯವಸ್ಥೆ. ಜ್ಞಾನ ವೃದ್ಧಿ. ಸಂತೋಷ. ಕಲಾವಿದರಿಗೆ ಹೆಚ್ಚಿನ ಯಶಸ್ಸು ಸಿಗುತ್ತದೆ. ಕ್ರೀಡಾಪಟುಗಳಿಗೆ ಶುಭಫಲ ಹೆಚ್ಚಿದೆ. ಆರೋಗ್ಯದ ಕಡೆ ಗಮನವಿರಲಿ. ಪ್ರಯಾಣದ ವೇಳೆ ಎಚ್ಚರಿಕೆಯಿರಲಿ. ಉದ್ಯೋಗಸ್ಥರಿಗೆ ಉತ್ತಮ ಪ್ರಗತಿ. ಉನ್ನತ ಸ್ಥಾನಮಾನಗಳು ದೊರಕುವ ಸಂಭವ ಹೆಚ್ಚು. ಒಟ್ಟಿನಲ್ಲಿ ಜೀವನದಲ್ಲಿ ಏರುಗತಿಯ ಅವಕಾಶಗಳು ಹೆಚ್ಚು. ಕೆಲಸಕಾರ್ಯಗಳಲ್ಲಿ ಮುನ್ನುಗ್ಗುವ ಪ್ರವೃತ್ತಿಯಿಂದ ಹೆಚ್ಚಿನ ಯಶಸ್ಸು. ಆದರೆ, ಅಹಂಕಾರಿಗಳು ಎಡವಿಬೀಳುವ ಅಪಾಯ ಜಾಸ್ತಿ. ವಿಧೇಯತೆ ಇರಲಿ.
ಪರಿಹಾರ: ವಿಷ್ಣು ಆರಾಧನೆ.
ಕನ್ಯಾ: ರಾಶ್ಯಾಧಿಪತಿ: ಬುಧ
ವಿದ್ಯಾರ್ಥಿ ಜೀವನ ಉತ್ತಮವಾಗಿರುತ್ತದೆ. ಆದರೆ, ಸ್ನೇಹಿತರ ಸಹವಾಸದಿಂದ ವಿದ್ಯೆ ನಿರ್ಲಕ್ಷ್ಯ ಬೇಡ. ಜೀವದ ಗೆಳೆಯರು ಎಂದು ಭಾವಿಸಿದ್ದವರೇ ಶತ್ರುಗಳಂತೆ ವರ್ತಿಸಬಹುದು. ಎಚ್ಚರವಿರಲಿ. ಪರಿಸರ ಮತ್ತು ವಾತಾವರಣ ವಿರುದ್ಧವಾಗಿರುತ್ತದೆ. ಉತ್ತಮ ಆರೋಗ್ಯವಿದ್ದರೂ. ವಾತಾವರಣ ದೇಹ ಪ್ರಕೃತಿಯನ್ನು ಹದಗೆಡಿಸಬಹುದು. ಜಾಗರೂಕತೆ ಇರಲಿ. ವ್ಯವಹಾರದಲ್ಲಿ ಅನುಚಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಉದ್ಯೋಗಸ್ಥರಿಗೆ ಏರುಹಾದಿಯಿದ್ದರೂ, ಎಚ್ಚರಿಕೆ ತಪು್ಪವುದು ಬೇಡ. ಪ್ರಯಾಣಯೋಗವಿದೆ. ವಿದೇಶ ಪ್ರವಾಸ ಕೈಗೂಡಬಹುದು.
ಪರಿಹಾರ: ತ್ರಿಮೂರ್ತಿಗಳ ಆರಾಧನೆ.
