

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಗೆಲವು ಸಾಧಿಸಿದರೆ ಫಲಿತಾಂಶದ ಮರುದಿನವೇ ಜೈಲಿನಿಂದ ಹೊರಬರುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಹೇಳಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ತಿಹಾರ್ನಲ್ಲಿರುವ ನನ್ನ ಸೆಲ್ನಲ್ಲಿ ಎರಡು ಸಿಸಿಟಿವಿ ಕ್ಯಾಮೆರಾಗಳಿದ್ದವು. ಆ ವಿಡಿಯೋಗಳನ್ನು 13 ಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಿದ್ದರು. ಸಿಸಿಟಿವಿ ವಿಡಿಯೋಗಳನ್ನು ಪ್ರಧಾನಮಂತ್ರಿ ಕಚೇರಿಗೆ ನೀಡಲಾಗಿದೆ. ಮೋದಿ ಅವರು ನನ್ನ ಮೇಲೆ ನಿಗಾ ಇಡುತ್ತಿದ್ದಾರೆ. ಮೋದಿಯವರಿಗೆ ನನ್ನ ಮೇಲೆ ಯಾವ ದ್ವೇಷವಿದೆ ಗೊತ್ತಿಲ್ಲ ಎಂದು ಕೇಜ್ರಿವಾಲ್ ದೂರಿದರು.
"ಜೂನ್ 2 ರಂದು ನಾನು ಜೈಲಿಗೆ ಹಿಂತಿರುಗಬೇಕಾಗಿದೆ. ನಾನು ಜೈಲಿನಿಂದ ಚುನಾವಣಾ ಫಲಿತಾಂಶಗಳನ್ನು ನೋಡುತ್ತೇನೆ. 4ರಂದು ಜೈಲಿನಲ್ಲೇ ಫಲಿತಾಂಶ ವೀಕ್ಷಿಸುತ್ತೇನೆ. ಇಂಡಿಯಾ ಮೈತ್ರಿಜೈಟ ಗೆಲುವು ಸಾಧಿಸಿದರೆ, ಮರುದಿನ ಹೊರಗೆ ಬರುತ್ತೇನೆ. ಇಲ್ಲದಿದ್ದರೆ, ಫಿರ್ ದೇಖೋ ಕಬ್ ಮಿಲೇಂಗೆ (ನಾವು ಮುಂದೆ ಯಾವಾಗ ಭೇಟಿಯಾಗುತ್ತೇವೆ ಎಂದು ನನಗೆ ತಿಳಿದಿಲ್ಲ, ”ಎಂದು ಸಭೆಯ ನಂತರ ಎಎಪಿ ಕೌನ್ಸಿಲರ್ಗಳನ್ನು ಉದ್ದೇಶಿಸಿ ಕೇಜ್ರಿವಾಲ್ ಹೇಳಿದರು.
ದೆಹಲಿ ಮತ್ತು ಪಂಜಾಬ್ನಲ್ಲಿ ತಮ್ಮ ಸರ್ಕಾರ ಮಾಡಿದ ಕೆಲಸಗಳಿಗೆ ಹೆದರಿ ಬಿಜೆಪಿ ತನ್ನ ಪಕ್ಷವನ್ನು ಹತ್ತಿಕ್ಕಲು ಬಯಸಿದೆ ಎಂದು ಕೇಜ್ರಿವಾಲ್ ಆರೋಪಿಸಿದರು.
ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಕೇಜ್ರಿವಾಲ್ ಅವರಿಗೆ ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿದೆ. ಜೂನ್ 2ರಂದು ಶರಣಾಗಿ ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ. ಏಳು ಹಂತದ ಚುನಾವಣೆಗೆ ಜೂನ್ 1 ಕೊನೆಯ ದಿನವಾಗಿದ್ದು, ಜೂ.4ರಂದು ಮತ ಎಣಿಕೆ ನಡೆಯಲಿದೆ.