

ಕೋಟ: ಕಲೆ, ಸಂಗೀತ, ಭರತನಾಟ್ಯ, ಯಕ್ಷಗಾನದಂಥ ಕ್ಷೇತ್ರ ಕಲೆಗಳು ಸಂಸ್ಕಾರ ನೀಡುವುದರೊಂದಿಗೆ ನಮ್ಮ ಸಂಸ್ಕೃತಿ ತಿಳಿಸುತ್ತವೆ ಎಂದು ಎಡನೀರು ಮಠಾಧೀಶ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ಹಂಗಾರಕಟ್ಟೆ ಐರೋಡಿ ಯಕ್ಷಗಾನ ಕಲಾಕೇಂದ್ರ ವತಿಯಿಂದ ನಡೆಯುತ್ತಿರುವ ನಾಲ್ಕನೇ ವರ್ಷದ ಯಕ್ಷಗಾನ ಸಪ್ತೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮತ್ತು ವಾಣಿಜ್ಯೀಕರಣದಿಂದ ಯಕ್ಷಗಾನ ಕಲೆಯ ಮೂಲ ಸ್ವರೂಪ ಮರೆಯಾಗುತ್ತಿದೆ. ಯಕ್ಷಗಾನ ಕಲಾಕೇಂದ್ರಗಳ ಮೂಲಕ ಯಕ್ಷಗಾನ ಕಲೆಯ ಮೂಲ ಸ್ವರೂಪ ಉಳಿದುಕೊಂಡಿರುವುದು ಶ್ಲಾಘನೀಯ ಎಂದರು.
ಕಲಾಕೇಂದ್ರ ಅಧ್ಯಕ್ಷ ಆನಂದ ಸಿ.ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಕರ್ಣಾಟಕ ಬ್ಯಾಂಕ್ ಚೀಫ್ ಮ್ಯಾನೇಜರ್ ಜಯಾನಂದ ದೇವಾಡಿಗ, ಸೆಲ್ಕೋ ಸೋಲಾರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ ಹೆಗಡೆ, ಸಾಲಿಗ್ರಾಮ ಗುರುನರಸಿಂಹ ದೇವಳ ಅಧ್ಯಕ್ಷ ಡಾ.ಕೆ.ಎಸ್.ಕಾರಂತ, ನಿಕಟಪೂರ್ವ ಅಧ್ಯಕ್ಷ ಅನಂತಪದ್ಮನಾಭ ಐತಾಳ ಇದ್ದರು.
ಕಲಾಕೇಂದ್ರ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈಕುಂಠ ಹೇರ್ಳೆ ವಂದಿಸಿದರು. ಸೀತಾರಾಮ ಸೋಮಯಾಜಿ ನಿರೂಪಿಸಿದರು. ನಂತರ ಯಕ್ಷಗಾನ ಪ್ರದರ್ಶನ ನಡೆಯಿತು.