ಮಂಗಳೂರಿನಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳದ ರೊಟ್ಟಿ; ಹೋಟೆಲ್ ಆಶೀರ್ವಾದ್ ಹೆಚ್ಚುವರಿ ಉತ್ಪನ್ನಗಳೊಂದಿಗೆ ಸುಸಜ್ಜಿತ ಕೊಠಡಿಗೆ ಸ್ಥಳಾಂತರ

IMG-20241205-WA0020
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ಉತ್ತರ ಕರ್ನಾಟಕ ಶೈಲಿಯ ಊಟ- ಉಪಹಾರಕ್ಕೆ ಮನೆಮಾತಾಗಿರುವ ಹೊಟೇಲ್ ಆಶೀರ್ವಾದ್ ಜೆಆರ್‌ಸಿ ನಗರದ ಪಿವಿಎಸ್ ವೃತ್ತ ಸಮೀಪದ ಮಾನಸ ಟವರ್‌ನ ತಳ ಅಂತಸ್ತಿನಲ್ಲಿ ಮುಂಭಾಗದಿಂದ, ಅದೇ ಕಟ್ಟಡದ ಹಿಂಭಾಗದ ವಿಶಾಲ ಸುಸಜ್ಜಿತ ಕೊಠಡಿಗೆ ಗುರುವಾರ ಸ್ಥಳಾಂತರಗೊಂಡಿದೆ.

ಶಾಸಕ ಡಿ.ವೇದವ್ಯಾಸ ಕಾಮತ್, ಕಾರ್ಪೊರೇಟರ್ ಲೀಲಾವತಿ, ಕಟ್ಟಡದ ಮಾಲೀಕ ಮಹೇಂದ್ರ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಜೋಳದ ರೊಟ್ಟಿ, ರಾಗಿ ಮುದ್ದೆ, ಅಕ್ಕಿ ರೊಟ್ಟಿ, ರಾಗಿ ರೊಟ್ಟಿ, ಶೇಂಗಾ ಚಟ್ನಿ, ಎಣ್ಣೆಗಾಯಿ, ಬಜ್ಜಿ, ಬೆಳ್ಳುಳ್ಳಿ ಚಟ್ನಿ, ಚಿತ್ರಾನ್ನ, ಪುಳಿಯೋಗರೆ, ಶೇಂಗಾ ಹೋಳಿಗೆ, ವಿವಿಧ ಕಾಳು ಪಲ್ಯ ಇತ್ಯಾದಿ ಉತ್ತರ ಕರ್ನಾಟಕ ಶೈಲಿಯ ಮನೆ ಊಟದ ಸ್ವಾದ ಸವಿಯಲು ಮಂಗಳೂರು ಭಾಗದಲ್ಲಿ ನೆಲೆಸಿರುವ ಉತ್ತರ ಕರ್ನಾಟಕದ ಜನರು ಹೊಟೇಲ್ ಆಶೀರ್ವಾದ್‌ಗೆ ಭೇಟಿ ನೀಡಲೇಬೇಕು. ಇದರ ಜತೆಯಲ್ಲಿ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಆಹಾರದ ರುಚಿ ಹಿಡಿದ ಸ್ಥಳೀಯರು ಕೂಡ ಇಲ್ಲಿಗೆ ಬರುತ್ತಾರೆ.

ಮೆನುವಿಗೆ ಹೊಸ ಸೇರ್ಪಡೆ: ಉತ್ತರ ಕರ್ನಾಟಕದ ಆಹಾರಗಳಿಗೆ ಪೂರಕವಾದ ಉತ್ತರ ಭಾರತದಲ್ಲಿ ಜನಪ್ರಿಯವಾಗಿರುವ ಪನೀರ್ ಮಸಾಲ, ಬೇಬಿ ಕಾರ್ನ್ ಮುಂತಾದ ಆಹಾರ ಹಾಗೂ ಪಾನೀಯಗಳು ಕೂಡ ಇನ್ನು ಹೊಟೇಲ್‌ನಲ್ಲಿ ಲಭ್ಯವಾಗಲಿವೆ. ಗ್ರಾಹಕರ ಅಭಿಪ್ರಾಯ ಆಧರಿಸಿ ಹೊಸ ಭಕ್ಷೃಗಳನ್ನು ಒದಗಿಸಲು ಹೊಟೇಲ್ ಮಾಲೀಕ ಬಸವಂತಪ್ಪ ರಾಮಚಂದ್ರಪ್ಪ ಅರ್ಕಸಾಲಿ ಮತ್ತು ಪೂರ್ಣಿಮಾ ದಂಪತಿ ತೀರ್ಮಾನಿಸಿದ್ದಾರೆ.

