

ಕರಾಚಿ: ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನದ 15 ಆಟಗಾರರ ತಂಡ ಪ್ರಕಟಗೊಂಡಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಸಿಫ್ ಅಲಿ ಮತ್ತು ಖುಷ್‌ದಿಲ್ ಷಾ ತಂಡಕ್ಕೆ ಅಚ್ಚರಿಯ ಆಯ್ಕೆಯಾಗಿದ್ದರೆ, ಅನುಭವಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಹಾಗೂ ಮಾಜಿ ನಾಯಕ ಸರ್ಫ್ರಾಜ್ ಅಹ್ಮದ್, ವಹಾಬ್ ರಿಯಾಜ್ ಮತ್ತು ಶೋಯೆಬ್ ಮಲಿಕ್ ಅವರನ್ನು ಕೈಬಿಡಲಾಗಿದೆ. ಪಾಕಿಸ್ತಾನ ತಂಡ ಇದೇ ಮೊದಲ ಬಾರಿಗೆ ಶೋಯೆಬ್ ಮಲಿಕ್ ಅವರಿಲ್ಲದೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲಿದೆ.
ಬಾಬರ್ ಅಜಮ್ ಸಾರಥ್ಯದ ಪಾಕಿಸ್ತಾನದ ಇದೇ ತಂಡ ವಿಶ್ವಕಪ್‌ಗೆ ಮುನ್ನ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯನ್ನೂ ಆಡಲಿದೆ. ಪಾಕ್ ತಂಡ ಅಕ್ಟೋಬರ್ 24ರಂದು ಸಾಂಪ್ರದಾಯಕಿ ಎದುರಾಳಿ ಭಾರತ ತಂಡವನ್ನು ದುಬೈನಲ್ಲಿ ಎದುರಿಸುವ ಮೂಲಕ ಅಭಿಯಾನ ಆರಂಭಿಸಿದ್ದು, ವಿಶ್ವಕಪ್‌ನಲ್ಲಿ ಒಮ್ಮೆಯೂ ಭಾರತ ವಿರುದ್ಧ ಗೆಲ್ಲದ ದಾಖಲೆಯನ್ನು ಈ ಬಾರಿಯಾದರೂ ಅಳಿಸಿಹಾಕುವ ಹಂಬಲದಲ್ಲಿದೆ.
ಆಸಿಫ್ ಮತ್ತು ಖುಷ್‌ದಿಲ್ ಟಿ20 ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿರದ ನಡುವೆಯೂ ತಂಡಕ್ಕೆ ಆಯ್ಕೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಆಸಿಫ್ 29 ಪಂದ್ಯಗಳಲ್ಲಿ ಕೇವಲ 16.38ರ ಸರಾಸರಿಯಲ್ಲಿ ರನ್ ಗಳಿಸಿದ್ದರೆ, ಎಡಗೈ ಬ್ಯಾಟ್ಸ್‌ಮನ್ ಖುಷ್‌ದಿಲ್ 9 ಪಂದ್ಯಗಳಲ್ಲಿ 21.6ರ ಸರಾಸರಿಯಲ್ಲಿ ರನ್ ಬಾರಿಸಿದ್ದಾರೆ. ತಂಡಕ್ಕೆ ಸದ್ಯ ಮಧ್ಯಮ ಕ್ರಮಾಂಕದಲ್ಲಿ ಇವರೇ ಲಭ್ಯವಿರುವ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಮುಹಮದ್ ವಾಸಿಂ ತಿಳಿಸಿದ್ದಾರೆ. ಖರ್ ಜಮಾನ್ 15 ಸದಸ್ಯರ ತಂಡದಲ್ಲಿರದಿದ್ದರೂ, ಮೀಸಲು ಬಳಗದಲ್ಲಿ ಸ್ಪಿನ್ ದಿಗ್ಗಜ ಅಬ್ದುಲ್ ಖಾದಿರ್ ಪುತ್ರ ಉಸ್ಮಾನ್ ಖಾದಿರ್ ಜತೆಗೆ ಸ್ಥಾನ ಪಡೆದಿದ್ದಾರೆ.
ಪಾಕ್ ಟಿ20 ತಂಡ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಅಜಮ್ ಖಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಇಮಾದ್ ವಾಸಿಂ, ಖುಷ್‌ದಿಲ್ ಷಾ, ಮೊಹಮದ್ ಹಫೀಜ್, ಮೊಹಮದ್ ಹಸ್‌ನೈನ್, ಮೊಹಮದ್ ನವಾಜ್, ಮೊಹಮದ್ ರಿಜ್ವಾನ್, ಮೊಹಮದ್ ವಾಸಿಂ ಜೂನಿಯರ್, ಶಹೀನ್ ಷಾ ಅಫ್ರಿದಿ, ಸೋಹೈಬ್ ಮಕ್ಸೂದ್.