ಸೈಲೆಂಟ್ ಕಿಲ್ಲರ್ ಹ್ಯಾಪಿ ಹೈಪೋಕ್ಸಿಯಾ; ಯುವ ಸಮುದಾಯಕ್ಕೆ ಮಾರಕ

IMG-20210512-WA0007
Published on

((ಕೋವಿಡ್ ಎರಡನೇ ಅಲೆ ಯುವ ಸಮುದಾಯಕ್ಕೆ ಮಾರಕವಾಗಿ ಪರಿಣಮಿಸಿದೆ. ಇದು ಸೋಂಕಿತರಲ್ಲಿ ಸಣ್ಣ ಪ್ರಮಾಣದ ಉಸಿರಾಟ ತೊಂದರೆಯಿಂದ ಗಂಭೀರವಾದ ಅಡಲ್ಟ್ ರೆಸ್ಪಿರೇಟರಿ ಡಿಸ್ಟ್ರೆಸ್ ಸಿಂಡ್ರೋಮ್ (ಎಆರ್​ಡಿಎಸ್) ಅನ್ನು ಉಂಟುಮಾಡುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಸೈಲೆಂಟ್ ಹೈಪೋಕ್ಸಿಯಾ ಅಥವಾ ಹ್ಯಾಪಿ ಹೈಪೋಕ್ಸಿಯಾ ಎನ್ನುತ್ತಾರೆ.))

| ಉಮೇಶ್​ಕುಮಾರ್ ಶಿಮ್ಲಡ್ಕ

ದೇಶವನ್ನು ತಲ್ಲಣಗೊಳಿಸಿರುವ ಕೋವಿಡ್ ಎರಡನೇ ಅಲೆಯಲ್ಲಿ ನಿತ್ಯವೂ 4 ಲಕ್ಷಕ್ಕೂ ಹೆಚ್ಚು ಹೊಸ ಕೇಸ್​ಗಳ ಪತ್ತೆ ಆತಂಕ ಮೂಡಿಸಿದೆ. ಸಾವಿನ ಪ್ರಮಾಣವೂ ಕಳವಳಕಾರಿ. ಈ ನಡುವೆ, ಯುವಜನರಲ್ಲಿ ಆತಂಕ ಉಂಟುಮಾಡುತ್ತಿರುವ ಹ್ಯಾಪಿ ಹೈಪೋಕ್ಸಿಯಾ/ ಸೈಲೆಂಟ್ ಹೈಪೋಕ್ಸಿಯಾ ದೇಶದ ನಾನಾ ಭಾಗಗಳಲ್ಲಿ ಅನೇಕರ ಪ್ರಾಣವನ್ನೇ ಹೊತ್ತೊಯ್ದಿದೆ.

ಹ್ಯಾಪಿ ಹೈಪೋಕ್ಸಿಯಾ ಎಂದರೆ ರೋಗಿಯ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಕಡಿಮೆಯಾಗಿರುವ ಪರಿಸ್ಥಿತಿ. ಇದರ ಅರಿವು ಇಲ್ಲದೇ ಅವರು ತಮ್ಮ ನಿತ್ಯದ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಯುವಜನರು ತಮ್ಮ ರೋಗ ಪ್ರತಿರೋಧ ಶಕ್ತಿ ಚೆನ್ನಾಗಿದೆ ಎಂಬ ನಂಬಿಕೆಯೊಂದಿಗೆ ರಕ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು ಪದೇಪದೆ ಪರೀಕ್ಷಿಸಿಕೊಳ್ಳದ ಕಾರಣ ಪ್ರಾಣವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ತಂದುಕೊಳ್ಳುತ್ತಿದ್ದಾರೆ.

