

ಸುಬ್ರಹ್ಮಣ್ಯ: ಕಡಬ ತಾಲೂಕಿನ ಎಡಮಂಗಲ ಗ್ರಾಮದ ಮುರುಳ್ಯದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜ.1ರಿಂದ 7ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ವಿರಾಟ್ ಧಾರ್ಮಿಕ ಕಾರ್ಯಕ್ರಮಕ್ಕೆ ಕ್ಷೇತ್ರವು ಸಿದ್ಧವಾಗುತ್ತಿದೆ. ಅಭಿವೃದ್ಧಿ ಕೆಲಸ ಮತ್ತು ಬ್ರಹ್ಮಕಲಶೋತ್ಸವ ಒಟ್ಟಾಗಿ 70 ಲಕ್ಷ ರೂ. ವೆಚ್ಚದಲ್ಲಿ ನೆರವೇರಲಿದೆ.
ಧಾರ್ಮಿಕ ಸಭೆ: ಪ್ರತಿದಿನ 7ರಿಂದ 8.30ರ ವರೆಗೆ ಧಾರ್ಮಿಕ ಸಭೆ ನಡೆಯಲಿದೆ. 1ರಂದು ಧಾರ್ಮಿಕ ಸಭಾ ಕಾರ್ಯಕ್ರಮ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಮುಖ್ಯಅತಿಥಿಗಳಾಗಿರುತ್ತಾರೆ. ರವೀಶ ತಂತ್ರಿ ಧಾರ್ಮಿಕ ಉಪನ್ಯಾಸ ನೀಡುವರು. 2ರಂದು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಉಡುಪಿ ಶ್ರೀ ಕಾಣಿಯೂರು ರಾಮತೀರ್ಥ ಮಠದ ಶ್ರೀ ವಿದ್ಯಾವಲ್ಲಭ ತೀರ್ಥಶ್ರೀಪಾದರು ಆಶೀರ್ವಚನ ನೀಡುವರು. ಕಾರ್ತಿಕ್ ತಂತ್ರಿ ಧಾರ್ಮಿಕ ಉಪನ್ಯಾಸ ನೀಡುವರು. 3ರಂದು ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಸಾದ್ವಿ ಶ್ರೀ ಮಾತಾನಂದಮಯಿ ಆಶೀರ್ವಚನ ನೀಡುವರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ ಮುಖ್ಯಅತಿಥಿಗಳಾಗಿದ್ದಾರೆ. ಹಾರಿಕಾ ಮಂಜುನಾಥ್ ಧಾರ್ಮಿಕ ಉಪನ್ಯಾಸ ನೀಡುವರು.
4ರಂದು ಸಂಸದ ಬ್ರಿಜೇಶ್ ಚೌಟ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ, ಮಂಗಳೂರು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡುವರು. ಕಲ್ಲಡ್ಕ ಡಾ.ಪ್ರಭಾಕರ ಭಟ್ ಧಾರ್ಮಿಕ ಉಪನ್ಯಾಸ ನೀಡುವರು. 5ರಂದು ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಶುಭಾಶಂಸನೆಗೈಯುವರು. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ನರಿಮೊಗರು ಸರಸ್ವತಿ ವಿದ್ಯಾಲಯದ ಅಧ್ಯಕ್ಷ ಅವಿನಾಶ್ ಕೊಡೆಂಕಿರಿ ಧಾರ್ಮಿಕ ಉಪನ್ಯಾಸ ನೀಡುವರು. ಪ್ರತಿದಿನ ರಾತ್ರಿ 9ರಿಂದ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
6ರಂದು ಬ್ರಹ್ಮಕಲಶಾಭಿಷೇಕ: ಪ್ರತಿದಿನ ಸಂಜೆ 6ರಿಂದ 7ರ ವರೆಗೆ ಭಜನಾ ತಂಡಗಳಿಂದ ಭಜನೆ ನಡೆಯಲಿದೆ. 3ರಂದು ಸಂಜೆ 6ರಿಂದ ದೇವಳದ ಪವಿತ್ರ ತೀರ್ಥಕೆರೆ ಮತ್ತು ತೀರ್ಥಬಾವಿ ಲೋಕಾರ್ಪಣೆ, ಗಂಗಾಪೂಜೆ, ದೀಪೋತ್ಸವ ಮತ್ತು ಗೋಪೂಜೆ ಜರುಗಲಿದೆ. 6ರಂದು ಬೆಳಗ್ಗೆ ಗಂಟೆ 5ರಿಂದ ವೈದಿಕ ಕಾರ್ಯಕ್ರಮ ನಡೆಯಲಿದೆ. ಮಕರ ಲಗ್ನ ಶುಭಮುಹೂರ್ತದಲ್ಲಿ ಶ್ರೀ ಮಹಿಷಮರ್ದಿನಿ ದೇವರಿಗೆ ಅಷ್ಟಬಂಧಕ್ರಿಯೆ ಬ್ರಹ್ಮಕಲಶಾಭಿಷೇಕ ಜರುಗಲಿದೆ. ರಾತ್ರಿ ದೇವರ ಉತ್ಸವ ಜರುಗಲಿದೆ. 7ರಂದು ರಾತ್ರಿ 6ರಿಂದ ರಕ್ತೇಶ್ವರಿ ಮತ್ತು ಪರಿವಾರ ದೈವಗಳಾದ ಪಂಜುರ್ಲಿ, ಮಹಿಷಂತಾಯ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ ಜರುಗಲಿದೆ.