ಇಂದಿನಿಂದ ಸದನ ಕದನ; ಸರ್ಕಾರದ ವಿರುದ್ಧ ಸಮರಕ್ಕೆ ಪ್ರತಿಪಕ್ಷ ಸಜ್ಜು

Front sec lead
Published on

ಬೆಂಗಳೂರು: ವಿಧಾನಮಂಡಲ ಅಧಿವೇಶನ ಸೋಮವಾರ ಆರಂಭ ವಾಗಲಿದ್ದು, ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ಸದನದಲ್ಲಿ ಮತ್ತೊಂದು ಸುತ್ತಿನ ಸಮರಕ್ಕೆ ಸಾಕ್ಷಿಯಾಗಲಿದೆ. ಕಾರ್ವಿುಕ ತಿದ್ದುಪಡಿ ಕಾಯ್ದೆ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳ ವಿಚಾರದಲ್ಲಿ ಸರ್ಕಾರ ತನ್ನ ಗುರಿ ಸಾಧನೆಗೆ ರಣತಂತ್ರ ರೂಪಿಸುತ್ತಿದ್ದು, ಇದೇ ವಿಚಾರದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕುರಿತು ಭಾನುವಾರ ಕಾಂಗ್ರೆಸ್ ನಾಯಕರು ಪ್ರತಿವ್ಯೂಹ ಹೆಣೆದಿದ್ದಾರೆ. ಕಳೆದ ಅಧಿವೇಶನದಲ್ಲಿ ವಿಧಾನಪರಿಷತ್​ನಲ್ಲಿ ಈ ಮೂರೂ ವಿಧೇಯಕ ಚರ್ಚೆಯಾಗದೇ ಬಾಕಿ ಉಳಿದಿತ್ತು. ಬಳಿಕ ಸರ್ಕಾರ ಪುನಃ ಸುಗ್ರೀವಾಜ್ಞೆ ಜಾರಿ ಮಾಡಿತ್ತು. ಹೀಗಾಗಿ ಈ ಬಾರಿ ಮತ್ತೆ ವಿಧಾನಸಭೆಯಲ್ಲಿ ವಿಧೇಯಕ ಮಂಡನೆಯಾಗಲಿದೆ. ಈ ವೇಳೆ ದೀರ್ಘಾವಧಿಯಾಗಿ ಚರ್ಚೆ ನಡೆಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಇದೇ ವೇಳೆ ರೈತ ಸಂಘಟನೆಗಳು ನೀಡಿರುವ ಡಿ. 8ರ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡಲು ಸಭೆಯಲ್ಲಿ ನಿರ್ಧರಿಸಿದೆ.

ಬಿಜೆಪಿ ಸಂಪುಟ ವಿಸ್ತರಣೆ ಗುಂಗಿನಲ್ಲೇ ಇದ್ದು, ಅಧಿವೇಶನಕ್ಕೆಂದು ಪ್ರತ್ಯೇಕ ತಯಾರಿ ಮಾಡಿಕೊಂಡಿಲ್ಲ. ಹೇಗಾದರೂ ಈ ವಿಧೇಯಕಕ್ಕೆ ಒಪ್ಪಿಗೆ ಪಡೆಯುವುದು ಸರ್ಕಾರದ ಪ್ರಮುಖ ಗುರಿ. ಜತೆಗೆ ಬಿಬಿಎಂಪಿ ವಾರ್ಡ್ ವಿಸ್ತರಿಸಿ ಚುನಾವಣೆ ನಡೆಸುವ ವಿಧೇಯಕವನ್ನು ಮಂಡಿಸಿ, ಅದಕ್ಕೂ ಎರಡೂ ಸದನಗಳ ಒಪ್ಪಿಗೆ ಪಡೆದುಕೊಳ್ಳಲು ಬಯಸಿದೆ. ಡಿಸೆಂಬರ್ 7ರಿಂದ 11ರ ವರೆಗೆ ಮತ್ತು 14, 15ರಂದು ಅಧಿವೇಶನ ನಿಶ್ಚಯವಾಗಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕರೊನಾ ಹಿನ್ನೆಲೆಯಲ್ಲಿ ಸುಗಮ ಕಲಾಪಕ್ಕೆ ಮಾಡಿಕೊಂಡ ಸಿದ್ಧತೆಯನ್ನು ಪರಿಶೀಲಿಸಿದ್ದಾರೆ.

