

ಹಿಂದೂ ಪುರಾಣಗಳ ಪ್ರಕಾರ ವರ್ಷದ 12 ಮಾಸಗಳಲ್ಲಿ ಶ್ರಾವಣ ಅತ್ಯಂತ ಶ್ರೇಷ್ಠವಾದದ್ದು. ಶ್ರವಣ ಎಂದರೆ ಕೇಳು ಎಂದರ್ಥ. ಈ ಮಾಸದಲ್ಲಿ ದೇವರ ಭಜನೆ, ಕೀರ್ತನೆ, ಪುರಾಣ, ಪ್ರವಚನಗಳನ್ನು ಕೇಳವ ಮೂಲಕ ದೈವಕೃಪೆ ಗಳಿಸಬಹುದು ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ನಾಡಿನ ಮಠ-ಮಂದಿರಗಳಲ್ಲಿ ವಿಶೇಷ ಪೂಜೆ, ಪುರಾಣ ಪ್ರವಚನಗಳು ಅವ್ಯಾಹತವಾಗಿ ನಡೆಯಲಿವೆ.
ವೈಷ್ಣವ ಪರಂಪರೆಯಲ್ಲಿ ಚಾತುರ್ಮಾಸ್ಯ ವ್ರತ ಆರಂಭವಾಗಿದ್ದು, ಸನ್ಯಾಸಿಗಳು ವ್ರತದಲ್ಲಿ ನಿಕ್ಷಿತರಾಗಿದ್ದಾರೆ. ಆದರೆ ವೀರಶೈವ ಪರಂಪರೆಯಲ್ಲಿ ಶ್ರಾವಣ ಮಾಸವನ್ನು ವ್ರತವಾಗಿ ಆಚರಿಸುವ ಪದ್ಧತಿ ಇದೆ. ಪಂಚಪೀಠಗಳ ಪೀಠಾಚಾರ್ಯರು, ವಿವಿಧ ಮಠಾಧೀಶರು ತಿಂಗಳ ಪರ್ಯಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಮಠದಲ್ಲಿ ನಿತ್ಯ ವಿಶೇಷ ಪೂಜೆ, ಪ್ರವಚನ, ವಚನ, ಶಿವಾನುಭವವನ್ನು ಹಮ್ಮಿಕೊಳ್ಳಲಾಗಿದೆ.
ಬಾಳೆಹೊನ್ನೂರು ಶ್ರೀಜಗದ್ಗುರು ರಂಭಾಪುರಿ ವೀರಸಿಂಹಾಸನ ಪೀಠದಲ್ಲಿ ಡಾ.ವೀರಸೋಮೇಶ್ವರ ಜಗದ್ಗುರುಗಳ 33ನೇ ವರ್ಷದ ಶ್ರಾವಣ ತಪೋನುಷ್ಠಾನವು ಆ.5ರಿಂದ ಆರಂಭವಾಗಿದ್ದು, ಸೆ.2ರವರೆಗೆ ನಡೆಯಲಿದೆ. ಪ್ರತಿನಿತ್ಯ ಜಗದ್ಗುರುಗಳ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ, ಸಂಜೆ ಶ್ರೀಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ, ಶ್ರೀಜಗದ್ಗುರು ರೇಣುಕಾಚಾರ್ಯರಿಗೆ, ಭದ್ರಕಾಳಿ ಸಮೇತ ಕ್ಷೇತ್ರನಾಥ ಶ್ರೀವೀರಭದ್ರ ಸ್ವಾಮಿ, ಸೋಮೇಶ್ವರ ಮಹಾಲಿಂಗಕ್ಕೆ ರುದ್ರಾಭಿಷೇಕ, ವಿಶೇಷ ಪೂಜೆ ನಡೆಯಲಿದ್ದು, ಪ್ರತಿ ಸೋಮವಾರ, ಗುರುವಾರ ಜಗದ್ಗುರುಗಳು ಆಶೀರ್ವಚನ ನೀಡಲಿದ್ದಾರೆ.
