

ಶಿರಸಿ: ಕಾಡು ಹಂದಿಯನ್ನು ಬೇಟೆಯಾಡಿದ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ಬಂಧಿಸಿ, ಆತನಿಂದ 25 ಕೆಜಿಯಷ್ಟು ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.
ಭಾಶಿಯ ಪರಶುರಾಮ ಕಾಳೇನವರ ಬಂಧಿತ ಆರೋಪಿ. ಬನವಾಸಿ ವಲಯದ ಅರಣ್ಯದಲ್ಲಿ ಈತ ಬೇಟೆ ನಡೆಸಿದ್ದ ಖಚಿತ ಮಾಹಿತಿ ಆಧಾರದಲ್ಲಿ ಡಿಎಫ್ಒ ಡಾ. ಅಜ್ಜಯ್ಯ ಜೆ. ಆರ್, ಎಸಿಎಫ್ ಶಿವಾನಂದ ನಿಂಗಾಣಿ, ವಲಯಾರಣ್ಯಾಧಿಕಾರಿ ಭವ್ಯಾ ನಾಯ್ಕ ಹಾಗೂ ಇತರರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಶ್ರೀಗಂಧ ವಶ
ತಾಲೂಕಿನ ಕಳವೆ ಗ್ರಾಮದ ಹಂದಿಜಡ್ಡಿಯಲ್ಲಿ ಶ್ರೀಗಂಧದ ಮರ ಕಡಿದು ಮಾರಾಟದ ಉದ್ದೇಶದಿಂದ ತುಂಡುಗಳನ್ನಾಗಿಸಿದ್ದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಸ್ಥಳೀಯನಾದ ಸುರೇಶ ಗೌಡ ಹಾಗೂ ಎ.ಜೆ. ಮಂಜಪ್ಪ ಬಂಧಿತರಾಗಿದ್ದು, ಇವರಿಂದ 26.5 ಕೆ.ಜಿ ಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.