ಗಂಟೆಯೊಳಗೆ ಆರೋಪಿ ಅಂದರ್ : ಕುತ್ತಿಗೆಯಿಂದ ಸರ ಎಳೆದು ಪರಾರಿ ಪ್ರಕರಣ

Arrest
Published on

ಬೆಳ್ತಂಗಡಿ : ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಹಿಂಬಾಲಿಸಿಕೊಂಡು ಬಂದು ಬೆದರಿಸಿ ಚಿನ್ನದ ಕರಿಮಣಿ ಸರವನ್ನು ಎಳೆದುಕೊಂಡು ಹೋಗಿದ್ದ ಆರೋಪಿಯನ್ನು 24 ಗಂಟೆಯೊಳಗೆ ಬೆಳ್ತಂಗಡಿ ಪೊಲೀಸರು ಬಂಧಿಸಿ ಕರಿಮಣಿ ಸರವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಗಿರಿಗುಡ್ಡೆ(ಜಾಲ್) ಡೆಂಬುಗ ನಿವಾಸಿ ಕೊರಗಪ್ಪ ಗೌಡರ ಮಗ ಉಮೇಶ್ ಗೌಡ(38) ಎಂಬಾತನನ್ನು ಬೆಳ್ತಂಗಡಿ ಸರ್ಕಲ್ ಇನ್‌ಸ್ಪ್ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದ ತಂಡ ಕೊಯ್ಯೂರು ಗ್ರಾಮದ ಆದ್ರೂಪೆರಲ್ ಬಸ್ ನಿಲ್ದಾಣದಲ್ಲಿ ಡಿ.10ರಂದು ಬೆಳಗ್ಗೆ ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು. ಆರೋಪಿಗೆ ಬೆಳ್ತಂಗಡಿ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಕೊಯ್ಯೂರು ಗ್ರಾಮದ ಕೋರಿಯಾರ್ ನಿವಾಸಿ ದಾಮೋಧರ್ ಭಟ್ ಅವರ ಪತ್ನಿ ರಾಜೀವಿ(50) ಎಂಬವರು ಡಿ.9ರಂದು ಮಧ್ಯಾಹ್ನ 2.35ರ ಸುಮಾರಿಗೆ ಕೊಯ್ಯೂರು ಗ್ರಾಮದ ಪಾಂಬೇಲ್ ಕ್ರಾಸ್‌ನಲ್ಲಿ ಬಸ್ ಇಳಿದು ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಹಿಂದಿನಿಂದ ಬಂದು ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು ಬೊಬ್ಬೆ ಹಾಕಬೇಡಿ ಎಂದು ಬೆದರಿಸಿ ಕುತ್ತಿಗೆಯಲ್ಲಿದ್ದ 32ಗ್ರಾಂ ಚಿನ್ನದ ಕರಿಮಣಿ ಸರವನ್ನು ಎಳೆದಿದ್ದಾನೆ. ಎಳೆದ ರಭಸಕ್ಕೆ ಕುತ್ತಿಗೆ, ಎದೆಗೆ ಗಾಯವಾಗಿದ್ದು ಕರಿಮಣಿ ತುಂಡಾಗಿ ಒಂದು ತುಂಡಿನೊಂದಿಗೆ ಆರೋಪಿ ಪರಾರಿಯಾಗಿದ್ದಾನೆ. ಗಾಯಗೊಂಡ ರಾಜೀವಿ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net