ಅಡಕೆ ಖರೀದಿ ಹಣ ಕದ್ದ ಇಬ್ಬರ ಬಂಧನ

BIRUR trrr
ಹಣ ಕಳವು ಮಾಡಿದ್ದವರನ್ನುಬಂಧಿಸಿದ ಬೀರೂರು ಪೊಲೀಸರು. ಡಿವೈಎಸ್‌ಪಿ ಹಾಲಮೂರ್ತಿ ರಾವ್, ಶಿವಕುಮಾರ್, ಸಜಿತ್‌ಕುಮಾರ್ ಇದ್ದರು.
Published on

ಬೀರೂರು: ಕುಡ್ಲೂರು ಗ್ರಾಮದಲ್ಲಿ ಅಡಕೆ ಖರೀದಿಸಲು ವಾಹನದಲ್ಲಿಟ್ಟಿದ್ದ ಹಣ ಕಳವು ಮಾಡಿದ್ದ ಕಾರು ಚಾಲಕ ಹಾಗೂ ಆತನ ಸ್ನೇಹಿತನನ್ನು ಬೀರೂರು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಹಾರ್ಸಿಕಟ್ಟ ಗ್ರಾಮದ ನೌಷಾದ್, ಉಮೇಶ್ ಬಂಧಿತ ಆರೋಪಿಗಳು. ಹಾರ್ಸಿಕಟ್ಟ ಗ್ರಾಮದ ಇಮ್ರಾನ್ ಎಂಬುವವರು ಆ.23ರಂದು ಚಿಕ್ಕಪ್ಪನ ಮಗ ಮೋಸೀನ್ ಎಂಬಾತನಿಗೆ 12.40 ಲಕ್ಷ ರೂ. ಕೊಟ್ಟು ತರೀಕೆರೆ ತಾಲೂಕು ಕುಡ್ಲೂರು ಗ್ರಾಮದಲ್ಲಿ ಅಡಕೆ ಸಿಪ್ಪೆಗೋಟು ಖರೀದಿಸಿಕೊಂಡು ಬರಲು ವಾಹನ ಸಹಿತ ಕಳುಹಿಸಿದ್ದರು. ಮೋಸೀನ್ 5 ಲಕ್ಷ ರೂ.ವನ್ನು ಪಿಕ್‌ಅಪ್ ವಾಹನದ ಡ್ಯಾಷಬೋರ್ಡ್‌ನಲ್ಲಿಟ್ಟು ಉಳಿದ 7.40 ಲಕ್ಷ ಹಣವನ್ನು ಚಾಲಕನ ಸೀಟಿನ ಕೆಳಗೆ ಇರಿಸಿದ್ದ. ಸಿಪ್ಪೆಗೋಟು ಖರೀದಿಯಾದ ಬಳಿಕ ಹಣ ನೀಡಲು ಹೋದಾಗ ವಾಹನದಲ್ಲಿ ಹಣ ಇರಲಿಲ್ಲ. ಈ ವಿಚಾರವಾಗಿ ಇಮ್ರಾನ್ ಬೀರೂರು ಠಾಣೆಯಲ್ಲಿ ದೂರು ನೀಡಿದ್ದರು.
ಬೀರೂರು ಪಿಎಸ್‌ಐ ಸಜಿತ್‌ಕುಮಾರ್ ಮತ್ತು ಅಪರಾಧ ವಿಭಾಗದ ಪಿಎಸ್‌ಐ ಮಂಜುಳಾಬಾಯಿ ನೇತೃತ್ವದಲ್ಲಿ ಪೊಲೀಸರು ತನಿಖೆ ನಡೆಸಿದರು. ವಿಚಾರಣೆ ಸಂದರ್ಭದಲ್ಲಿ ಇಮ್ರಾನ್ ಅವರ ಪಿಕ್‌ಅಪ್ ವಾಹನದ ಚಾಲಕ ನೌಷಾದ್ ಎಂಬಾತ ಗೆಳೆಯ ಉಮೇಶ್ ಎಂಬಾತನಿಗೆ ವಾಹನದಲ್ಲಿ ಹಣ ಇಟ್ಟಿರುವ ಸುಳಿವು ನೀಡಿದ್ದು, ಉಮೇಶನು ಇವರ ವಾಹನವನ್ನು ಹಿಂಬಾಲಿಸಿಕೊಂಡು ಬಂದು ಕುಡ್ಲೂರು ಗ್ರಾಮದಲ್ಲಿ ಹಣ ಕಳವು ಮಾಡಿದ್ದಾನೆ. ಕಳವಿಗೆ ಸಹಕಾರ ನೀಡಿದ ನೌಷಾದ್ ಹಾಗೂ ಕಳವು ಮಾಡಿದ ಉಮೇಶನನ್ನು ಬೀರೂರು ಪೊಲೀಸರು ಬಂಧಿಸಿ 7.50 ಲಕ್ಷ ನಗದು, ದ್ವಿಚಕ್ರ ವಾಹನ ಮತ್ತು ಒಂದು ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಹೆಡ್‌ಕಾನ್‌ಸ್ಟೇಬಲ್‌ಗಳಾದ ಬಿ.ವಿ.ಹೇಮಂತ್‌ಕುಮಾರ್, ಬಿ.ಪಿ.ಕೃಷ್ಣಮೂರ್ತಿ, ಕಾನ್‌ಸ್ಟೇಬಲ್‌ಗಳಾದ ರಾಜಪ್ಪ, ವಿ.ಟಿ.ಶಿವಕುಮಾರ್, ತಾಂತ್ರಿಕ ವಿಭಾಗದ ನಯಾಜ್ ಅಂಜುಂ ಮತ್ತು ರಬ್ಬಾನಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net