ಇಬ್ಬರು ಯುವಕರ ಬಂಧನ : ಮೊಸರುಕುಡಿಕೆ ಮೆರವಣಿಗೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ

New Project (16)
Published on

ಉಳ್ಳಾಲ: ತೊಕ್ಕೊಟ್ಟಿನಲ್ಲಿ ಶನಿವಾರ ನಡೆದ ಮೊಸರುಕುಡಿಕೆ ಉತ್ಸವದ ಶೋಭಾಯಾತ್ರೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಮಹಿಳಾ ಪೊಲೀಸ್‌ಗೆ ಅಶ್ಲೀಲ ಕೈಸನ್ನೆ ಮಾಡಿ ಸೊಂಟಕ್ಕೆ ಕೈ ಹಾಕಿ ಮಾನಭಂಗಕ್ಕೆ ಯತ್ನಿಸಿದ ಆರೋಪದಲ್ಲಿ ಇಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಅಸೈಗೋಳಿ ನಿವಾಸಿ ದೀಪಕ್ ಮತ್ತು ತೊಕ್ಕೊಟ್ಟು ನಿವಾಸಿ ಕಿರಣ್ ಬಂಧಿತರು. ತೊಕ್ಕೊಟ್ಟು ಮೊಸರುಕುಡಿಕೆ ಉತ್ಸವದ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ನಾಸಿಕ್ ಬ್ಯಾಂಡ್‌ನ ಯುವಕರ ತಂಡವೊಂದು ರಾತ್ರಿ 12ರ ಹೊತ್ತಿಗೆ ತೊಕ್ಕೊಟ್ಟು ಒಳಪೇಟೆಯಲ್ಲಿ ಮೆರವಣಿಗೆ ಮುಂದೆ ಹೋಗಲು ಅವಕಾಶ ನೀಡದೆ ಜೋರಾಗಿ ಬ್ಯಾಂಡ್ ಬಾರಿಸುತ್ತಾ ಕಾಲಹರಣ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿತ್ತು ಎನ್ನಲಾಗಿದೆ. ಈ ಸಂದರ್ಭ ಉಳ್ಳಾಲ ಠಾಣೆ ಪೊಲೀಸರಾದ ಪೂರ್ಣಿಮಾ ಮತ್ತು ಲಕ್ಷ್ಮೀ ಎಂಬುವರು ಮುಂದಕ್ಕೆ ಹೋಗುವಂತೆ ಯುವಕರಲ್ಲಿ ಮನವಿ ಮಾಡಿದ್ದರು.

ಈ ಸಂದರ್ಭ ಆರೋಪಿ ದೀಪಕ್ ಎಂಬಾತ ಮೆರವಣಿಗೆ ತಡೆದು ನಿಲ್ಲಿಸಿ ಪೂರ್ಣಿಮಾ ಅವರಿಗೆ ಕೈಬೆರಳಲ್ಲಿ ಅಶ್ಲೀಲ ಸನ್ನೆ ಮಾಡಿ, ಮುಂದಕ್ಕೆ ಹೋಗಿ ಎಂದು ಹೇಳಲು ನೀವ್ಯಾರು? ಎಂದು ಹೇಳಿ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದೇ ವೇಳೆ ಮತ್ತೋರ್ವ ಆರೋಪಿ ಕಿರಣ್ ಎಂಬಾತ ಪೂರ್ಣಿಮಾ ಅವರ ಸೊಂಟಕ್ಕೆ ಕೈ ಹಾಕಿ ತಳ್ಳಿದ್ದಲ್ಲದೆ ಮಾನಭಂಗಕ್ಕೆ ಯತ್ನಿಸಿದ್ದಾಗಿ ಉಳ್ಳಾಲ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಘಟನೆ ನಡೆದ ಸಂದರ್ಭ ಪೊಲೀಸರು ಮತ್ತು ಶೋಭಾಯಾತ್ರೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕರ ನಡುವೆ ತಳ್ಳಾಟವೂ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net