ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಒಂಬತ್ತು ಬಸ್ ಪ್ರಯಾಣಿಕರನ್ನು ಅಪಹರಿಸಿ ಭೀಕರ ಹತ್ಯೆ! Balochistan Province

Balochistan Province
Published on

Balochistan Province : ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಶಸ್ತ್ರಾಸ್ರ ಹೊಂದಿದ್ದ ವ್ಯಕ್ತಿಗಳ ಗುಂಪೊಂದು ಒಂಬತ್ತು ಬಸ್ ಪ್ರಯಾಣಿಕರನ್ನು ಅಪಹರಿಸಿ ಬರ್ಬರವಾಗಿ ಕೊಂದಿರುವುದಾಗಿ ಅಧಿಕಾರಿಗಳು ಶುಕ್ರವಾರ (ಜುಲೈ 11) ದೃಢಪಡಿಸಿದ್ದಾರೆ.

ಗುರುವಾರ (ಜುಲೈ 10) ಸಂಜೆ ಪ್ರಯಾಣಿಕರನ್ನು ಹಲವಾರು ಬಸ್‌ಗಳಿಂದ ಅಪಹರಿಸಲಾಗಿದ್ದು, ನಂತರ ದಾಳಿಕೋರರು ಅವರನ್ನು ಹತ್ತಿರದ ಪರ್ವತ ಪ್ರದೇಶಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದಾರೆ ಎಂದು ಸ್ಥಳೀಯ ಸರ್ಕಾರದ ವಕ್ತಾರ ಶಾಹಿದ್ ರಿಂಡ್ ಮಾಹಿತಿ ನೀಡಿದ್ದಾರೆಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಮತ್ತೊಬ್ಬ ಸರ್ಕಾರಿ ಅಧಿಕಾರಿ ನವೀದ್ ಆಲಂ ಮಾತನಾಡಿ ಗುಂಡಿನ ಗಾಯಗಳಿಂದಲೇ ಬಳಲಿ ಮೃತಪಟ್ಟವರ ದೇಹಗಳು ರಾತ್ರಿಯಿಡೀ ಪರ್ವತಗಳಲ್ಲಿ ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.

ಇಲ್ಲಿಯವರೆಗೆ ಈ ಘಟನೆಯ ಹೊಣೆಯನ್ನು ಯಾರು ಹೊತ್ತುಕೊಂಡಿಲ್ಲ. ಈ ಹಿಂದೆ ನಡೆದ ಇದೇ ರೀತಿಯ ಪ್ರಕರಣಗಳು ಪ್ರತ್ಯೇಕತಾವಾದಿ ಬಲೂಚ್ ಉಗ್ರಗಾಮಿಗಳೊಂದಿಗೆ ಸಂಬಂಧ ಹೊಂದಿದ್ದು, ಅವರು ಪೂರ್ವ ಪಂಜಾಬ್ ಪ್ರಾಂತ್ಯದವರೆಂದು ಗುರುತಿಸಿದ ನಂತರ ವ್ಯಕ್ತಿಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ.

ಬಲುಚಿಸ್ತಾನ್ ಅತ್ಯಂತ ಸಕ್ರಿಯ ದಂಗೆಕೋರ ಗುಂಪುಗಳಲ್ಲಿ ಒಂದಾಗಿದೆ. ಇಲ್ಲಿನ ಬಲೂಚ್ ಲಿಬರೇಶನ್ ಆರ್ಮಿ, ಅಫ್ಘಾನಿಸ್ತಾನ ಮತ್ತು ಇರಾನ್ ಗಡಿಯಲ್ಲಿರುವ ಖನಿಜ-ಸಮೃದ್ಧ ಪ್ರಾಂತ್ಯದಲ್ಲಿ ದೀರ್ಘಕಾಲ ಕಾರ್ಯನಿರ್ವಹಿಸುತ್ತಿದೆ. ಪಾಕಿಸ್ತಾನಿ ಅಧಿಕಾರಿಗಳು, ಪಂಜಾಬ್ ಪ್ರಾಂತ್ಯಕ್ಕೆ ಅನುಕೂಲವಾಗುವಂತೆ ಬಲೂಚಿಸ್ತಾನದ ಸಂಪನ್ಮೂಲಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಲೂಚ್ ಉಗ್ರಗಾಮಿಗಳು ಆರೋಪಿಸಿದ್ದಾರೆ. ಹೀಗಾಗಿ ಇಂತಹ ದಾಳಿಗಳು ನಿರಂತರ ಅಶಾಂತಿ ಮತ್ತು ಹಿಂಸಾಚಾರಕ್ಕೆ ಕಾರಣವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net