

ಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿ-ಮಣಿಪಾಲದ ಇಂದಿನ ಅಭಿವೃದ್ಧಿಯಲ್ಲಿ, ಜಗದ ಗಮನ ಸೆಳೆಯುವಲ್ಲಿ ಮಣಿಪಾಲ ಸಮೂಹ ಸಂಸ್ಥೆಯ ಸಂಸ್ಥಾಪಕ ಡಾ. ಮಾಧವ ಪೈ ಅವರ ಕೊಡುಗೆಯೂ ಮುಖ್ಯ ಕಾರಣವಾಗಿದೆ. 1953ರಲ್ಲಿ ದೇಶದಲ್ಲೇ ಮೊದಲ ಬಾರಿಗೆ ಖಾಸಗಿ ಮೆಡಿಕಲ್ ಕಾಲೇಜು ಆರಂಭಿಸಿದಾಗ ಅಂದಿನ ಜನರು ಪೈ ಅವರನ್ನು ಹುಚ್ಚರು ಎಂದು ಮೂದಲಿಸಿದರು. ಆದರೆ, ಅವರ ದೂರದೃಷ್ಟಿತ್ವ ಏನಿತ್ತು ಎನ್ನುವುದಕ್ಕೆ ಇಂದು ಮಣಿಪಾಲ ಸಾಕ್ಷ್ಯವಾಗಿದೆ. ಮಿನಿ ಕಾಫಿ ಟೇಬಲ್ ಪುಸ್ತಕ ಆ ಎಲ್ಲ ಕಥೆ ತಿಳಿಸುವ ಮಹತ್ವದ ಕೃತಿಯಾಗಿದೆ ಎಂದು ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಹೇಳಿದರು.
ಉಡುಪಿ ಕ್ಷೇತ್ರವೂ ಸೇರಿದಂತೆ ಮಣಿಪಾಲ ಇಂದು ಬಹಳ ಬದಲಾಗಿದೆ. ನಾಲ್ಕೈದು ದಶಕದ ಹಿಂದೆ ಉಡುಪಿ ಭಾಗಕ್ಕೆ ಬರಲು ಭಯಪಡುವಷ್ಟು ಕಾಡಿತ್ತು. ಮಣಿಪಾಲವಂತೂ ವನ್ಯಜೀವಿಗಳು, ಹಾವುಗಳೇ ತುಂಬಿದ್ದ ದಟ್ಟ ಕಾನನವಾಗಿತ್ತು. ಇಲ್ಲಿ ಏನೂ ಇರಲಿಲ್ಲ. ಊಹೆಯನ್ನೂ ಮಾಡಲಾಗದಷ್ಟು ಮಣಿಪಾಲ ಬೆಳೆದಿದೆ ಎಂದು ಡಾ. ಬಲ್ಲಾಳ್ ಅಚ್ಚರಿ ವ್ಯಕ್ತಪಡಿಸಿದರು.
ಮಣಿಪಾಲದ ಮಣ್ಣಪಳ್ಳದಲ್ಲಿ ಕಂಬಳ ಆಯೋಜಿಸಲು ಚಿಂತನೆ ನಡೆದಿದೆ. ಮಣಿಪಾಲ ಮುಂದಿನ 20-25ವರ್ಷಗಳಲ್ಲಾಗುವ ಅಭಿವೃದ್ಧಿಯಲ್ಲಿ ಯುವಜನರು ಕೈ ಜೋಡಿಸಬೇಕು. ಕೃಷ್ಣ ಕಾರಿಡಾರ್ ನಿರ್ಮಾಣ ಕಾರ್ಯ ಯೋಜನೆಗೆ ಮುಂದಾಗಿದ್ದು, ಮಣಿಪಾಲ ವಿವಿ ನೆರವು ಪಡೆಯಲಾಗುವುದು. | ಯಶ್ಪಾಲ್ ಸುವರ್ಣ. ಉಡುಪಿ ಶಾಸಕ | ರವಿರಾಜ್ ಎಚ್.ಪಿ. ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷಕನ್ನಡ ಸಾಹಿತ್ಯ ಲೋಕಕ್ಕೆ ಆಸ್ಟ್ರೋ ಮೋಹನ್ ಅವರು ವಿಶಿಷ್ಟವಾದ ಕೃತಿ ನೀಡಿದ್ದಾರೆ. ಉಡುಪಿ-ಮಣಿಪಾಲದ ಗತವೈಭವ ಹಾಗೂ ತೀರಾ ಇತ್ತೀಚೆಗಿನ ಅದ್ಭುತ ಛಾಯಾಚಿತ್ರಗಳ ಮೂಲಕ ಇಲ್ಲಿನ ಸಾಧನೆ ಹೆಣೆದಿದ್ದಾರೆ. ಅವರಿಗೆ ಉಡುಪಿ ತಾಲೂಕು ಘಟಕದ ವತಿಯಿಂದ ಜಿಲ್ಲೆಯ ಎಲ್ಲ ಜನರ ಪರವಾಗಿ ತುಂಬುಹೃದಯದಿಂದ ಅಭಿನಂದನೆ ಸಲ್ಲಿಸುತ್ತೇನೆ.