ತುಲಾ: ರಾಶ್ಯಾಧಿಪತಿ: ಶುಕ್ರ
ವಿದ್ಯಾರ್ಥಿಗಳಿಗೆ ಅತ್ಯುನ್ನತ ಕಾಲ ಇದು. ವಿಜ್ಞಾನ ವಿದ್ಯಾರ್ಥಿಗಳಿಗಂತೂ ಅತ್ಯಂತ ಪ್ರಭಾವಿಕ ಕಾಲವಿದು. ಈ ಕಾಲದಲ್ಲಿ ಜ್ಞಾನವೃದ್ಧಿ ಮನೋವಿಕಾಸವಾಗುತ್ತದೆ. ಆರೋಗ್ಯಸ್ಥಿತಿ ಮಧ್ಯಮವಾಗಿದ್ದು. ಪದೇ ಪದೆ ಅನಾರೋಗ್ಯ ಕಾಡುವ ಸಂಭವವಿದೆ. ದೈಹಿಕ, ಮಾನಸಿಕ ಆರೋಗ್ಯದ ಕಡೆ ಗಮನವಿರಲಿ. ವೃತ್ತಿಜೀವನದಲ್ಲಿ ಕಷ್ಟಗಳು ಹೆಚ್ಚಬಹುದು. ವ್ಯವಹಾರದಲ್ಲೂ ಏರುಪೇರು ಸಂಭವ ಇರುತ್ತದೆ. ಒತ್ತಡದಿಂದ ವೃತ್ತಿ ಬದಲಾವಣೆ ಸಂದರ್ಭ ಬರಬಹುದು. ದೇವತಾರಾಧನೆಯಿಂದ ಮನಸ್ಸಿಗೆ ನೆಮ್ಮದಿ.
ಪರಿಹಾರ: ಶನಿಗ್ರಹ ಆರಾಧನೆ.
ವೃಶ್ಚಿಕ: ರಾಶ್ಯಾಧಿಪತಿ: ಕುಜ
ವಿದ್ಯಾರ್ಥಿಗಳಿಗೆ ಮಧ್ಯಮ ಕಾಲ. ಪ್ರಾಯೋಗಿಕ ವಿದ್ಯಾರ್ಥಿಗಳಿಗೆ ಉತ್ತಮ. ಸಾಗರೋತ್ತರ ವಿದ್ಯಾಭ್ಯಾಸಕ್ಕೆ ಉತ್ತಮ ಕಾಲ. ಆರೋಗ್ಯದಲ್ಲಿ ಏರುಪೇರಾಗಬಹುದು. ಶಾರೀರಿಕ ಸಮಸ್ಯೆಗಳಿದ್ದವರು ಉತ್ತಮ ಚಿಕಿತ್ಸೆ ಪಡೆದುಕೊಳ್ಳಿ. ಉದ್ಯೋಗಸ್ಥರಿಗೆ ಉತ್ತಮ ಫಲವಿದೆ. ವೃತ್ತಿ ಜೀವನದಲ್ಲಿ ನೆಮ್ಮದಿ ಇರಲಿದೆ. ಉದ್ಯೋಗಸ್ಥಳದಲ್ಲಿ ಮಾನ್ಯತೆ, ಮುಂಬಡ್ತಿ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಹೆಚ್ಚಿನ ಕೀರ್ತಿಲಾಭ, ಯಶಸ್ಸು ಎದುರಿಗಿದ್ದರೂ, ನೀವು ಅಲ್ಪಸಂತೋಷಿಗಳು. ವ್ಯವಹಾರಸ್ಥರಿಗೆ ಹೆಚ್ಚಿನ ಧನಲಾಭದ ಸಾಧ್ಯತೆ. ನಿಮ್ಮ ಅವಲಂಬಿತರು, ಕುಟುಂಬವರ್ಗಕ್ಕೂ ಸೌಖ್ಯ, ನೆಮ್ಮದಿ ಯಥೇಚ್ಚವಾಗಿರುತ್ತದೆ.
ಪರಿಹಾರ: ಇಷ್ಟದೇವತಾ ಆರಾಧನೆ.
