ಏಷ್ಯಾಕಪ್​ನಲ್ಲಿ ಭಾರತ-ಪಾಕ್​ಗೆ ಮುನ್ನ ಲಂಕಾ-ಬಾಂಗ್ಲಾ ಪಂದ್ಯದ ಟಿಕೆಟ್​ ಸೋಲ್ಡ್​ಔಟ್​!

lanka ban web
Published on

ಬೆಂಗಳೂರು: ವಿಶ್ವಕಪ್​ ಸಿದ್ಧತೆಗೆ ಮಹತ್ವದ್ದಾಗಿರುವ ಏಷ್ಯಾಕಪ್​ ಏಕದಿನ ಟೂರ್ನಿಗೆ ಕ್ಷಣಗಣನೆ ಆರಂಭಗೊಂಡಿದೆ. ಆಗಸ್ಟ್​ 30ರಿಂದ ನಡೆಯಲಿರುವ ಟೂರ್ನಿಯಲ್ಲಿ ಸೆಪ್ಟೆಂಬರ್​ 2ರಂದು ನಡೆಯಲಿರುವ ಭಾರತ&ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಕ್ರಿಕೆಟ್​ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ ಎಂಬುದು ಎಲ್ಲರ ನಂಬಿಕೆಯಾಗಿತ್ತು. ಆದರೆ ಟೂರ್ನಿಯ ಟಿಕೆಟ್​ ಮಾರಾಟ ಪ್ರಕ್ರಿಯೆ ಆರಂಭಗೊಂಡ ಬಳಿಕ ಈ ನಂಬಿಕೆ ಸುಳ್ಳಾಗಿದೆ! ಹೌದು, ಭಾರತ-ಪಾಕ್​ ನಡುವಿನ ಪಂದ್ಯಕ್ಕಿಂತ ಆತಿಥೇಯ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯವೇ ಟೂರ್ನಿಯ ಹೈವೋಲ್ಟೇಜ್​ ಪಂದ್ಯವೆನಿಸಿದೆ. ಯಾಕೆಂದರೆ ಭಾರತ-ಪಾಕ್​ ಪಂದ್ಯಕ್ಕೆ ಮುನ್ನ ಲಂಕಾ-ಬಾಂಗ್ಲಾ ನಡುವಿನ ಪಂದ್ಯದ ಟಿಕೆಟ್​ ಸೋಲ್ಡ್​ಔಟ್​ ಆಗಿದೆ!

ಏಷ್ಯಾಕಪ್​ನಲ್ಲಿ ಶ್ರೀಲಂಕಾ-ಬಾಂಗ್ಲಾ ನಡುವಿನ ಪಂದ್ಯ ಆಗಸ್ಟ್​ 31ರಂದು ಕ್ಯಾಂಡಿಯಲ್ಲಿ ನಿಗದಿಯಾಗಿದೆ. ಆಗಸ್ಟ್​ 17ರಂದು ಟಿಕೆಟ್​ ಮಾರಾಟ ಆರಂಭಗೊಂಡ ಕೆಲವೇ ಗಂಟೆಗಳಲ್ಲಿ ಲಂಕಾ-ಬಾಂಗ್ಲಾ ನಡುವಿನ ಪಂದ್ಯದ ಎಲ್ಲ ಟಿಕೆಟ್​ಗಳು ಮಾರಾಟವಾಗಿದ್ದರೆ, ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಕೆಲ ಟಿಕೆಟ್​ಗಳು ಇನ್ನೂ ಲಭ್ಯವಿವೆ. ಭಾರತ-ಪಾಕ್​ ನಡುವಿನ ಪಂದ್ಯದ ವಿಐಪಿ ಟಿಕೆಟ್​ಗಳು ಮಾತ್ರ ಕೆಲವೇ ನಿಮಿಷಗಳಲ್ಲಿ ಸೋಲ್ಡ್​ಔಟ್​ ಆಗಿವೆ.

ಕಾರಣವೇನು ಗೊತ್ತೇ?