ಸಾಮಾನ್ಯವಾಗಿ ರಕ್ತದಲ್ಲಿನ ಆಮ್ಲಜನಕ ಪ್ರಮಾಣ 90ಕ್ಕಿಂತ ಕೆಳಕ್ಕೆ ಕುಸಿದಾಗ ಎದೆ ಭಾಗದಲ್ಲಿ, ಶ್ವಾಸಕೋಶದಲ್ಲಿ ತೊಂದರೆ ಕಾಣಿಸಿ ಕೊಳ್ಳುತ್ತದೆ. ಆದರೆ, ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಶೇಕಡ 80ಕ್ಕಿಂತ ಕೆಳಕ್ಕೆ ಕುಸಿದಾಗಲೂ ಯುವಜನರಿಗೆ ಉಸಿರಾಟದ ತೊಂದರೆ ಅಥವಾ ಆಮ್ಲಜನಕ ಕಡಿಮೆಯಾದ ಅನುಭವ ಆಗುವುದಿಲ್ಲ. ರೋಗ ಉಲ್ಬಣವಾದಾಗ ಅಥವಾ ಶ್ವಾಸಕೋಶಕ್ಕೆ ತೊಂದರೆಯಾದಾಗ ಮಾತ್ರವೇ ಇದರ ಅನುಭವ ವಾಗುತ್ತದೆ. ಇದೇ ಕಾರಣಕ್ಕೆ ಯುವಜನರು ಆಸ್ಪತ್ರೆಗೆ ದಾಖಲಾಗುವಷ್ಟೊತ್ತಿಗೆ ತಡವಾಗಿರುತ್ತದೆ. ಹೀಗಾಗಿ ಇದು ಕಳವಳಕಾರಿ ವಿಚಾರವಾಗಿದ್ದು, ಯುವಜನರು ಹೆಚ್ಚಿನ ನಿಗಾ ವಹಿಸಬೇಕು ಎನ್ನುತ್ತಾರೆ ಪರಿಣತ ವೈದ್ಯರು.

ಆಮ್ಲಜನಕದ ಮಟ್ಟ ಕುಸಿದರೆ..: ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಆಕ್ಸಿಮೀಟರ್​ನಲ್ಲಿ ಅಳೆಯುವ ಸಂದರ್ಭದಲ್ಲಿ ಶೇಕಡ 94ರ ಮಟ್ಟಕ್ಕಿಂತ ಕೆಳಕ್ಕೆ ಕುಸಿದರೆ ಅದನ್ನು ಸರಿಪಡಿಸಲು ಪ್ರಾಣಾಯಾಮ ಸೇರಿ ಕೆಲವು ಉಸಿರಾಟದ ವ್ಯಾಯಾಮಗಳನ್ನು ಪರಿಣತರು ಶಿಫಾರಸು ಮಾಡಿದ್ದಾರೆ. ಅದೆಲ್ಲ ಮಾಡಿಯೂ ಆಮ್ಲಜನಕದ ಪ್ರಮಾಣ ಹೆಚ್ಚಾಗದೇ ಇದ್ದರೆ ಕೂಡಲೇ ವೈದ್ಯರನ್ನು ಸಂರ್ಪಸ ಬೇಕು. ವೈದ್ಯರ ಸಲಹೆಯಂತೆ ಎಕ್ಸ್ ರೇ, ಸಿಟಿ ಸ್ಕಾ್ಯನ್ ಮಾಡಿಸಬೇಕಾಗಬಹುದು. ಆಸ್ಪತ್ರೆಗೆ ದಾಖಲಾಗಬೇಕಾಗಬಹುದು.

