

Earthquake | ಮ್ಯಾನ್ಮಾರ್ನಲ್ಲಿ ಎರಡೆರಡು ಭಾರಿ ಪ್ರಬಲ ಭೂಕಂಪ ಸಂಭವಿಸಿದ್ದು, ಮೊದಲ ಭೂಕಂಪ ಸಂಭವಿಸಿದ 15 ನಿಮಿಷಗಳಲ್ಲೇ ಮತ್ತೊಂದು ಭಾರಿ ಭೂಕಂಪ ಸಂಭವಿಸಿದ ವರದಿಯಾಗಿದೆ. 7.7 ತೀವ್ರತೆಯಲ್ಲಿ ಮೊದಲ ಭೂಕಂಪ ಸಂಭವಿಸಿದ್ದು, 6.4 ತೀವ್ರತೆಯಲ್ಲಿ 2ನೇ ಸಲ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ಮಾಹಿತಿ ನೀಡಿದೆ. ಇದರಿಂದ ಮಯನ್ಮಾರ್ನ ಗಡಿ ದೇಶವಾಗಿರುವ ಭಾರತದ ನವದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ ಆಗಿರುವುದಾಗಿ ತಿಳಿದು ಬಂದಿದೆ.
ಇನ್ನೂ ಪ್ರಬಲ ಭೂಕಂಪದಿಂದಾಗಿ ಬೃಹತ್ ಕಟ್ಟವೊಂದು ಏಕಾಏಕಿ ನೆಲಕ್ಕುರುಳಿ ಬಿದ್ದಿದ್ದು, ಈ ದೃಶ್ಯ ನೋಡಿದರೆ ಒಂದು ಕ್ಷಣ ಮೈ ನಡುಗುವಂತಿದೆ. ಈ ಕಟ್ಟಡ ಕುಸಿದು ಬೀಳುತ್ತಿದ್ದ ದೃಶ್ಯವನ್ನು ಸಮೀಪದ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ಸಾರ್ವಜನಿಕರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಭೂಕಂಪ ಅನುಭವವಾದ ನಂತರ ಬ್ಯಾಂಕಾಕ್ನಲ್ಲಿ ಕಟ್ಟಡದ ಮೇಲ್ಛಾವಣಿಯಲ್ಲಿದ್ದ ಟ್ಯಾಂಕ್ನಿಂದ ನೀರು ಕೆಳಗೆ ಬಿದ್ದಿದೆ. ಹೀಗೆ ಕಟ್ಟಡದ ಮೇಲ್ಭಾಗದಿಂದ ಕೆಳಕ್ಕೆ ನೀರು ಬೀಳುತ್ತಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.
ಕಟ್ಟಡದ ಮೇಲೆ ಸ್ವಿಮ್ಮಿಂಗ್ ಪೂಲ್ ನಿರ್ಮಿಸಲಾಗಿದ್ದು, ಹಾಗಾಗಿ ಚಿಮ್ಮುತ್ತಿರುವ ನೀರನ್ನು ಸ್ವಿಮ್ಮಿಂಗ್ಪೂಲ್ ನೀರು ಎನ್ನಲಾಗಿದೆ. ನೀರು ಹೊರಕ್ಕೆ ಚಿಮ್ಮುತ್ತಿರುವ ದೃಶ್ಯ ಹಾಗೂ ಹೋಟೆಲ್ನಲ್ಲಿ ವಸ್ತುಗಳೆಲ್ಲಾ ಅಲುಗಾಡುತ್ತಿರುವ ದೃಶ್ಯಗಳನ್ನು ಸೆರೆ ಹಿಡಿದು ಅಲ್ಲಿನ ಜನ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.