ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಜೀಪ್ ಅಪಘಾತ: ಎಎಸ್​ಐ, ಹೆಡ್​ ಕಾನ್ಸ್​ಟೇಬಲ್ ದುರಂತ ಸಾವು​

aCCIDENT Death
Published on

ಮೈಸೂರು: ಬುಧವಾರ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಜೀಪ್ ಅಪಘಾತಕ್ಕೀಡಾಗಿ ಎಎಸ್​ಐ ಮತ್ತು ಹೆಡ್​ ಕಾನ್ಸ್​ಟೇಬಲ್​ ಮೃತಪಟ್ಟಿರುವ ಘಟನೆ ಕೆ.ಆರ್​. ನಗರ ತಾಲೂಕಿನ ಸಿದ್ದನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಎಎಸ್‌ಐ ಮೂರ್ತಿ (58) ಹಾಗೂ ಹೆಡ್ ಕಾನ್ಸ್‌ಟೇಬಲ್ ಶಾಂತಕುಮಾರ್ (45) ಮೃತ ದುರ್ದೈವಿಗಳು. ನಿಯಂತ್ರಣ ತಪ್ಪಿದ ಜೀಪ್​ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಿಬ್ಬಂದಿ ಅಸುನೀಗಿದ್ದಾರೆ.

ಮೂರ್ತಿ ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ನವಿಲೂರು ಗ್ರಾಮದವರು. ಕರ್ತವ್ಯ ಹಿನ್ನೆಲೆಯಲ್ಲಿ ಮೈಸೂರಿನಲ್ಲೇ ವಾಸವಿದ್ದರು. 1989ರಲ್ಲಿ ಪೊಲೀಸ್ ಕೆಲಸಕ್ಕೆ ಸೇರಿದ್ದರು. ಮೃತರ ಪತ್ನಿ ಮೀನಾಕ್ಷಿ (48) ತಿ. ನರಸೀಪುರ ತಾಲೂಕಿನ ಗರ್ಗೇಶ್ವರಿಯ ಆರೋಗ್ಯ ಇಲಾಖೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೃತರು ಇಬ್ಬರು ಮಕ್ಕಳನ್ನು ಬಿಟ್ಟು (ಡಾಕ್ಟರ್ ಸಚಿನ್ 22 ವರ್ಷ ಮತ್ತು ಸುದೀಪ್- 20 ವರ್ಷ) ಅಗಲಿದ್ದಾರೆ.

ಶಾಂತಕುಮಾರ್ ಅವರು ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದವರು. ಕೆ ಆರ್ ನಗರ ಪಟ್ಟಣದಲ್ಲಿ ವಾಸವಿದ್ದರು. 1999ನೇ ಸಾಲಿನಲ್ಲಿ ಮೈಸೂರು ಜಿಲ್ಲಾ ಸಿವಿಲ್ ಪೊಲೀಸ್ ಹುದ್ದೆಗೆ ಆಯ್ಕೆಯಾಗಿದ್ದರು. ಮೃತರು ಪತ್ನಿ ವಿನುತಾ (38), ಮಗ ಪ್ರೀತಮ್ (15) ಮತ್ತು ಮಗಳು ಕೃತಿಕಾ (12) ಬಿಟ್ಟು ಅಗಲಿದ್ದಾರೆ.

ಘಟನಾ ಸಂಬಂಧ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net