

ಬಸವನಬಾಗೇವಾಡಿ: ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವದರ ಜೊತೆಗೆ ಅವರನ್ನು ಐಎಎಸ್, ಕೆಎಎಸ್ ಅಧಿಕಾರಿಗಳನ್ನಾಗಿ ಮಾಡುವ ಹೊಣೆಗಾರಿಕೆ ಪೌರಕಾರ್ಮಿಕರ ಮೇಲಿದೆ ಎಂದು ಪುರಸಭೆ ಸದಸ್ಯ ಅಶೋಕ ಹಾರಿವಾಳ ಹೇಳಿದರು.
ಪಟ್ಟಣದ ನಂದಿ ತರಕಾರಿ ಮಾರುಕಟ್ಟೆ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪುರಸಭೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶ ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಉತ್ತಮವಾದ ಶಿಕ್ಷಣ ಮತ್ತು ಸಂಸ್ಕಾರ ಸಿಕ್ಕಾಗ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ. ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿ, ಪುರಸಭೆ ಸದಸ್ಯೆ ಜಗದೇವಿ ಗುಂಡಳ್ಳಿ ಮಾತನಾಡಿ, ಕೋವಿಡ್-19 ಸೇರಿದಂತೆ ಹಲವಾರು ಸಂದಿಗ್ಧ ಸಂದರ್ಭದಲ್ಲಿ ತಮ್ಮ ಜೀವನ ಪಣಕ್ಕಿಟ್ಟು ಆರೋಗ್ಯ ರಕ್ಷಕರಾಗಿ ಪ್ರತಿಯೊಬ್ಬರ ಜೀವನ ಸುರಕ್ಷೆಗಾಗಿ ಹಗಲು ಇರುಳು ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ಕನಿಷ್ಠ ಸೌಜನ್ಯಕ್ಕಾದರೂ ಜನಪ್ರತಿನಿಧಿಗಳು ಹಾಗೂ ತಾಲೂಕಾಧಿಕಾರಿಗಳು ಶುಭಾಶಯ ಕೋರಲು ಆಗಮಿಸದೆ ಗೈರಾದ ಜನಪ್ರತಿನಿಧಿಗಳು ಹಾಗೂ ತಾಲೂಕಾಧಿಕಾರಿಗಳ ವಿರುದ್ಧ ಹರಿ ಹಾಯ್ದರು.
ವಿರಕ್ತಮಠದ ಸಿದ್ಧಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಪೌರಕಾರ್ಮಿಕರು ನಿತ್ಯ ನಿರಂತರವಾಗಿ ಪಟ್ಟಣವನ್ನು ಸ್ವಚ್ಛವಾಗಿರಿಸುವ ಮೂಲಕ ಪಟ್ಟಣದ ಲಕ್ಷಾಂತರ ಜನರ ಆರೋಗ್ಯ ರಕ್ಷಕರಾಗಿದ್ದಾರೆ. ಅವರ ಋಣ ತೀರಿಸಲು ಸಾಧ್ಯವಿಲ್ಲ ಎಂದರು.
ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಮೇಟಿ, ಪುರಸಭೆ ಹಿರಿಯ ಅಧಿಕಾರಿ ಕೆ.ಓ. ಮುಲ್ಲಾ, ಪುರಸಭೆ ಮಾಜಿ ಅಧ್ಯಕ್ಷ ಸಂಜು ಕಲ್ಯಾಣಿ, ಶರಣಪ್ಪ ಬೆಲ್ಲದ, ಕಿರಿಯ ಆರೋಗ್ಯ ನಿರೀಕ್ಷಕ ಮಹೇಶ ಹಿರೇಮಠ ಇತರರಿದ್ದರು. ಇದೇ ಸಂದರ್ಭದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.
ತಾಲೂಕಿನ ಮನಗೂಳಿ ಪಟ್ಟಣ ಪಂಚಾಯಿತಿಯಲ್ಲಿ ಪೌರಕಾರ್ಮಿಕ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಪಪಂ ಮುಖ್ಯಾಧಿಕಾರಿ ಶಬ್ಬಿರ ರೇವೂರಕರ ಮಾತನಾಡಿ, ದೇಶಕ್ಕೆ ಅನ್ನ ನೀಡುವ ಅನ್ನದಾತ, ದೇಶ ಕಾಯುವ ಸೈನಿಕ ಎಷ್ಟು ಮುಖ್ಯವೊ ಅಷ್ಟೇ ಮುಖ್ಯ ನಗರವನ್ನು ನಿತ್ಯವೂ ಸ್ವಚ್ಛಗೊಳಿಸುವ ಪೌರಕಾರ್ಮಿಕರ ಕಾರ್ಯ ಕೂಡ ಅಷ್ಟೇ ಮುಖ್ಯವಾಗಿದೆ ಎಂದು ಹೇಳಿದರು.