ಎಲ್ಲೆಡೆ ಅರೆಭಾಷೆ ದಿನಾಚರಣೆ ಜರುಗಲಿ: ಕಾಳನ ರವಿ

15adarshkdga3
Published on

ಮಡಿಕೇರಿ: ಕೊಡಗು, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಹಲವು ಭಾಗಗಳಲ್ಲಿ ಅರೆಭಾಷೆ ಮಾತನಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಗ್ರಾಮೀಣ ಪ್ರದೇಶದಲ್ಲಿಯೂ ಅರೆಭಾಷೆ ದಿನಾಚರಣೆಯನ್ನು ಆಯೋಜಿಸುವಂತಾಗಬೇಕು ಎಂದು ಭಾಗಮಂಡಲ ಗ್ರಾ.ಪಂ.ಅಧ್ಯಕ್ಷ ಕಾಳನ ರವಿ ಸಲಹೆ ಮಾಡಿದರು.


ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕೊಡಗು ಗೌಡ ಸಮಾಜಗಳ ಒಕ್ಕೂಟ ಮತ್ತು ಜಿಲ್ಲೆಯ ಗೌಡ ಸಮಾಜ-ಸಂಘಟನೆಗಳ ಸಹಯೋಗದಲ್ಲಿ ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಶುಕ್ರವಾರ ನಡೆದ ಅರೆಭಾಷೆ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ಕನ್ನಡ ಉಪ ಭಾಷೆಯಾದ ಅರೆಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮನೆಗಳಲ್ಲಿ ಅರೆಭಾಷೆಯನ್ನು ಮಾತನಾಡುವಂತಾಗಬೇಕು. ಇದರಿಂದ ಮಕ್ಕಳಿಗೆ ಭಾಷೆ ಕಲಿಸಲು ಸಾಧ್ಯವಾಗಲಿದೆ ಎಂದ ಅವರು, ಭಾಗಮಂಡಲ ವ್ಯಾಪ್ತಿಯಲ್ಲಿ ಶೇ.೭೫ ಕ್ಕೂ ಹೆಚ್ಚು ಜನರು ಅರೆಭಾಷೆ ಮಾತನಾಡುವವರು ವಾಸಿಸುತ್ತಿದ್ದಾರೆ. ಅರೆಭಾಷೆ ದಿನಾಚರಣೆಯನ್ನು ಹಬ್ಬದ ರೀತಿಯಲ್ಲಿ ಆಚರಿಸುವಂತಾಗಬೇಕು ಎಂದು ಹೇಳಿದರು.


ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ನಿಕಟ ಪೂರ್ವ ಅಧ್ಯಕ್ಷ ಕೊಲ್ಯದ ಗಿರೀಶ್ ಮಾತನಾಡಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆಗೆ ಹಲವರು ಶ್ರಮಿಸಿದ್ದಾರೆ. ಅರೆಭಾಷೆ, ಸಂಸ್ಕೃತಿ, ಸಾಹಿತ್ಯವನ್ನು ಬೆಳೆಸುವತ್ತ ಒತ್ತು ನೀಡಿ ಕಾರ್ಯಕ್ರಮವನ್ನು ತಮ್ಮ ಅವಧಿಯಲ್ಲಿ ಆಯೋಜಿಸಲಾಗಿತ್ತು ಎಂದು ತಿಳಿಸಿದರು.


ಅರೆಭಾಷೆಯು ವಿಶಿಷ್ಟ ಮಾತೃ ಹೃದಯ ಭಾಷೆಯಾಗಿದ್ದು, ಈ ಭಾಷೆಯ ಅಸ್ತಿತ್ವ ಉಳಿಸುವಂತಾಗಬೇಕು. ಸಾಂಸ್ಕೃತಿಕ ಸಮಾವೇಶಗಳು, ಸಾಹಿತ್ಯ ಸಮ್ಮೇಳನಗಳು, ಹೀಗೆ ಹಲವು ಕಾರ್ಯಕ್ರಮಗಳನ್ನು ಹೊರಜಿಲ್ಲೆಗಳಲ್ಲೂ ಸಹ ಆಯೋಜಿಸಿ ಅರೆಭಾಷೆ ಬೆಳವಣಿಗೆಗೆ ಶ್ರಮಿಸಲಾಗಿತ್ತು ಎಂದರು.


ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಮಾತನಾಡಿ, ಅರೆಭಾಷೆ ಬೆಳವಣಿಗೆಗೆ ಪ್ರತಿಯೊಬ್ಬರೂ ಅರೆಭಾಷೆ ಮಾತಾಡುವುದರ ಜತೆಗೆ, ಓದುವ ಮತ್ತು ಬರೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಲೇಖನ, ಕಥೆ, ಕವನ, ಬರೆಯುವ ಮೂಲಕ ಅರೆಭಾಷೆ ಬೆಳವಣಿಗೆಗೆ ಮುಂದಾಗಬೇಕಿದೆ ಎಂದು ಸಲಹೆ ಮಾಡಿದರು.


ಅರೆಭಾಷೆಯಲ್ಲಿ ಪದಕೋಶ, ವಿಶ್ವಕೋಶ, ಪಾರಂಪರಿಕ ವಸ್ತುಕೋಶ ಹೀಗೆ ಹಲವು ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಅರೆಭಾಷೆ ಬೆಳವಣಿಗೆಗೆ ಶ್ರಮಿಸಲಾಗಿದೆ. ಅವುಗಳನ್ನು ಅಧ್ಯಯನ ಮಾಡುವಂತಾಗಬೇಕು ಎಂದರು.


ಯಾವುದೇ ಭಾಷೆಯನ್ನು ಭೌದ್ಧಿಕವಾಗಿ ಸಂಪಾದಿಸಬೇಕು ಮತ್ತು ಬೆಳೆಸಬೇಕು. ಆ ಮೂಲಕ ಭಾಷೆಯನ್ನು ಉಳಿಸಲು ಸಾಧ್ಯ. ಆ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಅಧ್ಯಯನ ಕಡೆ ಗಮನಹರಿಸಬೇಕು ಎಂದು ಹೇಳಿದರು.


ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಆರ್.ಸೋಮಣ್ಣ ಮಾತನಾಡಿ, ಅರೆಭಾಷೆ ಅಕಾಡೆಮಿ ಸ್ಥಾಪನೆಗೆ ಎಲ್ಲರೂ ಶ್ರಮಿಸಿದ್ದಾರೆ. ಅರೆಭಾಷೆಯನ್ನು ಮುಂದಿನ ಜನಾಂಗಕ್ಕೂ ತಿಳಿಸುವ ನಿಟ್ಟಿನಲ್ಲಿ ಅರೆಭಾಷೆ ಮಾತನಾಡುವಂತಾಗಬೇಕು ಎಂದರು.


ನಿವೃತ್ತ ಪೊಲೀಸ್ ಅಧೀಕ್ಷಕ ಚೊಕ್ಕಾಡಿ ಅಪ್ಪಯ್ಯ ಮಾತನಾಡಿ, ಕೋಡಿ ಕುಶಾಲಪ್ಪ ಗೌಡ ಮತ್ತು ಪುರುಷೋತ್ತಮ ಬಿಳಿಮಲೆ ಅವರು ಬರೆದಿರುವ ಪುಸ್ತಕವನ್ನು ಎಲ್ಲಾ ಅರೆಭಾಷಿಕರು ಓದುವಂತಾಗಬೇಕು ಎಂದರು.


ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೆಕಲ್ ನವೀನ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಿನ್ನಸ್ವಾಮಿ, ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಮೆ ದಮಯಂತಿ, ಉಪಾಧ್ಯಕ್ಷೆ ಬೈತಡ್ಕ ಜಾನಕಿ ಬೆಳ್ಯಪ್ಪ, ಜಿಲ್ಲೆಯ ಕೊಡಗು ಗೌಡ ವಿವಿಧ ಸಮಾಜ ಹಾಗೂ ಸಂಘಟನೆಗಳ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು ಇತರರು ಇದ್ದರು.


ಕೊಡಗು ಗೌಡ ಮಹಿಳಾ ಒಕ್ಕೂಟದ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಬೈತಡ್ಕ ಜಾನಕಿ ಬೆಳ್ಯಪ್ಪ ಅವರು ಅರೆಭಾಷೆ ದಿನಾಚರಣೆ ಮಹತ್ವದ ಕುರಿತು ಹಾಡು ಹಾಡಿದರು. ಪ್ರೇಮ ರಾಘವಯ್ಯ ಮತ್ತು ರೇವತಿ ರಮೇಶ್ ನಾಡಗೀತೆ ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net