ದೇಶದ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀಶೈಲ ಮಹಾಕ್ಷೇತ್ರದಲ್ಲಿ ಶ್ರಾವಣ ಮಾಸದ ಅಂಗವಾಗಿ ಶ್ರೀಶೈಲ ಜಗದ್ಗುರುಗಳ 15ನೇ ವರ್ಷದ ಅನುಷ್ಠಾನವು ಆ.8 ರಿಂದ ಆರಂಭವಾಗಲಿದೆ. ಪ್ರತಿದಿನ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ, ವಿಜಯಪುರದ ಶ್ರೀಸಿದ್ಧಲಿಂಗ ಸ್ವಾಮಿಗಳಿಂದ ಪ್ರವಚನ ನಡೆಯಲಿದೆ. ದೇಶದ ವಿವಿಧ ಪ್ರಾಂತ್ಯಗಳಿಂದ ಆಗಮಿಸುವ ಭಕ್ತರಿಗೆ ನಿತ್ಯ ದಾಸೋಹ, ಬ್ರಮರಾಂಭ ಸಮೇತ ಮಲ್ಲಿಕಾರ್ಜುನ ಸ್ವಾಮಿಗೆ ವಿಶೇಷ ಪೂಜೆ, ಉತ್ಸವಗಳು ತಿಂಗಳ ಪರ್ಯಂತ ನಡೆಯಲಿವೆ.
ಇದೇ ವೇಳೆ ಉಜ್ಜಯಿನಿ, ಕೇದಾರ ಮತ್ತು ಕಾಶೀ ಪೀಠದ ಜಗದ್ಗುರುಗಳು ಶ್ರಾವಣ ಮಾಸದ ಅಂಗವಾಗಿ ವಿಶೇಷ ಪೂಜೆ, ಅನುಷ್ಠಾನ ಕೈಗೊಳ್ಳಲಿದ್ದಾರೆ.
ಕಲ್ಯಾಣ ಕರ್ನಾಟಕದ ಬಹುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಅಬ್ಬೆತುಮಕೂರು ಸಿದ್ಧಸಂಸ್ಥಾನದ ಸದ್ಗುರು ಶ್ರೀವಿಶ್ವಾರಾಧ್ಯ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ವಿಶ್ವಾರಾಧ್ಯರ ಜನ್ಮಸ್ಥಳವಾದ ಗವ್ಹಾರ ಹಿರೇಮಠದ ಶ್ರೀಬನ್ನಿ ಬಸವೇಶ್ವರ ಕ್ಷೇತ್ರದಿಂದ ಅಬ್ಬೆತುಮಕೂರಿಗೆ 50ಕಿ.ಮೀ. ಪರಂಪರಾ ಪಾದಯಾತ್ರೆಯ ಮೂಲಕ ಶ್ರಾವಣ ಮಾಸದ ಶಿವಾನುಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ
ಸಗರನಾಡಿನ ಕಾಮಧೇನು, ಕಲ್ಪವೃಕ್ಷ, ನಡೆದಾಡುವ ದೇವರೆಂದು ಪ್ರಸಿದ್ಧವಾಗಿರುವ, ಲಕ್ಷಾಂತರ ಭಕ್ತರ ಆರಾಧ್ಯದೈವ ಶ್ರೀಸದ್ಗುರು ವಿಶ್ವಾರಾಧ್ಯ ಗದ್ದುಗೆಗೆ ಹಾಗೂ ಜಗನ್ಮಾತೆ ಭಗಳಾಮುಖಿಗೆ ಶ್ರೀಗಂಗಾಧರ ಶಿವಾಚಾರ್ಯ ಸ್ವಾಮಿಗಳು ನೇತೃತ್ವದಲ್ಲಿ ಒಂದು ತಿಂಗಳ ಕಾಲ ವಿಶೇಷ ಪೂಜೆ, ಭಕ್ತರಿಗೆ ಮಹಾಪ್ರಸಾದ ವಿತರಣೆಯಾಗಲಿದೆ.
