

ದಿಸ್ಪುರ್: ಅಸ್ಸಾಂನ ತೀನ್ಸುಕಿಯಾ ಜಿಲ್ಲೆಯ ಬಾಗ್ಜಾನ್ನಲ್ಲಿರುವ ಭಾರತೀಯ ತೈಲ ನಿಗಮದ ಅನಿಲ ಬಾವಿಯಲ್ಲಿ ಹೊತ್ತಿಕೊಂಡಿರುವ ಬೆಂಕಿ ಕೊನೆಗೂ ನಿಯಂತ್ರಣದ ಹಂತಕ್ಕೆ ಬಂದಿದೆ.
ಇಲ್ಲಿನ 5ನೇ ಅನಿಲ ಬಾವಿಯಲ್ಲಿ ಮೇ 27ರಂದು ಭಾರಿ ಪ್ರಮಾಣದಲ್ಲಿ ಸೋರಿಕೆ ಕಂಡು ಬಂದಿತ್ತು. ಆದರೆ, ಎಷ್ಟೇ ಪ್ರಯತ್ನಿಸಿದರೂ ನಿಯಂತ್ರಣಕ್ಕೆ ಬಾರದೆ ಜೂನ್ 9ರಂದು ಭಾರಿ ಬೆಂಕಿ ಕಾಣಿಸಿಕೊಂಡಿತ್ತು. ಇದಾಗಿ 76 ದಿನಗಳ ಬಳಿಕ ಬೆಂಕಿ ನಿಯಂತ್ರಣಕ್ಕೆ ತರಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿಯಿಂದಾಗಿ ಸುತ್ತಲಿನ ಹಳ್ಳಿಗಳ ಸಾವಿರಾರು ಜನರನ್ನು ಸ್ಥಳಾಂತರ ಮಾಡಲಾಗಿದೆ. ಎರಡು ತಿಂಗಳಾದರೂ ಬೆಂಕಿ ನಿಯಂತ್ರಣಕ್ಕೆ ಬಾರದ ಕಾರಣ ಸ್ಥಳೀಯರು ತೈಲ ನಿಗಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಪರಿಹಾರಕ್ಕೆ ಆಗ್ರಹಿಸಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದವರಿಗೆ ದಿಗ್ಬಂಧನ ವಿಧಿಸಿದ್ದರು.
ಬೆಂಕಿ ನಿಯಂತ್ರಣಕ್ಕೆ ವಿದೇಶಿ ತಜ್ಞರನ್ನು ಕರೆಯಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಜತೆಗೆ, ಜುಲೈ 22ರಂದು ಮತ್ತೊಂದು ಸ್ಫೋಟ ಸಂಭವಿಸಿ ಮತ್ತಷ್ಟು ಕಳವಳಕ್ಕೆ ಕಾರಣವಾಗಿತ್ತು. ಇದಾಗಿ 76 ದಿನಗಳ ಬಳಿಕ ಘಟನಾ ಸ್ಥಳದಿಂದ ಸೋಮವಾರ ಶುಭಸುದ್ದಿಯೊಂದು ಬಂದಿದೆ.
ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ತೈಲ ಬಾವಿಯ ಮೇಲೆ ಬೆಂಕಿ ನಂದಿಸುವ ಉಪಕರಣವನ್ನು (ಬ್ಲೋಔಟ್ ಪ್ರಿವೆಂಟರ್) ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಾದ ಬಳಿಕ ಬೆಂಕಿ ನಂದಿಸುವ ಕಾರ್ಯಗಳು ಚುರುಕು ಪಡೆದುಕೊಳ್ಳಲಿವೆ. ಅಂತಿಮವಾಗಿ ಬೆಂಕಿ ನಂದಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಆದರೆ, ತೈಲ ಬಾವಿಯ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಎಷ್ಟು ದಿನಗಳಾಗಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ.