

ನವದೆಹಲಿ: ಭಾರತ ತಂಡ ಕಳೆದ ನ್ಯೂಜಿಲೆಂಡ್ ಮತ್ತು ಆಸ್ಟ್ರೆಲಿಯಾ ವಿರುದ್ಧದ ಟೆಸ್ಟ್ ಸರಣಿಗಳಲ್ಲಿ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಸಹಾಯಕ ಕೋಚ್ ಅಭಿಷೇಕ್ ನಾಯರ್ ತಲೆದಂಡವಾಗಿದೆ. ಹುದ್ದೆ ಅಲಂಕರಿಸಿದ ಕೇವಲ 8 ತಿಂಗಳಲ್ಲೇ ಬಿಸಿಸಿಐ, ಅಭಿಷೇಕ್ ನಾಯರ್ರನ್ನು ವಜಾಗೊಳಿಸಿದೆ. ಈ ಮೂಲಕ ಟೀಮ್ ಇಂಡಿಯಾದ ತರಬೇತಿ ಬಳಗದ ಗಾತ್ರ ತಗ್ಗಿಸಿದೆ.
ಭಾರತ ತಂಡದ ಪ್ರಮುಖ ಆಟಗಾರ ಮತ್ತು ತರಬೇತಿ ಸಿಬ್ಬಂದಿ ಬಳಗದ ಪ್ರಮುಖ ಸದಸ್ಯರೊಬ್ಬರ ನಡುವಿನ ಭಿನ್ನಾಭಿಪ್ರಾಯಕ್ಕೆ ಅಭಿಷೇಕ್ ನಾಯರ್ರನ್ನು ಬಲಿಪಶು ಮಾಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಅಭಿಷೇಕ್ ನಾಯರ್ ಕಳೆದ ಜುಲೈನಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಟೀಮ್ ಇಂಡಿಯಾದ ತರಬೇತಿ ಬಳಗ ಸೇರಿದ್ದರು. ಅವರ ತರಬೇತಿಯಡಿಯಲ್ಲಿ ಭಾರತ, ಕಿವೀಸ್ ವಿರುದ್ಧ ತವರಿನಲ್ಲೇ 0-3ರಿಂದ ವೈಟ್ವಾಷ್ ಎದುರಿಸಿದ್ದರೆ, ಆಸ್ಟ್ರೆಲಿಯಾ ಪ್ರವಾಸದಲ್ಲಿ 1-3ರಿಂದ ಸೋತು ಬಾರ್ಡರ್-ಗಾವಸ್ಕರ್ ಟ್ರೋಫಿ ಕಳೆದುಕೊಂಡಿತ್ತು.
ಗಂಭೀರ್ಗೆ 3 ವರ್ಷಗಳಿಗೆ ಅಂದರೆ 2027ರ ಏಕದಿನ ವಿಶ್ವಕಪ್ವರೆಗೆ ಒಪ್ಪಂದ ನೀಡಲಾಗಿದ್ದು, ಅಭಿಷೇಕ್ಗೂ ಇಷ್ಟೇ ಅವಧಿಯ ಒಪ್ಪಂದ ನೀಡಲಾಗಿತ್ತು. ಆದರೆ ಇದೀಗ ಬಿಸಿಸಿಐ ಈ ಒಪ್ಪಂದವನ್ನು ರದ್ದುಗೊಳಿಸಿದೆ. ಈ ಬಗ್ಗೆ ಅಭಿಷೇಕ್ಗೆ ಈಗಾಗಲೆ ಮಾಹಿತಿ ರವಾನಿಸಲಾಗಿದೆ. ಹೀಗಾಗಿ ಐಪಿಎಲ್ ನಂತರದ ಇಂಗ್ಲೆಂಡ್ ಪ್ರವಾಸಕ್ಕೆ ಅವರು ಭಾರತ ತಂಡದ ಜತೆಗೆ ತೆರಳುವುದಿಲ್ಲ. ನೆದರ್ಲೆಂಡ್ನ ರ್ಯಾನ್ ಟೆನ್ ಡೋಶೆಟ್ ಈಗಾಗಲೆ ಇನ್ನೊರ್ವ ಸಹಾಯಕ ಕೋಚ್ ಆಗಿ ತಂಡದ ಜತೆಗಿದ್ದಾರೆ.