ಪರಿಷತ್​ಗೆ ಹೊಸ ಸಭಾಪತಿ

ವಿಧಾನಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ನೋಟಿಸ್ ಸಲ್ಲಿಕೆಯಾಗಿ 14ನೇ ದಿನಕ್ಕೆ ಜೀವ ಪಡೆದುಕೊಳ್ಳುತ್ತದೆ. ಅಂದರೆ ಮಂಗಳವಾರ ಸಭಾಪತಿ ಆ ಬಗ್ಗೆ ತೀರ್ಮಾನ ಮಾಡಬೇಕಿದೆ. ಅಷ್ಟರೊಳಗೆ ಅವರು ನಿರ್ಧರಿಸದೇ ಹೋದರೆ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿ ಹಿಂದೆ ನಡೆದ ಪ್ರಕರಣ ಆಧಾರದಲ್ಲಿ ಪ್ರಕ್ರಿಯೆಗಳು ನಡೆಯುತ್ತವೆ. ಕಾಂಗ್ರೆಸ್ ಈ ವಿಚಾರದಿಂದ ಬಹುತೇಕ ಹಿಂದೆ ಸರಿದಿದೆ. ಹೀಗಾಗಿ ಬಿಜೆಪಿಯಿಂದ ಪರಿಷತ್ ಸದಸ್ಯರಾದ ಪುಟ್ಟಣ್ಣ, ಆಯನೂರು ಮಂಜುನಾಥ್, ವೈ. ನಾರಾಯಣ ಸ್ವಾಮಿ ಹೆಸರು ಸಭಾಪತಿ ಸ್ಥಾನಕ್ಕೆ ಪ್ರಸ್ತಾಪವಾಗಿದೆ. ಪಕ್ಷ ಯಾರ ಪರವಾಗಿ ನಿಲ್ಲುತ್ತದೆ ಎಂಬುದು ಕುತೂಹಲ.

ರಾಜೀನಾಮೆ ಕೊಡದಂತೆ ತಾಕೀತು

ವಿಧಾನ ಪರಿಷತ್ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಕ್ಕೆ ಸರ್ಕಾರ ನಿರ್ಧರಿಸಿದೆ. ತಮ್ಮದು ಜಾತ್ಯತೀತ ಪಕ್ಷ ಎನ್ನುವ ಜೆಡಿಎಸ್ ಕೋಮುವಾದಿಗಳ ಪರವಾಗಿ ಮತ ಚಲಾಯಿಸುತ್ತದೋ, ವಿರುದ್ಧವಾಗಿ ಮತ ಚಲಾಯಿಸುತ್ತದೋ ಎಂಬುದನ್ನು ನೋಡಲು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಈಗಲೇ ರಾಜೀನಾಮೆ ನೀಡದಂತೆ ಹೇಳಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಈ ಬಾರಿಯ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಮತ್ತೆ ಕಾರ್ವಿುಕ ತಿದ್ದುಪಡಿ, ಭೂ ಸುಧಾರಣಾ ತಿದ್ದುಪಡಿ, ಎಪಿಎಂಸಿ ಮಸೂದೆ ಮಂಡನೆ ಮಾಡಲಿದ್ದು ಅವುಗಳ ಬಗ್ಗೆ ದೀರ್ಘವಾಗಿ ರ್ಚಚಿಸಲಾಗುವುದು. ಈ ಕಾಯ್ದೆಗಳ ಜಾರಿಗೆ ಅವಕಾಶ ಕೊಡುವುದಿಲ್ಲ.| ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

ಕಾಂಗ್ರೆಸ್​ ನಿರ್ಣಯ

  • ಆರ್ಥಿಕ ಪರಿಸ್ಥಿತಿ ಬಗ್ಗೆ ಇದೇ ಅಧಿವೇಶನ ದಲ್ಲಿ ಶ್ವೇತಪತ್ರ ಹೊರಡಿಸುವಂತೆ ಪಟ್ಟು
  • ಸಿದ್ದು ಸವದಿ ಪ್ರಕರಣ, ನೆರೆ ಪರಿಹಾರದ ವಿಫಲತೆ ಪ್ರಮುಖವಾಗಿ ಪ್ರಸ್ತಾಪ
  • ಲವ್ ಜಿಹಾದ್, ಗೋಹತ್ಯೆ ನಿಷೇಧ ತಿದ್ದು ಪಡಿ ಕಾಯ್ದೆಗೆ ವಿರೋಧ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net