

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಹರಿದ್ವಾರದಿಂದ ನವಕುಂಭಗಳಲ್ಲಿ ತುಂಬಿಸಿ ತರಲಾದ ಗಂಗಾಜಲವನ್ನು ಶುಕ್ರವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ, ಬೃಹತ್ ವಾಹನ ಶೋಭಾಯಾತ್ರೆ ಮೂಲಕ ಕಾಪುವಿಗೆ ತರಲಾಯಿತು.
ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಪ್ರಧಾನ ತಂತ್ರಿ ವಿದ್ವಾನ್ ಕೆ.ಪಿ.ಕುಮಾರಗುರು ತಂತ್ರಿ ನೇತೃತ್ವದಲ್ಲಿ ಗಂಗಾಜಲವನ್ನು ಸ್ವೀಕರಿಸಿ, ಧಾರ್ಮಿಕ ಪೂಜಾ ವಿಧಿ ವಿಧಾನ ನೆರವೇರಿಸಿದರು. ಬಳಿಕ ಹರಿದ್ವಾರದಲ್ಲಿ ಗಂಗಾಜಲ ಸಂಗ್ರಹಕ್ಕಾಗಿ ತೆರಳಿದ್ದ ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಮತ್ತು ಆಶಾ ಪ್ರಕಾಶ್ ಶೆಟ್ಟಿ ದಂಪತಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಮತ್ತು ಬೀನಾ ವಿ.ಶೆಟ್ಟಿ ದಂಪತಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಉದಯ ಸುಂದರ್ ಶೆಟ್ಟಿ ಮತ್ತು ಉಷಾ ಉದಯ್ ಶೆಟ್ಟಿ ದಂಪತಿ, ಪ್ರಧಾನ ತಂತ್ರಿ ವಿದ್ವಾನ್ ಕೆ.ಪಿ.ಕುಮಾರಗುರು ತಂತ್ರಿ ಮತ್ತು ಮಲ್ಲಿಕಾ ಕುಮಾರ್ ಗುರು ದಂಪತಿ ಕಲಶವನ್ನು ಟ್ಯಾಬ್ಲೋಗೆ ರವಾನಿಸಿದರು.
ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ವಾಹನ ಶೋಭಾಯಾತ್ರೆಗೆ ಚಾಲನೆ ನೀಡಿದರು. ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ಬಾರ್ಕೂರು ಸಂಸ್ಥಾನ ಮಠದ ಸಂತೋಷ ಭಾರತಿ ಮಹಾಸ್ವಾಮೀಜಿ, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಪ್ರಧಾನ ತಂತ್ರಿ ಶ್ರೀಶ ತಂತ್ರಿ ಕಲ್ಯ, ಆಡಳಿತ ಮೊಕ್ತೇಸರ ಮನೋಹರ ಎಸ್.ಶೆಟ್ಟಿ ಕಾಪು, ಹೊಸ ಮಾರಿಗುಡಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯ ನೇತೃತ್ವದಲ್ಲಿ ಸ್ವಾಗತಿಸಲಾಯಿತು.
ಶ್ರೀ ಹೊಸ ಮಾರಿಗುಡಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಕಾರ್ಯ ನಿರ್ವಹಣಾಧಿಕಾರಿ ರವಿಕಿರಣ್, ಗಂಗಾಜಲ ಸ್ವಾಗತ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು, ಲಾಲಾಜಿ ಆರ್.ಮೆಂಡನ್, ಕಾಪು ದಿವಾಕರ ಶೆಟ್ಟಿ, ಮಾಧವ ಆರ್.ಪಾಲನ್, ಯೋಗೀಶ್ ವಿ.ಶೆಟ್ಟಿ ಬಾಲಾಜಿ, ಸಂತೋಷ್ ಪಿ.ಶೆಟ್ಟಿ ತೆಂಕರಗುತ್ತು ಮತ್ತಿತರರು ಉಪಸ್ಥಿತರಿದ್ದರು.