

ಮೈಸೂರು: ಗಂಡು ಮಗು ಆಗಿಲ್ಲ ಎನ್ನುವ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಘಟನೆ ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲ್ಲೂಕು ಸೋನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪತ್ನಿ ಶಿವಮ್ಮ ಹಲ್ಲೆಗೊಳಗಾದ ಸಂತ್ರಸ್ತೆ. ಈಕೆ ಪತಿ ಚಂದ್ರು. ಸೋನಹಳ್ಳಿ ಗ್ರಾಮದ ನಿವಾಸಿಯಾದ ಚಂದ್ರು, ಗಂಡು ಮಕ್ಕಳಾಗಿಲ್ಲ. ಹೆಣ್ಣು ಮಗುವಿಗೆ ಜನ್ಮ ನೀಡಿದ್ದೀಯಾ ಎಂದು ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ. ಶಿವಮ್ಮ ಮೇಲೆ ಹಲ್ಲೆಗೆ ಮಾವ ರಾಮೇಗೌಡ ಹಾಗೂ ಅತ್ತೆ ಕೆಂಪಮ್ಮ ಅವರು ಚಂದ್ರುಗೆ ಸಹಕಾರ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಂದ್ರು, ಮಾವ ರಾಮೇಗೌಡ, ಅತ್ತೆ ಕೆಂಪಮ್ಮ ಬಂಧನ ಭೀತಿಯಿಂದ ತಲೆ ಮರೆಸಿಕೊಂಡಿದ್ದಾರೆ.
ಶಿವಮ್ಮ ಈಗಾಗಲೇ ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಇದೇ ಕಾರಣವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದ ಪತಿ ಹಾಗೂ ಮನೆಯವರು. ಈ ಬಗ್ಗೆ ಹಲವು ಬಾರಿ ನ್ಯಾಯ ಪಂಚಾಯತಿ ನಡೆದಿತ್ತು. ಕಿರುಕುಳ ತಾಳಲಾರದೆ ಶಿವಮ್ಮ ಕಳೆದ ವರ್ಷ ಎಚ್.ಡಿ.ಕೋಟೆ ಪೊಲೀಸರಿಗೆ ದೂರು ನೀಡಿದ್ದರು.