

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಮೂಡುಬಿದಿರೆ ಅಲಂಗಾರು ಶ್ರೀ ಅಯ್ಯ ಸ್ವಾಮೀ ಮಠದ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ನಡೆದ ಶ್ರೀ ಗುರು, ಶ್ರೀ ವಿಶ್ವಕರ್ಮ ಯಜ್ಞ ಹಾಗೂ ಮುಷ್ಟಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಹಿರಿಯ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ಯ ಅವರಿಗೆ ಅರ್ಕುಳ ಸುಬ್ರಾಯ ಆಚಾರ್ಯ ಸಂಸ್ಮರಣ ಅರ್ಕುಳ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗೋಪಾಲ ಆಚಾರ್ಯರು, ಕಲೆ, ಅಭಿಮಾನಿಗಳ ಪ್ರೀತಿ ಹಾಗೂ ಕಲಾವಿದರ ಸಂಸರ್ಗವೇ ತಮ್ಮನ್ನು ಈ ಮಟ್ಟಕ್ಕೆ ತಂದಿದೆ. ವಯೋಸಹಜ ಕಾರಣಗಳಿಂದ ತಾವು ವಹಿಸಿಕೊಂಡ ಪಾತ್ರಕ್ಕೆ ಪೂರ್ಣ ನ್ಯಾಯ ಒದಗಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಕಲಾ ವ್ಯವಸಾಯದಿಂದ ನಿವೃತ್ತಿ ಹೊಂದಿರುವುದಾಗಿ ತಿಳಿಸಿದರು.
ಅರ್ಕುಳ ಪ್ರತಿಷ್ಠಾನ ಶ್ರೀ ಮಠದ ಜೀರ್ಣೋದ್ಧಾರ ಸಮಿತಿ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಿತಿ ಅಧ್ಯಕ್ಷ ಪುರೋಹಿತ ಎನ್.ಕೇಶವ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನ ಸಂಚಾಲಕ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಗೇರುಕಟ್ಟೆ ದಿವಾಕರ ಆಚಾರ್ಯ ಅವರು ಅರ್ಕುಳ ಸುಬ್ರಾಯ ಆಚಾರ್ಯರ ಸಂಸ್ಮರಣೆ ಮಾಡಿದರು. ಮಠದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪುರೋಹಿತ ಜಿ.ಎಸ್.ಪುರಂದರ ಆಚಾರ್ಯ ಮುನಿಯಾಲು ಸನ್ಮಾನ ಪತ್ರ ವಾಚಿಸಿದರು. ಸಂಘಟಕ ರಾಜೇಶ್ ಪುರೋಹಿತರು, ಪ್ರತಿಷ್ಠಾನ ಸದಸ್ಯರಾದ ಭಾರತಿ ಎಂ.ಎಲ್. ಮತ್ತು ವಾಣಿ ಆಚಾರ್ಯ ಉಪಸ್ಥಿತರಿದ್ದರು.
ದಿನೇಶ ಶರ್ಮ ಕೊಯ್ಯೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ‘ಕರ್ಮಬಂಧ’ ತಾಳಮದ್ದಳೆ ನಡೆಯಿತು. ದೇವರಾಜ ಆಚಾರ್ಯ ಐಕಳ, ಅಶೋಕ-ಯೋಗೀಶ ಆಚಾರ್ಯ ಉಳೆಪಾಡಿ, ಬೇಲಾಡಿ ಜಗದೀಶ, ಹಿರಣ್ಯ ವೆಂಕಟೇಶ, ಗಣೇಶ್ ಕನ್ನಡಿಕಟ್ಟೆ, ಗೇರುಕಟ್ಟೆ ದಿವಾಕರ ಹಾಗೂ ದಿನೇಶ ಶರ್ಮ ಭಾಗವಹಿಸಿದ್ದರು.