ರೈತರು ಕೊಯ್ಲಿನೋತ್ತರ ತಂತ್ರಜ್ಞಾನ ಅಳವಡಿಸಿಕೊಳ್ಳಲು ಅಶೋಕ್ ದಳವಾಯಿ ಸಲಹೆ

agri marketmeet
Published on

ಬೆಂಗಳೂರು: ದೇಶದಲ್ಲಿ ಬೆಳೆ ಕೊಯ್ಲು ವೇಳೆ ಹೆಚ್ಚಿನ ಪ್ರಮಾಣದ ಆಹಾರಧಾನ್ಯ ನಷ್ಟವಾಗುತ್ತಿದ್ದು, ಕೊಯ್ಲಿನೋತ್ತರ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ರೈತರು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ್ ದಳವಾಯಿ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್ ಜಿಕೆವಿಕೆಯಲ್ಲಿ ಕೃಷಿ ವಿವಿ ಹಾಗೂ ಭಾರತೀಯ ಕೃಷಿ ಮಾರುಕಟ್ಟೆ ಸಂಸ್ಥೆ (ಹೈದರಾಬಾದ್) ಜಂಟಿಯಾಗಿ ಆಯೋಜಿಸಿದ್ದ 38ನೇ ಭಾರತೀಯ ಕೃಷಿ ಮಾರುಕಟ್ಟೆ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಗುರುವಾರ ಮಾತನಾಡಿದರು.

ಪ್ರಸ್ತುತ ಕೃಷಿಗೆ ಹವಾಮಾನ ವೈಪರೀತ್ಯ ಶಾಪವಾಗಿ ಪರಿಣಮಿತಿಸಿದೆ. ಇದರಿಂದ ಸಣ್ಣ ಹಾಗೂ ಅತಿ ಸಣ್ಣ ರೈತರು ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಹವಾಮಾನಕ್ಕೆ ತಕ್ಕಂತೆ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ದೇಶದಲ್ಲಿ ಕೊಯ್ಲಿನ ಬಳಿಕ ಶೇ.6 ಆಹಾರ ಧಾನ್ಯ, ಶೇ.26 ಹಣ್ಣು ತರಕಾರಿಗಳು ಪೋಲಾಗುತ್ತಿವೆ. ಈ ನಿಟ್ಟಿನಲ್ಲಿ ಕೊಯ್ಲಿನೋತ್ತರ ತಂತ್ರಜ್ಞಾನಕ್ಕೆ ಒತ್ತು ನೀಡಬೇಕಾದ ಅಗತ್ಯ ಇದೆ ಎಂದು ಪ್ರತಿಪಾದಿಸಿದರು.

ದೇಶದ ಜನಸಂಖ್ಯೆಯಲ್ಲಿ ಶೇ.34 ಯುವಜನರು ಇದ್ದು, ಇವರಿಗೆ ಕೃಷಿ ಅತಿ ದೊಡ್ಡ ಉದ್ಯೋಗ ಸೃಷ್ಟಿಸುವ ವಲಯವನ್ನಾಗಿ ರೂಪಿಸಲು ಸ್ಪಷ್ಟ ನೀತಿಯನ್ನು ಜಾರಿಗೊಳಿಸಬೇಕಿದೆ. ನಿರ್ದಿಷ್ಟ ಸ್ಥಳದಲ್ಲಿ ಮಾರುಕ್ಟೆ ಲಭ್ಯತೆ ಇಲ್ಲದ ಕಾರಣ ರೈತರು ನಷ್ಟಕ್ಕೆ ಒಳಗಾಗುತ್ತಿದ್ದು, ಆಯಾ ಪ್ರದೇಶಗಳಲ್ಲಿ ಮಾರುಕಟ್ಟೆಗಳ ನಿರ್ಮಾಣ, ಗೋದಾಮು ಅಭಿವೃದ್ಧಿಗೆ ಗಮನ ನೀಡಬೇಕಿದೆ ಎಂದು ದಳವಾಯಿ ತಿಳಿಸಿದರು.

ಆದಾಯ ಹೆಚ್ಚಳಕ್ಕೆ ಎಫ್​​ಪಿಒ ರಚಿಸಿಕೊಳ್ಳಿ:

ಭಾರತೀಯ ಕೃಷಿ ಮಾರುಕಟ್ಟೆ ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಮಹೇಂದ್ರ ದೇವ್ ಮಾತನಾಡಿ, ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ ಮಧ್ಯವರ್ತಿಗಳ ಹಾವಳಿಗೆ ಒಳಗಾಗಿ ಬೆಲೆ ನಷ್ಟ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯಿಂದ ಹೊರಬರಲು ರೈತರು ಸಂಘಟಿತರಾಗಿ ತಾವು ಬೆಳೆದ ಪದಾರ್ಥಗಳನ್ನು ಖುದ್ದು ನೇರವಾಗಿ ಮಾರುಕಟ್ಟೆ ಮಾಡುವುದರಿಂದ ಆದಾಯ ಗಳಿಸಬಹುದಾಗಿದೆ. ಇದಕ್ಕಾಗಿ ರೈತ ಉತ್ಪಾದಕ ಸಂಘ (ಎಫ್​​ಪಿಒ) ಗಳನ್ನು ರಚಿಸಿಕೊಂಡು ಮುನ್ನಡೆಯಬೇಕಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಭಾರತಿಯ ಕೃಷಿ ಮಾರುಕಟ್ಟೆ ಸಂಸ್ಥೆಯ ಕಾರ್ಯದರ್ಶಿ ಡಾ. ಟಿ.ಸತ್ಯನಾರಾಯಣ, ಅಹಮದಾಬಾದ್‌ನ ಕೃಷಿ ನಿರ್ವಹಣಾ ಕೇಂದ್ರದ ಡಾ. ಸುಖ್‌ಪಾಲ್ ಸಿಂಗ್, ವಿಶ್ರಾಂತ ಕುಲಪತಿ ಡಾ. ಪಿ.ಜಿ. ಚಂಗಪ್ಪ, ವಿವಿ ಡೀನ್ (ಕೃಷಿ) ಡಾ. ಎನ್.ಬಿ.ಪ್ರಕಾಶ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net