

ಮಂಗಳೂರು: ಸೂರ್ಯ ಹಾಗೂ ಚಂದ್ರರ ಚಲನೆಯನ್ನು ಅನುಸರಿಸಿ ಅವರವರ ಪದ್ಧತಿಯಂತೆ ಕಾಲದ ಪರಿಗಣನೆ ನಡೆಯುತ್ತದೆ. ತುಳುವರ ಆಟಿ ಆಚರಣೆಗಳು ಚಾಂದ್ರಮಾನ ಪದ್ಧತಿಯ ಆಷಾಢ ತಿಂಗಳಿಗೆ ಅನ್ವಯಿಸುವುದಿಲ್ಲ. ಆದ್ದರಿಂದ ಆಟಿ ಆಟಿಯೇ, ಅದನ್ನು ಆಷಾಢವೆಂದು ತಿಳಿಯುವುದು ಸರಿಯಲ್ಲ ಎಂದು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.
ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ ಆಶ್ರಯದಲ್ಲಿ ಕಲ್ಲಾಪು ಬಳಿಯ ‘ಕದಿಕೆ’ ತುಳುಚಾವಡಿಯಲ್ಲಿ ಇತ್ತೀಚೆಗೆ ‘ಆಷಾಢದ ಆಶಯ’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಷ್ಠಾನದ ಪ್ರಧಾನ ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು ಕಾರ್ಯಕ್ರಮ ಉದ್ಘಾಟಿಸಿದರು. ಪದಾಧಿಕಾರಿಗಳಾದ ಪಿ.ಡಿ.ಶೆಟ್ಟಿ, ಲಕ್ಷ್ಮೀನಾರಾಯಣ ರೈ ಹರೇಕಳ, ಲಾಲಿತ್ಯ, ವಿಷ್ಣುಸ್ಮರಣ್ ರೈ, ವಿಜಯಲಕ್ಷ್ಮಿ ಬಿ.ಶೆಟ್ಟಿ, ನಮಿತಾ ಶಾಮ್, ಸುಮಾ ಪ್ರಸಾದ್, ಗೀತಾ ಜ್ಯುಡಿತ್ ಮಸ್ಕರೇನ್ಹಸ್, ಪ್ರತಿಮಾ ಹೆಬ್ಬಾರ್ ಚರ್ಚೆಯಲ್ಲಿ ಪಾಲ್ಗೊಂಡರು.
ಪ್ರತಿಷ್ಠಾನದ ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವಿಜಯಲಕ್ಷ್ಮೀ ಕಟೀಲು ವಂದಿಸಿದರು.
--------------------------
ಪ್ರತಿ ಸಂಕ್ರಾಂತಿಯ ಮರುದಿನದಿಂದ ಸೌರಮಾನಿಗಳ ಹೊಸ ತಿಂಗಳು ಆರಂಭವಾದರೆ ಹುಣ್ಣಿಮೆ-ಅಮಾವಾಸ್ಯೆಗಳ ತಿಥಿ ಅನುಸರಿಸಿ ಚಾಂದ್ರಮಾನಿಗಳು ತಿಂಗಳ ಲೆಕ್ಕಾಚಾರ ಮಾಡುತ್ತಾರೆ. ಈ ಬಾರಿ ಅಧಿಕ ಮಾಸದ ಕಾರಣದಿಂದ ಆಷಾಢ ಮುಗಿದಿದ್ದರೂ ಇನ್ನೂ 10-15 ದಿನ ಆಟಿ ತಿಂಗಳು ಇರಲಿದೆ.
ಭಾಸ್ಕರ ರೈ ಕುಕ್ಕುವಳ್ಳಿ
ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ ಅಧ್ಯಕ್ಷ