ಧನಸ್ಸು: ರಾಶ್ಯಾಧಿಪತಿ: ಗುರು
ವಿದ್ಯಾರ್ಥಿ ಜೀವನ ಮಧ್ಯಮ. ಬಾಲ್ಯವಿದ್ಯೆ ಉತ್ತಮವಾಗಿದ್ದರೂ ಪ್ರೌಢಶಾಲಾ ವಿದ್ಯಾರ್ಥಿಗಳು ವ್ಯಾಸಂಗದ ಕಡೆ ಏಕಾಗ್ರತೆ ವಹಿಸದಿದ್ದರೆ ತೊಂದರೆ ಎದುರಾಗಬಹುದು. ಆರೋಗ್ಯ ಉತ್ತಮವಾಗಿರುತ್ತದೆ. ಆದರೂ, ಮಾನಸಿಕ ವ್ಯಥೆ ಎದುರಾಗಬಹುದು. ಎಚ್ಚರದಿಂದಿರಿ. ಯಾರ ಬಗ್ಗೆಯೂ ಅತಿಯಾದ ನಂಬಿಕೆ ಬೇಡ. ಬಂಧುಗಳೇ ಶತ್ರುಗಳಂತೆ ವರ್ತಿಸಬಹುದು. ಸದಾ ಸಂಚಾರ ನಿಮ್ಮ ಪ್ರವೃತ್ತಿ. ಉದ್ಯೋಗಸ್ಥರಿಗೆ ಶುಭಫಲಗಳಿವೆ. ಶತ್ರುಗಳ ಬಗ್ಗೆ ಎಚ್ಚರವಿರಲಿ. ಅನಗತ್ಯ ಕಲಹ ಬೇಡ. ವ್ಯವಹಾರಗಳಲ್ಲಿ ಕಾರ್ಯಸಿದ್ಧಿಯ ಯೋಗವಿದ್ದರೂ, ಲಾಭಾಂಶ ಕಡಿನೆ. ಅನುವಂಶಿಕ ಆದಾಯ, ಆಸ್ತಿಪಾಸ್ತಿ ಕೈಗೆ ಬರುವ ಯೋಗವಿದೆ. ಕುಟುಂಬದಲ್ಲಿ ಮಂಗಲಕಾರ್ಯಗಳು ನಡೆಯಬಹುದು.
ಪರಿಹಾರ: ವಿಷ್ಣು ಆರಾಧನೆ.
ಮಕರ: ರಾಶ್ಯಾಧಿಪತಿ: ಶನಿ
ವಿದ್ಯಾರ್ಥಿ ಜೀವನ ಶುಭ. ತಾಂತ್ರಿಕ ವಿದ್ಯೆಯಲ್ಲಿ ಪ್ರಗತಿ. ಅಹಂಕಾರ, ಶೀಘ್ರಕೋಪ ಬೇಡ. ಇಲ್ಲವಾದರೆ ಮಾನಸಿಕ ವ್ಯಸನಕ್ಕೆ ದಾರಿ. ಅನವಶ್ಯಕ ಸಂಚಾರಕ್ಕೆ ಮಿತಿ ಹಾಕಿ. ಪ್ರಾಣಸ್ನೇಹಿತರೊಂದಿಗೆ ವಿರಸದ ಪ್ರಸಂಗ ಎದುರಾಗಬಹುದು. ಆರೋಗ್ಯಸ್ಥಿತಿ ಮಧ್ಯಮವಾಗಿರುತ್ತದೆ. ವೃತ್ತಿ ಜೀವನದಲ್ಲಿ ವ್ಯವಹಾರ ನಷ್ಟದ ಬಗ್ಗೆ ಹುಷಾರಾಗಿರಿ. ದುರ್ಜನರ ಸಹವಾಸದಿಂದ ದುಶ್ಚಟಕ್ಕೆ ಬೀಳುವ ಪ್ರಸಂಗ ಬಂದೀತು ಎಚ್ಚರ. ಗೃಹ ಕಲಹವೂ ಆಗಬಹುದು. ಉನ್ನತ ವ್ಯಾಸಂಗ ಅಥವಾ ವೃತ್ತಿಗಾಗಿ ಪರಸ್ಥಳಕ್ಕೆ ತೆರಳುವ ಅವಕಾಶ ಬರಬಹುದು. ಭಾಗ್ಯೋದಯದ ಕಾಲವೂ ಬರಬಹುದು. ತೀರ್ಥಯಾತ್ರೆ ಮಾಡುವುದು ಉತ್ತಮ.
