ಕುಕ್ಕೆ ದೇವಳಕ್ಕೆ ದೈವಗಳ ಭಂಡಾರ ಆಗಮನ

New Project (11)
Published on

ಸುಬ್ರಹ್ಮಣ್ಯ: ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಪ್ರಯುಕ್ತ ದೇವರಗದ್ದೆಯ ಹೊಸಳಿಗಮ್ಮ ದೈವದ ಗುಡಿಯಿಂದ ಲಕ್ಷದೀಪೋತ್ಸವದ ದಿನವಾದ ಶನಿವಾರ ಶ್ರೀ ದೈವದ ಭಂಡಾರ ದೇವಳಕ್ಕೆ ಮುಂಜಾನೆ ಆಗಮಿಸಿತು.

ಆರಂಭದಲ್ಲಿ ದೇವರಗದ್ದೆಯ ಹೊಸಳಿಗಮ್ಮ ದೈವದ ಗುಡಿಯಲ್ಲಿ ಪೂಜೆ ನೆರವೇರಿತು. ಪುರೋಹಿತ ನಾರಾಯಣ ಭಟ್ ವಿಧಿವಿಧಾನ ನೆರವೇರಿಸಿದರು.

ಬಳಿಕ ಶ್ರೀ ದೇವಳಕ್ಕೆ ದೈವದ ಭಂಡಾರವನ್ನು ಬ್ಯಾಂಡ್, ಮಂಗಳವಾದ್ಯ ಮತ್ತು ಬಿರುದಾವಳಿಗಳೊಂದಿಗೆ ಶ್ರೀ ದೇವಳಕ್ಕೆ ತರಲಾಯಿತು. ಶ್ರೀ ದೇವಳದ ಹೊಸಳಿಗಮ್ಮ ಗುಡಿಯಲ್ಲಿ ಭಂಡಾರ ಇರಿಸಿದ ಬಳಿಕ ಪುರೋಹಿತರು ಪೂಜೆ ನೆರವೇರಿಸಿ, ಪ್ರಸಾದ ನೀಡಿದರು. ಶ್ರೀದೇವರ ಉತ್ಸವಾದಿಗಳ ಕೊನೆ ದಿನ ದೇವರಗದ್ದೆಗೆ ಮತ್ತೆ ಭಂಡಾರ ತೆಗೆದುಕೊಂಡು ಹೋಗಲಾಗುವುದು.

ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಕಚೇರಿ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಎ.ಆರ್.ಲೋಕೇಶ್, ಶ್ರೀ ದೇವಳದ ಎನ್.ಸಿ.ಲಕ್ಷ್ಮಣ, ಎಂ.ಆರ್.ಲೋಕೇಶ್, ಶಿವಕುಮಾರ್ ಎ.ವಿ., ದಯಾನಂದ ಹೊಸೋಳಿಕೆ, ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net