ದಕ್ಷಿಣ ಭಾರತದ ಬೃಹತ್ ಸ್ಪಟಿಕಲಿಂಗ ಎಂದು ಪ್ರಸಿದ್ಧವಾಗಿರುವ ರಾಣಿಬೆನ್ನೂರು ತಾಲೂಕಿನ ಲಿಂಗದಹಳ್ಳಿ ಹಿರೇಮಠದಲ್ಲಿರುವ ಸ್ಪಟಿಕಲಿಂಗಕ್ಕೆ ಶ್ರಾವಣ ಮಾಸದ ಅಂಗವಾಗಿ ಮಹಾರುದ್ರಾಭಿಷೇಕ, ವಿಶೇಷ ಪೂಜೆ ಏರ್ಪಡಿಸಲಾಗಿದೆ.
ಸ್ಪಟಿಕದ ಮಹತ್ವವನ್ನು ಯುಜುರ್ವೇದದಲ್ಲಿ ಉಲ್ಲೇಖಿಸಲಾಗಿದ್ದು, ‘ಶುದ್ಧ ಸ್ಪಟಿಕ ಸಂಕಾಶಂ ಶುದ್ಧ ವಿದ್ಯಾ ಪ್ರದಾಯಕಂ, ಶುದ್ದಂ ಪೂರ್ಣ ಚಿದಾನಂದಂ, ಸದಾಶಿವಂ ಮಹಂಭಜೆ’ ಎಂಬ ಮಾತಿನಂತೆ ಸ್ಪಟಿಕದಿಂದ ನಕಾರಾತ್ಮಕ ಶಕ್ತಿ ನಾಶವಾಗಲಿದ್ದು, ದರ್ಶನ, ಸ್ಪರ್ಶನ, ಪೂಜೆಯಿಂದ ಉತ್ತಮ ಲ ದೊರೆಯಲಿದೆ.
ಶ್ರಾವಣ ಮಾಸದಲ್ಲಿ ಸ್ಪಟಿಕ ಲಿಂಗದ ದರ್ಶನಕ್ಕೆ ಸರ್ವರಿಗೂ ಮುಕ್ತ ಅವಕಾಶವಿದೆ. ಸ್ಪಟಿಕ ಲಿಂಗದ ಜೊತೆಗೆ ಅಪರೂಪದ ನಾಲ್ಕು ಪಚ್ಚೆಲಿಂಗ, 12 ನರ್ಮದೇಶ್ವರ ಲಿಂಗ, 18 ಶಕ್ತಿದೇವತೆಯರ ಸಾನಿಧ್ಯವೂ ಇಲ್ಲಿದೆ.
ರಾಯಚೂರು ಜಿಲ್ಲೆ, ಮಾನ್ವಿ ತಾಲೂಕಿನ ಸುಕ್ಷೇತ್ರ ಉಟಕನೂರು ಶ್ರೀಅಡವಿಸಿದ್ದೇಶ್ವರ ಮಠದ ಶ್ರೀಮರಿಬಸವಲಿಂಗ ತಾತನವರ ಕರ್ತೃ ಗದ್ದುಗೆಗೆ ಶ್ರಾವಣ ಮಾಸದ ನಿಮಿತ್ತ ನಿತ್ಯ ರುದ್ರಾಭಿಷೇಕ, ವಿಶೇಷ ಪೂಜೆ ಜೊತೆಗೆ ಒಂದು ತಿಂಗಳ ಅಖಂಡ ಶಿವಭಜನೆ ಹಮ್ಮಿಕೊಳ್ಳಲಾಗಿದೆ.
ಉಳಿದಂತೆ ನಾಡಿನ ಬಹುತೇಕ ಎಲ್ಲ ಮಠಗಳಲ್ಲೂ ಶ್ರಾವಣ ಮಾಸದ ಅಂಗವಾಗಿ ವಿಶೇಷ ಪೂಜೆ, ಪುರಾಣ ಪ್ರವಚನ ಹಮ್ಮಿಕೊಳ್ಳಲಾಗಿದ್ದು, ವಿಶೇಷವಾಗಿ ವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯರು, ಶಿವಗಂಗೆ ಮಠದ ಡಾ.ಮಲಯಶಾಂತಮುನಿ ಶಿವಾಚಾರ್ಯರು, ಹುಕ್ಕೇರಿ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯರು, ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯರು ಶ್ರಾವಣ ಮಾಸದಲ್ಲಿ ಭಕ್ತರ ಮನೆಯಿಂದ ಮನೆಗೆ ಶಿವಾನುಭವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.