

ಬೆಂಗಳೂರು: ಏಕದಿನ ವಿಶ್ವಕಪ್ ಸಿದ್ಧತೆಗೆ ಮಹತ್ವದ ವೇದಿಕೆ ಎನಿಸಿರುವ ಏಷ್ಯಾಕಪ್ನಲ್ಲಿ ಈಗ ತಂಡಗಳ ಬಲಾಬಲಗಳಿಗಿಂತ ಮಳೆಯೇ ದೊಡ್ಡ ಸವಾಲೆನಿಸಿದೆ. ಶ್ರೀಲಂಕಾದಲ್ಲಿ ನಿಗದಿಯಾಗಿರುವ ಟೂರ್ನಿಯ ಪ್ರತಿ ಪಂದ್ಯವನ್ನೂ ಮಳೆ ಭೀತಿಯ ನಡುವೆ ಆಡಲಾಗುತ್ತಿದೆ. ಹೀಗಾಗಿ ದ್ವೀಪರಾಷ್ಟ್ರದಲ್ಲಿ ಮಳೆಗಾಲದ ಸಮಯದಲ್ಲಿ ಕ್ರಿಕೆಟ್ ಟೂರ್ನಿ ಏರ್ಪಡಿಸಿರುವುದಕ್ಕೆ ಕ್ರಿಕೆಟ್ ಪ್ರೇಮಿಗಳು, ಏಷ್ಯಾಕಪ್ ಲಾಂಛನವನ್ನೇ ಬದಲಾಯಿಸಿ ಟ್ರೋಲ್ ಮಾಡುತ್ತಿದ್ದಾರೆ.
ಏಷ್ಯಾಕಪ್ ಲಾಂಛನದಲ್ಲಿ ಬ್ಯಾಟ್ಸ್ಮನ್ ಓರ್ವ ಬ್ಯಾಟ್ ಹಿಡಿದು ಬಿರುಸಿನ ಹೊಡೆತವಾಡುವ ಚಿತ್ರವಿದೆ. ಮಳೆ ಅಡಚಣೆಯ ನಡುವೆ ಪಂದ್ಯ ನಡೆಯುತ್ತಿರುವುದರಿಂದ ಅದನ್ನೇ ಈಗ ಕೊಡೆ (ಛತ್ರಿ) ಹಿಡಿದು ಬ್ಯಾಟರ್ ಆಡುವಂತೆ ತಿದ್ದುಪಡಿ ಮಾಡಲಾಗಿದೆ. ಈ ಮೂಲಕ ಮಳೆ ನಡುವೆ ಕ್ರಿಕೆಟ್ ಪಂದ್ಯ ನಡೆಯುತ್ತಿರುವುದನ್ನು ತಮಾಷೆಯಾಗಿ ಚಿತ್ರಿಸಲಾಗಿದೆ.
ಏಷ್ಯಾಕಪ್ನಲ್ಲಿ ಶ್ರೀಲಂಕಾದಲ್ಲಿ ಮೊದಲಿಗೆ ಪಲ್ಲೆಕಿಲೆಯಲ್ಲಿ ನಿಗದಿಯಾಗಿದ್ದ ಪಂದ್ಯಗಳಿಗೆ ಮಳೆ ಕಾಡಿದ್ದರೆ, ನಂತರದ ಪಂದ್ಯಗಳು ಕೊಲಂಬೊದಲ್ಲಿ ನಿಗದಿಯಾಗಿದ್ದರೂ ಮಳೆ ಭೀತಿಯಿಂದ ಮುಕ್ತವಾಗಿರಲಿಲ್ಲ. ಹೀಗಾಗಿ ಸದ್ಯ ಮಳೆ ಲೆಕ್ಕಾಚಾರವೇ ಟೂರ್ನಿಯನ್ನು ಬಹುತೇಕ ಆವರಿಸಿದ್ದು, ಡಕ್ವರ್ತ್-ಲೂಯಿಸ್-ಸ್ಟರ್ನ್ ನಿಯಮವೂ ಹೆಚ್ಚಾಗಿ ಬಳಕೆಯಾಗಿದೆ.