

ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಇತ್ತೀಚೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಟಿ ರನ್ಯಾ ರಾವ್(Ranya Rao)ರನ್ನು ಬಂಧಿಸಲಾಯಿತು. ಸದ್ಯ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ರನ್ಯಾ ರಾವ್ ಜೈಲಿನಿಂದ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಹೆಚ್ಚುವರಿ ಮಹಾನಿರ್ದೇಶಕರಿ(ಎಡಿಜಿ)ಗೆ ಸುದೀರ್ಘ ಪತ್ರ ಬರೆದಿದ್ದಾರೆ.
ಆರೋಪಿ ರನ್ಯಾ ರಾವ್ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಎಡಿಜಿಪಿಗೆ ಬರೆದ ಪತ್ರದಲ್ಲಿ ಮಾರ್ಚ್ 3-4ರ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನನ್ನ ಮೇಲೆ ಸುಳ್ಳು ಕೇಸ್ ದಾಖಲು ಮಾಡಿದ್ದಾರೆ. 14 ಕೆಜಿ ಚಿನ್ನ ತಂದಿರೋದಾಗಿ ಸುಳ್ಳು ಕೇಸ್ ದಾಖಲು ಮಾಡಿದ್ದಾರೆ. ತಾವು ನಿರಪರಾಧಿ ಮತ್ತು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಅಲ್ಲದೆ ಅಧಿಕಾರಿಗಳು ನನಗೆ ಮಾತನಾಡಲು ಅವಕಾಶ ಕೊಟ್ಟಿಲ್ಲ. 10 ರಿಂದ 15 ಬಾರಿ ನನ್ನ ಮೇಲೆ ಅಧಿಕಾರಿಗಳು ಕೈಮಾಡಿದ್ದಾರೆ. ಆಹಾರ ನೀಡಿಲ್ಲ-ನಿದ್ರೆ ಮಾಡಲು ಬಿಟ್ಟಿಲ್ಲ ಮತ್ತು ಬಲವಂತವಾಗಿ ಖಾಲಿ ದಾಖಲೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಹಲವು ಬಾರಿ ಹಲ್ಲೆ ನಡೆಸಿದ್ದರೂ ಸಹ ಡಿಆರ್‌ಐ ಅಧಿಕಾರಿಗಳು ರಚಿಸಿದ ಹೇಳಿಕೆಗಳಿಗೆ ಸಹಿ ಹಾಕಲು ವಿರೋಧಿಸಿದೆ. 50-60 ಟೈಪ್ ಮಾಡಿದ ಪುಟಗಳನ್ನು ನನ್ನ ಮುಂದೆ ಇರಿಸಿ ಸಹಿ ಹಾಕುವಂತೆ ಹಾಗೂ 40 ಖಾಲಿ ಪುಟಗಳಿಗೆ ಸಹಿ ಹಾಕುವಂತೆ ಒತ್ತಡ ಹೇರಲಾಯಿತು.
ನನ್ನ ಬಂಧನದಿಂದ ನ್ಯಾಯಾಲಯಕ್ಕೆ ಹಾಜರುಪಡಿಸುವವರೆಗೆ ನನ್ನನ್ನು ಥಳಿಸಿದರು. ನನಗೆ 10-15 ಬಾರಿ ಕಪಾಳಮೋಕ್ಷ ಮಾಡಿದ ಅಧಿಕಾರಿಯನ್ನು ನಾನು ಗುರುತಿಸಬಲ್ಲೆ. ಸಹಿ ಮಾಡುವಂತೆ ಪದೇ ಪದೆ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಧಿಕೃತವಾಗಿ ಹೇಳಿದಂತೆ ವಿಮಾನ ನಿಲ್ದಾಣದ ಟರ್ಮಿನಲ್‌ನಿಂದ ಅಲ್ಲ ವಿಮಾನದಿಂದಲೇ ನೇರವಾಗಿ ನನ್ನನ್ನು ಬಂಧಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ದುಬೈನಿಂದ 14 ಕೆಜಿಗೂ ಹೆಚ್ಚು ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದ ಮೇಲೆ ಮಾರ್ಚ್ 3ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಬಂಧಿಸಿತು. ಈ ನಟಿ ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರ ಮಲಮಗಳು.