

ಮುಂಬೈ: 288 ಸದಸ್ಯಬಲದ ಮಹಾರಾಷ್ಟ್ರ ವಿಧಾನಸಭೆಗೆ (Maharashtra Assembly Elections) ನವೆಂಬರ್ 20ರಂದು ಮತದಾನ ನಡೆಯಲಿದ್ದು, 23ರಂದು ಫಲಿತಾಂಶ ಪ್ರಕಟವಾಗಲಿದೆ. ಇನ್ನೂ ಚುನಾವಣೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದು, ರಾಜಕೀಯ ಹೈಡ್ರಾಮಾ ಜೋರಾಗಿದೆ ಎಂದರೆ ತಪ್ಪಾಗಲಾರದು. ಇದೀಗ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಹಾರಾಷ್ಟ್ರ ಚುನಾವಣಾ ಆಖಾಡಕ್ಕೆ ಎಂಟ್ರಿ ಕೊಟ್ಟಿದ್ದು, ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದರಲ್ಲಿ ಮುಖ್ಯವಾಗಿ ಕರ್ನಾಟಕದಲ್ಲಿ ಮದ್ಯ ಮಾರಾಟಗಾರರಿಂದ (Bar Owners) ಕಾಂಗ್ರೆಸ್ 700 ಕೋಟಿ ರೂ. ಲೂಟಿ ಮಾಡಿದೆ ಎಂದು ಆರೋಪಿಸುವ ಮೂಲಕ ಗಮನ ಸೆಳೆದಿದ್ದಾರೆ.
ಮಹಾರಾಷ್ಟ್ರದ ಅಕೋಲಾದಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ಧೇಶಿಸಿ ಮಾತನಾಡಿದ ಪ್ರಧಾನಿ ಮೋದಿ (PM Modi), ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶವನ್ನು ಕಾಂಗ್ರೆಸ್ ಎಟಿಎಮ್ಗಳಾಗಿ ಬಳಸುತ್ತಿದೆ. ಎಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುತ್ತೋ ಆ ರಾಜ್ಯ ಕಾಂಗ್ರೆಸ್ನ ರಾಜಮನೆತನಕ್ಕೆ ಎಟಿಎಮ್ ಆಗುತ್ತಿದೆ.
ಮಹಾರಾಷ್ಟ್ರದಲ್ಲಿ ಚುನಾವಣೆ (Maharashtra Assembly Election) ನಡೆಯುತ್ತಿರುವ ಹಿನ್ನೆಲೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮದ್ಯದಂಗಡಿ ಮಾಲೀಕರಿಂದ 700 ಕೋಟಿ ರೂ. ಲೂಟಿ ಮಾಡಿದೆ. ಒಂದು ವೇಳೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಗೆದ್ದರೆ ಅವರು ಎಷ್ಟು ಲೂಟಿ ಮಾಡಬಹುದು ಎಂಬುದನ್ನು ನೀವೇ ಊಹಿಸಿ. ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯುತ್ತಿದ್ದರೆ ಕರ್ನಾಟಕ ಹಾಗೂ ತೆಲಂಗಾಣದಲ್ಲಿ ವಸೂಲಿ ದಂಧೆ ಜೋರಾಗಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ, ನ್ಯಾಯಾಲಯ ಅಥವಾ ದೇಶದ ಭಾವನೆಗಳ ಬಗ್ಗೆ ಕಾಳಜಿ ಇಲ್ಲ. ದೇಶವು ಎಷ್ಟು ದುರ್ಬಲಗೊಳ್ಳುತ್ತದೆಯೋ ಅವರು ಹೆಚ್ಚು ಬಲಗೊಳ್ಳುತ್ತಾರೆ ಎಂಬುದು ಕಾಂಗ್ರೆಸ್ಗೆ ಚೆನ್ನಾಗಿ ತಿಳಿದಿದೆ. ಕಾಂಗ್ರೆಸ್ ವಿವಿಧ ಜಾತಿಗಳ ನಡುವೆ ಒಡಕು ಸೃಷ್ಟಿಸುತ್ತದೆ. ಜಾತಿಗಳು ಒಂದಾಗಲು ಬಿಡಲೇ ಇಲ್ಲ. ಜಾತಿಗಳು ಒಗ್ಗಟ್ಟಾಗಿ ಉಳಿಯದೇ ಪರಸ್ಪರ ಸಂಘರ್ಷಕ್ಕಿಳಿದರೆ ಕಾಂಗ್ರೆಸ್ ಅದರ ಲಾಭ ಪಡೆಯುತ್ತದೆ. ಎಸ್ಸಿಗಳ ಹಕ್ಕುಗಳನ್ನು ಕಾಂಗ್ರೆಸ್ ಕಸಿದುಕೊಳ್ಳುತ್ತದೆ. ಇದು ಅವರ ಪಿತೂರಿಯಾಗಿದೆ. ನೀವು ಜಾಗೃತರಾಗಿರಬೇಕು ಎಂದು ಎಚ್ಚರಿಸಿದ್ದಾರೆ.
ಮಹಾರಾಷ್ಟ್ರದ ಜನರು 2014 ರಿಂದ 2024 ರವರೆಗೆ ನಿರಂತರವಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಮತ್ತು ಆಶೀರ್ವದಿಸಿದ್ದಾರೆ. ಇದು ಅವರ ದೇಶಭಕ್ತಿ, ರಾಜಕೀಯ ತಿಳುವಳಿಕೆ ಮತ್ತು ದೂರದೃಷ್ಟಿಯನ್ನು ತಿಳಿಸುತ್ತದೆ. ಮಹಾರಾಷ್ಟ್ರಕ್ಕೆ ಸೇವೆ ಸಲ್ಲಿಸುವುದು ನನಗೆ ಒಂದು ಅನನ್ಯ ಮತ್ತು ಸಂತೋಷಕರ ಅನುಭವವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅಕೋಲಾದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಹೇಳಿದ್ದಾರೆ.