

ಸುಳ್ಯ: ತೀವ್ರ ಮಳೆಯಿಂದಾಗಿ ಹಾನಿಗೀಡಾದ ತಾಲೂಕಿನ ಕೆಲ ಪ್ರದೇಶಗಳಿಗೆ, ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಭೇಟಿ ನೀಡಿ ಸೂಚನೆ ನೀಡಿದರು.
ಸಂಪಾಜೆ ಗ್ರಾಮಕ್ಕೆ ಭೇಟಿ ನೀಡಿ ರಸ್ತೆ ಸೇತುವೆ ಸೇರಿದಂತೆ ಮೂಲಸೌಕರ್ಯಗಳ ಕುರಿತು ಮನವಿ ಸ್ವೀಕರಿಸಿದರು. ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೂನಡ್ಕ ಪೇರಡ್ಕ ರಸ್ತೆಯಲ್ಲಿ ಸಂಪರ್ಕ ಕಲ್ಪಿಸುವ ದರ್ಕಾಸ್ ಮುಳುಗು ಸೇತುವೆ ಮಳೆಗಾಲದಲ್ಲಿ ಪಯಸ್ವಿನಿ ನದಿಯಲ್ಲಿ ಪ್ರವಾಹ ಹೆಚ್ಚಾದಾಗ ಆಗಾಗ ಮುಳುಗಡೆಯಾಗುತ್ತಿದೆ. ಈ ರಸ್ತೆಯಲ್ಲಿ ನೂರಾರು ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ನಿತ್ಯ ಸಂಚಾರ ಮಾಡುತ್ತಿದ್ದಾರೆ. ಈ ಪ್ರದೇಶಕ್ಕೆ ಭೇಟಿ ನೀಡಿದ ಎಸಿ ಅವರಿಗೆ ಜನರ ಸಮಸ್ಯೆಗೆ ಪರಿಹಾರ ಒದಗಿಸಲು ಅನುದಾನ ಕೊಡುವ ಕುರಿತಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮತಿ ಶಕ್ತಿವೇಲು ಮನವಿ ಸಲ್ಲಿಸಿದರು.
ಸ್ಥಳ ಪರಿಶೀಲನೆ ನಡೆಸಿ ಸರ್ಕಾರ ಹಾಗೂ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಹಾಗೂ ಅಗತ್ಯ ಮುಂಜಾಗ್ರತೆ ವಹಿಸುವಂತೆ ಎಸಿ ಸೂಚಿಸಿದರು. ಇದೇ ವೇಳೆ ಮಳೆಗಾಲದಲ್ಲಿ ಭೂಕುಸಿತ ಪ್ರದೇಶಗಳ ಬಗ್ಗೆ ಎಚ್ಚರ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಎಸಿ ಸೂಚಿಸಿದರು.
ಗ್ರಾಪಂ ಉಪಾಧ್ಯಕ್ಷ ಎಸ್.ಕೆ.ಹನೀಫ್, ಮಾಜಿ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ಸದಸ್ಯರಾದ ಪಿ.ಕೆ.ಅಬೂಸಾಲಿ ಗೂನಡ್ಕ, ಗಣಿ ಇಲಾಖೆಯ ಅಧಿಕಾರಿ ವಸುಧಾ, ಎಸಿ ಆಪ್ತ ಕಾರ್ಯದರ್ಶಿ ನಿತೀನ್, ಕಂದಾಯ ಅಧಿಕಾರಿ ಅವಿನ್ ರಂಗತ್ಮಲೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.