ಪರೀಕ್ಷಿಸುವುದು ಹೇಗೆ?: ಆರು ನಿಮಿಷದ ನಡಿಗೆ ಆರಂಭಿಸುವ ಮೊದಲು ರೋಗಿ ತನ್ನ ಆಮ್ಲಜನಕದ ಮಟ್ಟವನ್ನು ದಾಖಲಿಸಿಕೊಳ್ಳಬೇಕು. ನಂತರ ನಡಿಗೆ ಶುರುಮಾಡಬೇಕು. ಆರು ನಿಮಿಷದ ಕ್ಷಿಪ್ರ ನಡಿಗೆ ಪೂರೈಸಿದ ಬಳಿಕ ಮತ್ತೆ ಆಕ್ಸಿಮೀಟರ್​ನಲ್ಲಿ ಆಮ್ಲಜನಕದ ಪ್ರಮಾಣ ಪರೀಕ್ಷಿಸಬೇಕು. ಆಗ ಅದು ಶೇಕಡ 92ಕ್ಕಿಂತ ಕಡಿಮೆ ಇದ್ದರೆ ಅಪಾಯ ಎಂದು ತಿಳಿಯಬೇಕು. ಅಮೆರಿಕದ ಲಂಗ್ ಅಸೋಸಿಯೇಷನ್ ಪ್ರಕಾರ, ಆರು ನಿಮಿಷದ ನಡಿಗೆ ಪರೀಕ್ಷೆಯು ಫಿಟ್ನೆಸ್ ಪರೀಕ್ಷೆ. ಏರೋಬಿಕ್ ವ್ಯಾಯಾಮದ ಸಾಮರ್ಥ್ಯವನ್ನು ಅಳೆಯುವ ಸರಳ ಮಾನದಂಡ. ಈ ಪರೀಕ್ಷೆ ಸಮಯದಲ್ಲಿ ಆರು ನಿಮಿಷ ಸಹಜ ನಡಿಗೆಯನ್ನು ಮಾಡಬಹುದಾಗಿದೆ. ಹೃದಯ, ಶ್ವಾಸಕೋಶ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಮುನ್ನ ಶರೀರದ ಪ್ರತಿಕ್ರಿಯೆಯನ್ನು ಅಳೆಯುವುದಕ್ಕೆ ಈ ಪರೀಕ್ಷೆ ಮಾಡಲಾಗುತ್ತದೆ.

ಆರು ನಿಮಿಷದ ನಡಿಗೆ ಪರೀಕ್ಷೆ: ಆಕ್ಸಿಮೀಟರ್​ನಲ್ಲಿ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಶೇಕಡ 94ರಷ್ಟು ಇದ್ದರೂ, ಕೋವಿಡ್ ಸೋಂಕಿಗೆ ಒಳಗಾದವರಾದರೆ ಕಡ್ಡಾಯವಾಗಿ ಆರು ನಿಮಿಷ ವೇಗವಾದ ನಡಿಗೆ ಮಾಡಿ ಬಳಿಕ ಆಕ್ಸಿಮೀಟರ್​ನಲ್ಲಿ ಆಮ್ಲಜನಕ ಪ್ರಮಾಣ ಪರೀಕ್ಷಿಸಬೇಕು. ಹೈಪೋಕ್ಸಿಯಾ ಅಲ್ಲ ಎಂಬುದನ್ನು ಖಾತರಿಪಡಿಸುವುದಕ್ಕೆ ಇದು ಅನಿವಾರ್ಯ. ಅಮೆರಿಕದ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿರುವ ಕ್ಲಿನಿಕಲ್ ಪೇಪರ್​ನಲ್ಲಿ 6 ನಿಮಿಷದ ನಡಿಗೆ ಪರೀಕ್ಷೆಯ ವಿವರ ಇದೆ. ಗಂಭೀರ ಕೋವಿಡ್ ಪ್ರಕರಣಗಳಿಗೆ ಹೋಲಿಸಿದರೆ ಮೈಲ್ಡ್ ಆಗಿರುವ ಕೇಸ್​ಗಳಲ್ಲಿ ರೋಗಿಗಗಳನ್ನು ನಾಲ್ಕು ಅಥವಾ ಐದನೇ ದಿನ ಸುಧಾರಿತ 6 ನಿಮಿಷದ ನಡಿಗೆಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಹೋಮ್ ಐಸೋಲೇಶನ್​ನಲ್ಲಿ ಇರುವ ರೋಗಿಗಳು ಕೂಡ ಈ ಪರೀಕ್ಷೆಗೆ ಒಳಪಡಬೇಕು. ರಕ್ತದಲ್ಲಿನ ನಿಜವಾದ ಆಕ್ಸಿಜನ್ ಮಟ್ಟ ಪರಿಶೀಲಿಸಲು ಮತ್ತು ಹೈಪೋಕ್ಸಿಯಾ ಇಲ್ಲ ಎಂಬುದನ್ನು ಖಾತರಿಪಡಿಸಲು ಈ ಪರೀಕ್ಷೆ ಸಹಕಾರಿಯಾಗುತ್ತದೆ.