ಭಾರತ&ಪಾಕ್​ ಪಂದ್ಯಕ್ಕಿಂತ ಲಂಕಾ-ಬಾಂಗ್ಲಾ ನಡುವಿನ ಪಂದ್ಯದ ಟಿಕೆಟ್​ ಬೇಗನೆ ಮಾರಾಟವಾಗಲು ಕಾರಣ, ಅವೆರಡು ದೇಶಗಳ ಕ್ರಿಕೆಟ್​ ತಂಡಗಳ ನಡುವಿನ ಇತ್ತೀಚೆಗಿನ ವೈರತ್ವ. 2018ರ ನಿದಾಹಾಸ್​ ಕಪ್​ನಲ್ಲಿ ಲಂಕಾ ವಿರುದ್ಧ ಗೆದ್ದ ಬಳಿಕ ಬಾಂಗ್ಲಾ ತಂಡದ ಆಟಗಾರರು ಪ್ರದರ್ಶಿಸಿದ "ನಾಗಿನ್​ ನೃತ್ಯ'ದಿಂದಾಗಿ ಉಭಯ ದೇಶಗಳ ನಡುವೆ ವೈರತ್ವ ಹುಟ್ಟಿಕೊಂಡಿದೆ. ಅದೇ ಟೂರ್ನಿಯ ಫೈನಲ್​ನಲ್ಲಿ ಬಾಂಗ್ಲಾ ವಿರುದ್ಧ ಭಾರತ ಗೆದ್ದಾಗ ಲಂಕಾದ ಪ್ರೇಕ್ಷಕರು ನಾಗಿನ್​ ನೃತ್ಯ ಪ್ರದರ್ಶಿಸಿ ಸೇಡು ತೀರಿಸಿಕೊಂಡಿದ್ದರು. ನಂತರದಲ್ಲಿ ಬಾಂಗ್ಲಾ ವಿರುದ್ಧದ ಪಂದ್ಯವೆಂದರೆ ಲಂಕನ್ನರು ಕೆರಳುತ್ತಿದ್ದಾರೆ. 2022ರ ಏಷ್ಯಾಕಪ್​ನಲ್ಲೂ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಗೆದ್ದ ಬಳಿಕ ಲಂಕಾದ ಆಟಗಾರ ಚಮಿಕಾ ಕರುಣರತ್ನೆ ನಾಗಿನ್​ ನೃತ್ಯ ಪ್ರದರ್ಶಿಸಿ ಸಂಭ್ರಮಿಸಿದ್ದರು. ಹೀಗಾಗಿ ಲಂಕಾದ ಕ್ರಿಕೆಟ್​ ಪ್ರೇಮಿಗಳು ಬಾಂಗ್ಲಾ ವಿರುದ್ಧದ ಪಂದ್ಯದ ಬಗ್ಗೆ ಹೆಚ್ಚಿನ ಕುತೂಹಲ ಹೊಂದಿರುವುದರಿಂದ ಸಹಜವಾಗಿಯೇ ಪಂದ್ಯದ ಟಿಕೆಟ್​ ಖರೀದಿಗೆ ಮುಗಿಬಿದ್ದಿದ್ದಾರೆ.

ಇನ್ನು ಭಾರತ-ಪಾಕ್​ ಪಂದ್ಯದ ಟಿಕೆಟ್​ ಮಾರಾಟ ಪ್ರಕ್ರಿಯೆ ವಿಳಂಬಗೊಳ್ಳಲು ಈ ಪಂದ್ಯದ ಟಿಕೆಟ್​ಗಳ ದುಬಾರಿ ದರವೂ ಕಾರಣವಾಗಿದೆ. ಟಿಕೆಟ್​ನ ಕನಿಷ್ಠ ಬೆಲೆಯೇ 2,500 ರೂ. ಆಗಿದ್ದು, ಗರಿಷ್ಠ 25,000 ರೂ. ಬೆಲೆಯ ಟಿಕೆಟ್​ಗಳೂ ಲಭ್ಯವಿವೆ. ಲಂಕಾ-ಬಾಂಗ್ಲಾ ಪಂದ್ಯದ ಟಿಕೆಟ್​ನ ಕನಿಷ್ಠ ಬೆಲೆ 1,600 ರೂ. ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net