ದಂಪತಿಯ ಯಶೋಗಾಥೆ

ವರ್ಷದ ಹಿಂದೆ ಮಾನಸ ಟವರ್‌ನಲ್ಲಿ ಆಶೀರ್ವಾದ್ ಜೋಳದ ರೊಟ್ಟಿ ಹೊಟೇಲ್ ಆರಂಭವಾದಾಗ ‘ಇದು ಹೆಚ್ಚು ಅಂದರೆ ಎರಡು ತಿಂಗಳು’ ಎಂದು ಗೊಣಗಿಕೊಂಡವರೇ ಅಧಿಕ ಜನ. ಅದೇ ಸ್ಥಳದಲ್ಲಿ ಹಿಂದೆ ಆರಂಭವಾಗಿದ್ದ 3- 4 ಹೊಟೇಲ್‌ಗಳು ಆರಂಭವಾದ ಕೆಲ ತಿಂಗಳಲ್ಲೇ ಗ್ರಾಹಕರಿಲ್ಲದೆ ಬಾಗಿಲು ಮುಚ್ಚಿತ್ತು.

ಆದರೆ ಆಶೀರ್ವಾದ್ ಹೊಟೇಲ್ ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಲೇ ಹೋಯಿತು. ನಗರದ ಹೊರ ಭಾಗದಲ್ಲಿ ನೆಲೆಸಿರುವ ಉತ್ತರ ಕರ್ನಾಟಕ ಜನರು ಕೂಡ ಹೊಟೇಲ್ ಹುಡುಕಿಕೊಂಡು ಬರಲು ಆರಂಭಿಸಿದರು.

ಇದು ಹೇಗೆ ಸಾಧ್ಯವಾಯಿತು ಎಂದರೆ ಬಸವಂತಪ್ಪ ರಾಮಚಂದ್ರಪ್ಪ ಅವರು ನಗುತ್ತಾರೆ.

ಉತ್ತರ ಕರ್ನಾಟಕದ ತುಂಬಾ ಜನರು ಮಂಗಳೂರು ಆಸುಪಾಸು ಉದ್ಯೋಗ ನಿಮಿತ್ತ ನೆಲೆಸಿದ್ದಾರೆ. ಅವರಿಗೆ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಮನೆ ಊಟ- ಉಪಹಾರ ಬೇಕು. ಇಲ್ಲಿ ಊಟ ಸರಿಯಾಗುತ್ತಿಲ್ಲ ಎಂದು ಕಲಿಯಲು ಬಂದಿರುವ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಶಿಕ್ಷಣ ಅರ್ಧದಲ್ಲೇ ಮೊಟಕುಗೊಳಿಸಿ ಊರಿಗೆ ವಾಫಾಸು ಹೋದವರು ಇದ್ದಾರೆ. ಈ ಹಿನ್ನೆಲೆಯಲ್ಲಿ ಈ ಜನರಿಗೆ ಯಾವ ರೀತಿಯ ಆಹಾರ ಬೇಕು ಎಂದು ತಿಳಿದು ಪೂರೈಸುವ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇವೆ ಎನ್ನುತ್ತಾರೆ ಅವರು.

ಹಿಂದುಸ್ತಾನ್ ಯೂನಿಲಿವರ್ ಲಿಮಿಟೆಡ್ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಬಸವಂತಪ್ಪ ರಾಮಚಂದ್ರಪ್ಪ ಅವರು 2010 ರಲ್ಲಿ ಧಾರವಾಡದಿಂದ ವರ್ಗಾವಣೆಗೊಂಡು ಮಂಗಳೂರಿಗೆ ಬಂದಿದ್ದರು. ಸಾಂಪ್ರದಾಯಿಕ ಅಡುಗೆ ತಯಾರಿಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಪತ್ನಿ ಪೂರ್ಣಿಮಾ ಅವರು ಮಾರಾಟ ಮಾಡಲು ಸಾಧ್ಯವಾಗುವ ಕೆಲವು ಉತ್ಪನ್ನಗಳನ್ನು ತಯಾರಿಸಲು ಆರಂಭಿಸಿದರು. ನಂತರದ ದಿನಗಳಲ್ಲಿ ಮಂಗಳೂರು ರಥಬೀದಿಯಲ್ಲಿ ಸಣ್ಣ ಹೊಟೇಲ್ ಆರಂಭ. ಬಳಿಕ ಈಗ ಇರುವ ಕಟ್ಟಡಕ್ಕೆ ಹೊಟೇಲ್ ಸ್ಥಳಾಂತರಗೊಂಡಿದೆ. ಬಸವಂತಪ್ಪ ರಾಮಚಂದ್ರಪ್ಪ ಅವರು ತಮ್ಮ ಕಂಪನಿ ಉದ್ಯೋಗಕ್ಕೆ ರಾಜೀನಾಮೆ ನೀಡಿ ಪತ್ನಿಯ ಜತೆ ಹೊಟೇಲ್ ಉದ್ಯಮದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net