ಗಮನಿಸಬೇಕಾದ ಲಕ್ಷಣಗಳು

- ಪಲ್ಸ್ ಆಕ್ಸಿಮೀಟರ್​ನಲ್ಲಿ ಚೆಕ್ ಮಾಡಿದಾಗ ರೋಗಿಯ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ನಿರ್ದಿಷ್ಟ ಮಟ್ಟಕ್ಕಿಂತ ಕಡಿಮೆ ಇರುವುದು.

- ಹಲವು ಸನ್ನಿವೇಶಗಳಲ್ಲಿ ಇದು ಉಂಟಾಗಬಹುದಾಗಿದ್ದರೂ, ಕೋವಿಡ್ ಸೋಂಕಿನ ಜತೆಗೆ ಇದು ಕಾಣಿಸಿಕೊಂಡಿರುವುದು ಕಳವಳಕಾರಿ.

- ರೋಗಿಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳದೆಯೇ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಕುಸಿಯುವುದಲ್ಲದೇ, ಕಾರ್ಬನ್ ಡೈ ಆಕೆ ್ಸ ೖಡ್ ಹೆಚ್ಚಾಗುವುದರಿಂದ ಇದಕ್ಕೆ ಸೈಲೆಂಟ್ ಹೈಪೋಕ್ಸಿಯಾ ಎನ್ನುತ್ತಾರೆ.

- ಉಸಿರಾಟದ ತೊಂದರೆ ಕಾಣಿಸಿಕೊಳ್ಳುವ ಹೊತ್ತಿಗೆ ಹೈಪೋಕ್ಸಿಯಾ ಸಮಸ್ಯೆ ಗಂಭೀರವಾಗಿರುತ್ತದೆ. ಅವರನ್ನು ರಕ್ಷಿಸಲು ಬಹಳ ಕಷ್ಟ ಪಡಬೇಕಾಗುತ್ತದೆ.

- ಕೋವಿಡ್ ಸೋಂಕು ತಗುಲಿದವರು ಪ್ರತಿ ಆರು ಗಂಟೆಗೆ ಒಮ್ಮೆ ಆಕ್ಸಿಮೀಟರ್ ಮೂಲಕ ರಕ್ತದಲ್ಲಿನ ಆಮ್ಲಜನಕ ಪ್ರಮಾಣವನ್ನು ಪರಿಶೀಲಿಸುತ್ತಿರಬೇಕು. ಆಕ್ಸಿಜನ್ ಮಟ್ಟ ಶೇಕಡ 94ರ ಮಟ್ಟದಿಂದ ಕೆಳಕ್ಕೆ ಕುಸಿಯದಂತೆ ಗಮನಿಸುತ್ತಿರಬೇಕು.

ನಡಿಗೆ ಪರೀಕ್ಷೆಗೆ ಮುನ್ನ ಮಾಡಬೇಕಾದ್ದು ಇಷ್ಟು

- ಸೋಂಕಿಗೆ ಒಳಗಾದವರು ಅನುಕೂಲಕರವೆನಿಸುವ ಉಡುಪು ಮತ್ತು ಪಾದರಕ್ಷೆ ಗಳನ್ನು ಧರಿಸಿಕೊಳ್ಳುವುದು

- ವಾಕಿಂಗ್​ಗೆ ಬಳಸುವ ಸಾಮಾನ್ಯ ಉಪಕರಣಗಳನ್ನು ಬಳಸಬಹುದು; ಅಗತ್ಯ ಇದ್ದರೆ ವಾಕರ್ ಬಳಸಬಹುದು.

- ನಿಮ್ಮನ್ನು ಗಮನಿಸಲು ಜತೆಗೆ ಯಾರಾದರೂ ಇದ್ದಾಗಲೇ ಈ ವಾಕಿಂಗ್ ಪರೀಕ್ಷೆ ಮಾಡಿಕೊಳ್ಳಿ

- ವಾಕಿಂಗ್ ಆರಂಭಿಸುವ ಮುನ್ನ ಪಲ್ಸ್ ಆಕ್ಸಿಮೀಟರ್​ನಲ್ಲಿ ಆಮ್ಲಜನಕದ ಪ್ರಮಾಣ ವನ್ನು ಪರಿಶೀಲಿಸಿ ದಾಖಲಿಸಿಕೊಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net