41 ವರ್ಷದ ಅಭಿಷೇಕ್ ನಾಯರ್ ಮಾಜಿ ಆಲ್ರೌಂಡರ್ ಆಗಿದ್ದು, ಭಾರತ ಪರ 3 ಏಕದಿನ ಪಂದ್ಯವಾಡಿದ್ದರು. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 103 ಪಂದ್ಯವಾಡಿ ಹೆಚ್ಚಿನ ಯಶಸ್ಸು ಕಂಡಿದ್ದರು. ಈ ಮುನ್ನ ಕೆಕೆಆರ್ ತಂಡದಲ್ಲೂ ಅವರು ಸಹಾಯಕ ಕೋಚ್ ಆಗಿ ಗಂಭೀರ್ ಜತೆ ಕಾರ್ಯನಿರ್ವಹಿಸಿದ್ದರು.
ಆಸೀಸ್ ಪ್ರವಾಸದ ಬಳಿಕ ಸೀತಾಂಶು ಕೋಟಕ್ ತಜ್ಞ ಬ್ಯಾಟಿಂಗ್ ಕೋಚ್ ಭಾರತ ತಂಡಕ್ಕೆ ಸೇರ್ಪಡೆಯಾದ ಬಳಿಕ ಅಭಿಷೇಕ್ ನಾಯರ್ ನಿರ್ಗಮನ ನಿರೀಕ್ಷಿತವಾಗಿತ್ತು. ಆಸೀಸ್ ಪ್ರವಾಸದ ಬಳಿಕ ಗಂಭೀರ್, ನಾಯಕ ರೋಹಿತ್ ಶರ್ಮ ಜತೆಗೆ ಬಿಸಿಸಿಐ ಪದಾಧಿಕಾರಿಗಳ ಜತೆಗೆ ನಡೆದ ಪರಾಮರ್ಶೆ ಸಭೆಯಲ್ಲೇ ಅಭಿಷೇಕ್ ಕೈಬಿಡುವುದು ಬಹುತೇಕ ಅಂತಿಮವಾಗಿತ್ತು ಎನ್ನಲಾಗಿದೆ.
ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಕೂಡ ಔಟ್?
ಭಾರತ ತಂಡದ ತರಬೇತಿ ಬಳಗದಿಂದ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಮತ್ತು ಕಂಡೀಷನಿಂಗ್ ಕೋಚ್ ಸೋಹಮ್ ದೇಸಾಯಿ ಅವರನ್ನೂ ಕೈಬಿಡಲಾಗುತ್ತದೆ ಎನ್ನಲಾಗಿದೆ. ಇವರಿಬ್ಬರು ರಾಹುಲ್ ದ್ರಾವಿಡ್ ಕೋಚ್ ಆಗಿದ್ದ ಅವಧಿಯಿಂದಲೇ, ಅಂದರೆ ಕಳೆದ 3 ವರ್ಷಗಳಿಂದಲೂ ಭಾರತ ತಂಡದ ಜತೆಗಿದ್ದರು. ಹೊಸ ಪ್ರಮಾಣಿತ ಕಾರ್ಯನಿರ್ವಹಣೆ ವಿಧಾನದ (ಎಸ್ಒಪಿ) ಅನ್ವಯ ಬಿಸಿಸಿಐ, ಟೀಮ್ ಇಂಡಿಯಾದ ತರಬೇತಿ ಸಿಬ್ಬಂದಿಗೆ ಗರಿಷ್ಠ 3 ವರ್ಷಗಳ ಅವಧಿಯ ಮಿತಿ ಹೇರಲಿದೆ ಎನ್ನಲಾಗಿದೆ. ಭಾರತದ ಮೊದಲ ಸ್ಟ್ರೆಂತ್ ಆಂಡ್ ಕಂಡೀಷನಿಂಗ್ ಕೋಚ್ ಆಂಡ್ರಿಯನ್ ಲೆ ರೌಕ್ಸ್ 2ನೇ ಅವಧಿಗೆ ಮರಳಲಿದ್ದಾರೆ ಎನ್ನಲಾಗಿದೆ. ದ. ಆಫ್ರಿಕಾದ ಲೆ ರೌಕ್ಸ್ 2003ರ ವಿಶ್ವಕಪ್ನಲ್ಲಿ ಸೌರವ್ ಗಂಗೂಲಿ ಸಾರಥ್ಯದ ಭಾರತ ತಂಡದ ಫಿಟ್ನೆಸ್ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.