ಪರಿಹಾರ: ಶಿವಾರಾಧನೆ.
ಕುಂಭ: ರಾಶ್ಯಾಧಿಪತಿ: ಶನಿ
ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಒದಗುತ್ತವೆ. ವಿದ್ಯಾರ್ಥಿ ಜೀವನಮಟ್ಟ ಉತ್ತಮವಾಗಿರುತ್ತದೆ. ಇಷ್ಟಾರ್ಥ ಸಿದ್ಧಿಸುತ್ತದೆ. ಕಲಿತ, ಕಲಿಯುತ್ತಿರುವ ವಿದ್ಯೆಫಲ ಕೊಟ್ಟೀತು. ಆರೋಗ್ಯ, ಕೃತ್ರಿಮ ದೋಷಗಳ ಬಾಧೆಯಿಂದ ನರಳುವಿಕೆ. ಪ್ರಯಾಣದ ವೇಳೆ ಎಚ್ಚರವಿರಲಿ. ಅನಗತ್ಯ ಮಾನಸಿಕ ಕ್ಲೇಷ ಬೇಡ. ವೃತ್ತಿ ಜೀವನ ಉತ್ತಮವಾಗಿರುತ್ತದೆ. ಉದ್ಯೋಗದಲ್ಲಿ ಮುಂಬಡ್ತಿ ಯೋಗವಿದೆ. ಸ್ಥಾನಮಾನ ವೃದ್ಧಿಯಾಗುವುದು. ಉದ್ಯೋಗನಿಮಿತ್ತ ಪರದೇಶ ಸಂಚಾರ ಭಾಗ್ಯ ಬರಬಹುದು.
ಪರಿಹಾರ: ಇಷ್ಟದೇವತಾ ಆರಾಧನೆ.
ಮೀನ: ರಾಶ್ಯಾಧಿಪತಿ: ಗುರು
ವಿದ್ಯಾರ್ಥಿಗಳಿಗೆ ಅತ್ಯುನ್ನತ ಕಾಲ. ವಿದ್ಯೆ ಆಟಪಾಟಗಳಲ್ಲಿ ಭರ್ಜರಿ ಪ್ರಗತಿ ಸಾಧ್ಯವಿದೆ. ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡುವ ಅವಕಾಶ ಕೈಗೂಡಬಹುದು. ಆರೋಗ್ಯವು ಉತ್ತಮವಾಗಿರುತ್ತದೆ. ಆಯಾಸ, ಚಿಂತೆ ಉಂಟಾಗಬಹುದು. ರಕ್ತಸಂಬಂಧಿ ದೋಷಗಳು ಉಂಟಾಗಬಹುದು. ಉದ್ಯೋಗಸ್ಥರಿಗೆ ವೃತ್ತಿಜೀವನವು ಶುಭವಾಗಿರುತ್ತದೆ. ಕೈಹಿಡಿದ ಕಾರ್ಯಗಳು ಕೈಗೂಡುತ್ತವೆ. ಕುಟುಂಬದಲ್ಲಿ ಶುಭ ಅಥವಾ ಮಂಗಳಕಾರ್ಯಗಳು ನಡೆಯುತ್ತವೆ. ತಾತ್ಕಾಲಿಕವಾಗಿ ವೃತ್ತಿ ಲಾಭವೂ ಇರುತ್ತದೆ. ಮಿತ್ರರು ಸಹಾಯಕರಾಗಿರುತ್ತಾರೆ. ಧರ್ಮ ದೇವತಾಕಾರ್ಯಗಳಿಂದ ಪುಣ್ಯಲಾಭವಿದೆ.
ಪರಿಹಾರ: ಇಷ್ಟದೇವತಾ ಆರಾಧನೆ.
| ಲೇಖಕರು ಬೆಂಗಳೂರು ಅಸ್ಟ್ರಾಲಜಿಕಲ್ ಅಸೋಸಿಯೇಷನ್ನ ಗೌರವ ಕಾರ್ಯದರ್ಶಿಗಳು.